ಉನ್ನತ ಶಿಕ್ಷಣ, ಉತ್ತಮ ನೌಕರಿ, ಉತ್ತಮ ಆರೋಗ್ಯ ಸೇವೆ, ಉತ್ತಮ ಸಾರಿಗೆ ಸೌಕರ್ಯ ಎಲ್ಲವನ್ನೂ ಪಡೆಯುವ ತೆರಿಗೆದಾರರಿಗೆ, ಇದರಲ್ಲೂ ಬಡವರು ಕಟ್ಟಿರುವ ತೆರಿಗೆ ಮತ್ತು ಅವರ ಶ್ರಮಕ್ಕೆ ನೀಡದ ವೇತನದ ವಂಚನೆಯೂ ಸೇರಿರುತ್ತದೆ ಎಂಬುದು ಅರಿವಾಗಬೇಕು. ಆಗ ಇವೆಲ್ಲಾ ಬಿಟ್ಟಿ ಭಾಗ್ಯಗಳಲ್ಲ, ಇವು ನಿಜದಲ್ಲಿ ಜನರ ಪರವಾಗಿ ಜನರಿಗೆ ನೀಡುವ ಕಾಂಪನ್ಸೇಷನ್ ಎಂದು ಅರ್ಥವಾಗುತ್ತದೆ. ಇದು ಸಾಮಾಜಿಕ ಜವಾಬ್ದಾರಿ ಇರುವ ಪ್ರತಿ ಸರ್ಕಾರದ ಜವಾಬ್ದಾರಿಯೇ ಆಗಿದೆ. – ಪ್ರೊ. ಆರ್ ಸುನಂದಮ್ಮ, ನಿವೃತ್ತ ಪ್ರಾಧ್ಯಾಪಕರು
ಹತ್ತು ವರ್ಷಗಳ ಹಿಂದಿನ ಮಾತು. ಆಗ ಭಾಗ್ಯಗಳಿಗಿಂತ ಸಬ್ಸಿಡಿಗಳ ಬಗ್ಗೆ ಅಪಪ್ರಚಾರ ನಡೆಯುತ್ತಿತ್ತು. ರೈತರಿಗೆ ನೀಡುವ ರಿಯಾಯತಿಗಳಿಂದ ದೇಶದ ಆರ್ಥಿಕತೆಗೆ ನಷ್ಟವಾಗುತ್ತದೆ. ಹೀಗೆ ಮಾಡುವುದು ದೇಶದ ಅಭಿವೃದ್ಧಿಗೆ ಮಾರಕ ಎಂಬುದು ಯುವ ಎಂ.ಬಿ.ಎ. ವಿದ್ಯಾರ್ಥಿಗಳ ವಾದವಾಗಿತ್ತು. ಅಂದು ಮಹಿಳಾ ಅಭಿವೃದ್ಧಿಯ ಸವಾಲುಗಳು ವಿಷಯ ಮಂಡನೆಗೆ ಹೋಗಿದ್ದೆ. ವಿದ್ಯಾರ್ಥಿಗಳಿಗೆ ಭಾಷಣಕಾರರು ಏನೇ ಉತ್ತರ ಕೊಟ್ಟರೂ ಅವರ ವಾದ ಒಂದೇ ಆಗಿತ್ತು. ರಿಯಾಯತಿಗಳು ನಿಲ್ಲದೆ ಈ ದೇಶದ ಉದ್ಧಾರವಿಲ್ಲ ಎಂಬುದಾಗಿತ್ತು. ಆಗ ನಾನು ಮಕ್ಕಳಿಗೆ ಒಂದು ಪ್ರಶ್ನೆಯನ್ನು ಹಾಕಿದೆ. ಐ.ಐ.ಟಿ.ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ರಿಯಾಯತಿಯಲ್ಲಿ ಓದುತ್ತಿದ್ದಾರೆಯೇ? ಹೌದು ಎಂದರು. ಹಾಗಾದರೆ ಅವರೆಲ್ಲ ಈಗ ಎಲ್ಲಿದ್ದಾರೆ. ಅಮೇರಿಕಾದಲ್ಲಿ ಒಳ್ಳೆ ಉದ್ಯೋಗದಲ್ಲಿ. ಈ ದೇಶದ ರಿಯಾಯತಿಯಲ್ಲಿ ಓದಿದವರು ಬೇರೆ ದೇಶಕ್ಕೆ ದುಡಿಯುವುದರಿಂದ ದೇಶದ ಅಭಿವೃದ್ಧಿ ಹಿಂದಕ್ಕೆ ಹೋಗುತ್ತಿಲ್ಲವೇ?
