Friday, April 26, 2024

ಸತ್ಯ | ನ್ಯಾಯ |ಧರ್ಮ

ಗದಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು : ಯಾರಿಗೆ ಗೆಲುವು? ಯಾರಿಗೆ ಸೋಲು?

ಮುದ್ರಣಾಲಯಗಳ ನಗರ ಎಂದು ಖ್ಯಾತಿಗಳಿಸಿದ್ದ ಗದಗ ಜಿಲ್ಲೆ ತನ್ನ ಹಣೆ ಪಟ್ಟಿ ಕಳಚಿಟ್ಟಿದೆ. ಶಬ್ದಕೋಶದಿಂದು ಹಿಡಿದು ಯಾವ ಪುಸ್ತಕ ತೆರದು ನೋಡಿದರೂ ಅದರ ಮುದ್ರಣ ಗದಗ ಜಿಲ್ಲೆಯಲ್ಲಿ ಆಗಿರುತ್ತಿತ್ತು. ಇಂತಹ ಮುದ್ರಣಾಲಯಗಳ ಜಿಲ್ಲೆ ನಿಧಾನವಾಗಿ ಕೈಗಾರಿಕೆಗಳತ್ತ ಆಕರ್ಷಿತವಾಗುತ್ತಿದೆ. ಬೃಹತ್ ಕೈಗಾರಿಗೆಕಗಳು ಜಿಲ್ಲೆಯಲ್ಲಿ ಸ್ಥಾಪನೆ ಆಗದಿದ್ದರೂ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಆರಂಭಗೊಳ್ಳುತ್ತಿವೆ. ಇಂತಗಹ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪರಿಚಯವನ್ನು ಇಂದು ಪೀಪಲ್‌ ಟಿವಿ  ಪರಿಚಯಿಸುತ್ತಿದೆ.

ಗದಗ ಜಿಲ್ಲೆ: ಮಾಜಿ ಮುದ್ರಣ ನಗರದಲ್ಲಿ ಚುನಾವಣಾ ಕಲರವ

ಮೊದಲೆಲ್ಲ ಯಾವುದೇ ಗೈಡ್‌, ಡಿಕ್ಷನರಿ ಇತ್ಯಾದಿ ಶಿಕ್ಷಣ ಸಂಬಂಧಿ ಪುಸ್ತಕಗಳನ್ನುತೆರೆದರೆ ಅದು ಮುದ್ರಣಗೊಂಡ ಸ್ಥಳದ ಹೆಸರು ಗದಗವಾಗಿರುತ್ತಿತ್ತು. ಅಷ್ಟರಮಟ್ಟಿಗೆ ಗದಗವೆಂದರೆ ಮುದ್ರಣ ಮುದ್ರಣವೆಂದರೆ ಗದಗವೆನ್ನುವಂತಿತ್ತು. ಇಲ್ಲಿನ ಶಾಬಾದಿಮಠ ಪ್ರಕಾಶನದ ಪುಸ್ತಕವನ್ನು ನೋಡದವರು ವಿರಳವೆಂದೇ ಹೇಳಬೇಕು. ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಈ ಪ್ರಕಾಶನದ ಪುಸ್ತಕಗಳು ಕಾಣುತ್ತಿದ್ದವು. ಕುಮಾರವ್ಯಾಸನೆಂದು ಗುರುತಿಸಿಕೊಂಡಿದ್ದ ಗದುಗಿನ ನಾರಣಪ್ಪನ ಸ್ಥಳವೂ ಹೌದು.

ಗದಗ ಕೈಮಗ್ಗಕ್ಕೂ ಖ್ಯಾತಿಯನ್ನು ಹೊಂದಿದೆ. ಇಲ್ಲಿನ ಕಪ್ಪತಗುಡ್ಡ ಪ್ರಕೃತಿ ಪ್ರಿಯರ ನೆಚ್ಚಿನ ತಾಣ. ಪವನ ವಿದ್ಯುತ್‌, ಕೃಷಿ, ಉದ್ಯಮಗಳು ಈ ಜಿಲ್ಲೆಗೆ ಸಮೃದ್ಧಿಯನ್ನು ತಂದಿವೆ.

