Home ದೇಶ ನಟ ಮಿಥುನ್ ಚಕ್ರವರ್ತಿ ವಿರುದ್ಧ ಎಫ್‌ಐಆರ್

ನಟ ಮಿಥುನ್ ಚಕ್ರವರ್ತಿ ವಿರುದ್ಧ ಎಫ್‌ಐಆರ್

0

ಕೋಲ್ಕತ್ತಾ: ಬಾಲಿವುಡ್ ನಟ ಮತ್ತು ರಾಜಕೀಯ ನಾಯಕ ಮಿಥುನ್ ಚಕ್ರವರ್ತಿ ವಿರುದ್ಧ ಕೋಲ್ಕತ್ತಾ ಪೊಲೀಸರು ಬುಧವಾರ ಎಫ್‌ಐಆರ್ ದಾಖಲಿಸಿದ್ದಾರೆ. ಪಶ್ಚಿಮ ಬಂಗಾಳದ ಉತ್ತರ 24 ಪರಗಣದಲ್ಲಿ ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದರಿಂದ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಬಿಜೆಪಿಯ ಸದಸ್ಯತ್ವ ನೋಂದಣಿ ಕಾರ್ಯಕ್ರಮದ ಅಂಗವಾಗಿ ಅಕ್ಟೋಬರ್ 27 ರಂದು ಸಾಲ್ಟ್ ಲೇಕ್ ಪ್ರದೇಶದ ಪೂರ್ವ ವಲಯ ಸಾಂಸ್ಕೃತಿಕ ಕೇಂದ್ರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಮಿಥುನ್ ಚಕ್ರವರ್ತಿ, 2026ರಲ್ಲಿ ಪಶ್ಚಿಮ ಬಂಗಾಳದ ಸ್ಥಾನ ಬಿಜೆಪಿ ಪಾಲಾಗಲಿದ್ದು, ಗುರಿ ಸಾಧಿಸಲು ಏನು ಬೇಕಾದರೂ ಮಾಡಲು ಸಿದ್ಧ ಎಂದರು. ಮುಂದಿನ ಚುನಾವಣೆಯಲ್ಲಿ ಮತ ಹಾಕದಂತೆ ಬಿಜೆಪಿ ಕಾರ್ಯಕರ್ತರನ್ನು ಹೆದರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಮಿಥುನ್ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂಬ ದೂರಿನ ಮೇರೆಗೆ ಬಿದನ್‌ನಗರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಠಾಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೇಡಿನ ರಾಜಕಾರಣ: ಬಿಜೆಪಿ

ಮಿಥುನ್ ಚಕ್ರವರ್ತಿ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಸುಕಾಂತ ಮಜುಂದಾರ್ ಖಂಡಿಸಿದ್ದಾರೆ. ಸೇಡಿನ ರಾಜಕಾರಣದ ಭಾಗವಾಗಿ ಪ್ರಕರಣ ದಾಖಲಿಸಲಾಗಿದೆ ಎಂದರು. ಮಿಥುನ್ ಎಲ್ಲಿಯೂ ಪ್ರಚೋದನಕಾರಿ ಭಾಷಣ ಮಾಡಿಲ್ಲ ಎಂದ ಅವರು, ಪೊಲೀಸರನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡು ಬೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ಹೇಳಿದೆ.

You cannot copy content of this page

Exit mobile version