ಮಂಗಳೂರು: ನಗರದಲ್ಲಿ ಹಿಂದೂ ಮಹಿಳೆಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲು ಪ್ರಯತ್ನಿಸಿದ ಆರೋಪದ ಮೇಲೆ ಮಹಿಳಾ ವೈದ್ಯರು ಸೇರಿದಂತೆ ಮೂವರ ವಿರುದ್ಧ ಕರ್ನಾಟಕದ ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಂತ್ರಸ್ತೆಯ ತಾಯಿ ನೀಡಿದ ದೂರಿನ ಆಧಾರದ ಮೇಲೆ, ಖಲೀಲ್, ಡಾ.ಜಮೀಲಾ ಮತ್ತು ಐಮನ್ ಎಂದು ಗುರುತಿಸಲಾದ ಆರೋಪಿಗಳ ವಿರುದ್ಧ ಐಪಿಸಿ ಮತ್ತು ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳ ರಕ್ಷಣೆ ಸುಗ್ರೀವಾಜ್ಞೆ, 2022 ರ ಸೆಕ್ಷನ್ 3 ಮತ್ತು 5 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಂತ್ರಸ್ತೆಯ ತಾಯಿ ನೀಡಿದ ದೂರಿನ ಪ್ರಕಾರ, ಫ್ಯಾನ್ಸಿ ಸ್ಟೋರ್ನಲ್ಲಿ ಕೆಲಸ ಮಾಡುತ್ತಿದ್ದ ಶಿವಾನಿ, ಖಲೀಲ್ ಅವರ ಅಂಗಡಿಯಲ್ಲಿ ತನ್ನ ಮೊಬೈಲ್ ಫೋನ್ ಅನ್ನು ರೀಚಾರ್ಜ್ ಮಾಡಿಸುತ್ತಿದ್ದಳು, ನಂತರ ಅವಳೊಂದಿಗೆ ಸ್ನೇಹ ಬೆಳೆಸಿದ ಆತ, 2021 ರಲ್ಲಿ ಉತ್ತಮ ಸಂಬಳದೊಂದಿಗೆ ಒಳ್ಳೆಯ ಕೆಲಸವನ್ನು ನೀಡುವುದಾಗಿ ಭರವಸೆ ನೀಡಿದ್ದಾನೆ. ನಂತರ ಆತ ಅವಳನ್ನು ತನ್ನ ಸಂಬಂಧಿಕರ ಮನೆಗೆ ಕರೆದೊಯ್ದು, ಅಲ್ಲಿ ಅವಳ ಹೆಸರನ್ನು ಆಯಿಷಾ ಎಂದು ಬದಲಾಯಿಸಿದ ನಂತರ, ನಮಾಜ್ ಮಾಡಲು ಮತ್ತು ಕುರಾನ್ ಪಠಿಸಲು ಒತ್ತಾಯಿಸಲಾಯಿತು ಎಂದು ಆರೋಪಿಸಲಾಗಿದ್ದು, ಖಲೀಲ್ ಕೂಡ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಂತರ ಅವಳನ್ನು ಹೊಸ ಕೆಲಸಕ್ಕಾಗಿ ಬೇರೆ ಸ್ಥಳಕ್ಕೆ ಕರೆದೊಯ್ಯಲಾಯಿತು.ಆಗ ತನ್ನ ಮಗಳು ಡಾ.ಜಮೀಲಾ ಅವರ ಮನೆಗೆ ಕೆಲಸಕ್ಕಾಗಿ ಸೇರಿಕೊಂಡಳು, ಅಲ್ಲಿ ಅವಳು ಬುರ್ಖಾ ಧರಿಸುವಂತೆ ಒತ್ತಾಯಿಸಲಾಯಿತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಅದೇ ಸಮಯದಲ್ಲಿ, ಐಮನ್ ಎಂಬ ವ್ಯಕ್ತಿಯು ಅವಳನ್ನು ಇನ್ಸ್ಟಾಗ್ರಾಮ್ನಲ್ಲಿ ಸಂಪರ್ಕಿಸಿ ಅವನೊಂದಿಗೆ ಸಂಬಂಧ ಬೆಳೆಸುವಂತೆ ಒತ್ತಾಯಿಸಿದನು ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ ಆರೋಪದ ಮೇಲೆ ಮೂವರು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿವಾನಿ ಕೋರಿದ್ದಾರೆ. ಈ ಕುರಿತ ತನಿಖೆಯಾಗುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ಕಾದು ನೋಡಬೇಕಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.