ಇನ್ನು ರಾಜಕೀಯವಾಗಿ ಬಿಜೆಪಿ ಒಂದು ಕೈ ಮೇಲಿದೆಯಾದರೂ ಈ ಬಾರಿ ಆಡಳಿತ ವಿರೋಧಿ ಅಲೆ ಅದಕ್ಕೆ ಮುಳುವಾಗುವ ಸಾಧ್ಯತೆಯಿದೆ. ವಿಪರೀತ ಬಲೆಯೇರಿಕೆ, ಅದರಲ್ಲೂ ಗ್ಯಾಸ್‌ ಬೆಲೆ ಏರಿಕೆಯಿಂದ ಕೆಳ ಮಧ್ಯಮ ವರ್ಗಗಳಷ್ಟೇ ಅಲ್ಲದೆ ಮಧ್ಯಮ ವರ್ಗಗಳೂ ಕಂಗೆಟ್ಟಿವೆ. ಬಿಜೆಪಿಯ ಕಮಿಷನ್‌ ದಂಧೆ, ಟಿಕೆಟ್‌ ಮೇಲಾಟಗಳು ಅದಕ್ಕೆ ಮುಳುವಾಗುವ ಸಾಧ್ಯತೆ ಎದ್ದು ಕಾಣುತ್ತಿದೆ. ನಾಲ್ಕು ಸೀಟುಗಳಿರುವ ಈ ಜಿಲ್ಲೆಯಲ್ಲಿ ಎರಡು ಬಿಜೆಪಿಗೆ ಎರಡು ಕಾಂಗ್ರೆಸ್ಸಿಗೆ ಸಿಗಲಿದೆ ಎನ್ನುವುದು ಸ್ಥಳೀಯ ವಿಶ್ಲೇಷಕರ ಅಭಿಪ್ರಾಯ.

ರೋಣ: ಲಿಂಗಾಯತರ ಅಂಗಳದಲ್ಲಿ ನಿಂತ ಆನೇಕಲ್‌ ಆನೇಕಲ್‌ ದೊಡ್ಡಯ್ಯ

ಲಿಂಗಾಯತರ ಜಿದ್ದಾಜಿದ್ದಿನ ಕ್ಷೇತ್ರವಾದ ರೋಣದಲ್ಲಿ ಈ ಬಾರಿ ಆಟ ಕಟ್ಟಲು ದೂರದ ಆನೇಕಲ್ಲಿನಿಂದ ದೊಡ್ಡಯ್ಯ ಎನ್ನುವವರು ಚುನಾವಣೆಗೂ ಮೊದಲೇ ಬಂದು ಕಣದಲ್ಲಿ ಬೀಡುಬಿಟ್ಟಿದ್ದಾರೆ. ಇಲ್ಲಿ ಲಿಂಗಾಯತರ ನಂತರ ಕುರುಬರ ಮತಗಳೂ ದೊಡ್ಡ ಪ್ರಮಾಣದಲ್ಲಿದ್ದು ಅದನ್ನು ಬುಟ್ಟಿಗೆ ಹಾಕಿಕೊಳ್ಳುವ ಆಸೆಯಲ್ಲಿ ದೊಡ್ಡಯ್ಯ ಇದ್ದರೆ, ಕಾಂಗ್ರೆಸ್ ಅಭ್ಯರ್ಥಿಗೆ ದೊಡ್ಡಯ್ಯನವರ ಈ ಪ್ರಯತ್ನ ದೊಡ್ಡ ತಲೆನೋವಾಗಿದೆ. ಆನೇಕಲ್‌ ದೊಡ್ಡಯ್ಯ ಆಮ್‌ ಆದ್ಮಿ ಪಕ್ಷದಿಂದ ಉಮೇದುವಾರರಾಗಿ ಕಣಕ್ಕೆ ಧುಮುಕಿದ್ದಾರೆ. ಒಂದು ಹಂತಕ್ಕೆ ಇಲ್ಲಿ ಆಪ್‌ ತನ್ನ ಖಾತೆ ತೆರೆಯುವ ಭರವಸೆಯಲ್ಲೂ ಇದ್ದಂತಿದೆ.

