ಭಾಗ-1
ಗಣಪತಿ ಕಾಲ್ಪನಿಕ ದೇವರು, ಬಾಹ್ಯ ವಸ್ತುಗಳಿಂದ ಮಾಡಿದ ದೇವರುಗಳು ದೇವರಲ್ಲ, ಮನೆಗಳಲ್ಲಿ ಅಥವಾ ಯಾವುದೇ ಸಮಾರಂಭಗಳಲ್ಲಿ ಮೊದಲು ಗಣಪತಿ ಪೂಜೆ, ಸ್ತೋತ್ರ ಶ್ಲೋಕ ಪಠಿಸಬೇಕು ಎಂಬುದು ಹಲವರ ನಂಬಿಕೆಯಾಗಿದ್ದು, ಅದರ ಬದಲು ವಚನಗಳನ್ನು ಪ್ರಾರ್ಥನೆಯಂತೆ ಪಠಿಸಬೇಕು ಎಂಬ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯ ಹೇಳಿಕೆ ಭಾರೀ ಸದ್ದು ಮಾಡುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪರ-ವಿರೋಧದ ಚರ್ಚೆಗಳು ಆಗುತ್ತಿವೆ. ಈ ಹಿನ್ನೆಲೆಯಲ್ಲಿ, ಯೋಗೇಶ್ ಮಾಸ್ಟರ್ ಬರೆದಿರುವ ಢುಂಢಿ ಕಾದಂಬರಿಯ ನಾಯಕ ಗಣಪತಿಯ ಚಿತ್ರಣ ಇಲ್ಲಿದೆ. ಇದು ಲೇಖನದ ಮೊದಲ ಭಾಗ
ನಾನು ಢುಂಢಿ ಕಾದಂಬರಿಯನ್ನು ಬರೆದಾಗ ಗಣಪತಿಯನ್ನು ಅವಹೇಳನ ಮಾಡಿದ್ದೇನೆಂದು ಬೊಬ್ಬೆ ಇಟ್ಟವರಾರೂ ಕೃತಿಯನ್ನು ತೆರೆದ ಮನದಿಂದ ಓದಲೇ ಇಲ್ಲ ಎಂಬುದು ನನಗೆ ಆಗ ಸ್ಪಷ್ಟವಾಗಿತ್ತು. ಏಕೆಂದರೆ ಢುಂಢಿಯಲ್ಲಿ ಗಣಪತಿಯೇ ನಾಯಕ. ಬಂಡಾಯದ ನಾಯಕ. ಅತ್ಯಂತ ಗೌರವಾನ್ವಿತ ನಿಲುವಿನ ಮತ್ತು ಸ್ವಾಭಿಮಾನದ ಒಲವಿನ ಅರಣ್ಯಕನಾಗಿದ್ದು ಹೇಗೆ ಮಹಾಗಣಪತಿಯಾದನೆಂದು ಚಿತ್ರಿಸುತ್ತದೆ.
ಕಾದಂಬರಿಯು ಬೊಟ್ಟು ಮಾಡುವುದು ಆರ್ಯರ ಆಕ್ರಮಣಕಾರಿ ಧೋರಣೆಗಳ ಬಗ್ಗೆ, ಅವರ ಕುಟಿಲ ನೀತಿಗಳ ಬಗ್ಗೆ ಮತ್ತು ಭಾರತದ ಮೂಲ ನಿವಾಸಿಗಳ ಮೇಲೆ ಆಗುವ ದೌರ್ಜನ್ಯಗಳ ಬಗ್ಗೆ. ಗಣಪತಿ ಅನಾರ್ಯನೆಂದೂ, ಅದರಲ್ಲೂ ಭಾರತೀಯ ಬುಡಕಟ್ಟು ಗಣಗಳಿಗೆ ಸೇರಿದವನೆಂದು ಪ್ರತಿಪಾದಿಸುವುದೇ ಆಗಿದೆ.
ಅದೇನೇ ಇರಲಿ, ಗಣಪತಿಯ ಪರಿಕಲ್ಪನೆಯ ಹುಟ್ಟು ಮತ್ತು ಬೆಳವಣಿಗೆ ಬಗ್ಗೆ ಅನೇಕಾನೇಕ ಹಂತಗಳಿವೆ. ಅದರಲ್ಲೂ ಆತನನ್ನು ಹಿಗ್ಗಾಮುಗ್ಗ ಬಳಸಿಕೊಳ್ಳುವುದರಲ್ಲೂ ನಮ್ಮ ಜನ ಹಿಂದೆ ಬಿದ್ದಿಲ್ಲ.
ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನವದನಂ ಧ್ಯಾಯೇ ಸರ್ವವಿಘ್ನೋಪ ಶಾಂತಯೇ
ಈ ಶ್ಲೋಕದಲ್ಲಿ ವಿಘ್ನ ಎಂಬ ಪದ ಪ್ರಯೋಗವನ್ನು ಆಧರಿಸಿ ವಿಷ್ಣುವಿನ ಕುರಿತಾದ ಈ ಸ್ತುತಿಯನ್ನು ಗಣೇಶನಿಗೆ ಅರ್ಪಿಸಿ ಬಿಟ್ಟರು.
