Sunday, April 28, 2024

ಸತ್ಯ | ನ್ಯಾಯ |ಧರ್ಮ

ಕಲಬುರಗಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು : ಮರಳಿ ‘ಕೈ’ವಶಗೊಳ್ಳುವುದೇ ಕಾಂಗ್ರೆಸ್ಸಿನ ಕೋಟೆ?

ಕಲಬುರಗಿನಹಲವು ಕಾರಣಗಳಿಗಾಗಿ ವಿಶೇಷ. ವೀರೇಂದ್ರ ಪಾಟೀಲ್‌, ಧರ್ಮಸಿಂಗ್‌ ಅವರಂತಹ ಘಟಾನುಘಟಿ ರಾಜಕಾರಣಿಗಳನ್ನು ಕೊಟ್ಟ ಜಿಲ್ಲೆ ಕಲಬುರಗಿ. ಈಗಂತೂ AICC ಅಧ್ಯಕ್ಷರ ಜಿಲ್ಲೆಯೆಂದು ಅದು ಗುರುತಿಸಿಕೊಳ್ಳುತ್ತಿದೆ. ಗುಲ್ಬರ್ಗದ ಕತೆಯಷ್ಟೇ ರೋಚಕ ಖರ್ಗೆಯವರ ರಾಜಕೀಯ ಜೀವನದ ಕತೆ. ಈ ಬಾರಿಯ ಚುನಾವಣೆ ಅವರಿಗೆ ಒಂದಷ್ಟು ವಿಶೇಷ ಚುನಾವಣೆ. ಅವರು ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷರಾದ ನಂತರ ಜಿಲ್ಲೆ ಎದುರಿಸುತ್ತಿರುವ ಮೊದಲ ವಿಧಾಸಭಾ ಚುನಾವಣೆಯಿದು. ಬಿಜೆಪಿಯ ರಾಷ್ಟ್ರಾಧ್ಯಕ್ಷರಿಗೆ ತಮ್ಮ ರಾಜ್ಯವನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಬಾರಿ ಕಾಂಗ್ರೆಸ್‌ ಅಧ್ಯಕ್ಷರ ಸಮಯ. ಅವರು ತಮ್ಮ ರಾಜ್ಯ ಜಿಲ್ಲೆಗಳನ್ನು ಗೆದ್ದುಕೊಳ್ಳುತ್ತಾರೆಯೇ ಎನ್ನುವ ಪ್ರಶ್ನೆಗೆ ಮೇ 13ರಂದು ಉತ್ತರ ಸಿಗಲಿದೆ.

ಒಂದು ಕಾಲದ ಕಾಂಗ್ರೆಸ್‌ ಭದ್ರಕೋಟೆಯಾದ ಈ ಜಿಲ್ಲೆಯಲ್ಲಿ ಒಟ್ಟು ಒಂಬತ್ತು ಕ್ಷೇತ್ರಗಳಿದ್ದು 4 ಕಾಂಗ್ರೆಸ್‌ ಬಳಿಯಿದ್ದರೆ 5 ಬಿಜೆಪಿ ಬಳಿಯಿದೆ. ಈ ತೊಗರಿ ನಾಡಿನಲ್ಲಿ ಹವಮಾನವೆನ್ನುವುದು ತೀರಾ ಬಿಸಿಲು ಮತ್ತು ತೀರಾ ಚಳಿಯನ್ನು ಇಲ್ಲಿನ ಜನರ ಅನುಭವಕ್ಕೆ ತರುತ್ತದೆ. ಬೇಸಿಗೆಯಲ್ಲಿ 34ರಿಂ 44 ಡಿಗ್ರಿಯ ತನಕ ಹೋಗು ತಾಪಮಾನ ಚಳಿಗಾಲದಲ್ಲಿ 27 ರಿಂದ 11 ಡಿಗ್ರಿಗೆ ಇಳಿಯುತ್ತದೆ.