ಈ ಬಾರಿ ಸರ್ಕಾರದ ವಿರುದ್ಧವಲ್ಲದೆ, ಸ್ಥಳೀಯ ಶಾಸಕರ ವಿರುದ್ಧವೂ ದೊಡ್ಡ ಮಟ್ಟದ ಆಕ್ರೋಶ ಜನರಲ್ಲಿ ಮಡುಗಟ್ಟಿತ್ತು. ಮೊದಲೇ ತೀರಾ ಹಿಂದುಳಿದ ಪ್ರದೇಶವಾದ ಇಲ್ಲಿ ಶಾಸಕರ ನಿಷ್ಕ್ರಿಯತೆ ಜನರ ಸಿಟ್ಟಿಗೆ ಕಾರಣವಾಗಿದೆ. ಕುಡಿಯುವ ನೀರನ್ನು ಬಿಂದಿಗೆ ಲೆಕ್ಕದಲ್ಲಿ ದುಡ್ಡು ಕೊಟ್ಟು ಖರೀದಿಸಬೇಕಾದ ಪರಿಸ್ಥಿತಿಯಿರುವ ಇಲ್ಲಿ ರಾಜಕಾರಣಿಗಳು ಚುನಾವಣಾ ಸಮಯದಲ್ಲಿ ಹಣವನ್ನು ನೀರಿನಂತೆ ಚೆಲ್ಲಿ ಗೆಲ್ಲಲು ಸಿದ್ಧವಾಗುತ್ತಾರೆಯೇ ಹೊರತು ಕ್ಷೇತ್ರದ ಜನರಿಗೆ ನೀರಿನ ವ್ಯವಸ್ಥೆ ಮಾಡುವ ಮೂಲಕ ಅಲ್ಲ.

ಈ ಆನೇಕಲ್‌ ದೊಡ್ಡಯ್ಯ ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿದ್ದು ನಾಮಪತ್ರ ಸಲ್ಲಿಸುವಾಗ ಜೊತೆಯಲ್ಲಿ ಪಂಜಾಬ್‌ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನೇ ಪಕ್ಕದಲ್ಲಿ ನಿಲ್ಲಿಸಿಕೊಂಡಿದ್ದರು! ಇತ್ತೀಚೆಗಷ್ಟೇ ಇವರಿಗೆ ಕ್ಷೇತ್ರದ ಕುರಿಗಾಹಿಗಳು 300 ಕುರಿಗಳನ್ನು ಚುನಾವಣಾ ಖರ್ಚಿಗೆಂದು ಉಡುಗೊರೆಯಾಗಿ ನೀಡಿದ್ದು ಸುದ್ದಿಯಾಗಿತ್ತು.

ಕಳೆದ ಬಾರಿ 83,735 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಗುರುಪಾದಗೌಡ ಸಂಗನಗೌಡ ಪಾಟೀಲ ವಿರುದ್ಧ 7,334 ಮತಗಳ ಅಂತರದಿಂದ ಗೆದ್ದಿದ್ದ ಕಳಕಪ್ಪ ಬಂಡಿಯವರಿಗೆ ಬಿಜೆಪಿ ತನ್ನ ಟಿಕೆಟ್‌ ಮರಳಿ ನೀಡಿದೆ. ಪಕ್ಷದಲ್ಲಿ ಬಂಡಾಯವೂ ತಲೆದೋರಿದ್ದು, ಶಾಸಕರ ವಿರುದ್ಧದ ಜನಾಭಿಪ್ರಾಯವೂ ಸೇರಿ ಈ ಬಾರಿ ಇವರಿಗೆ ಸೋಲು ಕಟ್ಟಿಟ್ಟ ಬುತ್ತಿ ಎನ್ನುವುದು ಜನರ ಅಭಿಪ್ರಾಯ.

