ನ್ಯೂಯಾರ್ಕ್: ಭಾರತೀಯ ಮೂಲದ ರಾಜಕಾರಣಿಯೊಬ್ಬರ ವಿರುದ್ಧ ಅಮೆರಿಕದಲ್ಲಿ ಜೂಜಾಟದ ಪ್ರಕರಣ ದಾಖಲಾಗಿದೆ ಎಂದು ನ್ಯೂಜೆರ್ಸಿ ಅಟಾರ್ನಿ ಜನರಲ್ ಮ್ಯಾಥ್ಯೂ ಪ್ಲಾಟ್ಕಿನ್ ಹೇಳಿದ್ದಾರೆ.
ಭಾರತೀಯ ಮೂಲದ ಪುರಸಭೆ ಸದಸ್ಯ ಆನಂದ್ ಶಾ ಗ್ಯಾಂಬ್ಲಿಂಗ್ ಸೇರಿದಂತೆ ಹಲವಾರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಜೂಜಾಟ, ಹಣ ವರ್ಗಾವಣೆ ಮತ್ತು ಇತರ ಅಪರಾಧಗಳಲ್ಲಿ ಭಾಗಿಯಾಗಿರುವ 39 ಜನರಲ್ಲಿ ಆನಂದ್ ಒಬ್ಬರು. ರಾಜ್ಯದ 12 ಸ್ಥಳಗಳಲ್ಲಿ ದಾಳಿ ನಡೆಸಿದ ನಂತರ ಈ ಆರೋಪಗಳನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ನ್ಯೂಯಾರ್ಕ್ ಉಪನಗರ ಪ್ರಾಸ್ಪೆಕ್ಟ್ ಪಾರ್ಕ್‌ನಲ್ಲಿ ಒಂದು ಬಾರಿಗೆ ಪುರಸಭೆಯ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದ್ದ ಶಾ, ಈಗ ಎರಡನೇ ಅವಧಿಗೆ ಸೇವೆ ಸಲ್ಲಿಸುತ್ತಿದ್ದಾರೆ.
ಫ್ಲೋರಿಡಾದ ಲಾಂಗ್‌ವುಡ್‌ನಲ್ಲಿ ವಾಸಿಸುವ ಮತ್ತೊಬ್ಬ ಭಾರತೀಯ-ಅಮೆರಿಕನ್ ವ್ಯಕ್ತಿ ಸಮೀರ್ ಎಸ್. ನಾಡಕರ್ಣಿ ಅವರ ಮೇಲೆ ಸ್ಪೋರ್ಟ್ ಬುಕ್ ಸಬ್-ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆರೋಪ ಹೊರಿಸಲಾಗಿದೆ.
ಪ್ಲಾಟ್ಕಿನ್ ಕಚೇರಿ ಬಹಿರಂಗಪಡಿಸಿದ ವಿವರಗಳ ಪ್ರಕಾರ, ಅಮೆರಿಕದ ಅತ್ಯಂತ ಅಪಾಯಕಾರಿ ಮಾಫಿಯಾ ಗುಂಪುಗಳಲ್ಲಿ ಒಂದಾದ “ಲೂಸಿಸ್ ಕ್ರೈಮ್ ಫ್ಯಾಮಿಲಿ” ಎಂಬ ಸಂಘಟನೆಯೊಂದಿಗೆ ಆನಂದ್ ಅಕ್ರಮ ಪೋಕರ್ ಗೇಮ್ಸ್ ಮತ್ತು ಆನ್‌ಲೈನ್ ಸ್ಪೋರ್ಟ್ಸ್‌ಬುಕ್ (ಗ್ಯಾಂಬ್ಲಿಂಗ್) ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆನ್‌ಲೈನ್ ಸ್ಪೋರ್ಟ್ಸ್ ಬುಕ್ ವಿವಿಧ ಕ್ರೀಡೆಗಳಿಗೆ ಸಂಬಂಧಿಸಿದ ಪಂದ್ಯಾವಳಿಗಳ ಮೇಲೆ ಬೆಟ್ಟಿಂಗ್ ಆಡಲು ಅವಕಾಶ ನೀಡುತ್ತವೆ. ಇದರಲ್ಲಿ ಸರಿಸುಮಾರು $3 ಮಿಲಿಯನ್ ತನಕ ಬೆಟ್ಟಿಂಗ್ ಆಡಬಹುದು. ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುವ ಹಲವಾರು ರೆಸ್ಟೋರೆಂಟ್‌ಗಳು ಮತ್ತು ಸೋಷಿಯಲ್ ಕ್ಲಬ್‌ಗಳ ಸೋಗಿನಲ್ಲಿ ಈ ಸಮಾಜವಿರೋಧಿ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನರ ಪರವಾಗಿ ಮತ್ತು ಜವಾಬ್ದಾರಿಯುತ ಸ್ಥಾನಗಳಿಗೆ ಆಯ್ಕೆಯಾದ ನಾಯಕರ ಈ ನಡವಳಿಕೆಯು ಜನರಿಗೆ ನಾಯಕರ ಮೇಲಿನ ನಂಬಿಕೆಯನ್ನು ಕುಗ್ಗಿಸುತ್ತದೆ ಎಂದು ಮ್ಯಾಥ್ಯೂ ಪ್ಲಾಟ್ಕಿನ್ ನಿರಾಶೆ ವ್ಯಕ್ತಪಡಿಸಿದ್ದಾರೆ.