Saturday, June 22, 2024

ಸತ್ಯ | ನ್ಯಾಯ |ಧರ್ಮ

ಗಣಪತಿ: ಬಂಡಾಯದ ದಳಪತಿ!

ಗಣಪತಿ ಕಾಲ್ಪನಿಕ ದೇವರು, ಬಾಹ್ಯ ವಸ್ತುಗಳಿಂದ ಮಾಡಿದ ದೇವರುಗಳು ದೇವರಲ್ಲ, ಮನೆಗಳಲ್ಲಿ ಅಥವಾ ಯಾವುದೇ ಸಮಾರಂಭಗಳಲ್ಲಿ ಮೊದಲು ಗಣಪತಿ ಪೂಜೆ, ಸ್ತೋತ್ರ ಶ್ಲೋಕ ಪಠಿಸಬೇಕು ಎಂಬುದು ಹಲವರ ನಂಬಿಕೆಯಾಗಿದ್ದು, ಅದರ ಬದಲು ವಚನಗಳನ್ನು ಪ್ರಾರ್ಥನೆಯಂತೆ ಪಠಿಸಬೇಕು ಎಂಬ  ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯ ಹೇಳಿಕೆ ಭಾರೀ ಸದ್ದು ಮಾಡುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪರ-ವಿರೋಧದ ಚರ್ಚೆಗಳು ಆಗುತ್ತಿವೆ. ಈ ಹಿನ್ನೆಲೆಯಲ್ಲಿ, ಯೋಗೇಶ್‌ ಮಾಸ್ಟರ್‌ ಬರೆದಿರುವ ಢುಂಢಿ ಕಾದಂಬರಿಯ ನಾಯಕ ಗಣಪತಿಯ ಚಿತ್ರಣ ಇಲ್ಲಿದೆ. ಇದು ಲೇಖನದ ಎರಡನೆಯ ಭಾಗ.

ಇದು ಬೇಡ, ಇದು ಕೇಡು ಎಂದ ವಸ್ತುವನ್ನು ಅಥವಾ ವ್ಯಕ್ತಿಯನ್ನು ಇದೇ ಬಹುಮುಖ್ಯವಾದುದು, ಇದೇ ಶ್ರೇಷ್ಟ ಎಂದು ಹೇಳುವುದು ಏನೂ ಆಶ್ಚರ್ಯದ ವಿಷಯವಲ್ಲ ಹಾಗೂ ತಪ್ಪೂ ಅಲ್ಲ. ಯಾವುದೇ ಒಂದು ವಿಷಯವನ್ನು ನಕಾರಾತ್ಮಕ  ಗುಣದಿಂದ ಗುರುತಿಸಿದ್ದು, ತದ ನಂತರ ಅದನ್ನು ಸಕಾರಾತ್ಮಕವಾಗಿ ನೋಡುವಂತಹ ಪ್ರಕ್ರಿಯೆಯಾಗಲಿ ಅಥವಾ ಬೇರೊಂದು ಮಗ್ಗುಲಿನಿಂದ ನೋಡುವಂತಹ ದೃಷ್ಟಿಕೋನವಾಗಲಿ, ಅದು, ವಿಚಾರಗಳು ಮಡುಗಟ್ಟದೇ ವಿಕಾಸವಾಗುವಂತಹ ಸಂಕೇತವೇ. ಆದರೆ, ವಿಷಯದ ಮೇಲಾಗಿರುವ ಗುರುತುಗಳ ಚರಿತ್ರೆಯನ್ನು ಅಲ್ಲಗಳೆಯಲಾಗದು. ಪ್ರಸ್ತುತ ಯಾವುದೇ ಅಭಿಪ್ರಾಯದಲ್ಲಿ ಅಥವಾ ಮನೋಭಾವದಲ್ಲಿ ವಸ್ತುವನ್ನು ಸ್ವೀಕರಿಸಿದ್ದರೂ, ಅದರ ಬಗ್ಗೆ ಇದ್ದಂತಹ ಈ ಹಿಂದಿನ ಮನೋಭಾವವೂ ಅಸ್ತಿತ್ವದಲ್ಲಿದ್ದು, ನಂತರ ಬದಲಾಗಿದ್ದು ಎಂಬುದನ್ನು ನಿರಾಕರಿಸಲು ಹೇಗೆ ಸಾಧ್ಯ? 