ಹಾಗಾಗಿ ವಿಷ್ಣುವಿನ ಸ್ತೋತ್ರವು ಗಣಪತಿಗೆ ಸಲ್ಲಿಸುವುದು ರೂಢಿಯಾಗಿ ಬಿಟ್ಟಿದೆ.
ಈ ಶ್ಲೋಕದ ಮೂಲ ಮತ್ಸ್ಯಪುರಾಣದಲ್ಲಿದೆ. ಕೃತಯುಗದಲ್ಲಿ ಬ್ರಹ್ಮನು ಸೃಷ್ಟಿ ಕಾರ್ಯಕ್ಕೆ ನೇಮಿಸಲ್ಪಟ್ಟಾಗ ಸೋಮಕನೆಂಬ ಅಸುರನು ವೇದಗಳನ್ನು ಅಪಹರಿಸಿಕೊಂಡು ಓಡಿ ಹೋಗುವನು. ಏನು ಮಾಡುವುದೆಂದು ತೋಚದೇ ಬ್ರಹ್ಮನು ವಿಷ್ಣುವನ್ನು ಕುರಿತು ಪ್ರಾರ್ಥಿಸುವನು. ದಶಾವತಾರದ ಮೊದಲನೆಯ ಅವತಾರವಾದ ಈ ಮತ್ಸ್ಯಾವತಾರದಲ್ಲಿ ವಿಷ್ಣುವು ರೂಪುಗೊಂಡಾಗ ಶುಕ್ಲಾಂಬರಧರಂ ವಿಷ್ಣುಂ ಶ್ಲೋಕವನ್ನು ಬ್ರಹ್ಮನು ಹೇಳುವನು ಎಂದು ಆ ಪುರಾಣದಲ್ಲಿ ಹೇಳಲಾಗುತ್ತದೆ.
ಹಾಗೆಯೇ ಮತ್ತೊಂದು ಮೂಲದಲ್ಲಿ ಗಜೇಂದ್ರನು ಮೊಸಳೆಯ ಬಾಯೊಳು ಸಿಕ್ಕಿ ತಪ್ಪಿಸಿಕೊಳ್ಳಲಾಗದೇ ಹೋದಾಗ ಈ ರೀತಿ ವಿಷ್ಣುವನ್ನು ಪ್ರಾರ್ಥಿಸಿದನೆಂದೂ ಹೇಳಲಾಗುತ್ತದೆ. ಏನಾದರಾಗಲಿ, ಈ ಶ್ಲೋಕವು ವಿಷ್ಣುವಿಗೆ ಸಂಬಂಧಿಸಿದ್ದು. ಎಮ್ ಎಸ್ ಸುಬ್ಬುಲಕ್ಷ್ಮಿಯವರು ವಿಷ್ಣುಸಹಸ್ರನಾಮವನ್ನು ಪಠಿಸುವಾಗ ಮೊದಲನೆಯ ಶ್ಲೋಕವಾಗಿ ಇದನ್ನು ಹೇಳುವುದು ಗಣೇಶನ ಸ್ಮರಿಸಲು ಅಲ್ಲ. ವಿಷ್ಣುವಿನ ನಾಮ ಪರಾಯಣವೇ ಆಗಿದೆ.
ಇರಲಿ, ಈ ಶ್ಲೋಕವನ್ನು ಸಾಧಾರಣ ಶ್ಲೋಕವೆಂದು ಪರಿಗಣಿಸಿ ಯಾವ ದೇವತೆಗಾದರೂ ವಿಘ್ನವನ್ನು ಪರಿಹರಿಸು ಎಂದು ಪ್ರಾರ್ಥಿಸಿದರೆ ತಲೆ ಹೋಗುವುದೇನಿಲ್ಲ. ಆದರೆ, ಈ ಲೇಖನದ ಉದ್ದೇಶವೆಂದರೆ ಗಣಪತಿಯ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸುವುದು ಅಥವಾ ಅದರ ಬಗ್ಗೆ ಇರುವಂತಹ ವಿಷಯಗಳ ಒಗಟುಗಳನ್ನು ಬಿಡಿಸಿ ಗಣಪತಿಯನ್ನು ಇನ್ನೂ ಆಪ್ತವಾಗಿ ಅರಿಯುವುದು.
ಮೂರ್ತಿರಾಯರ ಗಣಪತಿಯ ಬಗ್ಗೆ ಪ್ರಶ್ನೆ:-
“…….. ಶಿವನೂ ವಿಷ್ಣುವೂ ಕೊನೆಮೊದಲಿಲ್ಲದವರು. ಅವರ ಅವತಾರಗಳಿಗೆ ಆದಿ-ಅಂತ್ಯಗಳುಂಟೇ ಹೊರತು ಮೂಲತಃ ಅವರಿಗೆ ಇಲ್ಲ. ಗಣಪತಿಯ ಜನ್ಮದ ವಿಷಯದಲ್ಲಿ ಹಲವಾರು ಕಥೆಗಳುಂಟು. ಅವನಿಗೆ ಆದಿ ಉಂಟು, ಸ್ಪಷ್ಟವಾಗಿ ಹುಟ್ಟು ಉಂಟು. ಈಗ ನಾನು ಹೇಳಲಿರುವ ಜನ್ಮ ಕಥೆ ಎಲ್ಲರಿಗೂ ಪರಿಚಿತವಾದದ್ದು.