2011 ರ ಜನಗಣತಿಯ ಪ್ರಕಾರ ಕಲಬುರಗಿ ಜಿಲ್ಲೆಯು 2,564,892 ಜನಸಂಖ್ಯೆಯನ್ನು ಹೊಂದಿದ್ದು

  • ಅಫಜಲಪುರ
  • ಅಳಂದ
  • ಚಿಂಚೋಳಿ
  • ಚಿತ್ತಾಪುರ
  • ಕಲಬುರಗಿ
  • ಜೇವರ್ಗಿ
  • ಸೇಡಂ

ಎನ್ನುವ ಏಳು ತಾಲ್ಲೂಕುಗಳನ್ನು ಹೊಂದಿದೆ. ಜೋಳದ ರೊಟ್ಟಿ, ಬೇಳೆ ಹೂರಣದ ಹೋಳಿಗೆ ಮತ್ತು ತಹರಿ ಎನ್ನುವ ಪಲಾವ್‌ ಮಾದರಿಯ ತಿನಿಸುಗಳಿಗೆ ಫೇಮಸ್‌ ಆಗಿರುವ ಈ ಜಿಲ್ಲೆಯಲ್ಲಿ ಹಿಂದೂ ಮತ್ತು ಮುಸಲ್ಮಾನರು ಭಾವೈಕ್ಯದಿಂದ ಬದುಕುತ್ತಿದ್ದಾರೆ. ಎರಡೆರಡು ವಿಶ್ವವಿದ್ಯಾಲಯಗಳನ್ನು ಹೊಂದಿರುವ ಈ ಜಿಲ್ಲೆ ಎಷ್ಟೋ ಜಿಲ್ಲೆಗಳಲ್ಲಿ ಇಂದಿಗೂ ಕನಸಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸಹ ಹೊಂದಿದೆ. ಅಲ್ಲದೆ ಅದರೊಡನೆ ಇಎಸ್ಐಸಿ ಮೆಡಿಕಲ್ ಕಾಲೇಜು, ಖಾಸಗಿ ವೈದ್ಯಕೀಯ ಕಾಲೇಜು, ಫೈನ್ ಆರ್ಟ್ಸ್ ಕಾಲೇಜು, ಹಲವಾರು ಫಾರ್ಮಸಿ ಕಾಲೇಜುಗಳು ಮತ್ತು ಪದವಿ ಕಾಲೇಜುಗಳನ್ನು ಹೊಂದಿದೆ. ಇದರೊಂದಿಗೆ ಉತ್ತರ ಕರ್ನಾಟಕದ ಶೈಕ್ಷಣಿಕ ಕೇಂದ್ರವಾಗಿ ಕಲಬುರಗಿ ವೇಗವಾಗಿ ಬೆಳೆಯುತ್ತಿದೆ.

ರಾಜಕೀಯವಾಗಿ ದಿವಂಗತ ವೀರೇಂದ್ರ ಪಾಟೀಲ್‌ ಮತ್ತು ಧರಂ ಸಿಂಗ್‌ ಅವರ ತವರು ಜಿಲ್ಲೆಯಾಗಿರುವ ಕಲಬುರಗಿ ಈಗ ರಾಜಕೀಯ ಸ್ಥಿತ್ಯಂತರಗಳಿಗೆ ಸಾಕ್ಷಿಯಾಗುತ್ತಿದೆ. ಸ್ಥಳೀಯ ನಾಯಕರ ರಾಜಕೀಯ ವಲಸೆ ಇಲ್ಲಿ ಬಿಜೆಪಿಗೂ ನೆಲೆ ಕಟ್ಟಿಕೊಟ್ಟಿದೆ. ಹಿಂದುತ್ವದ ಜಂಡಾ ಹಿಡಿದು ಬರುವ ಬಿಜೆಪಿ ಇಲ್ಲಿಯೂ ಮತದ ಹುಳಿ ಹಿಂಡಿ ಹೆಪ್ಪು ಹಾಕಿ ಅಧಿಕಾರದ ಬೆಣ್ಣೆ ಪಡೆಯುತ್ತಿದೆ.

ಈಗ ಇಲ್ಲಿನ ಒಂಬತ್ತೂ ಕ್ಷೇತ್ರಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ರಾಜಕೀಯ ಮೇಲಾಟಗಳೂ ಆರಂಭಗೊಂಡಿವೆ.

ಅಫಜಲಪುರ: ಬೋರ್ಡಿಗಿಲ್ಲದ ಬಿಜೆಪಿಗೆ ಇಬ್ಬಿಬ್ಬರು ಅಭ್ಯರ್ಥಿಗಳು

ಇದೊಂದು ಪಕ್ಷಾಂತರದ ಎಲ್ಲಾ ಸಾಧ್ಯತೆಗಳನ್ನೂ ಬಳಸಿಕೊಂಡ ಅಭ್ಯರ್ಥಿಗಳ ಕ್ಷೇತ್ರವಾಗಿದ್ದು, ಇಲ್ಲಿನ ಇಬ್ಬರೂ ಬಲಶಾಲಿ ರಾಜಕಾರಣಿಗಳು ಕಾಂಗ್ರೆಸ್‌, ಬಿಜೆಪಿ, ಜನತಾದಳ ಹೀಗೆ ಮೂರು ಪ್ರಮುಖ ಪಕ್ಷಗಳನ್ನಲ್ಲದೆ ಕೆಜೆಪಿ, ಕೆಸಿಪಿಯಂತಹ ಸಣ್ಣ ಪಕ್ಷಗಳಿಗೂ ಹೋಗಿ ಬಂದಿದ್ದಾರೆ.

