Home ದೇಶ ದೆಹಲಿ ಮುಖ್ಯಮಂತ್ರಿ ಸ್ಥಾನ: ಕೇಜ್ರೀವಾಲ್‌ ಭೇಟಿಯಾದ ಮನೀಶ್‌ ಸಿಸೋಡಿಯಾ

ದೆಹಲಿ ಮುಖ್ಯಮಂತ್ರಿ ಸ್ಥಾನ: ಕೇಜ್ರೀವಾಲ್‌ ಭೇಟಿಯಾದ ಮನೀಶ್‌ ಸಿಸೋಡಿಯಾ

0

ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಇಂದು ಅರವಿಂದ್ ಕೇಜ್ರಿವಾಲ್ ನಿವಾಸಕ್ಕೆ ತೆರಳಲಿದ್ದಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿಸೋಡಿಯಾ ಅವರು ಕೇಜ್ರಿವಾಲ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಲಿದ್ದಾರೆ.

ಈ ಸಂದರ್ಭದಲ್ಲಿ ದೆಹಲಿಯ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆ ನಡೆಯುವ ಸಾಧ್ಯತೆಯಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಜಕೀಯ ಬಿಸಿಯೇರಿದೆ. ಇನ್ನೆರಡು ದಿನಗಳಲ್ಲಿ ದೆಹಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ನಿನ್ನೆ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಮುಂದಿನ ಸಿಎಂ ಯಾರು ಎಂಬ ಚರ್ಚೆ ಶುರುವಾಗಿದೆ. ಈ ನಡುವೆ ಮುಂದಿನ ಮುಖ್ಯಮಂತ್ರಿಯಾಗಿ ಪಕ್ಷದಲ್ಲಿ ಕೆಲವರ ಹೆಸರು ಕೇಳಿಬರುತ್ತಿದೆ. ಕೇಜ್ರಿವಾಲ್ ಅವರ ಘೋಷಣೆಯ ನಂತರ, ಸಿಸೋಡಿಯಾ ಮೊದಲ ಬಾರಿಗೆ ಎಎಪಿ ಮುಖ್ಯಸ್ಥರನ್ನು ಭೇಟಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಉಭಯ ನಾಯಕರ ಭೇಟಿ ವಿಚಾರ ಇದೀಗ ಮಹತ್ವ ಪಡೆದುಕೊಂಡಿದೆ.

ಮದ್ಯ ನೀತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದ ನಂತರ ಶುಕ್ರವಾರ ಕೇಜ್ರಿವಾಲ್ ತಿಹಾರ್ ಜೈಲಿನಿಂದ ಬಿಡುಗಡೆಗೊಂಡರು. ಅದರ ನಂತರ, ಅವರು ಭಾನುವಾರ ಮೊದಲ ಬಾರಿಗೆ ಎಎಪಿ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ರಾಜೀನಾಮೆ ನೀಡುವುದಾಗಿ ಘೋಷಿಸಿದರು. ಇನ್ನೆರಡು ದಿನಗಳಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಿ ಅವರ ಸ್ಥಾನ ಬದಲಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಇದರೊಂದಿಗೆ ದೆಹಲಿಯ ಮುಂದಿನ ಸಿಎಂ ಯಾರು ಎಂಬುದೇ ಇದೀಗ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.

ಇದೇ ವೇಳೆ ಹಲವು ನಾಯಕರ ಹೆಸರುಗಳು ಮುನ್ನೆಲೆಗೆ ಬಂದವು. ಅದರಲ್ಲಿ ಪ್ರಮುಖ ಹೆಸರು ಅತಿಶಿ. ಕೇಜ್ರಿವಾಲ್ ಜೈಲಿನಲ್ಲಿದ್ದ ಸಮಯದಲ್ಲಿ ಪಕ್ಷದ ಎಲ್ಲಾ ವ್ಯವಹಾರಗಳು ಮತ್ತು ಸರ್ಕಾರದ ಜವಾಬ್ದಾರಿಗಳನ್ನು‌ ಅವರೇ ನಿಭಾಯಿಸಿದರು. ಅವರು ಸರ್ಕಾರದ ಎಲ್ಲಾ 14 ಇಲಾಖೆಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಶಿಕ್ಷಣ, ಹಣಕಾಸು, ಯೋಜನೆ, PWD, ನೀರು, ವಿದ್ಯುತ್, ನಾಗರಿಕ ಸಂಬಂಧಗಳಂತಹ ಪ್ರಮುಖ ಇಲಾಖೆಗಳನ್ನು ಅತಿಶಿ ನಿರ್ವಹಿಸುತ್ತಿದ್ದಾರೆ. ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಅತಿಶಿ ಜೊತೆಗೆ ಸೌರಭ್ ಭಾರದ್ವಾಜ್, ಕೈಲಾಶ್ ಗೆಹ್ಲೋಟ್ ಮತ್ತು ಗೋಪಾಲ್ ರಾಯ್ ಅವರ ಹೆಸರನ್ನು ಆಪ್ ಪರಿಗಣಿಸುತ್ತಿದೆ. ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್ ಹೆಸರೂ ಕೇಳಿ ಬಂದಿತ್ತು. ಮನೀಶ್‌ ಸಿಸೋಡಿಯಾ ಕೂಡಾ ಕೇಜ್ರಿವಾಲ್‌ ಹಾದಿ ಹಿಡಿದಿದ್ದು, ಜನರು ಮರು ಆಯ್ಕೆ ಮಾಡಿದರೆ ಮಾತ್ರ ಮತ್ತೆ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಮರಳುವುದಾಗಿ ಅವರು ಹೇಳಿದ್ದಾರೆ.

You cannot copy content of this page

Exit mobile version