ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಟೀಸರ್‌ನಲ್ಲಿ ಅಶ್ಲೀಲ ಹಾಗೂ ವಯಸ್ಕ ದೃಶ್ಯಗಳಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಾಲುಸಾಲು ದೂರುಗಳು ದಾಖಲಾಗುತ್ತಿರುವ ನಡುವೆಯೇ, ಇದೀಗ ನಟ ಯಶ್ ಮನೆ ಮುಂದೆ ಅಳವಡಿಸಲಾಗಿದ್ದ ಬ್ಯಾನರ್ ಹಾಗೂ ಫ್ಲೆಕ್ಸ್ ವಿಚಾರಕ್ಕೂ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರಿನ ಗಾಲ್ಫ್ ಕ್ಲಬ್ ಎದುರು ಇರುವ ನಟ ಯಶ್ ನಿವಾಸದ ಮುಂದೆ ಅವರ ಹುಟ್ಟುಹಬ್ಬದ ಶುಭಾಶಯ ಕೋರಿ ಅಭಿಮಾನಿಗಳು ಬ್ಯಾನರ್ ಹಾಗೂ ಫ್ಲೆಕ್ಸ್ ಅಳವಡಿಸಿದ್ದರು. ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಬ್ಯಾನರ್ ಹಾಕಲಾಗಿದೆ ಎಂಬ ಆರೋಪದ ಮೇಲೆ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಬಿಎ ವಿಭಾಗದ ಪೂಜಾರಪ್ಪ ಎಂಬುವವರು ನೀಡಿದ ದೂರಿನ ಮೇರೆಗೆ, ವೇಣು ಕ್ರಿಯೇಶನ್ಸ್ ವಿರುದ್ಧ ಕೇಸ್ ದಾಖಲಿಸಲಾಗಿದ್ದು, ನಟ ಯಶ್ ಅವರ ಹೆಸರನ್ನೂ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.
ಇದರ ನಡುವೆಯೇ ಟಾಕ್ಸಿಕ್ ಟೀಸರ್ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಸೋಮವಾರ ಆಮ್ ಆದ್ಮಿ ಪಕ್ಷದ (ಎಎಪಿ) ಮಹಿಳಾ ಘಟಕದ ಸದಸ್ಯರು ರಾಜ್ಯ ಮಹಿಳಾ ಆಯೋಗದ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಎಪಿ ರಾಜ್ಯ ಕಾರ್ಯದರ್ಶಿ ಉಷಾ ಮೋಹನ್, “ಟೀಸರ್‌ನಲ್ಲಿರುವ ಅಶ್ಲೀಲ ಹಾಗೂ ಪ್ರೌಢ ದೃಶ್ಯಗಳು ಮಹಿಳೆಯರು ಹಾಗೂ ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟುಮಾಡುತ್ತಿವೆ. ಯಾವುದೇ ವಯೋಮಿತಿ ಅಥವಾ ಮುನ್ನೆಚ್ಚರಿಕೆ ಇಲ್ಲದೆ ಸಾರ್ವಜನಿಕವಾಗಿ ಬಿಡುಗಡೆಯಾಗಿರುವ ದೃಶ್ಯಗಳು ಮಹಿಳೆಯರ ಘನತೆಗೆ ಕುಂದು ತರುವಂತಿವೆ. ಇದು ಕನ್ನಡದ ಐತಿಹಾಸಿಕ ಸಾಂಸ್ಕೃತಿಕ ಪರಂಪರೆಯ ಮೇಲೆ ನಡೆದಿರುವ ತೀವ್ರ ಅಪಮಾನ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜದ ಮೇಲೆ, ವಿಶೇಷವಾಗಿ ಅಪ್ರಾಪ್ತ ವಯಸ್ಕರ ಮೇಲೆ ಈ ದೃಶ್ಯಗಳು ಗಂಭೀರ ದುಷ್ಪರಿಣಾಮ ಬೀರುತ್ತಿವೆ ಎಂದು ತಿಳಿಸಿದ ಅವರು, ರಾಜ್ಯ ಮಹಿಳಾ ಆಯೋಗವು ತಕ್ಷಣ ಮಧ್ಯಪ್ರವೇಶಿಸಿ ಟೀಸರ್ ಅನ್ನು ರದ್ದುಗೊಳಿಸುವಂತೆ ಹಾಗೂ ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕುವಂತೆ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ಮಹಿಳೆಯರ ಸಾಂಸ್ಕೃತಿಕ ಮತ್ತು ನೈತಿಕ ಮೌಲ್ಯಗಳನ್ನು ರಕ್ಷಿಸುವುದು ಮಹಿಳಾ ಆಯೋಗದ ಸಾಂವಿಧಾನಿಕ ಕರ್ತವ್ಯವಾಗಿದ್ದು, ಈ ವಿಚಾರದಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು. ಜೊತೆಗೆ ಸರ್ಕಾರವು ಇಂತಹ ಪ್ರಕರಣಗಳನ್ನು ತಡೆಗಟ್ಟಲು ಕಠಿಣ ಕಾನೂನುಗಳನ್ನು ರೂಪಿಸಬೇಕೆಂದು ಉಷಾ ಮೋಹನ್ ಒತ್ತಾಯಿಸಿದರು.
