Home Uncategorized ಭಾರತೀಯ ವಿದ್ಯಾರ್ಥಿನಿಯ ಹತ್ಯೆ ಕೆನಡಾದಲ್ಲಿ ಮಗಳ ಶವಕ್ಕಾಗಿ – ತಂದೆ ಕಣ್ಣೀರು

ಭಾರತೀಯ ವಿದ್ಯಾರ್ಥಿನಿಯ ಹತ್ಯೆ ಕೆನಡಾದಲ್ಲಿ ಮಗಳ ಶವಕ್ಕಾಗಿ – ತಂದೆ ಕಣ್ಣೀರು

ಗುಜರಾತ್ : ಉನ್ನತ ವ್ಯಾಸಂಗಕ್ಕಾಗಿ ಕೆನಡಾಕ್ಕೆ (Canada) ತೆರಳಿದ್ದ ಭಾರತೀಯ ವಿದ್ಯಾರ್ಥಿನಿಯೊಬ್ಬರನ್ನು (Indian Students) ದುಷ್ಕರ್ಮಿಗಳು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ (Crime) ಮಾಡಿರುವ ಆಘಾತಕಾರಿ ಘಟನೆ ಕೆನಡಾದ ನಯಾಗರಾ ಪ್ರದೇಶದಲ್ಲಿ ನಡೆದಿದೆ. ಗುಜರಾತ್‌ನ (Gujarat) ಆನಂದ್ ಜಿಲ್ಲೆಯ ಬೋರ್ಸಾದ್ ಪಟ್ಟಣದ ನಿವಾಸಿಯಾದ 22 ವರ್ಷದ ವಿಧಿ ಮೇಘಾ ಎಂದು ಗುರುತಿಸಲಾಗಿದೆ.

ಮೇ 15 ರಂದು ಈ ಭೀಕರ ಘಟನೆ ನಡೆದಿದ್ದು, ಮಗಳ ಸಾವಿನ ಸುದ್ದಿ ಕೇಳಿ ತಾಯ್ನಾಡಿನಲ್ಲಿರುವ ಪೋಷಕರು ಮತ್ತು ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಸದ್ಯ ಮಗಳ ಕೊನೆಯ ಸತ್ಕಾರವನ್ನು ಭಾರತದಲ್ಲೇ ಮಾಡಲು ಬಯಸಿರುವ ವೃದ್ಧ ತಂದೆ, ಆಕೆಯ ಮೃತದೇಹವನ್ನು ಆದಷ್ಟು ಬೇಗ ತಾಯ್ನಾಡಿಗೆ ತರಲು ವ್ಯವಸ್ಥೆ ಮಾಡಿಕೊಡುವಂತೆ ಭಾರತ ಸರ್ಕಾರಕ್ಕೆ ಕಣ್ಣೀರಿಡುತ್ತಾ ವಿನಂತಿಸಿಕೊಂಡಿದ್ದಾರೆ.

ವ್ಯಾಸಂಗ ಮುಗಿಸಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಯುವತಿ

ಮಗಳ ಸಾವಿನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ವಿಧಿ ಮೇಘಾ ಅವರ ತಂದೆ ಕಲ್ಪೇಶ್‌ಭಾಯಿ ಮೇಧಾ, ಕೆನಡಾ ಪೊಲೀಸರಿಂದ ತಮಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ. ಘಟನೆ ತಿಳಿಯುತ್ತಿದ್ದಂತೆಯೇ ಕೆನಡಾದಲ್ಲಿರುವ ತಮ್ಮ ಸಂಬಂಧಿಕರಿಗೆ ಇಮೇಲ್ ಮೂಲಕ ಮಾಹಿತಿ ರವಾನಿಸಿದ್ದು, ಅವರು ಅಲ್ಲಿನ ರಾಯಭಾರ ಕಚೇರಿ ಹಾಗೂ ಪೊಲೀಸರೊಂದಿಗೆ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ವಿಧಿ ಮೇಘಾ ಉನ್ನತ ಶಿಕ್ಷಣಕ್ಕಾಗಿ ಕೆನಡಾಕ್ಕೆ ತೆರಳಿದ್ದರು. ಅಲ್ಲಿ ಈಗಾಗಲೇ ತಮ್ಮ ಮೂರು ವರ್ಷಗಳ ಬಿಸಿನೆಸ್ ಮ್ಯಾನೇಜ್‌ಮೆಂಟ್ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು. ಅದಾದ ನಂತರ ಅವರು ಪಿಎಸ್‌ಡಬ್ಲ್ಯೂ (ಪರ್ಸನಲ್ ಸಪೋರ್ಟ್ ವರ್ಕರ್) ಆನರ್ಸ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದರು. ಕೆನಡಾದಲ್ಲಿ ಅವರ ಸೋದರಮಾವ ವಾಸವಾಗಿದ್ದು, ಪ್ರಸ್ತುತ ವಿಧಿಯ ತಾಯಿ ಕೂಡ ಅಲ್ಲೇ ಇದ್ದಾರೆ ಎನ್ನಲಾಗಿದೆ.

ಭಾರತದಲ್ಲೇ ಅಂತ್ಯಸಂಸ್ಕಾರಕ್ಕೆ ತಂದೆಯ ಮನವಿ

ದುರಂತದ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕರು ಮತ್ತು ಜನಪ್ರಿನಿಧಿಗಳು ಬೋರ್ಸಾದ್‌ನಲ್ಲಿರುವ ಕಲ್ಪೇಶ್‌ಭಾಯಿ ಅವರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಮಗಳ ಅಕಾಲಿಕ ಮರಣದಿಂದ ಕಂಗಾಲಾಗಿರುವ ತಂದೆ, “ನನ್ನ ಮಗಳ ಕೊನೆಯ ಆಚರಣೆಗಳನ್ನು ಮತ್ತು ಅಂತ್ಯಸಂಸ್ಕಾರವನ್ನು ನಮ್ಮ ಸ್ವಂತ ನೆಲದಲ್ಲೇ, ನಮ್ಮ ಸಂಪ್ರದಾಯದಂತೆ ಭಾರತದಲ್ಲೇ ಮಾಡಬೇಕು ಎಂಬುದು ನಮ್ಮ ಇಚ್ಛೆಯಾಗಿದೆ. 

ಆದ್ದರಿಂದ ಕೇಂದ್ರ ಸರ್ಕಾರ ಮತ್ತು ವಿದೇಶಾಂಗ ಸಚಿವಾಲಯವು ತಕ್ಷಣವೇ ಮಧ್ಯಪ್ರವೇಶಿಸಿ, ನನ್ನ ಮಗಳ ಪಾರ್ಥಿವ ಶರೀರವನ್ನು ಆದಷ್ಟು ಬೇಗ ಭಾರತಕ್ಕೆ ತರಲು ಅಗತ್ಯವಿರುವ ಎಲ್ಲಾ ನೆರವು ನೀಡಬೇಕು” ಎಂದು ಕಣ್ಣೀರು ಹಾಕುತ್ತಾ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ವಿದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಈ ಘಟನೆ ಮತ್ತೊಮ್ಮೆ ಆತಂಕ ಮೂಡಿಸಿದೆ.

You cannot copy content of this page

Exit mobile version