ಪ್ರಸ್ತುತ ಬಿಜೆಪಿ ಅಭ್ಯರ್ಥಿಯಾಗಿರುವ, ಹಿಂದಿನ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸೋತಿದ್ದ ಮಾಲಿಕಯ್ಯ ಗುತ್ತೇದಾರ್‌ ಈ ಹಿಂದೆಯೂ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದಾರೆ. ಇದುವರೆಗೆ ಬಿಜೆಪಿ ಇಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಗುತ್ತೆದಾರ್‌ ಒಟ್ಟು ಆರು ಬಾರಿ ಶಾಸಕರಾಗಿದ್ದು 1985, 1989, 2008, 2013 ಕಾಂಗ್ರೆಸ್‌ ಮೂಲಕ ಆಯ್ಕೆಯಾಗಿದ್ದರೆ, 1994ರಲ್ಲಿ ಕೆಸಿಪಿ ಮೂಲಕ ಗೆದ್ದರೆ, 1999ರಲ್ಲಿ ಜೆಡಿಎಸ್‌ ಮೂಲಕ ಗೆದ್ದಿದ್ದಾರೆ. ಆದರೆ ಈ ಬಾರಿ ಗುತ್ತೆದಾರ್‌ ಕಾಂಗ್ರೆಸ್ಸಿನ ಎಂ ವೈ ಪಾಟೀಲ ಅವರೊಡನೆ ಸ್ಪರ್ಧಿಸುವುದಲ್ಲದೆ ತನ್ನ ಸಹೋದರ ನಿತಿನ್‌ ಗುತ್ತೇದಾರ್‌ ಅವರೊಡನೆಯೂ ಸ್ಪರ್ಧಿಸಬೇಕಿದೆ. ಈ ಬಾರಿ ಬಿಜೆಪಿ ಟಿಕೆಟ್‌ ನಿತಿನ್‌ ಗುತ್ತೇದಾರ್‌ ಅವರಿಗೇ ಎಂದು ಹೇಳಲಾಗುತ್ತಿತ್ತು ಆದರೆ ಕೊನೆಯ ಗಳಿಗೆಯಲ್ಲಿ ಮಾಲಿಕಯ್ಯ ಗುತ್ತೇದಾರ್‌ ತಾನು ಸ್ಪರ್ಧಿಸುವುದಾಗಿ ಘೋಷಿಸಿದ ಕಾರಣ ನಿತಿನ್‌ ಬಂಡಾಯ ಎದ್ದಿದ್ದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ಪ್ರಸ್ತುತ ಕ್ಷೇತ್ರದ ಶಾಸಕ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಎಂ ವೈ ಪಾಟೀಲ ಕೂಡಾ ಗುತ್ತೇದಾರರ ಹಾಗೆ ಇರುವ ಪಕ್ಷಗಳೆಲ್ಲವನ್ನೂ ಸುತ್ತಾಡಿ ಬಂದಿದ್ದಾರೆ. ಕೊನೆಯ ಬಾರಿ ಬಿಜೆಪಿಯಿಂದ ಕಾಂಗ್ರೆಸಿಗೆ ಬಂದ ಇವರು ತನಗೆ ಟಿಕೆಟ್‌ ಬೇಡ ಬದಲಿಗೆ ತನ್ನ ಮಗನಿ ನೀಡುವಂತೆ ಕೇಳಿಕೊಂಡಿದ್ದರು ಆದರೆ ಕಾಂಗ್ರೆಸ್‌ ಅವರಿಗೇ ಟಿಕೆಟ್‌ ನೀಡಿದೆ. ಜೆಡಿಎಸ್‌ ಮೂಲಕ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾಗಿದ್ದ ಶಿವಕುಮಾರ್ ನಾಟೇಕರ್ ಕಣಕ್ಕಿಳಿದಿದ್ದಾರೆ.

ಜೇವರ್ಗಿ: ರಜಪೂತ ಕುಟುಂಬದ ಮೂರನೆ ಕುಡಿ ಮೂರನೇ ಬಾರಿ ಆಯ್ಕೆಯ ನಿರೀಕ್ಷೆಯಲ್ಲಿ

ಮಾಜಿ ಮುಖ್ಯಮಂತ್ರಿ ಧರಂ ಸಿಂಗ್‌ ಅವರ ಕ್ಷೇತ್ರವಾಗಿದ್ದ ಜೇವರ್ಗಿ ಪ್ರಸ್ತುತ ಅವರ ಮಗ ಅಜಯ್‌ ಸಿಂಗ್‌ ಅವರ ಕ್ಷೇತ್ರವಾಗಿದೆ. ಧರಂ ಸಿಂಗ್‌ ಅವರಿಗೂ ಮೊದಲು ಒಮ್ಮೆ ಇಲ್ಲಿಂದ ಅವರ ತಂದೆ ಒ ಎಸ್‌ ನಾರಾಯಣ್‌ ಸಿಂಗ್‌ ಗೆದ್ದಿದ್ದರು. ಆ ಲೆಕ್ಕದಲ್ಲಿ ಇದು ಈ ಕ್ಷೇತ್ರದಲ್ಲಿ ಮೂರನೇ ತಲೆಮಾರಿನ ಆಡಳಿತ. ಅಜಾತ ಶತ್ರುವೆಂದೇ ಗುರುತಿಸಿಕೊಳ್ಳುತ್ತಿದ್ದ ಧರಂ ಸಿಂಗ್‌ ಇಲ್ಲಿ ಹಲವು ಬಾರಿ ಗೆದ್ದಿದ್ದಾರೆ. ಇಲ್ಲಿ ನಡೆದ ಹದಿನಾರು ಚುನಾವಣೆಗಳಲ್ಲಿ ಅವರ ಕುಟುಂಬವೇ ಒಂಬತ್ತು ಚುನಾವಣೆಗಳನ್ನು ಗೆದ್ದಿದೆ.