ಆನಂತರದಲ್ಲಿ ಮತ್ತೊಂದು ಪ್ರಶ್ನೆ ಕೇಳಿದೆ. ನಿಮ್ಮ ಮನೆಗೆ ಬರುವ ಕೆಲಸದಾಕೆಗೆ ಒಂದು ಗಂಟೆಗೆ ಎಷ್ಟು ವೇತನ ನೀಡುತ್ತೀರಿ? ಒಂದು ಕೆ.ಜಿ. ಆಲೂಗಡ್ಡೆ ಬೆಳೆಯಲು ಎಷ್ಟು ಖರ್ಚಾಗುತ್ತದೆ. ರೈತನ ದಿನನಿತ್ಯದ ಕೂಲಿ ಸೇರಿಸಿ ಲೆಕ್ಕ ಹಾಕಿ ಹೇಳಿ. ಆಲೂಗಡ್ಡೆ ಎಷ್ಟು ತಿಂಗಳ ಬೆಳೆ? ವಿದ್ಯಾರ್ಥಿಗಳು ಮೌನವಾದರು. ರೈತರ ಕೂಲಿ, ನೀರು, ವಿದ್ಯುತ್, ಅವರ ಪ್ರತಿದಿನದ ಶ್ರಮ, ಬಂಡವಾಳ ಎಲ್ಲವೂ ಲೆಕ್ಕಹಾಕಲು ಅರ್ಧಗಂಟೆ ಸಮಯ ನೀಡಲಾಯಿತು. ಒಂದು ಎಕರೆ ಆಲೂಗಡ್ಡೆ ಇಳುವರಿ ಪಡೆದು ಎಂ.ಬಿ.ಎ. ಮಕ್ಕಳು ಲೆಕ್ಕಹಾಕಿ ಒಂದು ಕೆ.ಜಿ. ಆಲೂಗಡ್ಡೆಗೆ ಕಾರ್ಪೊರೇಟ್ ವಿಧದಲ್ಲಿ ದರ ನಿಗದಿ ಪಡಿಸಿದರು. ಕೆ.ಜಿ.ಗೆ 40/- ರೂಪಾಯಿಗಳು ಆಗುತ್ತದೆ ಎಂದರು. ಆಗ ಆಲೂಗಡ್ಡೆಗೆ ಮಾರುಕಟ್ಟೆಯಲ್ಲಿ 10/- ರೂಪಾಯಿಗಳಿತ್ತು. ಇನ್ನು ರೈತರಿಗೆ ನೀಡುವ ಗೊಬ್ಬರ ಸಬ್ಸಿಡಿ, ನೀರು, ವಿದ್ಯುತ್ ಎಲ್ಲವೂ ಫ್ರೀ ಆಗಿ ನೀಡದಿದ್ದರೆ ಆಲೂಗಡ್ಡೆಗೆ ಜನಸಾಮಾನ್ಯರು 30/- ರೂಪಾಯಿಗಳನ್ನು ಹೆಚ್ಚಾಗಿ ನೀಡಬೇಕು. ನೀವು ನೀಡುವ ಹಣವನ್ನು ತಪ್ಪಿಸಿ ಸರ್ಕಾರ ನಿಮಗಾಗಿ ಅವರಿಗೆ ಕಾಂಪನ್ಸೇಟ್ ಮಾಡುತ್ತಿದೆ. ಅದು ರೈತರಿಗೆ ನೀಡುವ ರಿಯಾಯತಿಯಲ್ಲ. ಅದು ಉಣ್ಣುವವರಿಗೆಲ್ಲಾ ನೀಡುವ ರಿಯಾಯತಿ ಎಂದು ಮನವರಿಕೆ ಮಾಡಿಕೊಡಲಾಯಿತು.