ಕಾಂಗ್ರೆಸ್ಸಿನಿಂದ ಕಳೆದ ಬಾರಿ 76,401ಮತ ಪಡೆದು ಎರಡನೇ ಸ್ಥಾನ ಪಡೆದಿದ್ದ ಗುರುಪಾದಗೌಡ ಸಂಗನಗೌಡ ಪಾಟೀಲ (ಜಿ ಎಸ್‌ ಪಾಟೀಲ) ಈ ಬಾರಿ ಮತ್ತೆ ಕಣಕ್ಕಿಳಿದಿದ್ದಾರೆ. ಕ್ಷೇತ್ರದ ಲಿಂಗಾಯತ ಮತಗಳ ಜೊತೆಗೆ ಸಿದ್ಧರಾಮಯ್ಯನವರ ಜನಪ್ರಿಯತೆ ಕುರುಬ ಸೇರಿದಂತೆ ಅಹಿಂದ ಮತಗಳನ್ನು ತನಗೆ ತಂದುಕೊಡಬಹುದು ಎನ್ನುವ ನಂಬಿಕೆಯಲ್ಲಿ ಅವರಿದ್ದಾರೆ. ಆನೇಕಲ್‌ ದೊಡ್ಡಯ್ಯ ದೊಡ್ಡ ಮೊತ್ತದ ವೋಟುಗಳನ್ನು ಪಡೆಯದೇ ಹೋದಲ್ಲಿ ಸಿ ಎಸ್‌ ಪಾಟೀಲರ ಗೆಲುವು ಖಚಿತ. ಈ ಬಾರಿ ಒಂದಷ್ಟು ಗಮನೀಯ ಸಂಖ್ಯೆಯ ಮತಗಳನ್ನು ಪಡೆದು ಮುಂದಿನ ಸಲ ಕಾಂಗ್ರೆಸ್‌ ಟಿಕೆಟಿನಿಂದ ಸ್ಪರ್ಧಿಸುವುದು ಆನೇಕಲ್‌ ದೊಡ್ಡಯ್ಯ ಅವರ ಯೋಚನೆ ಎನ್ನುವುದು ಸ್ಥಳೀಯ ರಾಜಕೀಯ ಪರಿಣಿತರ ಲೆಕ್ಕಾಚಾರ. ಪ್ರಸ್ತುತ ಕಾಂಗ್ರೆಸ್‌ ಅಭ್ಯರ್ಥಿ ಪಾಟೀಲರಿಗೆ ಈಗಾಗಲೇ ವಯಸ್ಸಾಗಿರುವುದರಿಂದ ಈ ಲೆಕ್ಕಾಚಾರ ಸರಿಯೂ ಇರಬಹುದು.

ಅಂದ ಹಾಗೆ ಮೊದಲಿನಿಂದಲೂ ಇದೊಂದು ಸ್ವಿಂಗ್‌ ಕ್ಷೇತ್ರವಾಗಿದ್ದು ಆಗಾಗ ಅಚ್ಚರಿಯ ಫಲಿತಾಂಶಗಳನ್ನು ನೀಡುತ್ತಲೇ ಬಂದಿದೆ. ಇಲ್ಲಿನ ಒಟ್ಟು ಮತದಾರರ ಸಂಖ್ಯೆ, 2,20,702.

