ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಮೊಮ್ಮಗ ಮತ್ತು ಮಾಜಿ ಸಂಸದ ಪ್ರಜ್ವಲ್ ರೇವಣ್ಣನಿಗೆ ಭಾರಿ ಹಿನ್ನಡೆಯಾಗಿದೆ. ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶುಕ್ರವಾರ ಅವರನ್ನು ದೋಷಿ ಎಂದು ತೀರ್ಪು ನೀಡಿದೆ. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಈ ತೀರ್ಪು ಪ್ರಕಟಿಸಿದ್ದು, ಶನಿವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವ ಸಾಧ್ಯತೆ ಇದೆ.
ಪ್ರಕರಣದ ವಿವರ
ಈ ಪ್ರಕರಣವು ಹಾಸನದಲ್ಲಿರುವ ರೇವಣ್ಣ ಕುಟುಂಬಕ್ಕೆ ಸೇರಿದ ಗನ್ನಿಕದ ಅತಿಥಿ ಗೃಹದಲ್ಲಿ ಕೆಲಸ ಮಾಡುತ್ತಿದ್ದ 48 ವರ್ಷದ ಮಹಿಳೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದೆ. ಪ್ರಜ್ವಲ್ ಈ ಕೃತ್ಯವನ್ನು ತನ್ನ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ.
ವಿಶೇಷ ತನಿಖಾ ತಂಡ (SIT) ಪ್ರಜ್ವಲ್ ರೇವಣ್ಣ ವಿರುದ್ಧ ಐಪಿಸಿ ಸೆಕ್ಷನ್ 376(2)(k) (ಮಹಿಳೆಯ ಮೇಲೆ ಅಧಿಕಾರ ಸ್ಥಾಪಿಸಿ ಅತ್ಯಾಚಾರ ಎಸಗುವುದು), 376(2)(n) (ಒಂದೇ ಮಹಿಳೆಯ ಮೇಲೆ ಪುನರಾವರ್ತಿತ ಅತ್ಯಾಚಾರ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66E ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಿತ್ತು.
ಪ್ರಕರಣದ ವಿಚಾರಣೆ ವೇಳೆ, ಪ್ರಾಸಿಕ್ಯೂಷನ್ 2021ರಲ್ಲಿ ಸಂತ್ರಸ್ತೆಯ ಮೇಲೆ ಎರಡು ಬಾರಿ ಅತ್ಯಾಚಾರ ನಡೆಸಲಾಗಿದೆ ಎಂದು ಹೇಳಿದೆ. ಒಂದು ಬಾರಿ ಹಾಸನದಲ್ಲಿರುವ ರೇವಣ್ಣ ಅವರ ನಿವಾಸದಲ್ಲಿ ಮತ್ತು ಮತ್ತೊಂದು ಬಾರಿ ಬೆಂಗಳೂರಿನ ನಿವಾಸದಲ್ಲಿ ಈ ಕೃತ್ಯ ನಡೆದಿದೆ. ಆರೋಪಪಟ್ಟಿಯಲ್ಲಿ 113 ಸಾಕ್ಷಿಗಳನ್ನು ಹೆಸರಿಸಲಾಗಿದ್ದು, ಜುಲೈ 18ರಂದು ವಿಚಾರಣೆ ಮುಕ್ತಾಯಗೊಂಡಿತ್ತು.
ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವೀಡಿಯೊ ಕ್ಲಿಪ್‌ಗಳು ಆನ್‌ಲೈನ್‌ನಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ನಂತರ ಪ್ರಜ್ವಲ್ ರೇವಣ್ಣ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಪ್ರಜ್ವಲ್ ರೇವಣ್ಣ ವಿರುದ್ಧದ ಮೊದಲ ದೂರು ಏಪ್ರಿಲ್ 2023ರಲ್ಲಿ ದಾಖಲಾಗಿತ್ತು.