ಬೆಂಗಳೂರು: ಬೆಂಗಳೂರು–ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ಯೋಜನೆಯನ್ನು ಮರುಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಬಿಎಂಐಸಿ ಯೋಜನೆಗಾಗಿ ವಶಪಡಿಸಿಕೊಂಡ ಜಮೀನಿಗೆ ಪರಿಹಾರ ವಿತರಿಸುವಂತೆ ಸರ್ಕಾರಕ್ಕೆ ಸೂಚಿಸಬೇಕೆಂದು ಕೋರಿ ಮಾರಪ್ಪ ಗಾರ್ಡನ್ ನಿವಾಸಿ ಚಂದ್ರಿಕಾ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಡಿ.ಕೆ. ಸಿಂಗ್ ನೇತೃತ್ವದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದರೂ, ಯೋಜನೆಯ ಅನುಷ್ಠಾನ ವಿಳಂಬದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
1995ರಲ್ಲಿ ರೂಪಿಸಲಾದ ಯೋಜನೆಯಡಿ 111 ಕಿ.ಮೀ ಎಕ್ಸ್‌ಪ್ರೆಸ್ ಮಾರ್ಗ ನಿರ್ಮಾಣಕ್ಕೆ ಉದ್ದೇಶಿಸಿದ್ದರೂ, ಕಳೆದ 25 ವರ್ಷಗಳಲ್ಲಿ ಕೇವಲ ಒಂದು ಕಿ.ಮೀ ರಸ್ತೆ ಮಾತ್ರ ನಿರ್ಮಾಣವಾಗಿದೆ. ನಗರ ದಟ್ಟಣೆ ಕಡಿಮೆ ಮಾಡಲು ಪ್ರಸ್ತಾವಿತ ಐದು ಪಟ್ಟಣಗಳಲ್ಲಿಯೂ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದು ನ್ಯಾಯಪೀಠ ಗಮನಿಸಿದೆ.
ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ವೇ ಭವಿಷ್ಯದಲ್ಲಿಯೂ ನಿರ್ಮಾಣವಾಗುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಹಳೆಯ ಯೋಜನೆಯನ್ನು ಕೈಬಿಟ್ಟು ಹೊಸ ಯೋಜನೆ ರೂಪಿಸುವುದು ಸೂಕ್ತವೆಂದು ತಿಳಿಸಿದೆ. ಯೋಜನೆಯ ಉದ್ದೇಶಗಳು ಕೇವಲ ಕಾಗದಗಳಲ್ಲಿ ಉಳಿದಿದ್ದು, ಅಧಿಕಾರಸ್ಥರ ಬದ್ಧತೆಯ ಕೊರತೆ ಇದಕ್ಕೆ ಪ್ರಮುಖ ಕಾರಣವೆಂದು ಕಟುವಾಗಿ ಟೀಕಿಸಿದೆ.
ಬೆಂಗಳೂರು ಮಹಾನಗರದ ಜನಸಂಖ್ಯೆ 1.40 ಕೋಟಿಯನ್ನು ಮೀರಿದ್ದು, ಸಂಚಾರ ದಟ್ಟಣೆ ಮತ್ತು ಮೂಲಸೌಕರ್ಯ ಸಮಸ್ಯೆಗಳು ಗಂಭೀರವಾಗಿವೆ. ಈ ಹಿನ್ನೆಲೆಯಲ್ಲಿ ನಗರದ ಜೀವನಮಟ್ಟ ಸುಧಾರಣೆಗೆ ರಾಜ್ಯ ಸರ್ಕಾರ ಹೊಸ ಸಮಗ್ರ ಯೋಜನೆ ರೂಪಿಸಬೇಕೆಂದು ಹೈಕೋರ್ಟ್ ಸಲಹೆ ನೀಡಿದೆ.