ನರಗುಂದ: ಲಿಂಗಾಯತರಿಬ್ಬರ ಹಣಾಹಣಿ

ನರಗುಂದ ಎಂದರೆ ನೆನಪಾಗುವುದು ರೈತಕ್ರಾಂತಿಯಾದರೂ ಈಗ ಅಲ್ಲಿ ಈ ಕ್ರಾಂತಿ ಉಳಿದಿರುವುದು ಅಷ್ಟಕ್ಕಷ್ಟೇ. ಎಲ್ಲ ಬಣ್ಣವನ್ನೂ ಕಪ್ಪು ನುಂಗಿತು ಎಂಬಂತೆ ಕರ್ನಾಟಕದ ಎಲ್ಲೆಡೆಯಂತೆ ಇಲ್ಲಿನ ಬಣ್ಣಗಳನ್ನು ಕೇಸರಿ ನುಂಗಿದೆ. ಹಿಂದುತ್ವದ ಹೆಸರಿನಲ್ಲಿ ಮತ ಕೇಳುವ ಬಿಜೆಪಿ ಕೂಡಾ ಟಿಕೆಟ್‌ ಕೊಡುವುದು ಜಾತಿ ಲೆಕ್ಕಾಚಾರದಲ್ಲೇ. ಹೀಗಾಗೀಯೇ ಇಲ್ಲಿಯೂ ಬಲಾಢ್ಯ ಲಿಂಗಾಯತ ಸಮುದಾಯಕ್ಕೆ ಟಿಕೆಟ್‌ ನೀಡಲಾಗಿದೆ. ಹಿಂದುತ್ವವೆನ್ನುವುದು ಕಾಂಗ್ರೆಸ್ಸಿನ ವಿರುದ್ಧ ಮತ ಚಲಾವಣೆ ಮಾಡುವಂತೆ ಮಾಡಬಲ್ಲದೆ ಹೊರತು ಜಾತಿಶಕ್ತಿಯ ವಿರುದ್ಧವಲ್ಲವೆನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಇಂದು ಕೇಸರಿಯನ್ನು ಕಣ ಕಣದಲ್ಲೂ ತುಂಬಿಕೊಂಡಿರುವ ಲಿಂಗಾಯತ ಸಮುದಾಯ ತನ್ನವರಿಗೆ ಟಿಕೆಟ್‌ ನೀಡದೆ ಹೋದಲ್ಲಿ ಬಿಜೆಪಿಗೆ ಟಾಟಾ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಎಂದಿನಂತೆ ಇಲ್ಲಿ ಸಿಸಿ ಪಾಟೀಲ ಬಿಜೆಪಿಯಿಂದ ಮತ್ತು ಬಿ ಆರ್‌ ಯಾವಗಲ್‌ ಕಾಂಗ್ರೆಸ್ಸಿನಿಂದ ಕಣಕ್ಕಿಳಿದಿದ್ದಾರೆ. ಆಮ್‌ ಆದ್ಮಿಯ ಉಮೇದುವಾರರಾಗಿ ರಾಮಪ್ಪ ದ್ಯಾಮಪ್ಪ ಹೊನ್ನವರ ಕಣಕಿಳಿದಿದ್ದಾರೆ. ಇಲ್ಲಿ ನೇರ ಹಣಾಹಣಿ ಇರುವುದು ಕಾಂಗ್ರೆಸ್‌ ಬಿಜೆಪಿ ನಡುವೆ ಉಳಿದ ಪಕ್ಷಗಳು ನಾಮಕಾವಸ್ತೆಗೆ ಮಾತ್ರ.

