ಹೊಸದೆಹಲಿ: ಮಹತ್ವದ ವಿಧೇಯಕಗಳ ಅಂಗೀಕಾರವನ್ನು ಮುಂದೂಡುತ್ತಿರುವ ಪ್ರತಿಪಕ್ಷಗಳ ಆಡಳಿತದಲ್ಲಿರುವ ರಾಜ್ಯಪಾಲರ ವರ್ತನೆಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ರಾಜ್ಯಪಾಲರು ಕನಿಷ್ಠ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಕಟುವಾಗಿ ಅಭಿಪ್ರಾಯಪಟ್ಟಿದೆ.

ಪ್ರತಿಪಕ್ಷಗಳ ಆಡಳಿತವಿರುವ ಪಂಜಾಬ್, ತಮಿಳುನಾಡು, ಕೇರಳ ಮತ್ತು ತೆಲಂಗಾಣ ರಾಜ್ಯಗಳು ನ್ಯಾಯಾಂಗ ಮಧ್ಯಪ್ರವೇಶ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ.
“ಇದು ನಾವು ಪರಿಗಣಿಸಬೇಕಾದ ಗಂಭೀರ ಸಮಸ್ಯೆಯಾಗಿದೆ. ರಾಜ್ಯಪಾಲರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರಗಳು ಸುಪ್ರೀಂ ಕೋರ್ಟ್ ಅನ್ನು ಏಕೆ ಸಂಪರ್ಕಿಸಬೇಕು? ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಇವು ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಪರಿಹರಿಸಬೇಕಾದ ಸಮಸ್ಯೆಗಳು,’’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿದ್ದ ತ್ರಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
“ರಾಜ್ಯಪಾಲರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅವರು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಜನಪ್ರತಿನಿಧಿಗಳಲ್ಲ ಎಂಬುದನ್ನು ಮನಗಾಣಬೇಕು. ರಾಜ್ಯಪಾಲರು ಸಂವಿಧಾನಕ್ಕೆ ಬದ್ಧವಾಗಿರುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ” ಎಂದು ಪೀಠ ಹೇಳಿದೆ.
ಆರ್ಥಿಕ ಮತ್ತು ರಾಜ್ಯ ಸಂಯೋಜಿತ ಕಾಲೇಜುಗಳು ಸೇರಿದಂತೆ ಏಳು ಪ್ರಮುಖ ಮಸೂದೆಗಳನ್ನು ಅಂಗೀಕರಿಸುವಲ್ಲಿ ವಿಳಂಬದ ಕುರಿತು ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ವಿರುದ್ಧ ಪಂಜಾಬ್ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ಮೂವರು ನ್ಯಾಯಾಧೀಶರ ಪೀಠವು ಸೋಮವಾರ ವಿಚಾರಣೆ ನಡೆಸಿತು.