ಒಂದು ಮನೋಭಾವದಿಂದ ಮತ್ತೊಂದು ಮನೋಭಾವಕ್ಕೆ ಬದಲಾಗುವಂತಹ ಪ್ರಕ್ರಿಯೆಗೆ ನಾನಾ ಕಾರಣಗಳಿರುತ್ತವೆ, ಆಶಯಗಳಿರುತ್ತವೆ ಮತ್ತು ಉದ್ದೇಶಗಳಿರುತ್ತವೆ. ಅವು ಬಹಳ ಕುತೂಹಲಕರವಾಗಿತ್ತವೆ. ಅವು ಬಹಳ ಮುಖ್ಯವಾದುದ್ದೂ ಕೂಡ. ಅದರಿಂದಲೇ ವಸ್ತುವನ್ನು ಸತ್ಕರಿಸುವ ರೀತಿ, ಸ್ವೀಕರಿಸುವ ಕಾರಣ ಅಥವಾ ನಿರಾಕರಿಸುವ ಕಾರಣ ಎಲ್ಲವೂ ತಿಳಿಯುವುದು. ಆಗಲೇ ಒಬ್ಬನ ವಸ್ತುನಿಷ್ಠತೆ, ದೃಷ್ಟಿಕೋನ, ಸೈದ್ಧಾಂತಿಕ ನಿಲುವು ಮತ್ತು ಒಲವು ಎಲ್ಲವೂ ತಿಳಿಯುವುದು.    

ವಿಘ್ನಗಳ ಒಡೆಯನು ವಿಘ್ನೇಶ್ವರ. ತೊಂದರೆಗಳನ್ನು ತಂದೊಡ್ಡುವಂತಹ ವಿಘ್ನಕರ್ತನು ಕಾಲಕ್ರಮೇಣ ತೊಂದರೆಗಳನ್ನು ನಿವಾರಿಸುವಂತಹ ವಿಘ್ನಹರ್ತನಾಗಿದ್ದು ಒಂದು ಸುದೀರ್ಘ ಪ್ರಯಾಣ. 

ಮಹಾಭಾರತದಲ್ಲಿಯೂ ಗಣೇಶ್ವರರು, ಗಣಪತಿಯರು ಅಥವಾ ವಿನಾಯಕರು ಎಷ್ಟೋ ಸಂಖ್ಯೆಯಲ್ಲಿ ಎಲ್ಲಾ ಕಡೆಗಳಲ್ಲಿಯೂ ಇರುವವರೆಂದು ಹೇಳಿದೆ. 

ಗಣಪತಿ ಕೆಡುಕಿನ ಅವತಾರವೆಂದು ಕ್ರಿಸ್ತಪೂರ್ವ 5ನೆಯ ಶತಮಾನಗಳಷ್ಟು ಹಳೆಯದಾದ ಗೃಹ್ಯ ಸೂತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಮಾನವ ಗೃಹ್ಯಸೂತ್ರ(2.14)ದಲ್ಲಿ ದೆವ್ವ ಅಥವಾ ಪಿಶಾಚಿ ಮೆಟ್ಟಿಕೊಂಡರೆ ಆಗುವಂತೆ ಈ ವಿನಾಯಕರು ಮೆಟ್ಟಿಕೊಂಡರೆ ಆಗುತ್ತದೆ ಎಂದು ತಿಳಿಸುವರು. 

“ವಿನಾಯಕರು ಆವರಿಸಿಕೊಂಡರೆ, ನೀರಿನ ಕೊಳಗಳ ಬಳಿ ಅಲೆದಾಡಿಕೊಂಡು, ಹುಲ್ಲನ್ನು ಕತ್ತರಿಸಿಕೊಂಡು, ಮೈಮೇಲೆ ಗೀಚಿಕೊಂಡಿರುವನು. ಕನಸಿನಲ್ಲಿ ನೀರನ್ನೂ, ತಲೆಬೋಳಿಸಿಕೊಂಡಿರುವ ಮನುಷ್ಯರನ್ನೂ, ಒಂಟೆಗಳನ್ನು, ಹಂದಿಗಳನ್ನು, ಕತ್ತೆಗಳನ್ನು ನೋಡುವನು. ಗಾಳಿಯಲ್ಲಿ ತೇಲಿಕೊಂಡು ಹೋಗುತ್ತಿರುವ ಹಾಗೆ ಭಾಸವಾಗುವ ಇವನಿಗೆ, ಹಿಂದಿನಿಂದ ಯಾರೋ ಬಂದು ಹಿಡಿದುಕೊಂಡು ಅಧೀನದಲ್ಲಿಟ್ಟುಕೊಳ್ಳುವಂತೆ ಭಾಸವಾಗುವುದು.” ಹಾಗೆಯೇ ಮುಂದುವರಿಸಿ, ಈ ವಿನಾಯಕರು ದೆವ್ವದಂತೆ ಮೆಟ್ಟಿಕೊಂಡಾದ ಮೇಲೆ, “ಆಳಲು ಯೋಗ್ಯವಾಗಿದ್ದರೂ ರಾಜಕುಮಾರನು ಸಿಂಹಾಸನವೇರನು. ಕನ್ಯೆಯು ಸುಲಕ್ಷಣವಾಗಿದ್ದರೂ ಅವಳಿಗೆ ಮದುವೆಯಾಗದು. ಹೆಣ್ಣು ಫಲವತ್ತಾಗಿದ್ದರೂ ಅವಳಿಗೆ ಮಕ್ಕಳಾಗದು. ಬೋಧಿಸಲು ಯೋಗ್ಯವಾಗಿರುವ ಗುರುವು ಶಿಷ್ಯರನ್ನು ಪಡೆಯನು. ವಾಣಿಜ್ಯ ಮತ್ತು ಕೃಷಿ ಯಶಸ್ವಿಯಾಗದು.” 