ಇಂದು ಸರ್ಕಾರ ನೀಡುತ್ತಿರುವ ಈ ಭಾಗ್ಯಗಳು ಕೂಡ ಜನರ ದುಡಿಮೆಯನ್ನು ಚೀಪ್ ಆಗಿ ಉಪಯೋಗಿಸಿ ವಂಚಿಸುತ್ತಿರುವುದರಿಂದ ಅವರ ಶ್ರಮ ಮತ್ತು ಜೀವನ ಭದ್ರತೆಗೆ ಕೊಡುಗೆಗಳನ್ನು ನೀಡುವ ಮೂಲಕ ಕಾಂಪನ್ಸೇಟ್ ಮಾಡಲಾಗಿದೆ. ಸಫಾಯಿ ಕರ್ಮಚಾರರು, ಮನೆಗೆಲಸದವರು, ಗಾರ್ಮೆಂಟ್ ಕಾರ್ಮಿಕರು, ರೈತರು, ಬಡಗಿ, ಕುಂಬಾರ, ಕಮ್ಮಾರ, ಗಾರೆಕೆಲಸದವರು, ಚಿಂದಿ ಆಯುವವರು ಹೀಗೆ ಹತ್ತಾರು ರೀತಿಯ ಕಾರ್ಮಿಕರಿಗೆ ಅವರು ದುಡಿಯುತ್ತಿರುವ ಶ್ರಮಕ್ಕೆ ತಕ್ಕ ವೇತನ ದೊರೆಯುತ್ತಿಲ್ಲ. ಆದರೆ ಅವರ ದುಡಿಮೆಯ ಶ್ರಮವನ್ನು ಚೀಪ್ ಆಗಿ ಬಳಸುತ್ತಿರುವವರು ತೆರಿಗೆ ನೀಡುವವರು ಮತ್ತು ಮೇಲು ಮಧ್ಯಮ ವರ್ಗದವರು. ಅದಕ್ಕಾಗಿ ಸರ್ಕಾರಗಳು ನೀವು ವಂಚಿಸುವ ಶ್ರಮದ ಫಲವನ್ನು ಅವರಿಗೆ ಸ್ವಲ್ಪವಾದರೂ ನೀಡಲೇಬೇಕಾಗಿದೆ. ಅವರಿಗೆ ಫ್ರೀ ಆಗಿ ಆರೋಗ್ಯ, ಶಿಕ್ಷಣ, ಪ್ರಯಾಣ ಉಚಿತವಾಗಿ ದೊರೆತರೆ ಮಾತ್ರ ಅವರು ನಿಮಗೆ ಸೇವೆ ನೀಡಲು ಸಾಧ್ಯ. ತೆರಿಗೆದಾರರಿಗೆ ಸರ್ಕಾರ ಆರೋಗ್ಯ, ಶಿಕ್ಷಣ ಸೇವೆ ಫ್ರೀ ಆಗಿ ನೀಡುತ್ತಿದೆ. ಇಲ್ಲದಿದ್ದರೆ ತೆರಿಗೆದಾತರ ಮಕ್ಕಳು ವೈದ್ಯ, ಇಂಜಿನಿಯರಿಂಗ್, ಎಂ.ಬಿ.ಎ. ಶಿಕ್ಷಣ ಪಡೆಯಲು ಸಾಧ್ಯವಾಗದು. ಇದೆಲ್ಲಾ ಫ್ರೀ ಆಗಿ ಪಡೆಯುತ್ತಿರುವವರು ಬಡವರು ಮತ್ತು ಎಲ್ಲ ವರ್ಗದವರು. ಅದು ಇವರು ನೀಡುವುದಕ್ಕಿಂತ ದುಪ್ಪಟ್ಟು. ಬಡಕುಟುಂಬವು ತಿಂಗಳಿಗೆ 2000+800+800+400+1000=5000/- ರೂಪಾಯಿಗಳಷ್ಟು