ಪಾರ್ವತಿ ಒಂದು ದಿನ ಸ್ನಾನಕ್ಕೆ ಹೊರಟಳಂತೆ. ಸ್ನಾನದ ಮನೆಗೆ ಇತರರು ನುಗ್ಗದಂತೆ ತಡೆಯಲು ಕಾವಲುಗಾರನೊಬ್ಬ ಬೇಕಾಯಿತು. ತನ್ನ ಮೈಮೇಲಿನ ಕೊಳೆಯನ್ನು (ಪಾಠಾಂತರ: ಮೈಗೆ ಲೇಪಿಸಿದ್ದ ಸುಗಂಧವನ್ನು) ಶೇಖರಿಸಿ ಹುಡುಗನ ಆಕಾರವುಳ್ಳ ಪುಟ್ಟ ಗೊಂಬೆಯೊಂದನ್ನು ತಯಾರಿಸಿದಳು. ಅದಕ್ಕೆ ಜೀವ ಕೊಟ್ಟು ಕಾವಲಾಗಿ ನಿಲ್ಲಿಸಿದಳು. ಕೆಲವು ನಿಮಿಷಗಳಾದ ಮೇಲೆ ಶಿವ ಅಲ್ಲಿಗೆ ಬಂದ. ಆ ಹುಡುಗ ಅವನನ್ನು ತಡೆದ. ಶಿವ ರೇಗಿ ಅವನ ತಲೆಯನ್ನು ಕತ್ತರಿಸಿದ. ಪಾರ್ವತಿ ಇದನ್ನು ನೋಡಿ ಸಂಕಟ ಪಟ್ಟಳು. ಅವಳನ್ನು ಸಮಾಧಾನಿಸಲು ಶಿವ ಆ ಹುಡುಗನನ್ನು ಬದುಕಿಸುವ ಪ್ರಯತ್ನ ಮಾಡಿದ. ಹುಡುಗನಿಗೆ ತಲೆ ಇರಲಿಲ್ಲವಲ್ಲ! “ಉತ್ತರ ದಿಕ್ಕಿಗೆ ತಲೆ ಹಾಕಿಕೊಂಡು ಮಲಗಿರುವವನೊಬ್ಬನ ತಲೆಯನ್ನು ಕತ್ತರಿಸಿ ತನ್ನಿ” ಎಂದು ಸೇವಕರಿಗೆ ಅಪ್ಪಣೆ ಮಾಡಿದ. ಹಾಗೆ ಮಲಗಿದ್ದವರು ಯಾರೂ ಸಿಕ್ಕಲಿಲ್ಲ –ಆನೆಯೊಂದನ್ನು ಹೊರತು. ಸೇವಕರು ಅದರ ತಲೆಯನ್ನೇ ತಂದರು. ಶಿವ ಅದನ್ನು ಹುಡುಗನ ಮುಂಡಕ್ಕೆ ಜೋಡಿಸಿ ಆ ವ್ಯಕ್ತಿಗೆ ಜೀವ ತುಂಬಿದ. ಹೀಗೆ ಹುಟ್ಟಿದವನು, ನಮ್ಮ ಗಜವದನ!
ಗೊಂಬೆಯನ್ನು ಮಾಡುವುದಕ್ಕೆ ಪಾರ್ವತಿಗೆ ಹಿಟ್ಟು, ಮಣ್ಣು ಮುಂತಾದ ಬೇರೆ ಯಾವ ಸಾಮಗ್ರಿಯೂ ಸಿಕ್ಕಲಿಲ್ಲವೇ?
ಆಕೆಯ ಮೈಮೇಲೆ ಪುಟ್ಟ ಹುಡುಗನ ಪ್ರಮಾಣದ ಗೊಂಬೆಯನ್ನು ಮಾಡುವುದಕ್ಕೆ ಬೇಕಾದಷ್ಟು ಕೊಳೆ (ಅಥವಾ ಸುಗಂಧ ದ್ರವ್ಯ) ಇತ್ತೇ?
ಅವಳ ಸ್ನಾನದ ಮನೆಗೆ ಬಾಗಿಲು ಅಗುಳಿಗಳೇನೂ ಇರಲಿಲ್ಲವೇ? ಶಿವನಾದರೂ ದಾದು ಫಿರ್ಯಾದು ಏನೂ ಯೋಚಿಸದೇ ಚಿಕ್ಕ ಹುಡುಗನನ್ನು ಕೊಲ್ಲುವಷ್ಟು ಕ್ರೂರಿಯೇ?
