ಮಾಟಮಂತ್ರ ಮಾಡುತ್ತಿದ್ದಾರೆ ಎಂದು ಅನುಮಾನಪಟ್ಟು ಐವರನ್ನು ಹೊಡೆದು ಕೊಂದಿರುವ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ. ಆದಿವಾಸಿಗಳೇ ಹೆಚ್ಚಾಗಿರುವ ಸುಕ್ಮಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಭಾನುವಾರ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಐವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಗುರುವಾರ (ಸೆಪ್ಟೆಂಬರ್ 12) ರಾಜ್ಯದ ಬಲೋದಬಜಾರ್-ಭಟಪರಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಇಂತಹದ್ದೇ ಘಟನೆ ನಡೆದಿದೆ. ಕುಟುಂಬದ ಸದಸ್ಯರು ವಾಮಾಚಾರ ಮಾಡಿದ್ದಾರೆ ಎಂಬ ಶಂಕೆಯಲ್ಲಿ ಒಂದು ಹಸುಳೆ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಲಾಗಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, 2015-2021ರಲ್ಲಿ 663 ಮಹಿಳೆಯರನ್ನು ಮಾಟಮಂತ್ರದ ನೆಪದಲ್ಲಿ ಕೊಲ್ಲಲಾಗಿದೆ. ಅಂದರೆ ವರ್ಷಕ್ಕೆ 95 ಸಾವುಗಳು ಸಂಭವಿಸುತ್ತವೆ ಎಂದು ವರದಿಗಳು ತಿಳಿಸಿವೆ. ದೂರದ ಪ್ರದೇಶಗಳಲ್ಲಿನ ಅನೇಕ ಪ್ರಕರಣಗಳು ವರದಿಯಾಗದೇ ಇರುವುದರಿಂದ ನಿಜವಾದ ಸಂಖ್ಯೆಯು ತುಂಬಾ ಹೆಚ್ಚಿರಬಹುದು. 2015-2020ರ ನಡುವೆ ಜಾರ್ಖಂಡ್ ಒಂದರಲ್ಲೇ ಮಾಟ-ಮಂತ್ರ ವಿರೋಧಿ ಕಾಯ್ದೆಯಡಿ 4,556 ಪ್ರಕರಣಗಳು ದಾಖಲಾಗಿವೆ.