ನೀತಿಶಾಸ್ತ್ರವನ್ನು ಹೇಳುವ ಯಾಜ್ಞವಲ್ಕ್ಯನೂ ತನ್ನ ಸ್ಮೃತಿಯಲ್ಲಿ (1.271) ರುದ್ರ ಮತ್ತು ಬ್ರಹ್ಮರಿಂದ ನೇಮಿತವಾದ ವಿನಾಯಕನು ಗಣಗಳಿಗೆ ಒಡೆಯನಾಗಿದ್ದು, ತೊಂದರೆಗಳನ್ನು ತಂದೊಡ್ಡುವನು ಎಂದೇ ಪ್ರಾರಂಭಿಸುವನು. ಮಾನವ ಗೃಹ್ಯಸೂತ್ರ ಮತ್ತು ಯಾಜ್ಞವಲ್ಕ್ಯ ಸ್ಮೃತಿಗಳ ನಡುವೆ ಮನುಸ್ಮೃತಿಯೆಂಬುದೊಂದಿದೆ. ಈ ಗ್ರಂಥದಲ್ಲಿ(3.164) ಮನು ಗಣಹೋಮದಲ್ಲಿ ಭಾಗವಹಿಸಿರುವವರನ್ನು ಶ್ರಾದ್ಧದ ಊಟಕ್ಕೂ ಕರೆಯಬಾರದೆಂದು ಹೇಳುವನು. ಹಾಗೆಯೇ ಗಣಪತಿಯು ಶೂದ್ರರ ದೇವತೆಯೆಂದೂ ಹೇಳುವನು (ಗಿಕಿ1931-2. 475). 

ಶೂದ್ರರೆಂದರೆ, ಮನುವು ಹೇಳುವಂತೆ (1ಂ.125) ಕೇವಲ ಉಟ್ಟು ಬಿಟ್ಟ ಬಟ್ಟೆಯನ್ನು ತೊಡುವವರು, ಉಂಡು ಬಿಟ್ಟ ಎಂಜಲೂಟವನ್ನು ತಿನ್ನುವ ಅಧಿಕಾರದವರು. 

ಯಾಜ್ಞವಲ್ಕ್ಯ, ಮನು ಮತ್ತು ಕಾತ್ಯಾಯನರಂತಹ ಬ್ರಾಹ್ಮಣ ಶಾಸ್ತ್ರಕಾರರು ತಮ್ಮ ಕೃತಿಗಳಲ್ಲಿ ಸ್ಪಷ್ಟವಾಗಿ ಗಣಪತಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮತ್ತು ನಿರೂಪಣೆಗಳನ್ನು ತಿಳಿಸಿದ್ದಾರೆ. ಇದು ಅವರ ವೈಯಕ್ತಿಕ ಅಭಿಪ್ರಾಯವೆಂದು ನಾವು ತಿಳಿದು ತಳ್ಳಿಹಾಕಿಬಿಡಲು ಸಾಧ್ಯವಿಲ್ಲ. ಯಾಕೆಂದರೆ, ಅವು ಕಾಲ್ಪನಿಕ ಕಾದಂಬರಿಗಳೋ, ಕಥೆಗಳೋ ಅಲ್ಲ. ಬದಲಾಗಿ ನೀತಿಶಾಸ್ತ್ರಗಳು, ಸಮಾಜವನ್ನು ಮತ್ತು ಸಮೂಹವನ್ನು ಕ್ರಿಯೆಗೆ ಹಚ್ಚುವಲ್ಲಿ ಬಹು ಮಾನ್ಯವಾಗುವಂತಹ ನಿರ್ದೇಶನಾಗ್ರಂಥಗಳು. 