ಹುಡುಗನನ್ನು ಮತ್ತೆ ಬದುಕಿಸಲು ಬೇಕಾದ ತಲೆ – ಆ ಹುಡುಗನದೇ ತಲೆ- ಹತ್ತಿರದಲ್ಲಿಯೇ ಬಿದ್ದಿತ್ತಲ್ಲ (ಅಥವಾ ಶವದ ರುಂಡವೊಂದನ್ನು ಮಾತ್ರ ಸಾಗಿಸಿ ಬಿಟ್ಟಿದ್ದರೋ?) ಅದನ್ನು ಬಿಟ್ಟು ಬೇರೆ ತಲೆಯನ್ನೇಕೆ ತರಿಸಬೇಕಿತ್ತು? ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದ್ದವರು ಯಾರೇ ಆಗಲಿ, ನಿಷ್ಕಾರಣವಾಗಿ ಅವರನ್ನು ಕೊಲ್ಲುವುದು ಅನ್ಯಾಯವಲ್ಲವೇ? ಅವರು ಮಾಡಿದ ಅಪರಾಧವೇನು? (ಇದಕ್ಕೆ ಕೆಲವರು ಖೋಟಾ ವೈಜ್ಞಾನಿಕ ಉತ್ತರ ಕೊಡುತ್ತಾರೆ. ಅದೇನೆಂಬುದು ಮರೆತುಹೋಗಿದೆ-ಉತ್ತರದಿಕ್ಕಿನಿಂದ ಹರಿಯುತ್ತದೆಂದು ಹೇಳಲಾದ ಕಾಂತ ಶಕ್ತಿಗೆ ಸಂಬಂಧಪಟ್ಟದ್ದು)-ಇಂಥ ಪ್ರಶ್ನೆಗಳನ್ನು ಕೇಳಬಾರದು.
ನದೀಮೂಲ ಋಷಿಮೂಲಗಳನ್ನು ಬೆದಕಿಕೊಂಡು ಹೋಗಬಾರದಂತೆ. ಅಂದಮೇಲೆ ದೇವರ ಮೂಲವನ್ನು ಬೆದಕುವವನಿಗೆ ಕ್ಷಮೆಯುಂಟೇ?” ಎಂದು ಶ್ರೀ ಎ ಎನ್ ಮೂರ್ತಿರಾವ್‍ರವರು, 1991ರಿಂದ 2೦12ರವರೆಗೆ 22 ಮುದ್ರಣಗಳನ್ನು ಕಂಡಿರುವ, ತಮ್ಮ ಪಂಪ ಪ್ರಶಸ್ತಿ ಪಡೆದಿರುವ ವೈಚಾರಿಕ ಕೃತಿಯಾದ “ದೇವರು” ಪುಸ್ತಕದಲ್ಲಿ ಕೇಳಿದ್ದಾರೆ.
ಈ ಬಗೆಯ ಪ್ರಶ್ನೆಗಳು ಯಾವುದೇ ಒಂದು ಸಣ್ಣ ಹುಡುಗನಿಗೂ ಬರುವವು. ಹಾಗೆ ಪ್ರಶ್ನೆಗಳು ಬಾರದೇ ಹೋದಲ್ಲಿ, ಆ ವ್ಯಕ್ತಿಯ ಮನಸ್ಥಿತಿಯ ಬಗ್ಗೆ, ಸಹಜವಾಗಿ ಇರಬೇಕಾದ ವೈಚಾರಿಕ ಮನೋಭಾವದ ಆರೋಗ್ಯದ ಬಗ್ಗೆ ಅನುಮಾನ ಬರುತ್ತದೆ. ಪ್ರಶ್ನೆಗಳು ಬಂದಾಗ ನಿರ್ಧಿಷ್ಟವಾಗಿ ಉತ್ತರವನ್ನು ಪಡೆಯಲಾಗದಿದ್ದರೂ ಪ್ರಶ್ನೆಗಳು ಒಯ್ಯುವ ದಾರಿಯಲ್ಲಿ ನಡೆಯುವುದು ಒಂದು ಅದ್ಭುತವಾದ ಅನುಭವ ಮತ್ತು ಅನುಭೂತಿ. ಪ್ರಶ್ನೆಗಳನ್ನು ಕೇಳುವುದರಿಂದ ಉತ್ತರಗಳು ಸಿಗುವ ಖಾತ್ರಿಯೇನೂ ಇಲ್ಲ. ಆದರೆ, ಅವುಗಳಿಂದ ಮತ್ತಷ್ಟು ಪ್ರಶ್ನೆಗಳು ಹುಟ್ಟುತ್ತವೆ. ಅವುಗಳು ಮತ್ತಷ್ಟು ಹೊಸತಾಗಿರುತ್ತವೆ. ನಿಜ ಹೇಳಬೇಕೆಂದರೆ, ಹೊಸ ಪ್ರಶ್ನೆಗಳು ನೀಡುವ ಆನಂದ, ನಿರ್ಧರಿತವಾದ ಉತ್ತರಗಳು ದೊರಕುವುದಕ್ಕಿಂತ ಆಹ್ಲಾದಕರ. ಒಂದು ಬಗೆಯ ಉನ್ಮತ್ತವಾದ ಪ್ರಯಾಣ. ಪ್ರಶ್ನೆಗಳು ಹುಟ್ಟಬಾರದು ಎಂದರೆ, ಹುಟ್ಟಿದರೂ ಕೇಳಬಾರದು, ಕೇಳಿದರೂ ಉತ್ತರಿಸಬಾರದು ಎಂದರೆ- ಅದೇ ಪ್ರಗತಿಪರ ಚಿಂತನೆಗಳಿಗೆ ಕೊನೆ. ವೈಚಾರಿಕತೆಯು ಅರಳಬಾರದು, ಬೆಳೆಯಬಾರದೆಂದೇ ಮಾಡಿರುವ ಚಂಡಶಾಸನ.
