ಬೆಂಗಳೂರು: ಅತ್ತ ಬಿಜೆಪಿ, ಜೆಡಿಎಸ್ ತಮ್ಮ ಮೈತ್ರಿಯನ್ನು ಖಚಿತಪಡಿಸುತ್ತಿದ್ದಂತೆ ಇತ್ತ ಜೆಡಿಎಸ್ ಪಕ್ಷದ ಮೊದಲ ವಿಕೆಟ್ ಬಿದ್ದಿದೆ. ಹೌದು ಆ ಪಕ್ಷದ ರಾಜ್ಯ ವಕ್ತಾರೆ ತಮ್ಮ ಸ್ಥಾನಕ್ಕೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಪಕ್ಷದ ಮಾಧ್ಯಮ ಮುಖ್ಯಸ್ಥರಾದ ಶ್ರೀಕಂಠಗೌಡರಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ, ಪಕ್ಷದ ರಾಜ್ಯ ವಕ್ತಾರೆ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಯು.ಟಿ. ಆಯೀಷಾ ಫರ್ಜಾನ ತಿಳಿಸಿದ್ದಾರೆ.
ಅವರು ಪಕ್ಷದ ಮಾಧ್ಯಮ ಮುಖ್ಯಸ್ಥರಿಗೆ ಬರೆದಿರುವ ಪತ್ರದಲ್ಲಿ “ಕನ್ನಡ ನಾಡಿನ ಸಮೃದ್ಧಿ ಮತ್ತು ಜಾತ್ಯಾತೀತ ನಿಲುವುಗಳು ನನ್ನ ಜೀವನದ ಪ್ರಧಾನ ಆಶಯಗಳಾಗಿದ್ದು, ಆ ನಿಟ್ಟಿನಲ್ಲಿ ಶ್ರಮಿಸುವ ಸಲುವಾಗಿ ನಾನು ತಮ್ಮ ಪಕ್ಷವನ್ನು ಸೇರಿದ್ದೆ. ಆದರೆ ಬದಲಾದ ಕಾಲಘಟ್ಟದಲ್ಲಿ ನನ್ನ ನಿಲುವುಗಳು ಮತ್ತು ಪಕ್ಷದ ನಿಲುವುಗಳಲ್ಲಿ ಹೊಂದಾಣಿಕೆಯಾಗದ ಕಾರಣ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗ ಜೆಡಿಎಸ್ ಪಕ್ಷ ನೀಡಿದ್ದ ರಾಜ್ಯ ವಕ್ತಾರ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಗೌರವದಿಂದ ನಡೆಸಿಕೊಂಡ ಎಲ್ಲರಿಗೂ ಧನ್ಯವಾದಗಳು.” ಎಂದು ಬರೆದಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವು ತಿಂಗಳುಗಳಷ್ಟೇ ಬಾಕಿಯಿರುವಾಗ ಜೆಡಿಎಸ್ ಪಕ್ಷವನ್ನು ಸೇರಿದ್ದ ಯುಟಿ ಫರ್ಜಾನ ಪಕ್ಷವನ್ನು ತೊರೆಯುವುದರೊಂದಿಗೆ ಪಕ್ಷದ ಮೊದಲ ವಿಕೆಟ್ ಬಿದ್ದ ಹಾಗಾಗಿದೆ. ಫರ್ಜಾಜ ತಮ್ಮು ಉಂದಿನ ನಡೆಯೇನು ಎನ್ನುವುದರ ಕುರಿತು ಎಲ್ಲಿಯೂ ತಿಳಿಸಿಲ್ಲ.
ತನ್ನ ಪಕ್ಷದ ನಾಯಕರು, ಅಧ್ಯಕ್ಷರನ್ನೇ ಹೊರಗಿಟ್ಟು ಬಿಜೆಪಿಯೊಡನೆ ಡೀಲ್ ಕುದುರಿಸಿದ ಕುಮಾರಸ್ವಾಮಿಯವರ ನಡೆಯು ಪಕ್ಷದಲ್ಲಿ ತಲ್ಲಣ ಉಂಟುಮಾಡುವುದು ಗ್ಯಾರಂಟಿ ಎನ್ನುವ ವದಂತಿಗಳು ಹರಡುತ್ತಿವೆ.
ಈಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಸದ್ಯಕ್ಕೆ ಮರುಚುನಾವಣೆ ನಡೆಯುವ ಸಾಧ್ಯತೆಯಿಲ್ಲದಿರುವ ಕಾರಣ ಕೆಲವರು ಪಕ್ಷದಲ್ಲೇ ಉಳಿದರೂ, ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದ ಹಾಗೆ ಪಕ್ಷಕ್ಕೆ ಟಾಟಾ ಹೇಳುವ ಸಾಧ್ಯತೆಗಳಿವೆ.