ಯುದ್ಧದಿಂದಾಗಿ ಸಂಪೂರ್ಣವಾಗಿ ಧ್ವಂಸಗೊಂಡಿರುವ ಗಾಜಾದಲ್ಲಿ, ಕೆಲಸವಿಲ್ಲದೆ, ತಿನ್ನಲು ಆಹಾರವಿಲ್ಲದೆ, ತಲೆಮರೆಸಿಕೊಳ್ಳಲು ನೆರಳೂ ಇಲ್ಲದೆ ಇರುವ ಸಾವಿರಾರು ನಿರಾಶ್ರಿತರು ಕೊನೆಗೆ ಲೈಂಗಿಕ ಶೋಷಣೆಯನ್ನು ಎದುರಿಸುವ ದುಸ್ಥಿತಿ ಬಂದೊದಗಿದೆ.
ಸಹಾಯ ಸಾಮಗ್ರಿಗಳನ್ನು ವಿತರಿಸಲು ವಿಶ್ವಸಂಸ್ಥೆಯಂತಹ ಅಂತಾರಾಷ್ಟ್ರೀಯ ಸಂಸ್ಥೆಗಳು ಸ್ಥಾಪಿಸಿರುವ ಕೇಂದ್ರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಕಾಮದಾಸೆಗೆ ಗಾಜಾದ ಮಹಿಳೆಯರು ಬಲಿಯಾಗುತ್ತಿದ್ದಾರೆ ಎಂದು ವರದಿಗಳು ಬರುತ್ತಿವೆ. ತಮ್ಮ ಬೇಡಿಕೆಗಳನ್ನು ಈಡೇರಿಸಿದರೆ ಆಹಾರ ನೀಡುವುದಾಗಿ ಹೇಳಿ ಕೆಲವು ನೆರವು ಸಿಬ್ಬಂದಿ ಗಾಜಾದ ಅಸಹಾಯಕ ಮಹಿಳೆಯರನ್ನು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಆರು ಮಕ್ಕಳಿಗೆ ಊಟ ಹಾಕಲು ವಾರಗಟ್ಟಲೆ ಕಷ್ಟಪಡುತ್ತಿದ್ದ 38 ವರ್ಷದ ಮಹಿಳೆಯೊಬ್ಬರಿಗೆ ತಮ್ಮ ಏಜೆನ್ಸಿಯಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿದ ನೆರವು ವಿತರಣಾ ಕೇಂದ್ರದ ಉದ್ಯೋಗಿಯೊಬ್ಬ ಆಕೆಯನ್ನು ಜನರಿಲ್ಲದ ಅಪಾರ್ಟ್‌ಮೆಂಟ್‌ಗೆ ಕರೆದೊಯ್ದು ತನ್ನ ಲೈಂಗಿಕ ಬಯಕೆಯನ್ನು ವ್ಯಕ್ತಪಡಿಸಿದ್ದಾನೆ. ಆಕೆಯ ಮಕ್ಕಳಿಗೆ ಹೊಟ್ಟೆ ತುಂಬಾ ಊಟ ಸಿಗುತ್ತದೆ ಎಂಬ ಆಸೆಯಿಂದ ಆ ತಾಯಿ ಮನಸ್ಸು ಕಲ್ಲು ಮಾಡಿಕೊಂಡು ಅದಕ್ಕೆ ಸಿದ್ಧಳಾದರೂ, ಅವನು ಆಕೆಗೆ 30 ಡಾಲರ್ (ಸುಮಾರು ₹ 2,500) ಮತ್ತು ಸ್ವಲ್ಪ ಆಹಾರವನ್ನು ಕೊಟ್ಟು ಕಳುಹಿಸಿದ್ದಾನೆ. ಆದರೆ ಉದ್ಯೋಗ ನೀಡುವ ಭರವಸೆ ಮಾತ್ರ ಎಂದಿಗೂ ಈಡೇರಿಲ್ಲ. ಇಂತಹ ಹಲವಾರು ದಾರುಣ ಕಥೆಗಳನ್ನು ಸಂತ್ರಸ್ತ ಮಹಿಳೆಯರು ಎಪಿ ಸುದ್ದಿಸಂಸ್ಥೆಯೊಂದಿಗೆ ಹಂಚಿಕೊಂಡಿದ್ದಾರೆ.