ಮನುಕುಲದ ಯಾವ ವಿಷಯಗಳೂ ಇಂತಹ ಚಂಡಶಾಸನದ ವ್ಯಾಪ್ತಿಗೆ ಬರುವುದಿಲ್ಲ. ಹಾಗಾಗಿಯೇ ಯಾವುದೇ ಪಟ್ಟಭದ್ರ ಹಿತಾಸಕ್ತಿಯ ಅಂಕುಶಕಾರರು ಅದೆಷ್ಟೇ ಪ್ರಯತ್ನಿಸಿದರೂ ವೈಚಾರಿಕ ಕ್ರಾಂತಿ ನಡೆಯುತ್ತಲೇ ಇದೆ. ವಿಕಾಸ ಕ್ರಮ ಜೀವಂತವಾಗಿಯೇ ಇದೆ. ಬರಿಯ ವೈಚಾರಿಕ ವಿಶ್ಲೇಷಣೆಗಳು ಆಧಾರ ರಹಿತವಾದಾಗ ವಿಷಯಗಳು ಪೊಳ್ಳಾಗಿ ಬಿಡುತ್ತವೆ. ಅವುಗಳು ಅಧ್ಯಯನದ ವ್ಯಾಪ್ತಿಗೂ ಒಳಪಟ್ಟಾಗ ವಿಚಾರಗಳು ಗಟ್ಟಿಯಾಗುವುದಲ್ಲದೇ, ನಮಗೇ ತಿಳಿದಿರದ ನಮ್ಮದೇ ಸಮಾಜದ ಮತ್ತು ಸಂಸ್ಕೃತಿಯ ಹರವು ಅರಿವಾಗುತ್ತಾ ಹೋಗುತ್ತದೆ. ಇದು ಆತ್ಮ ಸಾಕ್ಷಾತ್ಕಾರದಷ್ಟೇ ಶ್ರೇಷ್ಟವಾದುದು.
ಗತಕಾಲದ ಸತ್ಯಗಳು ಪುರಾಣಗಳ ಕಲ್ಪನೆಗಳಲ್ಲಿ ಅಭಿವ್ಯಕ್ತವಾಗುತ್ತವೆ ಎಂದು ಮಾರ್ಕ್ಸ್ ಹೇಳಿರುವುದು ಪೂರ್ವಾಗ್ರಹಗಳಿಲ್ಲದ ಅಧ್ಯಯನಶೀಲನಿಗೆ ಒಂದು ಹಂತಕ್ಕೆ ಅಹುದೆಂದು ಗೋಚರವಾಗುವುದು.
ಪುರಾಣಗಳ ರಚನೆ ನಾನಾ ಉದ್ದೇಶಗಳಿಂದ, ನಾನಾ ಪರಿಕಲ್ಪನೆಗಳಿಂದ, ನಾನಾ ಕಾರಣಗಳಿಂದ ರಚಿತವಾಗಿದ್ದರೂ ಅಧ್ಯಯನ ದೃಷ್ಟಿಯಿಂದ ಪರಿಶೀಲಿಸಲು ಹೊರಟಾಗ ಹಲವು ಕೌತುಕವಾದ ವಿಷಯಗಳು ತಿಳಿಯುತ್ತಾ ಹೋಗುವವು. ಈ ತಿಳುವಳಿಕೆಯು ನಮ್ಮ ಸಾಂಸ್ಕೃತಿಕ ಬೆಳವಣಿಗೆಯ ಬಗ್ಗೆ ಗೌರವವನ್ನು ಬೆಳೆಸುವುದೇ ಹೊರತು ತಿರಸ್ಕಾರವನ್ನಾಗಲಿ, ಉಪೇಕ್ಷೆಯನ್ನಾಗಲಿ ಉಂಟುಮಾಡುವುದಿಲ್ಲ. ಆದರೆ, ಆಯಾ ವಿಷಯದ ಬಗ್ಗೆ ಪುರೋಹಿತರು ಒಡ್ಡಿಟ್ಟಿರುವ ಅನಗತ್ಯವಾದ ಆಸೆಗಳಾಗಲಿ, ಭಯಗಳಾಗಲಿ ಇರುವುದಿಲ್ಲ. ನಾವು ಈ ಮೌಢ್ಯಾಧಾರಿತವಾದ ಭಯದಿಂದ ಅಥವಾ ಆಸೆಗಳಿಂದ ಬಿಡುಗಡೆ ಹೊಂದಿದರೆ, ಬಹುಶಃ ಅದನ್ನೇ ಬಂಡವಾಳವನ್ನಾಗಿಸಿಕೊಂಡು ದುರ್ಬಲ ಮನಸ್ಕರ ನೀಡುವಿಕೆಯ ಮೇಲೆ ಬದುಕುತ್ತಿರುವ ಅನೇಕ ವ್ಯಾಪಾರಿಗಳ ವ್ಯವಹಾರಕ್ಕೆ ತೊಡಕಾಗುವ ಕಾರಣದಿಂದಲೋ ಏನೋ ದೇವರ ಮೂಲವನ್ನು ಬೆದಕಬಾರದು, ಹುಡುಕಬಾರದು ಎಂದು ಅಲಿಖಿತ ಶಾಸನವೊಂದನ್ನು ಜಾರಿಯಲ್ಲಿಟ್ಟಿರುವುದು. ಅದೇನೇ ಇರಲಿ, ಈ ಬಗೆಯ ಅಧ್ಯಯನಗಳು ನಮ್ಮದೇ ಆದ ಸಾಮಾಜಿಕವಾದ ವಿಕಾಸ ಕ್ರಮವನ್ನು ಹೇಳುವುದಲ್ಲದೇ, ವೈಚಾರಿಕ ನೆಲೆಗಟ್ಟಿನಿಂದ ಧಾರ್ಮಿಕವೆಂದು ಹೇಳಿರುವಂತಹ ಹಲವು ವಿಷಯಗಳು ಅರ್ಥವಾಗುತ್ತಾ ಹೋಗುತ್ತವೆ.