ಕಳೆದ ಬಾರಿ ಸೋತಿದ್ದ ಮತ್ತು 2008ರಲ್ಲಿ ಧರಂ ಅವರನ್ನು ಸೋಲಿಸಿದ್ದ ಬಿಜೆಪಿ ಅಭ್ಯರ್ಥಿ ದೊಡ್ಡಪ್ಪಗೌಡ ಪಾಟೀಲ ನಾರಿಬೋಳ್ ಅವರ ಬದಲಿಗೆ ಬಿಜೆಪಿ ಈ ಬಾರಿ ಶಿವನಗೌಡ ಪಾಟೀಲ ರದ್ದೇವಾಡಗಿ ಎನ್ನುವವರಿಗೆ ಟಿಕೆಟ್‌ ನೀಡಿದೆ.

ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ದೊಡ್ಡಪ್ಪ ಗೌಡ ಈ ಬಾರಿ ಕೊನೆಯ ಕ್ಷಣದಲ್ಲಿ ಜೆಡಿಎಸ್‌ ಸೇರಿ ಅದರ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಖಾತರಿಯಾಗಿದೆ.

ಕ್ಷೇತ್ರದಲ್ಲಿ ಒಟ್ಟು 2,35,038 ಮತದಾರರಿದ್ದು, ಪುರುಷ ಮತದಾರರ ಸಂಖ್ಯೆ 1,19,248 ಮತ್ತು 1,15,388 ಮಹಿಳಾ ಮತದಾರರಿದ್ದಾರೆ. ಇಲ್ಲಿ ಲಿಂಗಾಯತ ಮತಗಳು ದೊಡ್ಡ ಸಂಖ್ಯೆಯಲ್ಲಿವೆ.

ಸೇಡಂ: ಬಿಜೆಪಿ ತನ್ನ ಸೀಟು ಉಳಿಸಿಕೊಳ್ಳುವುದೇ?

ಸೇಡಂನಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನಡೆಯಬಹುದಾಗಿದ್ದ ಜಿದ್ದಾಜಿದ್ದಿಗೆ ಬಾಲರಾಜ್‌ ಗುತ್ತೇದಾರ್‌ ಜೆಡಿಎಸ್‌ ಮೂಲಕ ಕಣಕ್ಕೆ ಪ್ರವೇಶಿಸುವುದರೊಂದಿಗೆ ಈಗ ಇದು ತ್ರಿಕೋನ ಸ್ಪರ್ಧೆಯ ಕ್ಷೇತ್ರವಾಗಿದೆ. ಕಳೆದ ಬಾರಿ ಇಲ್ಲಿನ ಜೆಡಿಎಸ್‌ ಅಭ್ಯರ್ಥಿ ಸುನೀತಾ ಮಹಾಂತೇಶ್ ತಲ್ವಾರ್ 2,075 ಮತ ಪಡೆಯುವುದರೊಂದಿಗೆ ಮೂರನೇ ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಬಲಾಢ್ಯ ಗುತ್ತೇದಾರ್‌ ಕುಟುಂಬದ ಬಾಲರಾಜ್‌ ಇಲ್ಲಿನ ಲೆಕ್ಕಚಾರಗಳನ್ನು ತಲೆಕೆಳಗು ಮಾಡುವ ನಿರೀಕ್ಷೆಯಿದೆ. ಇದಕ್ಕಾಗಿ ಕ್ಷೇತ್ರದಲ್ಲೇ ಬೀಡುಬಿಟ್ಟಿರುವ ಅವರು ಕುಟುಂಬದೊಡನೆ ಬಹಳ ಹಿಂದೆಯೇ ಕ್ಷೇತ್ರವನ್ನು ಸುತ್ತಲು ಆರಂಭಿಸಿದ್ದರು.

ರಾಜಕುಮಾರ ಪಾಟೀಲ ತೆಲ್ಕೂರ, ಬಿಜೆಪಿ ಅಭ್ಯರ್ಥಿ ಮೂರನೇ ಬಾರಿ ಆಯ್ಕೆ ಬಯಸಿ ಕಣಕ್ಕಿಳಿದಿದ್ದು. ಈಗಾಗಲೇ ಪ್ರಧಾನಿ, ಮುಖ್ಯಮಂತ್ರಿ, ಕಂದಾಯಮಂತ್ರಿಗಳನ್ನು ಕ್ಷೇತ್ರಕ್ಕೆ ಕರೆಯಿಸಿ ಕಾರ್ಯಕ್ರಮ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಬಾರಿ 7200 ಮತಗಳ ಅಂತರದಿಂದ ಸೋತು ಎರಡನೇ ಸ್ಥಾನಕ್ಕೆ ತೃಪ್ತಿ ಪಡೆದಿದ್ದ ಕಾಂಗ್ರೆಸ್‌ ಅಭ್ಯರ್ಥಿ ಡಾ. ಶರಣಪ್ರಕಾಶ್‌ ಪಾಟೀಲ್‌ ಈ ಬಾರಿ ಮತ್ತೆ ಕಣಕ್ಕಿಳಿದಿದ್ದಾರೆ. ಈ ಹಿಂದೆ ಎರಡು ಬಾರಿ ಗೆದ್ದಿರುವ ಇವರನ್ನು ಈ ಬಾರಿ ಕ್ಷೇತ್ರದ ಜನತೆ ಕೈ ಹಿಡಿಯುತ್ತಾರೆಯೇ ಎಂದು ಕಾದು ನೋಡಬೇಕಿದೆ.

