ಉಡುಪಿ: ಕರಾವಳಿಯಲ್ಲಿ ದೋಣಿ ದುರಂತಗಳಿಂದ ಮೀನುಗಾರರ ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವುದು ಎಲ್ಲರನ್ನೂ ಕಾಡುವ ವಿಷಯ. ಇಂಥ ದುರಂತಗಳು ಮತ್ತೆ ಸಂಭವಿಸದಂತೆ ಮೀನುಗಾರರು ಜಾಗರೂಕರಾಗಿರಬೇಕು. ಹವಾಮಾನ ಇಲಾಖೆ ನೀಡುವ ಎಚ್ಚರಿಕೆಗಳನ್ನು ಗಂಭೀರವಾಗಿ ಪಾಲಿಸಿ, ಸಮುದ್ರ ಒಂದಿಷ್ಟು ಕ್ಷುಬ್ಧವಾಗಿದ್ದಾಗ ಮೀನುಗಾರಿಕೆಗೆ ತೆರಳದಿರುವುದೇ ಒಳಿತು ಎಂದು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಒತ್ತಾಯಿಸಿದ್ದಾರೆ.
ಜುಲೈ 11ರಂದು ಸೈಂಟ್ ಮೇರೀಸ್ ದ್ವೀಪದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಡಿಸ್ಕೋ ನಾಡದೋಣಿಗೆ ದೊಡ್ಡ ತೆರೆ ಬಡಿದು ದೋಣಿ ಮಗುಚಿದ ಘಟನೆಯಲ್ಲಿ, ಪಿತ್ರೋಡಿಯ ನೀಲಾಧರ ಜಿ. ತಿಂಗಳಾಯ ದುರದೃಷ್ಟವಶಾತ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಸಚಿವರು ಅವರ ಮನೆಗೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿ, ಪರಿಹಾರದ ಚೆಕ್ ವಿತರಿಸಿದ ಸಂದರ್ಭದಲ್ಲಿ ಈ ಮಾತುಗಳನ್ನಾಡಿದರು.
ಉಡುಪಿಯಿಂದ ಹಿಡಿದು ಭಟ್ಕಳ, ಮುರುಡೇಶ್ವರದಂಥ ಕಡೆಗಳಲ್ಲಿ ಇಂಥ ಘಟನೆಗಳು ಪದೇ ಪದೇ ನಡೆಯುತ್ತಿರುವುದು ಚಿಂತಾಜನಕ ಎಂದ ಸಚಿವರು, ಮೃತ ಮೀನುಗಾರರ ಕುಟುಂಬಕ್ಕೆ ಸರ್ಕಾರದಿಂದ ಎಲ್ಲ ರೀತಿಯ ಸಹಾಯ ಒದಗಿಸಲಾಗುವುದು ಎಂದರು. “ಈಗಾಗಲೇ ಆರು ಲಕ್ಷ ರೂಪಾಯಿಗಳಾಗಿದ್ದ ಪರಿಹಾರವನ್ನು 10 ಲಕ್ಷಕ್ಕೆ ಏರಿಸಿದ್ದೇವೆ. ಅಲ್ಲದೆ, ದೋಣಿ, ಇಂಜಿನ್, ಬಲೆಗಳ ಖರೀದಿಗೆ ಐದು ಲಕ್ಷ ರೂಪಾಯಿಗಳ ಪರಿಹಾರವನ್ನೂ ನೀಡುತ್ತಿದ್ದೇವೆ,” ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮತ್ತಿತರರು ಉಪಸ್ಥಿತರಿದ್ದರು.
ಸಮುದ್ರಕ್ಕೆ ಇಳಿಯದಿರಲು ಎಚ್ಚರಿಕೆ
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಅರಬೀ ಸಮುದ್ರದಲ್ಲಿ ಜುಲೈ 18ರವರೆಗೆ ಬಿರುಗಾಳಿಯ ಸಾಧ್ಯತೆ ಇದೆ. ಆದ್ದರಿಂದ, ಉಡುಪಿ ಜಿಲ್ಲೆಯ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚಿಸಲಾಗಿದೆ. ಸಾಂಪ್ರದಾಯಿಕ ಮೀನುಗಾರರು ತಮ್ಮ ದೋಣಿಗಳು ಮತ್ತು ಬಲೆಗಳನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಿಕೊಳ್ಳಬೇಕು. ಸಣ್ಣ ಮತ್ತು ಮಧ್ಯಮ ಗಾತ್ರದ ದೋಣಿಗಳು ಮೀನುಗಾರಿಕೆಗೆ ಹೋಗದಿರುವಂತೆ ಮತ್ತು ಮುಂದಿನ ದಿನಗಳಲ್ಲಿ ಸಮುದ್ರಕ್ಕೆ ತೆರಳುವಾಗ ಜೀವರಕ್ಷಕ ಸಾಧನಗಳನ್ನು ಕಡ್ಡಾಯವಾಗಿ ಬಳಸಿ ಸುರಕ್ಷಿತ ಮೀನುಗಾರಿಕೆಯನ್ನು ಕೈಗೊಳ್ಳಬೇಕು ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಪ್ರಕಟನೆಯಲ್ಲಿ ತಿಳಿಸಿದೆ.
ನೀರಿಗೆ ಬಿದ್ದ ಮೀನುಗಾರರಿಗಾಗಿ ಶೋಧ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ
ಗಂಗೊಳ್ಳಿಯಲ್ಲಿ ನಾಡದೋಣಿ ಮಗುಚಿದ್ದರಿಂದ ಮೂವರು ಮೀನುಗಾರರು ನೀರಿಗೆ ಬಿದ್ದ ಘಟನೆ ತಿಳಿಯುತ್ತಿದ್ದಂತೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಆ ಮೂವರನ್ನು ಸುರಕ್ಷಿತವಾಗಿ ಕರೆತರಲು ಕರಾವಳಿ ಕಾವಲು ಪಡೆಗೆ ಕಾರ್ಯಾಚರಣೆಗೆ ಸೂಚನೆ ನೀಡಿದ್ದಾರೆ. “ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ವಹಿಸಬೇಕು. ಜಿಲ್ಲಾಡಳಿತವೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು,” ಎಂದು ಸಚಿವರು ತಮ್ಮ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.