ಬೆಂಗಳೂರು,ಅಕ್ಟೋಬರ್.14: ಎಕ್ಸಾಂ ವಾರಿಯರ್ ಎಂಬ ಮಕ್ಕಳಿಗಾಗಿ ಪುಸ್ತಕ ಬರೆದಿದ್ದ ಪ್ರಧಾನಿ ನರೇಂದ್ರ ಮೋದಿಯವರು ಹಾಡೊಂದನ್ನು ಬರೆದಿದ್ದಾರೆ. ನವರಾತ್ರಿ ಪ್ರಾರಂಭವಾಗುವ ಮೊದಲು ಪ್ರಧಾನಿ ಮೋದಿಯವರು ಬರೆದಿರುವ ಗರ್ಬಾ ಹಾಡಿನ ವೀಡಿಯೊ ಶನಿವಾರ ಬಿಡುಗಡೆಗೊಂಡಿದೆ. ಹಲವಾರು ವರ್ಷಗಳ ಹಿಂದೆ ಪ್ರಧಾನಿ ಬರೆದಿದ್ದರು ಎನ್ನಲಾಗಿರುವ 190 ಸೆಕೆಂಡುಗಳ ಈ ಹಾಡನ್ನು ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
‘ಗಾರ್ಬೋ’ ಎಂಬ ಈ ಹಾಡನ್ನು ಧ್ವನಿ ಭಾನುಶಾಲಿ ಹಾಡಿದ್ದು, ತನಿಷ್ಕ್ ಬಾಗ್ಚಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದನ್ನು ನಟ-ನಿರ್ಮಾಪಕ ಜಾಕಿ ಭಗ್ನಾನಿಯವರ ಜ್ಜಸ್ಟ್ ಮ್ಯೂಸಿಕ್ ಬ್ಯಾನರ್ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ.

ಯೂಟ್ಯೂಬ್‌ನಲ್ಲಿ ಈ ಹಾಡನ್ನು ಪೋಸ್ಟ್ ಮಾಡಲಾಗಿದ್ದು, “ಏಕಮೇವಾದ್ವಿತೀಯ ಪ್ರಧಾನಿ ನರೇಂದ್ರ ಮೋದಿಯವರು ಬರೆದ ಈ ಹಾಡು ಕಾವ್ಯಾತ್ಮಕತೆಯಿಂದ ಪ್ರೇರಿತವಾಗಿದೆ. ನವರಾತ್ರಿಯ ಸಮಯದಲ್ಲಿ ಗುಜರಾತ್‌ನ ಸಂಸ್ಕೃತಿಯನ್ನು ವೀಕ್ಷಿಸಲು ಗಾರ್ಬೋ ನಮಗೆ ಅವಕಾಶ ನೀಡಿದೆ” ಎಂದು ಬರೆಯಲಾಗಿದೆ. ಬಿಡುಗಡೆಯಾದ ಆರು ಗಂಟೆಗಳಲ್ಲಿ ಯೂಟ್ಯೂಬ್‌ನಲ್ಲಿ ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
‘ಗಾರ್ಬೋ’ ಹಾಡು ಇಲ್ಲಿದೆ ನೋಡಿ: ಗಾರ್ಬೋ
ಧ್ವನಿ ಭಾನುಶಾಲಿಯವರ ಟ್ವೀಟನ್ನು ರಿಪೋಸ್ಟ್ ಮಾಡಿರುವ ಪ್ರಧಾನಿಯವರು ತಾವು ಇನ್ನೊಂದು ಹೊಸ ಗರ್ಬಾ ಹಾಡನ್ನು ಬರೆದಿದ್ದು, ನವರಾತ್ರಿಯ ಸಂದರ್ಭದಲ್ಲಿ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.