ಇನ್ನು ಆಮ್‌ ಆದ್ಮಿ ಪಕ್ಷದಿಂದ ಶಂಕರ ಬಂಡಿ ಕಣದಲ್ಲಿದ್ದಾರೆ.

ಚಿತ್ತಾಪುರ: ಮತ್ತೆ ಗೆಲ್ಲುವರೇ ಪ್ರಿಯಾಂಕ್‌ ಖರ್ಗೆ?

ಮಲ್ಲಿಕಾರ್ಜುನ ಖರ್ಗೆಯ ಪುತ್ರನಾದ ಪ್ರಿಯಾಂಕ್‌ ಖರ್ಗೆ ತನ್ನ ತಂದೆಯ ನೆರಳಿನಾಚೆಗೂ ರಾಜಕೀಯ ವ್ಯಕ್ತಿವನ್ನು ಬೆಳೆಸಿಕೊಂಡಿರು ಕಾಂಗ್ರೆಸ್ಸಿನ ರಾಜ್ಯಮಟ್ಟದ ನಾಯಕ ಇವರು ಈ ಹಿಂದೆ ಎರಡು ಬಾರಿ ಈ ಕ್ಷೇತ್ರದಿಂದ ಗೆದ್ದಿದ್ದು, ಈ ಬಾರಿಯೂ ಆಯ್ಕೆ ಬಯಸಿ ಕಣಕ್ಕಿಳಿದಿದ್ದಾರೆ.

ಇನ್ನು ಬಿಜೆಪಿ ಈ ಕ್ಷೇತ್ರದಿಂದ ಅಪರಾಧ ಹಿನ್ನೆಲೆಯ, ಗಡಿಪಾರಾಗಿದ್ದ, ಆದರೆ ಈಗ ಹೈಕೋರ್ಟಿನಿಂದ ಸ್ಟೇ ತಂದಿರುವ ಅಭ್ಯರ್ಥಿ  ಮಣಿಕಾಂತ ರಾಥೋಡ್ ಗೆ ಟಿಕೆಟ್‌ ನೀಡಿದೆ, ಇದುವರೆಗೆ ಇಲ್ಲಿ ಖಾತೆ ತೆರೆಯದಿರುವ ಬಿಜೆಪಿ ಈ ಬಾರಿಯೂ ಇಲ್ಲಿ ಖಾತೆ ತೆರೆಯದಿರಲಿ ಎಂದು ಪಕ್ಷದೊಳಗಿನ ಹಲವರೇ ಬಯಸುತ್ತಿದ್ದಾರೆ. ಅಕ್ಕಿ ಅಕ್ರಮ ಸಾಗಾಟ ಪ್ರಕರಣ ಸೇರಿದಂತೆ ಈ ವ್ಯಕ್ತಿಯ ವಿರುದ್ಧ ಯಾದಗಿರಿ, ವಿಜಯಪುರ, ಕಲಬುರಗಿಯ ವಿವಿಧ ಠಾಣೆಗಳಲ್ಲಿ ಹಲವು ಕೇಸುಗಳಿವೆ.

 ಆಮ್‌ ಆದ್ಮಿ ಪಕ್ಷದಿಂದ ಜಗದೀಶ್‌ ಸಾಗರ್‌ ಎನ್ನುವವರು ಕಣದಲ್ಲಿದ್ದಾರೆ.

ಚಿಂಚೋಳಿ: ಮತ್ತೆ ಗೆಲ್ಲುವ ಉಮೇದಿನಲ್ಲಿ ಕೈ

ಈ ಕ್ಷೇತ್ರವೂ ಒಂದು ಕಾಲದಲ್ಲಿ ಕಾಂಗ್ರೆಸ್‌ ಭದ್ರ ಕೋಟೆಯಾಗಿತ್ತು. ಹಿರಿಯ ರಾಜಕಾರಣಿ ವೀರೇಂದ್ರ ಪಾಟೀಲರು ಗೆಲ್ಲುತ್ತಿದ್ದ ಕೇತ್ರವಿದು. ಜೊತೆಗೆ ಇಲ್ಲಿಂದ ಯಾವ ಪಕ್ಷ ಗೆಲ್ಲುತ್ತದೋ ಆ ಪಕ್ಷ ಅಧಿಕಾರ ಹಿಡಿಯುತ್ತದೆಯೆನ್ನುವುದು ಒಂದು ನಂಬಿಕೆ. ಈ ನಂಬಿಕೆಗೆ ಲಾಜಿಕ್‌ ಇಲ್ಲವಾದರೂ ಮ್ಯಾಜಿಕ್‌ ಎನ್ನುವಂತೆ ಅದು ನಿಜವಾಗುತ್ತಲೇ ಬಂದೆ.