ಈ ಕ್ಷೇತ್ರದಲ್ಲಿ ಸುಮಾರು 1.96 ಮತದಾರರಿದ್ದು ವಿವಿಧ ಪಂಗಡಗಳ 80 ಸಾವಿರ ಲಿಂಗಾಯತ ಮತಗಳಿದ್ದು ಈ ಮತಗಳಿಗಾಗಿಯೇ ಹೋರಾಟ ನಡೆಯುತ್ತದೆ. ಉಳಿದಂತೆ ಕುರುಬರು 27 ಸಾವಿರ, ಮುಸ್ಲಿಮ್ 25 ಸಾವಿರ, ಎಸ್ಸಿ 23 ಸಾವಿರ, ಎಸ್ಟಿ 10 ಸಾವಿರ, ಮರಾಠ 10 ಸಾವಿರ, ಬ್ರಾಹ್ಮಣ 5 ಸಾವಿರ ಮತದಾರರಿದ್ದಾರೆ.

ಗದಗ: ಎಚ್‌ ಕೆ ಪಾಟೀಲರ ಕ್ಷೇತ್ರದಲ್ಲಿ ಮೆಣಸಿಕಾಯಿ ಘಾಟು!

ಕಳೆದ ಬಾರಿ ತೀರಾ ಸಣ್ಣ ಅಂತರದಿಂದ ಗೆದ್ದು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದ ಎಚ್‌ ಕೆ ಪಾಟೀಲರ ಎದುರು ಈಗ ಇನ್ನೊಂದು ಚುನಾವಣೆ ಬಂದು ನಿಂತಿದೆ, ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿ ಅವರಿದ್ದಾರೆ. ಇತ್ತ ಕಳೆದ ಸಲ ಕೇವಲ 1,868 ಮತಗಳ ಅಂತರದಿಂದ ಗಾದಿ ಕಳೆದುಕೊಂಡಿದ್ದ ಲಿಂಗಾಯತ ಅಭ್ಯರ್ಥಿ ಅನೀಲ ಮೆಣಸಿನಕಾಯಿ ಎಚ್‌ ಕೆ ಪಾಟೀಲರಿಗೆ ಘಾಟು ತಾಕಿಸಲು ಸಜ್ಜಾಗುತ್ತಿದ್ದಾರೆ.

ಮೊದಲಿಗೆ ನಾಲ್ಕು ಅವಧಿಗೆ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿದ್ದ ಪಾಟೀಲರು 2008ರಲ್ಲಿ ಇಲ್ಲಿ ಮೊದಲ ಸಲ ಚುನಾವಣೆಗೆ ನಿಂತು ಸೋತಿದ್ದರು. ನಂತರದ ಎರಡೂ ಚುನಾವಣೆಗಳಲ್ಲಿ ಗೆದ್ದು ಬೀಗಿದ್ದರಾದರೂ ಕಳೇದ ಬಾರಿಯ ಚುನಾವಣೆಯ ಗೆಲುವು ನೆಮ್ಮದಿಯಿಂದ ಕೂರಲು ಬಿಡುವಂತಹ ಗೆಲುವಾಗಿರಲಿಲ್ಲ. ಶ್ರೀರಾಮು-ರೆಡ್ಡಿ ಬಣದ ಅಭ್ಯರ್ಥಿ ಮೆಣಸಿನಕಾಯಿ ಈ ಬಾರಿಯೂ ಪಾಟೀಲರಿಗೆ ಟಫ್‌ ಫೈಟ್‌ ಕೊಡುವ ಸಾಧ್ಯತೆ ಇದೆ.

ಮೆಣಸಿನಕಾಯಿ ಗೆಲ್ಲುವ ಕುದುರೆಯಾದರೂ ಬೆಂಗಳೂರು ನಿವಾಸಿ ಕೈಗೆ ಸಿಗುವುದಿಲ್ಲ ಎನ್ನುವುದು ಸ್ಥಳೀಯ ಕಾರ್ಯಕರ್ತರ ಅಳಲು. ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿರುವ ಗದಗದಲ್ಲಿ ಪಾಟೀಲರಿಗೂ ಅಧಿಕಾರ ವಿರೋದಿ ಅಲೆಯ ಬಿಸಿ ತಾಕುತ್ತಿದೆ.

