ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ಸಲ್ಲಿಸಿರುವ ರಾಜೀನಾಮೆಯನ್ನು ಗುರುವಾರ ತಡರಾತ್ರಿವರೆಗೂ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋತ್ ಅಂಗೀಕರಿಸಿಲ್ಲ. ಹೀಗಾಗಿ ಶುಕ್ರವಾರ ಮತ್ತೊಮ್ಮೆ ಮುಖ್ಯಮಂತ್ರಿಯವರನ್ನು ಖುದ್ದಾಗಿ ಲೋಕಭವನಕ್ಕೆ ಕರೆಯಿಸಿಕೊಂಡು ಸ್ಪಷ್ಟನೆ ಕೇಳಿದ ಬಳಿಕವಷ್ಟೇ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಪತ್ನಿಯ ಅನಾರೋಗ್ಯದ ಕಾರಣ ಬುಧವಾರ ರಾತ್ರಿ ಇಂದೋರ್‌ಗೆ ತೆರಳಿದ್ದ ರಾಜ್ಯಪಾಲರು, ಗುರುವಾರ ರಾತ್ರಿ ಬೆಂಗಳೂರಿಗೆ ಮರಳಿದರು. ಅವರು ಬಂದ ತಕ್ಷಣವೇ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್ ಅವರು ಸಿದ್ದರಾಮಯ್ಯ ಅವರ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದರು. ತಮ್ಮ ಸಂಪುಟ ಸಹೋದ್ಯೋಗಿಗಳು ಹಾಗೂ ಶಾಸಕರೊಂದಿಗೆ ಆಗಮಿಸಿದ್ದ ಸಿಎಂ, ತಾವು ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದರು. ಆದರೆ, ತಮ್ಮ ಅನುಪಸ್ಥಿತಿಯಲ್ಲಿ ಸಲ್ಲಿಕೆಯಾಗಿದ್ದ ಈ ರಾಜೀನಾಮೆ ಪತ್ರವನ್ನು ರಾಜ್ಯಪಾಲರು ತಕ್ಷಣಕ್ಕೆ ಅಂಗೀಕರಿಸದೆ ಕಾಯ್ದಿರಿಸಿದ್ದಾರೆ.
ಉಪರಾಷ್ಟ್ರಪತಿಗಳ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಬ್ಯುಸಿ: ಶುಕ್ರವಾರ ಬೆಳಗ್ಗೆ 7.30ಕ್ಕೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದು, ಅವರನ್ನು ಬರಮಾಡಿಕೊಳ್ಳಲಿರುವ ರಾಜ್ಯಪಾಲರು, ನಂತರ ‘ಆರ್ಟ್ ಆಫ್ ಲಿವಿಂಗ್’ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ದಾವಣಗೆರೆ ಹಾಗೂ ಶಿವಮೊಗ್ಗದಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲೂ ಉಪರಾಷ್ಟ್ರಪತಿಗಳ ಜೊತೆ ಪಾಲ್ಗೊಳ್ಳಲಿದ್ದಾರೆ. ಈ ಎಲ್ಲ ಪ್ರವಾಸಗಳನ್ನು ಮುಗಿಸಿಕೊಂಡು ಸಂಜೆ 4.30ರ ವೇಳೆಗೆ ಅವರು ಬೆಂಗಳೂರಿನ ಲೋಕಭವನಕ್ಕೆ ಮರಳಲಿದ್ದಾರೆ.
ಖುದ್ದಾಗಿ ರಾಜೀನಾಮೆ ಸಲ್ಲಿಸಲು ಬುಲಾವ್ ಸಾಧ್ಯತೆ: ರಾಜ್ಯಪಾಲರು ಬೆಂಗಳೂರಿಗೆ ಮರಳುವಷ್ಟರಲ್ಲಿ ಸಿಎಂ ಸಿದ್ದರಾಮಯ್ಯ ಅವರು ನವದೆಹಲಿಯಿಂದ ವಾಪಸ್ ಆಗಿದ್ದರೆ, ಅವರನ್ನು ಲೋಕಭವನಕ್ಕೆ ಕರೆಯಿಸಿಕೊಳ್ಳುವ ಸಾಧ್ಯತೆಯಿದೆ. ನಿಯಮಾವಳಿಗಳ ಪ್ರಕಾರ ಸಕ್ಷಮ ಪ್ರಾಧಿಕಾರವಾದ ರಾಜ್ಯಪಾಲರ ಮುಂದೆ ಮುಖ್ಯಮಂತ್ರಿಯೇ ಖುದ್ದಾಗಿ ಹಾಜರಾಗಿ ರಾಜೀನಾಮೆ ಸಲ್ಲಿಸಬೇಕಿರುವುದರಿಂದ, ಮತ್ತೊಮ್ಮೆ ಬರುವಂತೆ ಆಹ್ವಾನ ನೀಡಬಹುದು ಎನ್ನಲಾಗಿದೆ. ಗುರುವಾರ ರಾಜೀನಾಮೆ ಪತ್ರ ನೀಡಿ ಲೋಕಭವನದ ಆತಿಥ್ಯವನ್ನೂ ಸ್ವೀಕರಿಸದೆ ನಿರ್ಗಮಿಸಿದ್ದ ಸಿಎಂ ಅವರಿಗೆ, ಶುಕ್ರವಾರ ರಾಜ್ಯಪಾಲರೇ ಆತಿಥ್ಯ ನೀಡುವ ಸಂಭವವೂ ಇದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಪಾಲರ ನಡೆಗೆ ಸಿದ್ದರಾಮಯ್ಯ ತೀವ್ರ ಬೇಸರ: ರಾಜೀನಾಮೆ ನೀಡಲು ಭೇಟಿಗೆ ಸಾಕಷ್ಟು ಮುಂಚಿತವಾಗಿಯೇ ಸಮಯಾವಕಾಶ ಕೇಳಿದ್ದರೂ ರಾಜ್ಯಪಾಲರು ಬೆಂಗಳೂರಿನಲ್ಲಿ ಲಭ್ಯವಿರಲಿಲ್ಲ ಎಂಬ ಬಗ್ಗೆ ಸಿದ್ದರಾಮಯ್ಯ ತೀವ್ರ ಬೇಸರ ಹೊರಹಾಕಿದ್ದಾರೆ. ಸಚಿವರಿಗಾಗಿ ಹಮ್ಮಿಕೊಂಡಿದ್ದ ಉಪಾಹಾರ ಕೂಟದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಅವರು, “ಒಂದು ದಿನ ಮುಂಚಿತವಾಗಿಯೇ ಕರೆ ಮಾಡಿ ಭೇಟಿಗೆ ಸಮಯ ನಿಗದಿಪಡಿಸಿಕೊಂಡಿದ್ದರೂ ರಾಜ್ಯಪಾಲರು ಅಲಭ್ಯರಾಗಿದ್ದಾರೆ. ಕೇಂದ್ರದವರೆಲ್ಲ ಉದ್ದೇಶಪೂರ್ವಕವಾಗಿಯೇ ಹೀಗೆಲ್ಲ ಮಾಡುತ್ತಾರೆ, ಇವರ ನಡೆಗಳ ಬಗ್ಗೆ ನಾವೆಲ್ಲರೂ ಎಚ್ಚರದಿಂದ ಇರಬೇಕು” ಎಂದು ಸಚಿವರಿಗೆ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.