ಪ್ರಸ್ತುತ ಕ್ಷೇತ್ರದ ಶಾಸಕರು ಇದೇ ಜಿಲ್ಲೆಯ ಸಂಸದ ಉಮೇಶ ಜಾಧವ ಅವರ ಮಗ ಡಾ. ಅವಿನಾಶ ಜಾಧವ್.‌ ಈ ಮೊದಲು ಕಾಂಗ್ರೆಸ್ಸಿನಲ್ಲಿದ್ದ ಉಮೇಶ್‌ ಜಾಧವ್‌ 2019ರ ಮೋದಿ ಅಲೆಯಲ್ಲಿ ಗೆದ್ದು ಸಂಸದರಾದರು. ಅವರು ಇಲ್ಲಿಂದ ಎರಡು ಸಲ ಕಾಂಗ್ರೆಸ್‌ ಸೀಟ್‌ ಮೂಲಕ ಗೆದ್ದು ಶಾಸಕರೂ ಆಗಿದ್ದರು.

ಹೀಗಾಗಿ ಈಗ ಒಂದೆಡೆ ತನ್ನ ಸಂಸದ ಸ್ಥಾನದಡಿ ಬರುವ ಸೀಟ್‌ ಎನ್ನುವ ಕಾಳಜಿಯಾದರೆ ಇನ್ನೊಂದೆಡೆ ಉಮೇಶ ಜಾಧವರಿಗೆ ತನ್ನ ಮಗನ ರಾಜಕೀಯ ಬದುಕು ಎನ್ನುವ ಕಾಳಜಿ. ಆದರೆ ಮಗ ಅವಿನಾಶರ ಕುರಿತು ಕಾರ್ಯಕರ್ತರೇ ಸಾಕಷ್ಟು ಅಸಮಾಧಾನ ಹೊಂದಿದ್ದಾರೆ ಎನ್ನುತ್ತಾರೆ ಕ್ಷೇತ್ರದ ಜನ. ಅಭಿವೃದ್ಧಿ ಕೆಲಸಗಳೂ ಅಷ್ಟಾಗಿ ನಡೆದಿಲ್ಲವೆನ್ನುತ್ತಾರೆ ಮತದಾರರು.

ಈಗ ಇಲ್ಲಿನ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸುಭಾಷ್ ವಿ. ರಾಠೋಡ್ ಕಣಕ್ಕಿಳಿದಿದ್ದಾರೆ. ಅವರು 2019ರಲ್ಲೂ ಇಲ್ಲಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ ಎರಡನೇ ಸ್ಥಾನಕ್ಕೆ ಸಮಾಧಾನಗೊಳ್ಳುವಂತಾಗಿತ್ತು. ಈ ಬಾರಿ ಮತ್ತೆ ಪ್ರಚಾರ ಕಾರ್ಯಾದಲ್ಲಿ ತೊಡಗಿದ್ದು ಬೆಲೆಯೇರಿಕೆ ಮತ್ತು ಸರ್ಕಾರದ ದುರಾಡಳಿತ ತನಗೆ ಮತಗಳನ್ನು ತಂದುಕೊಡಬಹುದು ಎನ್ನುವ ನಿರೀಕ್ಷೆಯಲ್ಲಿ ಅವರಿದ್ದಾರೆ.

ಇತ್ತ ಜೆಡಿಎಸ್‌ ಮೂಲಕ ಸಂಜೀವನ್ ಯಾಕಾಪುರ ಕಣಕ್ಕಿಳಿದಿದ್ದು ಹಲವು ದಿನಗಳಿಂದ ಚುನಾವಣೆಯ ತಯಾರಿಯಲ್ಲಿ ಇವರು ತೊಡಗಿದ್ದರು.

ಕಲಬುರಗಿ ಗ್ರಾಮೀಣ: ಗೆಲ್ಲುವ ಆಸೆಯಲ್ಲಿ ರೇವೂ ನಾಯಕ್

2008ರಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಮೂಲಕ ಗೆದ್ದಿದ್ದ ರೇವೂ ನಾಯಕ್‌ ಬೆಳಮಗಿ ಈಗ ಕಾಂಗ್ರೆಸ್ ಅಭ್ಯರ್ಥಿ. ಇವರು ಕಳೆದ ಬಾರಿ ಜೆಡಿಎಸ್‌ ಟಿಕೆಟ್‌ ಮೂಲಕ ಗೆದ್ದು 29 ಸಾವಿರ ಚಿಲ್ಲರೆ ಮತ ಪಡೆದು ಮೂರನೇ ಸ್ಥಾನದಲ್ಲಿ ಇದ್ದರು.

ಬಿಜೆಪಿಯಿಂದ ಹಾಲಿ ಶಾಸಕ ಬಸವಾರಜ ಮತ್ತಿಮಡು ಮತ್ತೆ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಬಿಜೆಪಿಯೊಳಗೆ ಬಂಡಾಯದ ಬಿಸಿಯೆದ್ದಿದ್ದು ಈ ತಾಲೂಕಿನ ಬಿಜೆಪಿ ಮುಖಂಡ ರವಿ ಬಿರದಾರ ಉಚ್ಛಾಟನೆಯಲ್ಲಿ ಬಸವರಾಜ ಅವರ ಕೈವಾಡವಿದೆಯೆಂದು ರವಿ ಬಿರಾದಾರ್‌ ಸಂಗಡಿಗರು ಮುನಿಸಿಕೊಂಡಿದ್ದು ಇದು ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ರೇವೂ ನಾಯಕ್‌ ಬೆಳಮಗಿ ಕ್ಷೇತ್ರಕ್ಕೆ ಹಳಬರಾಗಿರುವ ಕಾರಣ ಅವರ ಗೆಲುವಿನ ಸಾಧ್ಯತೆಗಳು ಹೆಚ್ಚಿವೆ.