ಮತ್ತೊಂದು ಮಗ್ಗುಲಿನಿಂದ ನೋಡುವುದಾದರೆ, ಅವು ಆಗಿನ ಕಾಲದ ಬ್ರಾಹ್ಮಣ್ಯ ವರ್ಗದ ಸಾಮೂಹಿಕ ಅಭಿಪ್ರಾಯವೋ, ನಿಲುವೋ ಅಥವಾ ದೃಷ್ಟಿಕೋನವೋ ಆಗಿರಬಹುದು. ಯಾವುದೇ ಒಂದು ಪ್ರಭಾವಶಾಲಿಯಾದ ಸಮೂಹವು, ಅದರಲ್ಲೂ ಬ್ರಾಹ್ಮಣ್ಯದ ಪಂಗಡವು ಯಾರೊ ಒಬ್ಬಾತನಿಗೆ ನೀನೊಂದು ನೀತಿಶಾಸ್ತ್ರವೊಂದನ್ನು ಬರೆ ಇನ್ನು ಮುಂದೆ ಅವನ್ನು ನಾವು ಅನುಸರಿಸುತ್ತೇವೆ ಎಂದು ಅಧಿಕಾರ ಕೊಟ್ಟುಬಿಡುವುದಿಲ್ಲ. ಅವರಲ್ಲಿ ನಡೆದು ಬರುತ್ತಿರುವ ವಿಚಾರ, ಆಚಾರ ಮತ್ತು ಪದ್ಧತಿಗಳನ್ನು ಗಮನಿಸುತ್ತಾ, ಅವುಗಳನ್ನು ಕ್ರೋಢೀಕರಿಸುತ್ತಾ ಅದರ ನಿಲುವಿಗೆ ಬದ್ಧವಾಗಿಯೇ ನೀತಿಶಾಸ್ತ್ರವನ್ನು ರಚಿಸುವರು. ಪರಂಪರೆಯಾಗಿ ನಡೆದುಕೊಂಡು ಬಂದಿರುವಂತಹ ಪದ್ಧತಿಗಳನ್ನು ಸೂಚ್ಯವಾಗಿ ತಿಳಿಸಿರಲಿಕ್ಕೂ ಸಾಧ್ಯ. ಹಿಂದೂ ಧರ್ಮವನ್ನು ಪ್ರತಿನಿಧಿಸುವ ಗ್ರಂಥಗಳಾದ ಯಾಜ್ಞವಲ್ಕ್ಯ ಸ್ಮೃತಿ, ಮಾನವ ಗೃಹ್ಯಸೂತ್ರಗಳಲ್ಲಿ ಮತ್ತು ಮನು ಗಣಪತಿಯ ಬಗ್ಗೆ ಅಸಹನೆ, ಕಟುತ್ವ ಮತ್ತು ದ್ವೇಷವನ್ನು ವ್ಯಕ್ತಪಡಿಸಿದಂತೆ, ಅದೇ ಮುಂದುವರೆದು ಬೌದ್ಧಾಯನ ಬರೆದಿರುವಂತಹ ಧರ್ಮಸೂತ್ರದಂತಹ ಬೌದ್ಧಗ್ರಂಥಗಳಲ್ಲಿಯೂ ಗಣಪತಿಯ ಬಗ್ಗೆ ದ್ವೇಷವನ್ನು ಮತ್ತು ಅಸಹನೆಯನ್ನು ವ್ಯಕ್ತಪಡಿಸಿರುವ ಉದಾಹರಣೆಗಳು ಉಂಟು. 

ನೀತಿ ನೇಮಗಳ ಬೌದ್ಧ ದೇವತೆಯಾದ ಮಹಾಕಾಲನು ತನ್ನ ಪಾದಗಳ ಕೆಳಗೆ ಗಣಪತಿಯನ್ನು ಮಣಿಸಿರುವ ನೇಪಾಳದ ಬೌದ್ಧ ವಿಗ್ರಹಗಳಿವೆ. ಹಾಗೆಯೇ ಬೌದ್ಧರ ದೇವತೆಯಾದ ಮಂಜುಶ್ರೀಯು ಗಣಪತಿಯನ್ನು ತನ್ನ ಕಾಲ ಕೆಳಗೆ ಹಾಕಿಕೊಂಡಿರುವಂತಹ ಶಿಲ್ಪಗಳೂ ಅಪರೂಪವೇನಲ್ಲ. ಮಹಾಕಾಲ ದೇವತೆಯ ಪರಿಕಲ್ಪನೆಯು ಆಗಿನ ಕಾಲದ ಮೇಲ್ವರ್ಗದವರೊಂದಿಗೆ ತಳುಕು ಹಾಕಿಕೊಂಡಿದ್ದಂತಹ ನಿರೂಪಣೆಗಳು ಸಾಕಷ್ಟಿವೆ. 

ಇನ್ನು ಪುರಾಣಗಳ ಕಡೆ ಹೊರಳೋಣ. 