ಇನ್ನು ಜೆಡೆಎಸ್‌ ಪಕ್ಷದಿಂದ ಇಲ್ಲಿ ವೆಂಕನ ಗೌಡ ಗೋವಿಂದ ಗೌಡ್ರ ಕಣಕ್ಕಿಳಿದಿದ್ದರೆ ಆಪ್‌ ಪಕ್ಷದಿಂದ ಫೀರ್‌ಸಾಬ್‌ ಶೇಖ್‌ ದೊಡ್ಡಮನಿ ಕಣಕ್ಕಿಳಿದಿದ್ದಾರೆ.

ಗದಗದ ಈ ಕ್ಷೇತ್ರದಲ್ಲಿ ಸುಮಾರು 85,000 ಲಿಂಗಾಯತ ಮತಗಳಿದ್ದು, ಕುರುಬ ಮತ್ತು ಮುಸ್ಲಿಂ ಸಮುದಾಯದ ಮತಗಳು ದೊಡ್ಡ ಮಟ್ಟದಲ್ಲಿವೆ. ಒಟ್ಟಾರೆ ಕ್ಷೇತ್ರದಲ್ಲಿ 2,17,833 ಮತದಾರರಿದ್ದು, ಅವರಲ್ಲಿ 1,08,215 ಮಂದಿ ಪುರುಷರು, 1,09,603 ಮಂದಿ ಮಹಿಳೆಯರು ಹಾಗೂ ಇತರೆ 15 ಮಂದಿ ಮತದಾರರಿದ್ದಾರೆ.

ಶಿರಹಟ್ಟಿ: ಗೆದ್ದು ಬರುವರೇ ಸುಜಾತ ದೊಡ್ಡಮನಿ?

ಮೀಸಲು ಕ್ಷೇತ್ರವಾದ ಶಿರಹಟ್ಟಿಯಲ್ಲಿ ಈ ಬಾರಿ ಕಾಂಗ್ರೆಸ್‌ ಟಿಕೆಟ್ಟಿಗೆ ಬರೋಬ್ಬರಿ 14 ಆಕಾಂಕ್ಷಿಗಳಿದ್ದರು. ಅವರಲ್ಲಿ ಪ್ರಮುಖರೆಂದರೆ ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತ ದೊಡ್ಡ ಮನಿ ಮತ್ತು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ. ಕೊನೆಗೂ ಸುಜಾತ ದೊಡ್ಡಮನಿ ಟಿಕೆಟ್‌ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು. ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್‌ ಪಡೆದ ಜಿಲ್ಲೆಯ ಏಕೈಕ ಮಹಿಳೆ ಎನ್ನಿಸಿಕೊಂಡು ಕಣದಲ್ಲಿದ್ದಾರೆ.

ಇತ್ತ ಬಿಜೆಪಿ ಕಳೆದ ಬಾರಿ 29,993 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಶಾಸಕರಾಗಿದ್ದ ರಾಮಣ್ಣ ಲಮಾಣಿಯವರನ್ನು ಬದಿಗೆ ಸರಿಸಿ ಹೊಸ ಮುಖವಾಗಿ ಡಾ. ಚಂದ್ರ ಲಮಾಣಿ ಎನ್ನುವವರನ್ನು ಕಣಕ್ಕಿಳಿಸಿದೆ. ಸರಕಾರಿ ಕೆಲಸದಲ್ಲಿದ್ದ ಇವರ ರಾಜೀನಾಮೆ ಮೊನ್ನೆಯಷ್ಟೇ ಸ್ವೀಕೃತಗೊಂಡು ಇವರ ಚುನಾವಣಾ ಸ್ಪರ್ಧೆಯ ಹಾದಿ ಸುಗಮಗೊಂಡಿದೆ,