ಆಮ್‌ ಆದ್ಮಿ ಪಕ್ಷದಿಂದ ಇನ್ನೊಂದು ಪರಿಚಿತ ಮುಖ ಡಾ. ರಾಘವೇಂದ್ರ ಚಿಂಚನಸೂರ ಕಣಕ್ಕಿಳಿದಿದ್ದಾರೆ.

 ಕಲಬುರಗಿ ದಕ್ಷಿಣ: ರೇವೂರ ಕುಟುಂಬದ ಕೋಟೆ

2008ರಲ್ಲಿ ಈ ಕ್ಷೇತ್ರ ನಿರ್ಮಾಣವಾದ ದಿನದಿಂದ ರೇವೂರ ಕುಟುಂಬ ಬಿಟ್ಟರೆ ಇನ್ಯಾರೂ ಇಲ್ಲಿ ಗೆದ್ದಿಲ್ಲ. ಮೊದಲಿಗೆ ಇಲ್ಲಿ ಚಂದ್ರಶೇಖರ ಪಾಟೀಲ್‌ ರೇವೂರ ಬಿಜೆಪಿಯಿಂದ ಗೆದ್ದಿದ್ದರು. 2010ರಲ್ಲಿ ಅವರ ಮರಣದ ನಂತರ ಪಕ್ಷ ಅವರ ಕುಟುಂಬಕ್ಕೆ ಟಿಕೆಟ್‌ ನಿರಾಕರಿಸಿದ ಕಾರಣ ಪಾಟೀಲರ ಪತ್ನಿ ಜೆಡಿಎಸ್‌ ಟಿಕೆಟ್‌ ಮೂಲಕ 39,430 ವೋಟುಗಳನ್ನು ಪಡೆದು ಬಿಜೆಪಿ ಪಕ್ಷದ ತನ್ನ ಎದುರಾಳಿ ಶಶಿಲ್‌ ಜಿ ನಮೋಶಿಯನ್ನು ಸೋಲಿಸಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಅಜಯ್‌ ಸಿಂಗ್‌ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.

ನಂತರ ಪಾಟೀಲರ ಮಗ ದತ್ತಾತ್ರೇಯ ಪಾಟೀಲರಿಗೆ ಬಿಜೆಪಿ 2013ರಲ್ಲಿ ಟಿಕೆಟ್‌ ನೀಡಿತು. ಆಗ ಗೆದ್ದು ಬಂದ ಅವರು ನಂತರ 2018ರಲ್ಲೂ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಈ ಬಾರಿಯ ಚುನಾವಣೆಗೂ ಟಿಕೆಟ್‌ ಅವರಿಗೇ ದೊರಕಿದೆ. ಈ ಬಾರಿ ಹ್ಯಾಟ್ರಿಕ್‌ ಹೊಡೆಯುವರೇ ಎನ್ನುವುದನ್ನು ಕಾದು ನೋಡಬೇಕಿದೆ.

ಕಳೆದ ಬಾರಿ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಮೂಲಕ ಸ್ಪರ್ಧಿಸಿ ಶೇಕಡಾ 41ರಷ್ಟು ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದ ಅಲ್ಲಮ ಪ್ರಭು ಪಾಟೀಲ ಇವರಿಗೆ ಟಿಕೆಟ್‌ ನೀಡಿದೆ. ಅಧಿಕಾರ ವಿರೋದಿ ಅಲೆ ಕೈ ಹಿಡಿದಲ್ಲಿ ಇವರು ಗೆಲ್ಲುವುದು ಖಾತರಿ. ಏಕೆಂದರೆ ಕಳೆದ ಬಾರಿ ಸುಮಾರು ಐದು ಸಾವಿರ ಮತಗಳ ಅಂತರದಿಂದಷ್ಟೇ ಸೋತಿದ್ದರು.

ಆಮ್‌ ಆದ್ಮಿ ಪಕ್ಷ ತನ್ನ ಅಭ್ಯರ್ಥಿಯಾಗಿ ಸಿದ್ದರಾಮ ಅಪ್ಪಾರಾವ ಪಾಟೀಲ ಅವರನ್ನು ಕಣಕ್ಕಿಳಿಸಿದೆ.

ಆಳಂದ: ಗುತ್ತೇದಾರ್‌ V/S ಬಿ ಆರ್‌ ಪಾಟೀಲ

ಈ ಕ್ಷೇತ್ರವೂ ಹೆಚ್ಚೂ ಕಡಿಮೆ ಗುತ್ತೇದಾರ್‌ ಕುಟುಂಬದ ಪಾಳೆಪಟ್ಟಿನಂತಿದೆ. ಶಾಸಕ ಸುಭಾಷ ಗುತ್ತೇದಾರ ಇದುವರೆಗೆ ಹಲವು ಪಕ್ಷಗಳಿಂದ ನಾಲ್ಕು ಬಾರಿ ಗೆದ್ದಿದ್ದಾರೆ. ಈ ಕ್ಷೇತ್ರದ ವಿಶೇಷವೆಂದರೆ ಇತ್ತೀಚಿನ ವರ್ಷಗಳಲ್ಲಿ ಇಲ್ಲಿನ ಜನ ಒಮ್ಮೆ ಗೆದ್ದವರನ್ನು ಇನ್ನೊಮ್ಮೆ ಸೋಲಿಸಿದೆ. ಸತತ ಅವಕಾಶವನ್ನು ಯಾರಿಗೂ ಕೊಟ್ಟಿಲ್ಲ. ಈ ಬಾರಿ ಬಿಜೆಪಿಯ ಟಿಕೆಟ್‌ ಮತ್ತೆ ಸುಭಾಷ ಗುತ್ತೇದಾರ್‌ ಅವರ ಪಾಲಾಗಿದೆ.