ಗಣಪತಿಯನ್ನು ಕುರಿತಂತೆ, ಗಣಪತಿಯ ಹುಟ್ಟಿನ ಕುರಿತಂತೆಯೂ ಹಲವು ಪುರಾಣಗಳಲ್ಲಿ ಹಲವು ರೀತಿಗಳಲ್ಲಿ ಹೇಳಲ್ಪಟ್ಟಿವೆ. ಆದರೆ, ಜನಪ್ರಿಯವಾದ ಹಾಗೂ ಹೆಚ್ಚು ಪ್ರಚಲಿತದಲ್ಲಿರುವ ಕಥೆಯನ್ನೇ ನಾವು ಪರಿಗಣಿಸೋಣ. ಪಾರ್ವತಿ ತನ್ನ ಮೈಯ ಮಲದಿಂದ ಅಥವಾ ಮಣ್ಣಿಂದ ಮೂರ್ತಿಯನ್ನು ಮಾಡಿ ಅದಕ್ಕೆ ಜೀವತುಂಬಿ ತನ್ನ ಸ್ನಾನದ ಮನೆಗೆ ಕಾವಲಿಗೆ ನಿಲ್ಲಿಸುವುದು. ಆ ನಂತರ ಶಿವ ಬರುವುದು. ಇವನು ತನ್ನ ತಾಯಿಯ ಆಜ್ಞೆಯಂತೆ ಶಿವನನ್ನೇ ತಡೆಯುವುದು. ನಂತರ ಯುದ್ಧವಾಗುವುದು. ಶಿವನ ತ್ರಿಶೂಲಕ್ಕೆ ಬಾಲಕನ ಶಿರ ಹರಿದು ಬೀಳುವುದು. ಪಾರ್ವತಿಯ ಗೋಳು. ಉತ್ತರಕ್ಕೆ ತಲೆ ಹಾಕಿ ಮಲಗಿರುವವರ ತಲೆ ತರುವ ಆಜ್ಞೆ. ಹಾಗೆ ಹುಡುಕಿದಾಗ ಯಾರೂ ಸಿಗದೇ ಆನೆಯ ತಲೆಯನ್ನು ತರಿದು ತಂದು ಬಾಲಕನ ಮುಂಡಕ್ಕೆ ಅಂಟಿಸುವುದು. ಆಪರೇಷನ್ ಸಕ್ಸಸ್ ಆಗಿ ನಮಗೆ ಗಜವದನನಾದ ಗಣಪತಿಯು ದೊರಕುವುದು. 

ಸರಿ, ಪುರಾಣದ ಮಾತ್ರವಲ್ಲ, ನೈಜ ಚಿತ್ರಣದ ಕಥೆಯನ್ನು ಓದುವಾಗಲೂ, ಆ ಕಥೆಗಳಲ್ಲಿ ಅಮೂರ್ತವಾದ ಸಿದ್ಧಾಂತಗಳು, ನಿಲುವುಗಳು, ಸಾಂಸ್ಕೃತಿಕ ಪ್ರಭಾವಗಳು, ಸಾಮಾಜಿಕ ಸ್ಥಿತಿಯ ಪ್ರತಿಫಲನಗಳು ಮತ್ತು ವೈಯಕ್ತಿಕ ಒಲವುಗಳು ಹಾಗೂ ಅಭಿರುಚಿಗಳು ಅವುಗಳಲ್ಲಿ ಹಾಸುಹೊಕ್ಕಾಗಿರುತ್ತವೆ. ಯಾವುದೇ ಕಥೆಯನ್ನು ನೇರವಾಗಿ ಪದಗಳನ್ನು ಓದಿ ಹಾಗೆಯೇ ಗ್ರಹಿಸುವುದೆಂದರೆ, ತೊಟ್ಟಿರುವ ಉಡುಪಿನ ಹಿಂದೆ ದೇಹವೇ ಇಲ್ಲ ಎಂಬಷ್ಟೇ ಆಗುತ್ತದೆ. ಪದಗಳೆಂಬುವು ಭಾವ ಹಾಗೂ ವಿಚಾರದ ಸಂಕೇತಗಳು. ಅವುಗಳ ಜೋಡಣೆಗಳೆಂದರೆ ಭಾವಾರ್ಥಗಳ ಮತ್ತು ವಿಚಾರಗಳ ಹರವುಗಳು ಮತ್ತು ಚಲನೆಗಳಾಗಿ ವಾಕ್ಯಗಳಾಗುವವು. ಅವೆಲ್ಲಾ ವಾಕ್ಯಗಳ ಸಮಗ್ರ ಸಂಗ್ರಹವು ಒಂದು ಬಗೆಯ ಚಿತ್ರಣವನ್ನು ಒದಗಿಸುತ್ತದೆ. ಇಷ್ಟು ಕೆಲಸವಾಗುವಂತಹ ಬರವಣಿಗೆಯನ್ನು ಮತ್ತು ಓದುವಿಕೆಯನ್ನು ಸಹನೆಯಿಂದ ಗ್ರಹಿಸಲಾಗದ ಮನಃಸ್ಥಿತಿಯವರಿಗೆ ಯಾವುದೇ ಓದು ಮತ್ತು ಬರವಣಿಗೆ ಸಾಧ್ಯವೂ ಇಲ್ಲ. 

ರಸಗ್ರಹಣವೋ, ಅರ್ಥಗ್ರಹಣವೋ… ಹಾಗೆಂದರೆ ಏನು? ಅಸಹನೀಯರಿಗೆ ಅವೆಲ್ಲವೂ ಅಸ್ತಿತ್ವದಲ್ಲೇ ಇಲ್ಲ! 

ಸಂಕೇತಗಳು ಸೂಚ್ಯವಾಗಿರುತ್ತವೆ. ಕೆಲವೊಮ್ಮೆ ಸರಳವಾಗಿದ್ದರೆ, ಕೆಲವೊಮ್ಮೆ ಒಗಟಿನ ರೀತಿಯಲ್ಲಿ ಮಾರ್ಮಿಕವಾಗಿರುತ್ತವೆ. ಯಾವುದಕ್ಕೂ ಪದಗಳ ಹಿಂದಿನ ಅಮೂರ್ತಭಾವವನ್ನು ಪರಿಗ್ರಹಿಸುವ ಸೂಕ್ಷ್ಮ ಮನಃಸ್ಥಿತಿ ತಕ್ಕ ಮಟ್ಟಿಗಾದರೂ ಅಗತ್ಯ. 

ಬ್ರಾಹ್ಮಣ್ಯದ ಮುಂದಾಳುಗಳು ಅಂದು ಸೂಚಿಸಿರುವಂತೆ ಕೇಡಿನ ಅಪರಾವತಾರವಾದ ಗಣಪತಿ ಬರಿಯ ಕ್ಷುದ್ರನಷ್ಟೇ ಅಲ್ಲ, ಕೆಳವರ್ಗದವನೂ ಕೂಡ. ಅಂದು, ಪ್ರಾಯಶಃ ಇಂದೂ ಅವರಿಗೆ ಅಪಾರ ಅಸಹನೆಯ ಕಿರಿಕಿರಿಯಾಗಿರುವ ಶೂದ್ರ ವರ್ಗವು ಅವರಿಂದ ಸಹಜವಾಗಿಯೇ ತಿರಸ್ಕೃತಗೊಳ್ಳಲಾಗುವ, ಒಪ್ಪಿಕೊಳ್ಳಲಾಗದಂತಹುದ್ದೇ ಆಗಿದೆ. ಅಂತಹ ವರ್ಗದಲ್ಲಿ ಸೂಚಿಸಿರುವಂತಹ ಗಣಪತಿಯನ್ನು ಪುರಾಣದ ಕತೆಗಳಲ್ಲಿರುವ ಸಂಕೇತದೊಡನೆ ಸಮೀಕರಿಸಿದಾಗ, ಅದು ಪರ್ವತ ರಾಜನ ಮಗಳು ಪಾರ್ವತಿಯ, ಗಿರಿಕನ್ಯೆಯಾದ ಗಿರಿಜೆಯ ಮೈಯ ಮಲಕ್ಕೆ ಅಥವಾ ಮಣ್ಣಿಗೆ ಒಯ್ಯಲಾಗುತ್ತದೆ. ಹಾಗೆ ಮೂರ್ತೀಕರಿಸಿದ ಗಣಪತಿ ಸಂಘರ್ಷದ ನಂತರ ಗಣಪತಿಯಾಗಿ ಅಧಿಕಾರಕ್ಕೆ ಬರುತ್ತಾನೆ. ಪ್ರಕೃತಿ, ಅರಣ್ಯ, ಪರ್ವತಗಳನ್ನೇ ಸಂಕೇತಿಸುವ ಮಾತೃಪ್ರಧಾನ ಪಾರ್ವತಿಯ ಸಂಕೇತವು ಗಣಪತಿಯನ್ನು ಪೋಷಿಸಿದ್ದು, ಬೆಳೆಸಿದ್ದು ಢಾಳಾಗಿ ಕಾಣುತ್ತದೆ. ಹಾಗೆ ಬೆಳೆದಿರುವ ಗಣಪತಿಯು ತನ್ನ ಬ್ರಾಹ್ಮಣ್ಯಾಧಿಕ್ಯದ ವಿರುದ್ಧದ ಮೂಲವಾದ ಶೂದ್ರ ಅಥವಾ ಅರಣ್ಯಕ-ಆದಿವಾಸಿಗಳೊಂದಿಗೇ ಗುರುತಿಸಲ್ಪಟ್ಟಿದ್ದು, ವೈದಿಕರೊಂದಿಗೆ ಸಂಘರ್ಷವನ್ನು ಸಹಜವಾಗಿಯೇ ಹೊಂದಿರುತ್ತಾನೆ. 