ಆದಿಪೂಜಿತನೆಂದು ಹೇಳಲಾಗುವ ಗಣಪತಿಯಿಂದಲೇ ಈ ತಿಳುವಳಿಕೆಯ ಜಾಡನ್ನು ಹಿಡಿದು ಹೋಗುವುದರಿಂದ ನಮಗೇನೂ ತೊಂದರೆಯಿಲ್ಲ. ಗಣಪತಿಯಿಂದ ಆರಂಭವಾಗಿ, ಗೌರಿ, ಕೃಷ್ಣ, ಇಂದ್ರ, ಅಗ್ನಿ, ಮರುತ್ತರು, ಶಿವ ಇತರರ ಮೂಲಕ ಸಮಕಾಲಿನ, ಇತ್ತೀಚೆಗೆ ಹುಟ್ಟಿಕೊಂಡಿರುವ ದೇವತೆಗಳವರೆಗೂ ಬರಬಹುದು ಎಂದೆನಿಸುತ್ತದೆ.
ನಿಮಗೆ ಆಶ್ಚರ್ಯವೆನಿಸಬಹುದು. ಕೆಲವು ದೇವತೆಗಳು ತೀರಾ ಇತ್ತೀಚೆಗೆ, ಕೆಲವೇ ವರ್ಷಗಳ ಹಿಂದೆ ಹುಟ್ಟಿದರು. ಆದರೆ, ಅವರನ್ನು ತೀರಾ ಪುರಾತನರೆಂದು ಬಿಂಬಿಸಲಾಗಿದೆ. ಅದು ಹೇಗೆ? ಏಕೆ? ಎಲ್ಲವನ್ನೂ ಸವಿಸ್ತಾರವಾಗಿ ನೋಡುತ್ತಾ ಬರೋಣ.
ಓಂ ಗಣಾನಾಂ ತ್ವಾ ಗಣಪತಿಂ ಹವಾಮಹೇ ಕವಿಂ ಕವೀನಾಮುಪಮಶ್ರವಸ್ತಮಂಜ್ಯೇಷ್ಠರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆ ನಃ ಶೃಣ್ವನ್ನೂತಿಭಿಃ ಸೀದ ಸಾದನಂ
ಎಂದು ಋಗ್ವೇದದ ಎರಡನೆಯ ಮಂಡಲದ ಇಪ್ಪತ್ತಮೂರನೆಯ ಸೂಕ್ತದ ಮೊದಲನೆಯ ಮಂತ್ರವಿದೆ.
ಈ ಮಂತ್ರಕ್ಕೆ, ಗಣಪತಿ-ಸೂಕ್ತ ಮತ್ತು ಬ್ರಹ್ಮಣಸ್ಪತಿ-ಸೂಕ್ತ ಎಂದು ಎರಡೂ ರೀತಿಯಿಂದ ಕರೆಯಲಾಗುತ್ತದೆ.
ವೇದಕಾಲದ ಕವಿಗಳಿಗೆ ಆನೆ ಮುಖದ ಗಣಪತಿ ಗೊತ್ತಿರಲಿಲ್ಲ. ಇಲ್ಲಿ ಹೇಳಲಾಗುವ ಗಣಪತಿಯನ್ನು ಸದಸತ್ಪತಿ, ಜ್ಯೇಷ್ಠರಾಜ, ಬೃಹಸ್ಪತಿ ಮೊದಲಾದ ನಾಮಗಳಿಂದ ಸಂಭೋಧಿಸಿದೆ. ಎರಡನೆಯ ಮಂಡಲದ ಇಪ್ಪತ್ತಮೂರನೆಯ ಸೂಕ್ತದ ಒಂಭತ್ತೂ ಮಂತ್ರಗಳಲ್ಲಿ ಗಣಪತಿಯನ್ನು ಬೃಹಸ್ಪತಿ ಎಂದೇ ಸಂಬೋಧಿಸಿದೆ.
ಈ ಬೃಹಸ್ಪತಿ, ಬ್ರಹ್ಮಣಸ್ಪತಿ ಮತ್ತು ಬ್ರಹ್ಮ ಎಂದರೆ ಒಂದೇ ಎಂದು ಶ್ರೀ ಅರವಿಂದರು ಹೇಳಿದ್ದಾರೆ.
