Home ರಾಜ್ಯ ತುಮಕೂರು ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಸಚಿವ ವೆಂಕಟರಮಣಪ್ಪ ಇನ್ನಿಲ್ಲ: ಬೆಂಗಳೂರಿನ ಆಸ್ಪತ್ರೆಯಲ್ಲಿ ಮುಂಜಾನೆ ಹೃದಯಾಘಾತದಿಂದ ನಿಧನ

ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಸಚಿವ ವೆಂಕಟರಮಣಪ್ಪ ಇನ್ನಿಲ್ಲ: ಬೆಂಗಳೂರಿನ ಆಸ್ಪತ್ರೆಯಲ್ಲಿ ಮುಂಜಾನೆ ಹೃದಯಾಘಾತದಿಂದ ನಿಧನ

0

ತುಮಕೂರು ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ವೆಂಕಟರಮಣಪ್ಪ ಅವರು ಶುಕ್ರವಾರ ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.

ವಯೋಸಹಜ ಕಾಯಿಲೆಗಳಿಂದಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಶುಕ್ರವಾರ ಮುಂಜಾನೆ ಸುಮಾರು 6 ಗಂಟೆಗೆ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಮೃತರು ಪ್ರಸ್ತುತ ಪಾವಗಡ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಪುತ್ರ ಎಚ್. ವಿ. ವೆಂಕಟೇಶ್ ಸೇರಿದಂತೆ ಅಪಾರ ಕುಟುಂಬಸ್ಥರನ್ನು ಅಗಲಿದ್ದಾರೆ.

ತುಮಕೂರು ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕರಾಗಿದ್ದ ವೆಂಕಟರಮಣಪ್ಪ ಅವರು ತಮ್ಮ ರಾಜಕೀಯ ಜೀವನದಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು ಮತ್ತು ಎರಡು ಬಾರಿ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಅವರು 2008 ರಲ್ಲಿ ರೇಷ್ಮೆ ಕೃಷಿ ಮತ್ತು ಸಣ್ಣ ಕೈಗಾರಿಕೆಗಳ ಸಚಿವರಾಗಿ ಹಾಗೂ 2018 ರಲ್ಲಿ ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಶೋಷಿತ ವರ್ಗಗಳ ಪ್ರಮುಖ ಧ್ವನಿಯಾಗಿದ್ದ ಅವರು, ತಳಮಟ್ಟದ ರಾಜಕೀಯ ಕಾರ್ಯಗಳ ಮೂಲಕ ಪಾವಗಡ ಭಾಗದಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದರು.

ಕರ್ನಾಟಕದ ಗೃಹ ಸಚಿವ ಜಿ. ಪರಮೇಶ್ವರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ವೆಂಕಟರಮಣಪ್ಪ ಅವರ ನಿಧನವು ತಮಗೆ “ತೀವ್ರ ನೋವುಂಟು ಮಾಡಿರುವ ನಷ್ಟ” ಎಂದು ಬಣ್ಣಿಸಿದರು ಮತ್ತು ಅವರೊಬ್ಬ ಸರಳ ಹಾಗೂ ಜನಪರ ನಾಯಕರಾಗಿದ್ದರು ಎಂದು ಸ್ಮರಿಸಿದರು. “ಅವರು ತಮ್ಮ ಸಾರ್ವಜನಿಕ ಸೇವೆ ಮತ್ತು ಸರಳತೆಯ ಮೂಲಕ ಹೆಸರು ಮಾಡಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ,” ಎಂದು ಪ್ರಾರ್ಥಿಸಿದರು.

ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿರುವ ಪರಮೇಶ್ವರ್, “ಅತ್ಯಂತ ಸರಳ ವ್ಯಕ್ತಿತ್ವದ ವೆಂಕಟರಮಣಪ್ಪ ಅವರು ಶೋಷಿತ ವರ್ಗಗಳ ಹಿರಿಯ ನಾಯಕರಾಗಿದ್ದು, ಹೋರಾಟದ ಬದುಕಿನ ಮೂಲಕ ಮುಂಚೂಣಿಗೆ ಬಂದವರು. ಶಾಸಕರಾಗಿ ಮತ್ತು ಸಚಿವರಾಗಿ ಅವರು ತುಮಕೂರು ಜಿಲ್ಲೆಯ ಜನರ ಅಭಿವೃದ್ಧಿಗಾಗಿ ದಣಿವಿಲ್ಲದೆ ಶ್ರಮಿಸಿ ಶಾಶ್ವತ ಜನಪ್ರಿಯತೆ ಗಳಿಸಿದ್ದರು” ಎಂದಿದ್ದಾರೆ.

ಮುಂದುವರಿದು ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, “ಅವರು ಸಚಿವರಾಗಿದ್ದ ಅವಧಿಯಲ್ಲಿ ಶ್ಲಾಘನೀಯ ಕೆಲಸ ಮಾಡಿದ್ದರು. ಅವರ ಮಗ ವೆಂಕಟೇಶ್ ಪಾವಗಡದಿಂದ ಶಾಸಕರಾದ ಮೇಲೂ ಜನ ಇವರನ್ನು ಆತ್ಮೀಯತೆಯಿಂದ ಶಾಸಕರೆಂದೇ ಕರೆಯುತ್ತಿದ್ದರು. ಕ್ಷೇತ್ರದಲ್ಲಿ ಅಷ್ಟೊಂದು ಜನಪ್ರಿಯತೆ ಹೊಂದಿದ್ದ ಅವರು ನನಗೂ ಅತ್ಯಂತ ಆಪ್ತರಾಗಿದ್ದರು. ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ,” ಎಂದು ಕಂಬನಿ ಮಿಡಿದರು.

You cannot copy content of this page

Exit mobile version