ಬೆಂಗಳೂರು: ಬೆಂಗಳೂರಿನ ಇತಿಹಾಸ ಪ್ರಸಿದ್ಧ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಸುತ್ತಮುತ್ತ ಬೀದಿ ವ್ಯಾಪಾರದಲ್ಲಿ ತೊಡಗಿರುವ ಬಡಜನರನ್ನು ಬಿಬಿಎಮ್‌ಪಿ ಒಕ್ಕಲೆಬ್ಬಿಸಲು ಮುಂದಾಗಿದ್ದು, ಈ ಕುರಿತು AICCTU ಅಂಗಸಂಸ್ಥೆಯಾದ ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟವು ಪ್ರತಿಭಟನೆಯನ್ನು ದಾಖಲಿಸಿದೆ.

ಬೆಂಗಳೂರು ಶಾಪಿಂಗ್ ಕಾಂಪ್ಲೆಕ್ಸ್ ಸುತ್ತಮುತ್ತ 400 – 500 ಬೀದಿ ವ್ಯಾಪಾರಿಗಳಿದ್ದು ಅವರನ್ನು ತೆರವುಗೊಳಿಸಲು ಪಾಲಿಕೆ ಕಾನೂನು ಬಾಹಿರ ಎಚ್ಚರಿಕೆ ನೀಡಿರುವುದನ್ನು ತಾನು ವಿರೋಧಿಸುವುದಾಗಿ ಸಂಘಟನೆ ಹೇಳಿದೆ. ನವೆಂಬರ್ 4ನೇ ತಾರೀಖಿನಂದು ಬಿಬಿಎಮ್‌ಪಿ ಅಧಿಕಾರಿಗಳು ಮತ್ತು ಮಾರ್ಷಲ್‌ಗಳು ಸ್ಥಳಕ್ಕೆ ತೆರಳಿ ವ್ಯಾಪಾರಿಗಳು ಮಂಗಳವಾರದಿಂದ ಅಲ್ಲಿ ವ್ಯಾಪಾರ ಮಾಡುವಂತಿಲ್ಲ ಎಚ್ಚರಿಕೆ ನೀಡಿದ್ದಾರೆ. ಶಾಪಿಂಗ್ ಕಾಂಪ್ಲೆಕ್ಸಿನ ಒಂದು ಭಾಗವೆಂಬಂತೆ ದಶಕಗಳಿಂದ ಅಲ್ಲಿ ವ್ಯಾಪಾರ ಮಾಡುತ್ತಾ ತಮ್ಮ ದೈನಂದಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಿದ್ದ ವ್ಯಾಪಾರಿಗಳನ್ನು ಈ ಆದೇಶ ಕಂಗೆಡಿಸಿದೆ.
ಸ್ಥಳೀಯ ವ್ಯಾಪಾರಿಗಳ ಪ್ರಕಾರ ಅವರು ಇಲ್ಲಿ ಕಾನೂನುಬದ್ಧವಾಗಿ ವ್ಯಾಪಾರ ಮಾಡುತ್ತಿರುವುದು ಕಾನೂನು ಬಾಹಿರವಾಗಿದೆ. ಇದರಿಂದ ಬಡವರ ಹೊಟ್ಟೆಯ ಮೇಲೆ ಹೊಡೆದಂತಾಗುತ್ತದೆ. ಹಾಗೆ ಮಾಡಬೇಡಿ ಎಂದು ವ್ಯಾಪಾರಿಗಳು ಬೇಡಿಕೊಳ್ಳುವ ಮನ ಕಲಕುವ ವಿಡಿಯೋ ಕೂಡಾ ಪೀಪಲ್ ಮೀಡಿಯಾಕ್ಕೆ ಲಭ್ಯವಾಗಿದೆ.