ಸವಲತ್ತು ಪಡೆದರೆ ದು:ಖಪಡುವುದಾದರೆ, ಉನ್ನತ ಶಿಕ್ಷಣಕ್ಕಾಗಿ ಕೆಲವರಿಗೆ ಸರ್ಕಾರ ಭರಿಸುವ ಸಾವಿರಾರು ಕೋಟಿಗಳ ವಿನಿಯೋಗ ಅವರ ಹಕ್ಕು ಹೇಗೆ ಆಗುತ್ತದೆ? ಉನ್ನತ ಶಿಕ್ಷಣ, ಉತ್ತಮ ನೌಕರಿ, ಉತ್ತಮ ಆರೋಗ್ಯ ಸೇವೆ, ಉತ್ತಮ ಸಾರಿಗೆ ಸೌಕರ್ಯ ಎಲ್ಲವನ್ನೂ ಪಡೆಯುವ ತೆರಿಗೆದಾರರಿಗೆ, ಇದಕ್ಕೂ ಬಡವರು ಕಟ್ಟಿರುವ ತೆರಿಗೆ ಮತ್ತು ಅವರ ಶ್ರಮಕ್ಕೆ ನೀಡದ ವೇತನದ ವಂಚನೆಯೂ ಸೇರಿರುತ್ತದೆ ಎಂಬುದು ಅರಿವಾಗಬೇಕು. ಕರ್ಮಸಿದ್ಧಾಂತದ ಮೂಲಕ ಜನರ ಸೌಕರ್ಯವನ್ನು ನೋಡುವವರಿಗೆ ಇದೆಲ್ಲಾ ಅರ್ಥವಾಗುವುದಿಲ್ಲ. ಇದು ಅರ್ಥ ಆಗಲು ಅದರಿಂದ ಹೊರಬರಬೇಕು ಮತ್ತು ಸರ್ಕಾರಿ ಸಂಬಳ ತಮ್ಮ ಹಕ್ಕೆಂದು ತಿಳಿದು ವೇತನಕ್ಕೆ ತಕ್ಕ ದುಡಿಮೆ ಮಾಡದೆ ವಂಚಿಸುವುದನ್ನು ಆತ್ಮಾವಲೋಕನ ಮಾಡಿಕೊಳ್ಳುವುದರ ಮೂಲಕ ಕಲಿಯಬೇಕು. ಆಗ ಇವೆಲ್ಲಾ ಬಿಟ್ಟಿ ಭಾಗ್ಯಗಳಲ್ಲ, ಇವು ನಿಜದಲ್ಲಿ ಜನರ ಪರವಾಗಿ ಜನರಿಗೆ ನೀಡುವ ಕಾಂಪನ್ಸೇಷನ್ ಎಂದು ಅರ್ಥವಾಗುತ್ತದೆ. ಇದು ಸಾಮಾಜಿಕ ಜವಾಬ್ದಾರಿ ಇರುವ ಪ್ರತಿ ಸರ್ಕಾರದ ಜವಾಬ್ದಾರಿ. ಅದಕ್ಕೆ ಕುವೆಂಪು ಅವರು ಹೇಳಿದ್ದು ಮಠ, ಮಂದಿರ, ಚರ್ಚು, ಮಸೀದಿ ಬಿಟ್ಟು ಹೊರಗೆ ಬನ್ನಿ ಎಂದು. ಆಗ ಕರ್ಮಸಿದ್ಧಾಂತದಿಂದ ಮುಕ್ತರಾಗಿ ಜನಪರವಾಗಿ ಚಿಂತಿಸಲು ಸಾಧ್ಯವೆಂದು. ಉಣ್ಣುವ, ಉಡುವ ಎಲ್ಲದಕ್ಕೂ ತೊಡರು ಮಾಡುವ ಮಂದಿಯಿಂದ ಮುಕ್ತರಾಗಲು ಸಾಧ್ಯ.
ಪ್ರೊ.ಆರ್.ಸುನಂದಮ್ಮ
ನಿವೃತ್ತ ಪ್ರಾಧ್ಯಾಪಕರು.