ಗಣಪತಿಯು ದೇವತೆಗಳಲ್ಲಿ ಗಣನೆಗೆ ಬಂದಾಗ ಮಾತ್ರ ದೃಷ್ಟ ಋಷಿಗಳು ಮಂತ್ರಗಳ ಜನಕರಾಗಿ ಹೋಗಿದ್ದರು. ಗಣಪತಿಯ ಪೂಜೆಗೆ ಆಗ ಮಂತ್ರಗಳಿರಲಿಲ್ಲ. ಮಂತ್ರಗಳಿಲ್ಲದೇ ಪೂಜೆಯನ್ನು ಮಾಡುವಂತಿರಲಿಲ್ಲ. ಲೌಕಿಕ ಸಂಸ್ಕೃತದಲ್ಲಿ ಶ್ಲೋಕಗಳನ್ನು ಗಣಪತಿಯ ಪರವಾಗಿ ರಚಿಸಿದರು. ಆದರೂ ವೇದಮಂತ್ರಗಳ ಅಭಾವದಿಂದ ಕಾರ್ಯಗಳು ಪೂರ್ಣವಾದರೂ ಮನಸ್ಸಿಗೆ ಸಮಾಧಾನ ಉಂಟಾಗುತ್ತಿರಲಿಲ್ಲ. ಯಾವ ಮಂತ್ರದಲ್ಲಿ ಗಣಪತಿ ಶಬ್ದದ ಪ್ರಯೋಗವಿರುತ್ತಿತ್ತೋ ಆ ಮಂತ್ರಗಳೆಲ್ಲವೂ ಗಣೇಶನ ಪರಗಳೆಂದಾದವು. ವೇದಗಳಲ್ಲಿ ಎಲ್ಲಿಯೂ ಆ ಮಂತ್ರಗಳು ಗಣೇಶನ ಪರಗಳೆಂದು ಹೇಳಿಲ್ಲ. ಗಣಪತಿ ಶಬ್ದ ಪ್ರಯೋಗವು ಬೃಹಸ್ಪತಿಗೆ ಸಂಬಂಧಿಸಿದುದು.
ಅಂದರೆ, ವೇದಗಳಲ್ಲಿ ಗಣೇಶನ ದರ್ಶನವಿಲ್ಲ. ಆದರೆ ಪುರಾಣಗಳಲ್ಲಿ ಅವನ ವಿಷಯ ಬಹಳವಾಗಿ ವರ್ಣಿತವಾಗಿದೆ. ತಂತ್ರಗಳಲ್ಲಿ ಚಕಿತಗೊಳಿಸುವ ಅವನ ವಿಗ್ರಹವಿಚಾರಗಳಿವೆ.
ಪುರಾಣಗಳ ರಚನಾ ಕಾಲವು ಗುಪ್ತರ ಕಾಲಕ್ಕೆ ಸಮನಿರಬಹುದೆಂದು ತಿಳಿಯಬರುತ್ತದೆ. ಕೆಲವು ತಂತ್ರ-ಗ್ರಂಥಗಳು ಹಾಗೂ ಆ ಗ್ರಂಥಗಳ ಕೆಲವು ಅಂಶಗಳು ಪುರಾಣದಷ್ಟೇ ಪ್ರಾಚೀನ.
ಪುರಾಣಗಳಲ್ಲಿ ಗಣಪತಿಯ ಪೂಜೆಯು ಚರ್ಚಿತವಾಗಿರುವುದರಿಂದ ಪುರಾಣಗಳಿಗಿಂತ ಮೊದಲೇ ಗಣಪತಿ ಪ್ರಸಿದ್ಧನಾಗಿರಬೇಕು. ವಿಕ್ರಮ ಶಕೆ 5 ಅಥವಾ 6ನೆಯ ಶತಮಾನದಲ್ಲಿ ಭಾರತೀಯರಿಗೆ ಗಣಪತಿ ಪರಿಚಿತನಾಗಿದ್ದನು. ಬುದ್ಧನ ಕಾಲದ ದೇವಗಣಗಳಲ್ಲಿ ಗಣಪತಿಯು ಸೇರಿದ್ದನೆಂದು ಹೇಳುವುದು ಕಷ್ಟ.
ಬುದ್ಧನು ಬ್ರಹ್ಮ, ಇಂದ್ರ ಹಾಗೂ ಇತರ ದೇವತೆಗಳನ್ನು ಉಲ್ಲೇಖಿಸಿದ್ದಾನೆ. ಆದರೆ ಗಣೇಶನನ್ನು ಎಲ್ಲಿಯೂ ಹೇಳಿಲ್ಲ. ಅದೇ ಸಮಯದ ತೀರ್ಥಂಕರ ವರ್ಧಮಾನನು ಎಲ್ಲಿಯೂ ಗಣಪತಿಯನ್ನು ಉದಾಹರಿಸಿಲ್ಲ.