ಶಿವ ಮತ್ತು ಪಾರ್ವತಿಯರು ಏಕಾಂತದಲ್ಲಿರುವಾಗ ಅಧಿಕ ಪ್ರಸಂಗದಲ್ಲಿ ವರ್ತಿಸುತ್ತಾ ಹೋಗುವ ಪರಶುರಾಮನ ಜೊತೆ ಗಣಪತಿಯು ಯುದ್ಧವಾಡುತ್ತಾನೆ. ಆ ಕಾಳಗದಲ್ಲಿ ಗಣಪತಿಯ ದಂತವೊಂದು ಮುರಿದು ಅವನು ಏಕದಂತನಾಗುತ್ತಾನೆ. 

ಬ್ರಹ್ಮವೈವರ್ತ ಪುರಾಣದ ಕಥೆಯಲ್ಲಿ ಸೂಚ್ಯವಾಗಿರುವ ಈ ವಿಷಯವನ್ನು ಗಮನಿಸಿದರೆ, ಇದು ಇನ್ನೂ ಸ್ಪಷ್ಟವಾಗುತ್ತದೆ. ಪರಶುರಾಮ ಶಾಸ್ತ್ರಪಾರಂಗತನಾಗಿದ್ದು, ಶಸ್ತ್ರವನ್ನು ಹಿಡಿದು, ತನ್ನ ಬ್ರಾಹ್ಮಣ್ಯದ ಅಧಿಪತ್ಯವನ್ನು ಕೆಳವರ್ಗದವರ ಮೇಲೆ ಸ್ಥಾಪಿಸುವವನಾಗಿ ಕಂಡು ಬಂದರೆ, ಗಣಪತಿ ಅವನೊಡನೆ ಹೋರಾಡಿ, ತನ್ನ ಒಂದು ದಂತವನ್ನು ಮುರಿದುಕೊಂಡು, ಶಿವನ ಮೇಲಿನ ಗೌರವದಿಂದ ಅಂದರೆ, ತನ್ನಂತದ್ದೇ ಬುಡಕಟ್ಟಿನ ಒಡೆಯನ ಸಂಸರ್ಗವು ಆ ಬ್ರಾಹ್ಮಣನೊಡನೆ ಇರುವುದರಿಂದ ತಾನು ಸುಮ್ಮನಾಗಿ ಬಿಡುವ ರಾಜೀಮನೋಭಾವವಿದೆ. 

ಅದೇನೇ ಇರಲಿ, ಸಂಘರ್ಷವೊಂದು ಎದ್ದು ಕಾಣುವುದನ್ನು ನಾವು ತಳ್ಳಿ ಹಾಕಲು ಸಾಧ್ಯವೇ ಇಲ್ಲ. ತದ ನಂತರದ ಕಾಲಘಟ್ಟದಲ್ಲಿ ಇದೇ ಬ್ರಾಹ್ಮಣ್ಯ ವರ್ಗವು ಅದೇ ಗಣಪತಿಯನ್ನು ಆದಿಪೂಜಿತನಾಗಿ ಕಂಡು ಆರಾಧಿಸುವುದು ಯಾರಿಗೇನು ಆಕ್ಷೇಪ? ಆದರೆ, ಇತಿಹಾಸವಾಗಿರುವ ಕುರುಹನ್ನು ಅಳಿಸುವುದಾಗಲಿ, ನಿರಾಕರಿಸುವುದಾಗಲಿ, ಅದರಿಂದ ತಪ್ಪಿಸಿಕೊಳ್ಳುವುದಾಗಲಿ ಮೊಂಡುತನದ ಅವಿವೇಕವಾಗಿ ಕಾಣುವುದು. ಅದರ ಬದಲಿಗೆ, ಆ ಬಗೆಯ ಆಧಾರಗಳು ಹೇಗೆ ಸತ್ಯವಾಗಿದ್ದವು, ಅಥವಾ ಹೇಗೆ ಮಿಥ್ಯವಾಗಿದ್ದವು? ಯಾವ ಬಗೆಯ ತಳದಿಂದ ಅಂತಹ ಚಿಂತನೆಗಳು ಒಡಮೂಡಿರಬಹುದು ಎಂಬ ಜಿಜ್ಞಾಸೆ ನಮ್ಮ ಪರಿಕಲ್ಪನೆಗಳನ್ನು ಗಟ್ಟಿಗೊಳಿಸುತ್ತವೆ. ಜೊತೆಗೆ ವೈಚಾರಿಕ ಸಾಮರಸ್ಯವೂ ಉಂಟಾಗುತ್ತದೆ. ಇಲ್ಲವಾದರೆ ಆಳುವ, ದಬ್ಬಾಳಿಕೆಯ ವರ್ಗದಲ್ಲಿ ಗುರುತಿಸಲ್ಪಟ್ಟು, ಸ್ವಾರ್ಥಪರರು, ಅಧಿಕಾರಿಶಾಹಿಗಳು, ಅಹಂಕಾರಿಗಳು, ಕುತಂತ್ರಿಗಳು ಎಂದೆಲ್ಲಾ ಮಾಡುವಂತಹ ಆಪಾದನೆಗಳೆಲ್ಲವೂ ನಿಜವೇನೋ ಎನಿಸುವಂತೆ ಮಾಡಿಬಿಡುತ್ತಾರೆ. 