ಕೆಲವು ಮಹಿಳೆಯರು ಗರ್ಭಿಣಿಯರೂ ಆಗಿದ್ದಾರೆ..
ಮಾನವೀಯ ಸಹಾಯದ ಅಡಿಯಲ್ಲಿ ವಿತರಿಸಬೇಕಾದ ಆಹಾರವು ಸಹ ಅಲ್ಲಿನ ಸಿಬ್ಬಂದಿಯ ಲೈಂಗಿಕ ಆಸೆಗೆ ಆಯುಧವಾಗಿ ಮಾರ್ಪಟ್ಟಿದೆ. ತಮ್ಮ ಇಚ್ಛೆಗಳನ್ನು ಪೂರೈಸಲು ಸಿಬ್ಬಂದಿ ನೇರವಾಗಿ ಮಹಿಳೆಯರನ್ನು ಕೇಳುತ್ತಿದ್ದಾರೆ ಎಂದರೆ, ಆ ಅಸಹಾಯಕ ಮಹಿಳೆಯರ ಪರಿಸ್ಥಿತಿ ಎಷ್ಟು ದಯನೀಯವಾಗಿದೆ ಎಂದು ಅರ್ಥಮಾಡಿಕೊಳ್ಳಬಹುದು. ಇನ್ನು ಕೆಲವರು ಲೈಂಗಿಕ ಬಯಕೆಗಳನ್ನು ಈಡೇರಿಸಿಕೊಳ್ಳಲು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದಾರೆ.
ಮಹಿಳೆಯರ ಮೇಲಿನ ಲೈಂಗಿಕ ಶೋಷಣೆ ಹೊಸ ಸಮಸ್ಯೆಯಲ್ಲ; ದಕ್ಷಿಣ ಸೂಡಾನ್ ಮತ್ತು ಹೈಟಿಯಂತಹ ಯುದ್ಧ ಪೀಡಿತ ದೇಶಗಳಲ್ಲಿ ಇದೇ ಪರಿಸ್ಥಿತಿಯನ್ನು ನಾವು ಕಣ್ಣಾರೆ ನೋಡಿದ್ದೇವೆ ಎಂದು ಮಾನವ ಹಕ್ಕುಗಳ ಸಂಸ್ಥೆಗಳ ಪ್ರತಿನಿಧಿಗಳು ತಿಳಿಸಿದ್ದಾರೆ. ಆಹಾರಕ್ಕಾಗಿ ಲೈಂಗಿಕ ದೌರ್ಜನ್ಯಗಳನ್ನು ಎದುರಿಸಿದ ನೂರಾರು ಮಹಿಳೆಯರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಪ್ಯಾಲೆಸ್ಟೀನ್ ಮಾನಸಿಕ ಆರೋಗ್ಯ ತಜ್ಞರು ಹೇಳಿದ್ದಾರೆ. ಕೆಲವು ಮಹಿಳೆಯರು ಗರ್ಭಿಣಿಯರೂ ಆಗಿದ್ದಾರೆ ಮತ್ತು ಸಾಂಪ್ರದಾಯಿಕ ಗಾಜಾ ಸಮಾಜದಲ್ಲಿ ತಮ್ಮ ಮೇಲೆ ನಡೆದ ಅನ್ಯಾಯವನ್ನು ಹೊರಗೆ ಹೇಳಿಕೊಳ್ಳಲು ಸಾಧ್ಯವಾಗದ ಸ್ಥಿತಿ ಇಲ್ಲಿನ ಮಹಿಳೆಯರದ್ದಾಗಿದೆ ಎಂದು ಅವರು ಹೇಳಿದ್ದಾರೆ.