Home ದೆಹಲಿ ಪಾಕ್ ಸರ್ಕಾರದ ವಿರುದ್ಧ ಮುಂದುವರೆದ ಜನರ ಪ್ರತಿಭಟನೆಗಳು | ನಲುಗುತ್ತಿರುವ ಪಿಒಕೆ; ಪೊಲೀಸ್ ದಾಳಿಗೆ 8...

ಪಾಕ್ ಸರ್ಕಾರದ ವಿರುದ್ಧ ಮುಂದುವರೆದ ಜನರ ಪ್ರತಿಭಟನೆಗಳು | ನಲುಗುತ್ತಿರುವ ಪಿಒಕೆ; ಪೊಲೀಸ್ ದಾಳಿಗೆ 8 ಸಾವು

0

ದೆಹಲಿ: ಪಾಕಿಸ್ತಾನ ಸರ್ಕಾರದ ವಿರುದ್ಧ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳು ಬುಧವಾರ 8 ಜನರ ಪ್ರಾಣವನ್ನು ಬಲಿ ತೆಗೆದುಕೊಂಡಿವೆ.

ಬಾಗ್ ಜಿಲ್ಲೆಯ ಧೀರ್‌ಕೋಟ್‌ನಲ್ಲಿ ನಾಲ್ವರು, ಮುಜಫರಾಬಾದ್‌ನಲ್ಲಿ ಇಬ್ಬರು ಮತ್ತು ಮೀರ್‌ಪುರದಲ್ಲಿ ಇಬ್ಬರು ಪೊಲೀಸ್ ಗೋಲಿಬಾರ್‌ನಲ್ಲಿ ಸಾವನ್ನಪ್ಪಿದ್ದಾರೆ. ಮಂಗಳವಾರ ಮುಜಫರಾಬಾದ್‌ನಲ್ಲಿ ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಹತ್ತಕ್ಕೇರಿದೆ.

ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತಿರುವ ಶಹಬಾಜ್ ಷರೀಫ್ ಸರ್ಕಾರದ ವಿರುದ್ಧ ಪಿಒಕೆಯಲ್ಲಿ ಕಳೆದ ಮೂರು ದಿನಗಳಿಂದ ಅವಾಮಿ ಆಕ್ಷನ್ ಕಮಿಟಿ (Awami Action Committee) ನೇತೃತ್ವದಲ್ಲಿ ಜನ ಪ್ರತಿಭಟನೆಗಳು ನಡೆಯುತ್ತಿವೆ. ಮಾರುಕಟ್ಟೆಗಳು, ಅಂಗಡಿಗಳು ಮತ್ತು ಸ್ಥಳೀಯ ವ್ಯಾಪಾರಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದು, ಸಾರಿಗೆ ಸೇವೆಗಳು ಸ್ಥಗಿತಗೊಂಡಿವೆ.

ಮುಜಫರಾಬಾದ್‌ಗೆ ಮೆರವಣಿಗೆ ಹೊರಟಿದ್ದ ಪ್ರತಿಭಟನಾಕಾರರನ್ನು ತಡೆಯಲು ಸರ್ಕಾರವು ಸೇತುವೆಯ ಮೇಲೆ ದೊಡ್ಡ ಕಂಟೇನರ್‌ಗಳನ್ನು ಅಡ್ಡವಾಗಿ ಇಟ್ಟಿತ್ತು, ಆದರೆ ಪ್ರತಿಭಟನಾಕಾರರು ಅವುಗಳನ್ನು ನದಿಗೆ ತಳ್ಳಿಹಾಕಿದ್ದಾರೆ.

ನೂರಾರು ಪ್ರತಿಭಟನಾಕಾರರು ಕಂಟೇನರ್‌ಗಳನ್ನು ಸೇತುವೆಯಿಂದ ನದಿಗೆ ತಳ್ಳುತ್ತಿರುವ ದೃಶ್ಯಗಳ ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಅವಾಮಿ ಆಕ್ಷನ್ ಕಮಿಟಿಯು ಪಾಕ್ ಸರ್ಕಾರದೆದುರು ಒಟ್ಟು 38 ಬೇಡಿಕೆಗಳನ್ನು ಇಟ್ಟಿದೆ, ಇದರಲ್ಲಿ ಪಾಕ್‌ನಲ್ಲಿ ವಾಸಿಸುತ್ತಿರುವ ಕಾಶ್ಮೀರಿ ನಿರಾಶ್ರಿತರಿಗಾಗಿ ಪಿಒಕೆ ಅಸೆಂಬ್ಲಿಯಲ್ಲಿ ಮೀಸಲಾದ 12 ಸ್ಥಾನಗಳನ್ನು ರದ್ದುಪಡಿಸುವುದು ಸೇರಿದೆ.