ತಮ್ಮ ಕೃತಿಗಳಲ್ಲಿ ಗಣಪತಿಯನ್ನು ಕೀಳಾಗಿ ನೋಡಿದ ಉಲ್ಲೇಖಗಳು ಈಗ ಸಂಖ್ಯಾ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಅದೇ ವರ್ಗದವರಿಂದಲೇ ಅದೇ ಗಣಪತಿಯನ್ನು ಬಹುಮಾನ್ಯ ಮಾಡಿರುವ ಕೃತಿಗಳು ಬಹು ಸಂಖ್ಯೆಯಲ್ಲಿವೆ. ವಿಷಯ ಅದಲ್ಲ. ಆದರೆ, ಕೃತಿ ರಚನೆಯ ಚರಿತ್ರೆಯಲ್ಲಿ ಅಂತಹ ಗುರುತುಗಳು ಮೂಡಿರುವುದಕ್ಕೆ ಕಾರಣವಿರುತ್ತದೆ ಎಂಬುದಷ್ಟೇ ಈಗಿನ ಅಧ್ಯಯನ. ಆ ಬಗೆಯ ಅಧ್ಯಯನಗಳಲ್ಲಿ ದೊರಕುವಂತಹ ವಿಷಯಗಳು ತಪ್ಪುಗಳನ್ನು, ಭಿನ್ನತೆಗಳನ್ನು ಸರಿಪಡಿಸಿಕೊಳ್ಳಲು ನೆರವಾಗಬೇಕೇ ಹೊರತು, ಅವುಗಳನ್ನು ನಿರಾಕರಿಸುತ್ತಾ ಮೊಂಡು ಹಟಮಾಡುವುದು ಸಾಮರಸ್ಯವನ್ನು ಬೆಳೆಸುವಲ್ಲಿ, ಸಂಸ್ಕೃತಿಯನ್ನು ಅರಳಿಸುವಲ್ಲಿ, ಸಾಮಾಜಿಕವಾಗಿ ಬೆರೆಯುವಲ್ಲಿ ಮತ್ತು ರಾಜಕೀಯವಾಗಿ ಬೆಸೆಯುವಲ್ಲಿಯೂ ಒಳ್ಳೆಯ ಲಕ್ಷಣಗಳಲ್ಲ. ಭೂತದೊಡನೆ ಗುದ್ದಾಡಿಕೊಂಡು, ವರ್ತಮಾನವನ್ನು ಕಳೆದುಕೊಂಡು, ಭವಿಷ್ಯವನ್ನು ನಾಶಮಾಡಿಕೊಳ್ಳುವುದು ಯಾವುದೇ ಸಮಾಜಕ್ಕೆ ಮತ್ತು ಸಂಸ್ಕೃತಿಗೆ ಬೇಕಾಗಿರುವುದೇನಲ್ಲವಲ್ಲ!

ಅರಣ್ಯಕರ ಗಣಗಳು, ಪ್ರಾಣಿಗಳ ಸಂಕೇತಗಳ ಬುಡಕಟ್ಟುಗಳು ಗೋತ್ರಗಳಾಗಿದ್ದು, ಅನಾರ್ಯ ಮೂಲದವರುಗಳು ಬ್ರಾಹ್ಮಣಾಧಿಕ್ಯದ ಶ್ರೇಣಿಯಲ್ಲಿ ಗುರುತಿಸಿಕೊಂಡಿದ್ದು; ಇತ್ಯಾದಿಗಳನ್ನು ಮುಂದೆ ನೋಡೋಣ.

ಯೋಗೇಶ್‌ ಮಾಸ್ಟರ್

ಕಾದಂಬರಿ, ನಾಟಕ, ಕವಿತೆ, ಮಕ್ಕಳ ಸಾಹಿತ್ಯ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯುತ್ತಿರುವವರು.

ಮೊದಲನೆಯ ಭಾಗ ಓದಿದ್ದೀರಾ? ಗಣಪತಿ: ಬಂಡಾಯದ ದಳಪತಿ !

Related Articles

ಇತ್ತೀಚಿನ ಸುದ್ದಿಗಳು