ಡಾ. ಸಂಪೂರ್ಣಾನಂದ ಆ. ಮರಿಬಸವರಾಧ್ಯರು ಹೀಗೇ ತಮ್ಮ ವಿದ್ವತ್ಪೂರ್ಣ ಸಂಶೋಧನಾತ್ಮಕ ಗಮನಿಸುವಿಕೆಯನ್ನು ಮುಂದುವರಿಸುತ್ತಾರೆ. ಶ್ರುತಿಕಾಲದ ಆನಂತರ ಮತ್ತು ಪುರಾಣಕಾಲದ ಮಧ್ಯದಲ್ಲಿ ಗಣಪತಿಯು ಎಲ್ಲಿಂದ ಹೇಗೆ ಬಂದು ದೇವತೆಗಳ ಶ್ರೇಣಿಯಲ್ಲಿ ಸ್ಥಾನವನ್ನು ಪಡೆದನು? ಬುದ್ಧ ಹಾಗೂ ಪುರಾಣಗಳ ಅಂತರ ಸುಮಾರು 1000 ವರ್ಷಗಳಿರಬಹುದು. ಈ ಅಂತರದಲ್ಲಿ ಆರ್ಯರ ದೇವತೆಗಳ ಶ್ರೇಣಿಯಲ್ಲಿ ಹೇಗೆ ಬಂದನೆಂಬುದೇ ಸಮಸ್ಯೆಯಾಗಿದೆ. ವೇದಗಳಲ್ಲಿ ಇಂದ್ರ, ಅಗ್ನಿ, ವರುಣರು ಪ್ರಧಾನರಾಗಿದ್ದು ಪುರಾಣಗಳಲ್ಲಿ ಮಾಂಡಲೀಕರಾಗಿದ್ದಾರೆ. ವೇದಗಳಲ್ಲಿ ಅಪ್ರಧಾನರಾದ ವಿಷ್ಣು ಮತ್ತು ರುದ್ರರು ಪುರಾಣಗಳಲ್ಲಿ ಪ್ರಧಾನರಾಗಿದ್ದಾರೆ. ಆದರೆ ವೈದಿಕದಲ್ಲಿ ಅಸ್ತಿತ್ವವಿಲ್ಲದೇ ಇದ್ದರೂ ಪುರಾಣಗಳಲ್ಲಿ ಅಗ್ರಸ್ಥಾನ ಪಡೆದವನು ಗಣಪತಿಯೊಬ್ಬನೇ. ಇಷ್ಟಲ್ಲದೇ ವೇದಾನುಯಾಯಿಗಳು ಗಣಪತಿಯ ಉಪಾಸಕರಾಗಿದ್ದಾರೆ. ನಂತರ ವಿಕಸಿತವಾಗಿದ್ದ ಬೌದ್ಧ- ಸಂಪ್ರದಾಯದಲ್ಲಿ ಗಣೇಶನ ವರ್ಣನೆಗಳು ಬರುತ್ತವೆ.
ಪುರಾಣಗಳೆಲ್ಲವೂ ಒಂದೇ ಸಮಯದಲ್ಲಿ, ಒಂದೇ ಸ್ಥಾನದಲ್ಲಿ ಒಬ್ಬನೇ ಬರೆದವಲ್ಲ. ಆದುದರಿಂದ ಕಥೆಗಳು ಒಂದೇ ತೆರನಾಗಿಲ್ಲ.
ಗಣಪತಿಯ ವಿಷಯದಲ್ಲೂ ಅಷ್ಟೇ. ಅವನಿಗೆ ಸಂಬಂಧಪಟ್ಟ ಪುರಾಣಗಳೂ ಭಿನ್ನ ಭಿನ್ನವಾಗಿವೆ. ಒಂದೊಂದನ್ನೂ ಹಲವಾರು ರೀತಿಯಲ್ಲಿ ವಿಶ್ಲೇಷಣೆ ಮಾಡಲು ಸಾಧ್ಯವಾಗುತ್ತವೆ.
ಪುರಾಣಗಳ ವಿಶ್ಲೇಷಣೆಗಳು ಏಕಪ್ರಕಾರವಾಗಿ, ಏಕಮುಖವಾಗಿ ನಡೆಯಲು ಸಾಧ್ಯವಿಲ್ಲ. ಅಧ್ಯಯನಗಳು ನಾನಾ ಮುಖವಾಗಿ ನಡೆದರೂ ಕೊನೆಗೊಂದು ಸಂಕ್ಷಿಪ್ತ ಉತ್ತರದ ಗುರಿಯನ್ನು ತಲುಪಬೇಕಾಗುತ್ತದೆ. ನಾನಿಲ್ಲಿ, ಗಣಪತಿ: ಬಂಡಾಯದ ದಳಪತಿ ಎಂದು ಶೀರ್ಷಿಕೆಯಲ್ಲಿ ಕರೆದಿರುವ ಕಾರಣವು ಒಂದು ತುಲನಾತ್ಮಕ ವಿಚಾರವೇ ಆಗಿದೆ. ಏಕೆ ಮತ್ತು ಹೇಗೆ ಎಂದು ಮುಂದೆ ನೋಡೋಣ.
(ಮುಂದುವರಿಯುವುದು…)
ಯೋಗೇಶ್ ಮಾಸ್ಟರ್
ಕಾದಂಬರಿ-ನಾಟಕ-ಕವಿತೆ-ಮಕ್ಕಳ ಸಾಹಿತ್ಯ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯುತ್ತಿರುವವರು