ಬಿಜೆಪಿ ಅಭ್ಯರ್ಥಿ ಚಂದ್ರ ಲಮಾಣಿಯ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿರುವ ಕಾರಣ ಅವರ ರಾಜೀನಾಮೆಯನ್ನು ಅಂಗೀಕರಿಸದಂತೆ ಜಿಲ್ಲಾಧಿಕಾರಿ ಷರಾ ಬರೆದಿದ್ದರು. ಕೊನೆಯ ಘಳಿಗೆಯಲ್ಲಿ ಹಲವು ಷರತ್ತುಗಳೊಂದಿಗೆ ಆರೋಗ್ಯ ಇಲಾಖೆ ಅವರ ರಾಜೀನಾಮೆಯನ್ನು ಅಂಗೀಕರಿಸಿದೆ.

ಆದರೆ ಚಂದ್ರ ಲಮಾಣಿ ಪಾಲಿಗೆ ಇಲ್ಲಿ ಗೆಲುವು ಸುಲಭವಿಲ್ಲ. ಮಾಜಿ ಶಾಸಕ ರಾಮಣ್ಣ ಲಮಾಣಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಇವರು ಗೆಲ್ಲದಿದ್ದರೂ ಬಿಜೆಪಿಯ ಮತ ವಿಭಜನೆ ಮಾಡುವ ಎಲ್ಲಾ ಸಾಧ್ಯತೆಗಳೂ ಇವೆ. ಕ್ಷೇತ್ರದ ಎಲ್ಲೆಡೆ ಬಿಜೆಪಿ ನಾಯಕತ್ವನ್ನು ಬಯ್ಯುತ್ತಾ ಸಾಗುತ್ತಿರುವ ಇವರು ಪಕ್ಷದ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದು ಇದು ಸುಜಾತ ದೊಡ್ಡಮನಿಯವರಿಗೆ ವರವಾಗುವ ಸಾಧ್ಯತೆಯಿದೆ ಎನ್ನುವ ಗುಸುಗುಸು ಕೇತ್ರದಲ್ಲಿ ಕೇಳಿಬರುತ್ತಿದೆ.

ಈ ಬಾರಿ ಗದಗ ಜಿಲ್ಲೆಯಲ್ಲಿ ಒಟ್ಟಾರೆ ಎರಡು ಬಿಜೆಪಿಗೆ ಎರಡು ಕಾಂಗ್ರೆಸ್ಸಿಗೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು ಕೊನೆಯ ಕ್ಷಣದಲ್ಲಿ ಏನೂ ಆಗಬಹುದು. ಜನರು ಪ್ರಜ್ಞಾವಂತರಾಗಿ ಮತ ಚಲಾಯಿಸದೆ ಇಂತಹ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿ ಕನಸಿನ ಮಾತು ಎನ್ನುತ್ತಾರೆ ಇಲ್ಲಿಯ ಸ್ಥಳೀಯ ಪತ್ರಕರ್ತರೊಬ್ಬರು. ಪ್ರತಿಯೊಂದು ಕ್ಷೇತ್ರವನ್ನೂ ಜಾತಿ ಮೇಲಾಟದ ಅಖಾಡಗಳನ್ನಾಗಿ ಪರಿವರ್ತಿಸಿದ ರಾಜಕಾರಣಿಗಳನು ಜನರು ಕ್ಷಮಿಸಬಾರದು ಎಂದು ಅವರು ನೋವು ಮತ್ತು ಹತಾಶೆಯಿಂದ ಕೂಡಿದ ದನಿಯಲ್ಲಿ ಹೇಳುತ್ತಾರೆ. ಬಲಾಢ್ಯ ಜಾತಿಗಳ ಮರ್ಜಿ ಕಾಯುವ ಪಕ್ಷಗಳಿಂದಾಗಿ ಈ ನೋವು ಇಡೀ ಕರ್ನಾಟಕದ ಜನರದ್ದೂ ಹೌದು…

Related Articles

ಇತ್ತೀಚಿನ ಸುದ್ದಿಗಳು