Home ರಾಜಕೀಯ ಫ್ಯಾಕ್ಟ್‌ ಚೆಕ್‌ ಯೂನಿಟ್‌ನಿಂದ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯಿಲ್ಲ: ಎಡಿಟರ್ಸ್ ಗಿಲ್ಡ್ ಕಳವಳಕ್ಕೆ ಪ್ರಿಯಾಂಕ್‌ ಖರ್ಗೆ ಉತ್ತರ

ಫ್ಯಾಕ್ಟ್‌ ಚೆಕ್‌ ಯೂನಿಟ್‌ನಿಂದ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯಿಲ್ಲ: ಎಡಿಟರ್ಸ್ ಗಿಲ್ಡ್ ಕಳವಳಕ್ಕೆ ಪ್ರಿಯಾಂಕ್‌ ಖರ್ಗೆ ಉತ್ತರ

0

ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ಹಬ್ಬುತ್ತಿರುವ ಸುಳ್ಳು ಸುದ್ದಿಗಳನ್ನು ಪತ್ತೆ ಮಾಡಿ, ಅವುಗಳನ್ನು ತೊಡೆದು ಹಾಕಲು ಕರ್ನಾಟಕ ಸರ್ಕಾರ ‘ಸತ್ಯ-ಪರಿಶೀಲನಾ ಘಟಕ (Fact Checking Unit)’ವನ್ನು ಸ್ಥಾಪಿಸಲು ತೀರ್ಮಾನಿಸಿದೆ. ಈ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಸುಳಿವುಗಳನ್ನು ನೀಡಿದ್ದಾರೆ.

ಆದರೆ ಈ ಘಟಕವು ಭಿನ್ನ ದನಿಗಳನ್ನು ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಬಹುದು ಎಂಬ ಆತಂಕದಿಂದ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಕರ್ನಾಟಕ ಸರ್ಕಾರಕ್ಕೆ ಪತ್ರವನ್ನು ಬರೆದಿದೆ.

ಈ ಪತ್ರಕ್ಕೆ ಟ್ವಿಟರ್‌ ಮೂಲಕ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್‌ ಖರ್ಗೆ “ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಅಭಿಪ್ರಾಯದಂತೆ ಆನ್‌ಲೈನ್‌ನಲ್ಲಿ ಬಿತ್ತರವಾಗುವ ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳನ್ನು ನಿವಾರಿಸಲು ಸೂಕ್ತ ಕ್ರಮಗಳ ಅನುಷ್ಠಾನದ ಅಗತ್ಯವಿದೆ. ನಮ್ಮ ಸತ್ಯ-ಪರಿಶೀಲನಾ ಘಟಕವು ಪಕ್ಷಪಾತವಿಲ್ಲದೆ ಅರಾಜಕೀಯ ನಿಲುವನ್ನು ಎತ್ತಿಹಿಡಿಯಲಿದೆ ಮತ್ತು ಸಾರ್ವಜನಿಕರಿಗೆ ಇದರ ವಿಧಾನಗಳನ್ನು ಪಾರದರ್ಶಕವಾಗಿ ವಿವರಿಸಲಿದೆ,” ಎಂದಿದ್ದಾರೆ.

“ಇದಕ್ಕಾಗಿ ನಾವು ಸ್ವತಂತ್ರ ಸಂಸ್ಥೆಯನ್ನು ಸ್ಥಾಪಿಸುವ ಯೋಜನೆಯಲ್ಲಿದ್ದೇವೆ. ಅದು ನಕಲಿ ಸುದ್ದಿ ಮತ್ತು ತಪ್ಪು ಮಾಹಿತಿಯ ವಿರುದ್ಧ ಹೋರಾಡಲು ನಮಗೆ ಸಹಾಯ ಮಾಡಲಿದೆ. ಕರ್ನಾಟಕ ಸರ್ಕಾರ ಬಸವಣ್ಣ ಮತ್ತು ಬಾಬಾಸಾಹೇಬರ ವಿಚಾರಧಾರೆಗಳಿಗೆ ಬದ್ಧವಾಗಿದೆ. ನಾವು Natural Justiceನ ತತ್ವಗಳನ್ನು ಶ್ರದ್ಧೆಯಿಂದ ಅನುಸರಿಸುತ್ತೇವೆ. ಈ ಘಟಕವು ಯಾವುದೇ ರೀತಿಯಲ್ಲೂ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದಿಲ್ಲ,” ಎಂದು ಟ್ವೀಟ್‌ ಮೂಲಕ ಸ್ಪಷ್ಟಪಡಿಸಿದ್ದಾರೆ.

ಏನಿದೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಪತ್ರದಲ್ಲಿ?
ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ‘ನಕಲಿ ಸುದ್ದಿ’ಗಳ ಮೇಲೆ ನಿಗಾ ಇಡಲು ‘ಸತ್ಯ-ಪರಿಶೀಲನಾ ಘಟಕ (Fact Checking Unit)’ವನ್ನು ಸ್ಥಾಪಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದ್ದು ಕೆಲವು ಅಂಶಗಳನ್ನು ಏಡಿಟರ್ಸ್‌ ಗಿಲ್ಡ್‌ ಆಫ್‌ ಇಂಡಿಯಾ ಗಮನಿಸಿದೆ.
ಕರ್ನಾಟಕ್‌ ಐಟಿ ಮತ್ತು ಬಿಟಿ ಸಚಿವರ ಪ್ರಕಾರ, “ಫ್ಯಾಕ್ಟ್‌ ಚೆಕ್ಕಿಂಗ್‌ ಯೂನಿಟ್‌ನಿಂದ ನಕಲಿ ಎಂದು ಕಂಡು ಬಂದ ಪೋಸ್ಟ್‌ಗಳು ಮತ್ತು ವರದಿಗಳನ್ನು ತೆಗೆದುಹಾಕಲಾಗುತ್ತದೆ. ಅಗತ್ಯವಿದ್ದರೆ, ಸರ್ಕಾರವು IPCಯ ಸಂಬಂಧಿತ ಕಾನೂನುಗಳಡಿಯಲ್ಲಿ ಕ್ರಮಗಳನ್ನು ಸಹ ತೆಗೆದುಕೊಳ್ಳುತ್ತದೆ,” ಎಂದಿದ್ದಾರೆ.
ಪೋಸ್ಟ್‌ ಅಥವಾ ವರದಿ ನಕಲಿಯೋ ಅಥವಾ ಅಸಲಿಯೋ ಎಂದು ನಿರ್ಧರಿಸುವ ಏಕೈಕ ಅಧಿಕಾರವನ್ನು ಹೊಂದಿರುವ ಫ್ಯಾಕ್ಟ್‌ ಚೆಕ್ಕಿಂಗ್‌ ಯೂನಿಟ್‌ನ ಸ್ಥಾಪನೆಗೆ ಅನುವು ಮಾಡಿಕೊಡುವ IT Rule 2003ಗೆ ಮಾಡುವ ತಿದ್ದುಪಡಿಯನ್ನು ಪ್ರಶ್ನಿಸಿ ಗಿಲ್ಡ್ ಈಗಾಗಲೇ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಿದೆ.

ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳಿಂದ ಸಮಸ್ಯೆಗಳಿವೆ, ವಿಶೇಷವಾಗಿ ಆನ್‌ಲೈನ್‌ ಮಾಧ್ಯಮಗಳಲ್ಲಿ. ಆದರೆ ಅವುಗಳನ್ನು
ಪರಿಶೀಲಿಸುವ ಪ್ರಯತ್ನ ಸರ್ಕಾರದ ಏಕೈಕ ವ್ಯಾಪ್ತಿಗೆ ಬಾರದ ಸ್ವತಂತ್ರ ಸಂಸ್ಥೆಗಳಿಂದ ನಡೆಯಬೇಕು. ಏಕೆಂದರೆ ಇದು ಭಿನ್ನಾಭಿಪ್ರಾಯದ ಧ್ವನಿಗಳನ್ನು ಹತ್ತಿಕ್ಕುವ ಸಾಧನಗಳಾಗಬಾರದು.

ಇದರ ಮೇಲ್ವಿಚಾರಣಾ ಪ್ರಕ್ರಿಯೆ ಪೂರ್ವ ಸೂಚನೆ ನೀಡುವ, ಮೇಲ್ಮನವಿ ಸಲ್ಲಿಸುವ ಹಕ್ಕು ಮತ್ತು ನ್ಯಾಯಾಂಗದ ಮೇಲ್ವಿಚಾರಣೆ ಸೇರಿದಂತೆ Natural Justice ನ ತತ್ವಗಳನ್ನು ಅನುಸರಿಸಬೇಕು. ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳು ಸೇರಿದಂತೆ ಎಲ್ಲಾ ಪಾಲುದಾರರ ಸೂಕ್ತ ಸಮಾಲೋಚನೆ ಮತ್ತು ಒಳಗೊಳ್ಳುವಿಕೆಯೊಂದಿಗೆ ಈ ಘಟಕವನ್ನು ಸ್ಥಾಪಿಸಬೇಕು.

ಫ್ಯಾಕ್ಟ್‌ ಚೆಕ್ಕಿಂಗ್‌ ಯೂನಿಟ್‌ನ ವ್ಯಾಪ್ತಿ ಮತ್ತು ಅಧಿಕಾರಗಳು ಹಾಗೂ ಅದು ಕಾರ್ಯನಿರ್ವಹಿಸುವ ಆಡಳಿತ ಕಾರ್ಯವಿಧಾನವನ್ನು ಸ್ಪಷ್ಟವಾಗಿ ನಿರ್ದಿಷ್ಟಪಡಿಸುವಂತೆ ಗಿಲ್ಡ್ ಪತ್ರದ ಮುಖೇನ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದೆ. ಈ ಸಂಸ್ಥೆಯ ಕಾರ್ಯವಿಧಾನ ಚೌಕಟ್ಟನ್ನು ರೂಪಿಸಲು ಪತ್ರಿಕಾ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಪತ್ರದಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಏನಿದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ?
ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸುವ ಮತ್ತು ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳ ಸಂಪಾದಕೀಯದ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶಗಳೊಂದಿಗೆ 1978 ರಲ್ಲಿ ಸ್ಥಾಪನೆಯಾದ ಸಂಸ್ಥೆ ಎಂದು ಇದರ ವೆಬ್‌ ಸೈಟ್‌ ಹೇಳಿದೆ. ಇದೊಂದು ಪತ್ರಿಕಾ ಸಂಪಾದಕರ ಲಾಭರಹಿತ ಸಂಸ್ಥೆಯಾಗಿದೆ.

You cannot copy content of this page

Exit mobile version