“ಕಳೆದ 70 ವರ್ಷಗಳಿಂದ ನಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಸರ್ಕಾರವು ನಮಗೆ ಹಕ್ಕುಗಳನ್ನು ಒದಗಿಸಬೇಕು, ಇಲ್ಲದಿದ್ದರೆ ಜನರ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ,” ಎಂದು ಸಮಿತಿಯ ನಾಯಕ ಶೌಕತ್ ನವಾಜ್ ಮೀರ್ ತಿಳಿಸಿದ್ದಾರೆ. ಜನರು ನಡೆಸುತ್ತಿರುವ ಈ ಮುಷ್ಕರ ಕೇವಲ ‘ಪ್ಲಾನ್ ಎ’ ಮಾತ್ರ. ಇದು ಸರ್ಕಾರಕ್ಕೆ ಒಂದು ಸೂಚನೆಯಷ್ಟೇ. ಸರ್ಕಾರವನ್ನು ಉಸಿರುಗಟ್ಟಿಸುವ ‘ಪ್ಲಾನ್ ಡಿ’ ಸಹ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಆದರೆ, ಪಿಒಕೆ ನಾಗರಿಕರ ಪ್ರತಿಭಟನೆಗಳನ್ನು ಹತ್ತಿಕ್ಕಲು ಸರ್ಕಾರವು ಪೊಲೀಸ್ ಬಲವನ್ನು ಬಳಸುವ ಕ್ರಮಗಳನ್ನು ಕೈಗೊಂಡಿದೆ. ಭಾರಿ ಸಂಖ್ಯೆಯ ಪೊಲೀಸ್ ಮತ್ತು ಭದ್ರತಾ ಪಡೆಗಳು ಮುಜಫರಾಬಾದ್‌ಗೆ ತಲುಪಿವೆ. ಸರ್ಕಾರವು ಪಿಒಕೆಯಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ.

ತನ್ನದೇ ಜನರ ಮೇಲೆ ಪಾಕ್ ಡ್ರೋನ್ ದಾಳಿ

ಪಾಕಿಸ್ತಾನ ಸೇನೆಯು ತನ್ನದೇ ಜನರ ಮೇಲೆ ದಾಳಿ ನಡೆಸುತ್ತಿದೆ. ಬಲೂಚ್ ಲಿಬರೇಶನ್ ಆರ್ಮಿ (Baloch Liberation Army) ಮತ್ತು ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್ (BLF) ನಿಯಂತ್ರಣದಲ್ಲಿರುವ ಜೆಹ್ರಿ ಪ್ರದೇಶವನ್ನು ಮರಳಿ ವಶಪಡಿಸಿಕೊಳ್ಳಲು ಜನರಲ್ ಅಸೀಂ ಮುನೀರ್ ನೇತೃತ್ವದ ಸೇನೆಯು ವಿವೇಚನಾರಹಿತ ದಾಳಿಗಳನ್ನು ನಡೆಸುತ್ತಿದೆ.

ಆರ್ಟಿಲರಿ ಮತ್ತು ಮೋರ್ಟಾರ್‌ಗಳೊಂದಿಗೆ ದಾಳಿ ನಡೆಸುತ್ತಿರುವುದರಿಂದ ಜೆಹ್ರಿ ಪ್ರದೇಶದ ಜನರು ಭಯದಿಂದ ನಲುಗಿ ಹೋಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಡ್ರೋನ್ ದಾಳಿಗಳಿಂದಾಗಿ ಜನರು ಸಂಪೂರ್ಣವಾಗಿ ದಿಗ್ಬಂಧನದಲ್ಲಿ ಸಿಲುಕಿದ್ದಾರೆ. ಆಹಾರ ಮತ್ತು ಇಂಧನದ ಕೊರತೆಯಿಂದಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಾಂಬ್‌ಗಳು ಹತ್ತಿ ಹೊಲಗಳನ್ನು ನಾಶಪಡಿಸುತ್ತಿವೆ.

You cannot copy content of this page

Exit mobile version