ಬೀದಿ ವ್ಯಾಪಾರಿಗಳ (ಜೀವನೋಪಾಯ ರಕ್ಷಣೆ ಹಾಗೂ ನಿಯಂತ್ರಣ )ಕಾಯ್ದೆ 2014ರ ಕಲಂ 3(3) ಪ್ರಕಾರ ಕಾನೂನಿನಡಿಯಲ್ಲಿ ಸಮೀಕ್ಷೆ ಮುಗಿದು ವ್ಯಾಪಾರ ಮಾಡುತ್ತಿರುವ ಎಲ್ಲಾ ವ್ಯಾಪಾರಿಗಳಿಗೆ ಗುರುತಿನ ಚೀಟಿ ಕೊಡುವ ತನಕ ಯಾರನ್ನೂ ಎತ್ತಂಗಡಿ ಮಾಡುವಂತಿಲ್ಲ. ಹಾಗೆಯೇ ಕಲಂ 18ರ ಪ್ರಕಾರ, ಲಿಖಿತ ನೋಟಿಸ್ ನೀಡದೆ ಯಾರನ್ನು ಎತ್ತಂಗಡಿ ಮಾಡುವಂತಿಲ್ಲ.
ಆದರೆ BBMP ಅಧಿಕಾರಿಗಳು ನಮಗೆ ಒತ್ತುವರಿ ತೆರವುಗೊಳಿಸುವಂತೆ ಆದೇಶವಿದೆ ಎಂದು ಸಬೂಬು ಹೇಳುತ್ತಿದ್ದಾರೆ.
ವಾಸ್ತವವೆಂದರೆ ಬೀದಿ ವ್ಯಾಪಾರಿಗಳು ಒತ್ತುವರಿದಾರರಲ್ಲ. ಅವರ ಬಳಿಮಗೆ BBMP ನೀಡಿರುವ ಗುರುತಿನ ಚೀಟಿ ಹಾಗು ವ್ಯಾಪಾರದ ಪ್ರಮಾಣ ಪತ್ರವಿದೆ. ಕೆಲವು ವ್ಯಾಪಾರಿಗಳಿಗೆ ಅವರು ಸಮೀಕ್ಷೆಯಲ್ಲಿ ಕವರ್ ಆಗಿದ್ದರು ಸಹ ಬೀದಿ ವ್ಯಾಪಾರದ ಗುರುತಿನ ಚೀಟಿ ನೀಡಲಾಗಿಲ್ಲ. ಆದರೆ ಅವರ ಬಳಿ ಪಿ.ಎಂ.ಸ್ವನಿಧಿ ಸಾಲದ ದಾಖಲೆ ಇದೆ. ಈ ನಿಟ್ಟಿನಲ್ಲಿ ಗಮನಿಸಿದಾಗ ಅಲ್ಲಿನ ಬೀದಿ ವ್ಯಾಪಾರಿಗಳ ಬಳಿ ಬಿ.ಬಿ.ಎಂ.ಪಿ ಅಥವಾ ಕೇಂದ್ರ ಸರ್ಕಾರ ನೀಡಿರುವ ದಾಖಲೆಗಳಿವೆ
ಸಂಘಟನೆಯು ಈ ಕೂಡಲೇ ಈ ಕಾನೂನು ಬಾಹಿರ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದು, ಕೆಲವು ಬೇಡಿಕೆಗಳನ್ನೂ ಮುಂದಿಟ್ಟಿದೆ.
ಮೊದಲನೆಯದಾಗಿ ಅಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳಿಗೆ ರಕ್ಷಣೆ ನೀಡುವುದು, ಮತ್ತು ಆ ವ್ಯಾಪಾರಿಗಳಿಗೆ ಕಿರುಕುಳ ನೀಡದಂತೆ ಆದೇಶಿಸಬೇಕು ಎಂದು ಆಗ್ರಹಿಸಲಾಗಿದೆ.
ಮುಂದುವರೆದು,ಬೀದಿ ವ್ಯಾಪಾರಿಗಳ (ಜೀವನೋಪಾಯ ರಕ್ಷಣೆ ಹಾಗೂ ನಿಯಂತ್ರಣ)ಕಾಯ್ದೆ 2014ರ ಬಗ್ಗೆ ಬಿ.ಬಿ.ಎಂಪಿ ಅಧಿಕಾರಿಗಳಿಗೆ ಹಾಗು ಪೊಲೀಸ್ ಅಧಿಕಾರಿಗಳಿಗೆ ತರಬೇತಿ (ಕಾರ್ಯಾಗಾರ ) ನೀಡಿ ವ್ಯಾಪಾರಿಗಳಿಗೆ ಅವರಿಂದ ರಕ್ಷಣೆ ಕೊಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.