ಈ ಕಡೆ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿರುವ ಬಿ. ಆರ್‌. ಪಾಟೀಲ್‌ ಈ ಹಿಂದೆ ಜನತಾ ಪಕ್ಷ, ಜೆಡಿಎಸ್‌ ಹಾಗೂ ಕೆಜೆಪಿ ಮೂಲಕ ಒಟ್ಟು  ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಈ ಸಲ ಕಳೆದ ಬಾರಿ ಕಾಂಗ್ರೆಸ್‌ ಟಿಕೇಟ್‌ ಮೂಲಕ ಕೇವಲ 697 ವೋಟುಗಳ ಮೂಲಕ ಸೋತಿದ್ದ ಪಾಟೀಲರು ಈ ಬಾರಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.

ಜೆಡಿಎಸ್‌ ಈ ಬಾರಿ ಇಲ್ಲಿ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಕಳೆದ ಬಾರಿ ಎರಡು ಸಾವಿರ ಚಿಲ್ಲರೆ ಮತ ಗಳಿಸಿದ್ದ ಜೆಡಿಎಸ್‌ ಕ್ಷೇತ್ರದಲ್ಲಿ ಒಂದಷ್ಟು ಹೆಸರಿರುವ ಕೊರೋನಾ ಕಾಲದಲ್ಲಿ ʼಸಮಾಜ ಸೇವೆʼ ಮಾಡಿರುವ ಶ್ರೀಮತಿ. ಮಹೇಶ್ವರಿ ವಾಲೆಯವರಿಗೆ ಟಿಕೆಟ್‌ ನೀಡಿದೆ. ಲಿಂಗಾಯತ ಸಮುದಾಯದವರಾದ ಇವರು ಬಿ ಆರ್‌ ಪಾಟೀಲರ ವೋಟುಗಳನ್ನು ಕಸಿಯಬಹುದು ಎನ್ನುವುದು ಜನರ ಅಭಿಮತ. ಆಮ್‌ ಆದ್ಮಿ ಪಕ್ಷ ತನ್ನ ಹುರಿಯಾಳಾಗಿ ಶಿವಕುಮಾರ್ ಖೇಡ್ ಅವರನ್ನು ಪರಿಚಯಿಸಿದೆ.

ಕಲಬುರಗಿ ಉತ್ತರ: ಖಮರುಲ್‌ ಇಸ್ಲಾಂ ಅವರ ಅನುಪಸ್ಥಿತಿಯಲ್ಲಿ ಕಾಂಗ್ರೆಸ್‌ ಕಾದಾಟ

ಈ ಕ್ಷೇತ್ರ ಸ್ಥಾಪನೆಯಾದಾಗಿನಿಂದಲೂ ಇದು ಖಮರುಲ್‌ ಇಸ್ಲಾಂ ಅವರು ಗೆದ್ದುಕೊಂಢು ಬಂದ ಕ್ಷೇತ್ರ. ಇವರು ಎಸ್‌ಎಂ ಕೃಷ್ಣ ಅವರ ಸಂಪುಟದಲ್ಲಿ ಸಚಿವರಾಗಿದ್ದವರು. ಅವರು ಮರಣ ಹೊಂದಿದ ನಂತರ ಅವರ ಪತ್ನಿ ಖನೀಜ್‌ ಫಾತೀಮಾ ಅವರಿಗೆ ಪಕ್ಷ ಟಿಕೆಟ್‌ ನೀಡಿದೆ, 2018ರ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಅವರಿಗೇ ಈ ಬಾರಿಯ ಟಿಕೆಟ್‌ ಕೂಡಾ ದೊರಕಿದೆ.

ಚಂದ್ರಕಾಂತ್ ಬಿ ಪಾಟೀಲ ಬಿಜೆಪಿಯಿಂದ ಸ್ಪರ್ಧೆಗಿಳಿದಿದ್ದು ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಇವರು 5,940 ಮತಗಳ ಅಂತರದಿಂದ ಸೋತಿದ್ದರು.

ಇನ್ನು ಆಮ್‌ ಆದ್ಮಿ ಪಕ್ಷದಿಂದ ಸಯ್ಯದ್‌ ಸಜ್ಜಾದ್‌ ಅಲಿ ಎನ್ನುವವರು ಸ್ಪರ್ದಿಸಿದ್ದರೆ, ಜೆಡಿಎಸ್‌ ಪಕ್ಷದ ಟಿಕೆಟಿನಡಿ ನಾಸಿರ್‌ ಹುಸೇನ್‌ ಸ್ಪರ್ಧಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು