ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಉತ್ಸವದಲ್ಲಿ ಮುಸ್ಲಿಂ ಸಮುದಾಯದ ವ್ಯಾಪಾರಿಗಳು ವ್ಯಾಪಾರ ವ್ಯವಹಾರ ಮಾಡದಂತೆ ಬಲಪಂಥೀಯ ಸಂಘಟನೆಗಳು ಬಹಿಷ್ಕಾರ ಹಾಕಿವೆ. ಉತ್ಸವ ನಡೆಯುವ ಸ್ಥಳ ಮಹಾನಗರಪಾಲಿಕೆಯ ಸ್ವಾಧೀನವಿದ್ದು ಹಿಂದೂ ಸಂಘಟನೆಗಳು ಕ್ಯಾತೆ ತೆಗೆಯುವಂತಿಲ್ಲ ಮತ್ತು ದೇವಸ್ಥಾನ ಎಲಂ ಕೂಡಾ ಹಾಕುವಂತಿಲ್ಲ. ಎಂದೇ ಹಿಂದೂ ಮುಸ್ಲಿಂ ವ್ಯಾಪಾರಿಗಳು ಹೋರಾಟಕ್ಕಿಳಿದರು. ಜಿಲ್ಲಾಡಳಿತ ಕೊನೆಗೂ ಎಚ್ಚೆತ್ತುಕೊಂಡಿತು. ಈ ಬಗ್ಗೆ ದ. ಕ ಜಿಲ್ಲೆಯ ಹಿಂದೂ ಜಾತ್ರಾ ಭಕ್ತರ ಸಮಿತಿಯ ಸಂತೋಷ ಪೂಜಾರಿ ಬರೆದಿದ್ದಾರೆ.
ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳು ಅಂಗಡಿ ಇಡಬಾರದು ಎಂದು ಬಿಜೆಪಿ ಮತ್ತು ಸಂಘ ಪರಿವಾರದ ಹೋರಾಟ. ಇದಕ್ಕೆ ಶಾಸಕ ವೇದವ್ಯಾಸ ಕಾಮತ್ ಭರತ್ ಶೆಟ್ಟಿ ಬೆಂಬಲ.
ದೇವಸ್ಥಾನ ಬಾಡಿಗೆ/ ಲೀಸ್ ನೀಡುವ ಕಟ್ಟಡ, ಅದರ ಪ್ರಾಂಗಣದೊಳಗೆ, ದೇವಸ್ಥಾನದ ಅಧಿಕೃತ ಸ್ಥಳದಲ್ಲಿ ಒಂದು ಸಮುದಾಯಕ್ಕೆ ಸೇರಿದವರು ಅಂಗಡಿ ಇಡಬಾರದು ಅನ್ನುವ ನಿಯಮ ಸರ್ಕಾರ ಜಾರಿಗೆ ತಂದಿದೆ. ಅದು ಸರಿ.
ಆದರೆ ಇದೀಗ ಬಿಜೆಪಿ ಮತ್ತು ಪರಿವಾರದ ಹೋರಾಟ, ಮುಸ್ಲಿಂ ರು ಜಾತ್ರೆಯ ವೇಳೆ ಸಾರ್ವಜನಿಕ ರಸ್ತೆಯಲ್ಲೂ ವ್ಯಾಪಾರ ಮಾಡಬಾರದು ಅನ್ನುವುದು. ಇದು ಸಂವಿಧಾನ ಬಾಹಿರ. ವ್ಯಕ್ತಿಯ ಬದುಕು ಮತ್ತು ಸ್ವಾತಂತ್ರ್ಯದ ಹರಣ.
ರಸ್ತೆ ಬದಿಯಲ್ಲಿ ಮುಸ್ಲಿಂರ ವ್ಯಾಪಾರ ನಿರ್ಬಂಧಿಸಲು ಬಿಜೆಪಿ ಪರಿವಾರಕ್ಕೆ ಅಧಿಕಾರ ಕೊಟ್ಟವರು ಯಾರು? ಇದು ಕರ್ನಾಟಕ ಸರ್ಕಾರಕ್ಕೆ ಪರ್ಯಾಯ ಕಾನೂನು ಜಾರಿಗೆ ತಂದಂತೆ. ಪರ್ಯಾಯ ಕಾನೂನು ಜಾರಿ ಮಾಡುವುದು ರಾಷ್ಟ್ರ ದ್ರೋಹ.
ಕರಾವಳಿ ಕಾಂಗ್ರೆಸ್ ನಾಯಕರ ವರ್ತನೆ ಆ ದೇವರಿಗೇ ಪ್ರೀತಿ. ಕಮ್ಯೂನಿಸ್ಟ್ ರು ಮಾತ್ರ ಹೋರಾಟ ಮಾಡಬೇಕು. ಕಾಂಗ್ರೆಸ್ ನವರು ಅದರ ಫಲ ಉಣ್ಣಬೇಕು. ಅವರದ್ದೇ ಸರ್ಕಾರ ಇರುವಾಗ ದ.ಕ ಕಾಂಗ್ರೆಸ್ ವಿಧಾನಸಭಾ ಪರಿಷತ್ ಸದಸ್ಯರು..ಜಿಲ್ಲಾ ಅಧ್ಯಕ್ಷರು , ಮಾಜಿ ಶಾಸಕರು ಮಂತ್ರಿಗಳ ಮೌನ ಯಾವುದಕ್ಕೆ?
ಬಿಜೆಪಿ ಪರಿವಾರ ಇಷ್ಟೊಂದು ಆಸಕ್ತಿಯಿಂದ ಹೋರಾಟ ಮಾಡುತ್ತಿರುವುದು ಯಾಕೆ?. ಯಾಕೆಂದರೆ ಜಾತ್ರೆ ವ್ಯಾಪಾರದಲ್ಲಿ ಆಗುವ ಲಾಭದ ಹಣದ ಮೇಲೆ ಪರಿವಾರದ ಕಣ್ಣು!.
ಇದರ ಹಿಂದೆ ವ್ಯಾಪಾರವಿದೆ. ಬಿಜೆಪಿ ಪರಿವಾರದ ಮುಖಂಡರೇ ಅಂಗಡಿಗಳ ಮೇಲೆ ನಿಯಂತ್ರಣ ಸಾಧಿಸುವುದು… ಅಗತ್ಯ ವಸ್ತು ಸರಬರಾಜು ಮಾಡುವುದು, ಆ ಮೂಲಕ ಕಮೀಷನ್ ಪಡೆಯುವುದು, ಬೇರೆಯವರಿಗೆ ( ಹಿಂದೂ ) ಅಂಗಡಿ ಸಿಕ್ಕರೆ ಅವರಿಂದ ಹಫ್ತಾ ವಸೂಲಿ ಇವರ ಉದ್ದೇಶ. ಈ ಹಿಂದೆ ಕಾಪುವಿನಲ್ಲಿ ಇತರ ಧರ್ಮದವರು ಅಂಗಡಿ ಇಡಬಾರದು ಅನ್ನುವ ನಿಯಮ ಜಾರಿಗೆ ತಂದಾಗ ವ್ಯಾಪಕ ಹಫ್ತಾ ವಸೂಲಿ ಆಗಿದೆ. ಅಂಗಡಿಯ ವಸ್ತುಗಳಿಗೆ ಮೂರು ಪಟ್ಟು ದರ ಹೆಚ್ಚಾಗಿತ್ತು. ಹಾಗೂ ಸಾಧ್ಯವಾದಷ್ಟು ಸಂಘಟನೆಯ ಕೆಲವು ನಾಯಕರು ಮತ್ತು ಬಿಜೆಪಿ ಮುಖಂಡರದೇ ಅಂಗಡಿ ಹಾಕುವುದು ಉದ್ದೇಶ. ಇಡೀ ಜಾತ್ರೆಯ ಮಾರುಕಟ್ಟೆಯನ್ನು ನಿಯಂತ್ರಣಕ್ಕೆ ಪಡೆದುಕೊಂಡು, ಸ್ಪರ್ಧೆಯೇ ಇರದಂತೆ ಮಾಡಿ, ಅಲ್ಲಿ ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ಹೆಚ್ಚಿನ ದರದಲ್ಲಿ ಮಾರಾಟ ಮಾಡುವ ಮೂಲಕ ಹಣ ದೋಚುವುದು. ಭಕ್ತರನ್ನು ಶೋಷಣೆ ಮಾಡುವುದು.
ಹೀಗಿರುವಾಗ ದೇವಸ್ಥಾನದ ಜಾತ್ರೆಯನ್ನು ಬಿಜೆಪಿಯ ಕೈಗೆ ಕೊಡುವುದನ್ನು, ಅಲ್ಲಿ ಬಿಜೆಪಿ ಪರ ಪರಿವಾರದವರು ರಾಜಕಾರಣ ಮಾಡುವುದನ್ನು, ಮುಂದಿನ ಚುನಾವಣೆಗೆ ವೋಟು ಕ್ರೋಡೀಕರಣವನ್ನು ಭಕ್ತರು ವಿರೋಧಿಸಬೇಕು.
ಕೆಲವು ದೇವಸ್ಥಾನದ ಆಡಳಿತದ ಕೆಲ ಸದಸ್ಯರು ಬಿಜೆಪಿಯಿಂದ ಹಣ ಪಡೆದು ಈ ಹೋರಾಟವನ್ನು ಬೆಂಬಲಿಸಿದ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಯಾವುದೋ ರಸ್ತೆಯ ಮೂಲೆಯಲ್ಲಿ ಮುಸ್ಲಿಂ ವ್ಯಾಪಾರ ನಿಷೇಧ ದ.ಕ ಜಿಲ್ಲೆಯ ಸಾಮರಸ್ಯಕ್ಕೆ ಬೆಂಕಿ ಇಡುವ ಕೆಲಸವಾಗಿದೆ.
ಎಂದೇ ವಿರೋಧಿಸುವವರಿಗೆ ಕೆಲವು ಸವಾಲುಗಳು -ಬಜರಂಗದಳದ ಶರಣ್ ಪಂಪವೆಲ್ ಮುಸ್ಲಿಂ ಕಟ್ಟಡಗಳಲ್ಲಿ ಪಡೆದ ಗುತ್ತಿಗೆ ನಿಲ್ಲಿಸಲಿ. ವಿ ಹಿ ಪರಿಷತ್ತಿನ ಎಂ ಬಿ ಪುರಾಣಿಕ ತನ್ನ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಪ್ರವೇಶ ನಿಲ್ಲಿಸಲಿ. ಬಿಜೆಪಿಯ ಮತ್ತು ಅಲ್ಪಸಂಖ್ಯಾತ ಘಟಕ ತಕ್ಷಣ ವಿಸರ್ಜನೆ ಮಾಡಲಿ. ಅಲ್ಲಿ ಕೂಡಾ ಲವ್ ಜೆಹಾದ್ ಆಗುವ ಸಾಧ್ಯತೆ ಇರಬಹುದಲ್ಲವೇ. ಬಿಜೆಪಿಯ ಎಲ್ಲಾ ಮುಸ್ಲಿಂ ಮುಖಂಡರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಿ. ಬಿಜೆಪಿಯ ವ್ಯಾಪಾರಿಗಳು ಹೊಟೇಲ್ ಅಂಗಡಿಗಳು ಮುಸ್ಲಿಂ ರಿಗೆ ಪ್ರವೇಶವಿಲ್ಲವೆಂದು ಬೋರ್ಡ್ ಹಾಕಲಿ. ಅಲ್ಲೂ ಲವ್ ಜೆಹಾದ್ ಆಗಬಹುದಲ್ಲವೇ.
ಬಿಜೆಪಿ ಪರಿವಾರದ ಹೋರಾಟ ಅದರ ಮುಖಂಡರು ಹಣ ಮಾಡಲು ಆಡುವ ನಾಟಕ. ಕರಾವಳಿಯನ್ನು ಸದಾ ಕೋಮು ಸೂಕ್ಷ್ಮ ಮಾಡಿ ಚುನಾವಣೆ ಗೆಲ್ಲುವ ಸಂಚು ಎಂಬುದನ್ನು ಇಲ್ಲಿ ಮುಖ್ಯವಾಗಿ ಗಮನಿಸಬೇಕು.
ಹಿಂದುತ್ವದ ಹೆಸರಿನಲ್ಲಿ ದೇವಸ್ಥಾನಗಳನ್ನು ಜಾತ್ರೆಗಳನ್ನು ದುರುಪಯೋಗ ಮಾಡುವುದನ್ನು ನಾವು ಖಂಡಿಸುತ್ತೇವೆ. ಇವರಿಗೆ ಧಮ್ಮು ಇದ್ದರೆ, ತಾಕತ್ತು ಇದ್ದರೆ ಧರ್ಮಸ್ಥಳದ ಜಾತ್ರೆಯಲ್ಲಿ ಮುಸ್ಲಿಂ ನಿಷೇಧ ಮಾಡಲಿ. ಹಿಂದೂ ಜ್ಯೋತಿಷಿಗಳ ಬಳಿ ಮುಸ್ಲಿಂರು ಬಾರದಂತೆ ತಡೆಯಲಿ. ಕೊಲ್ಲೂರು, ಧರ್ಮಸ್ಥಳ, ಸುಬ್ರಹ್ಮಣ್ಯ , ಉಡುಪಿ ಕ್ಷೇತ್ರದಲ್ಲಿ ಮುಸ್ಲಿಂ ಪ್ರವಾಸಿಗರನ್ನು ನಿಷೇಧಿಸಲಿ. ಐಡಿಯಲ್, ಪಬ್ಬಾಸ್ ಐಸ್ ಕ್ರೀಂ ಪಾರ್ಲರ್ ಗಳಿಗೆ, ವುಡ್ ಲ್ಯಾಂಡ್ಸ್, ತಾಜ್ ಮಹಲ್, ಸ್ವಾಗತ್ ಹೊಟೇಲ್ ಗಳಿಗೆ ಮುಸ್ಲಿಂ ರು ಬರಬಾರದು ಅಂತಾ ಬೋರ್ಡ್ ಹಾಕಿಸಲಿ. ಮಾಡುತ್ತಾರಾ?
ಈ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕಿರುವ ಹಿನ್ನೆಲೆಯಲ್ಲಿ , ಹಿಂದೂ ಮುಸ್ಲಿಂ ವ್ಯಾಪಾರಿಗಳು ಹೋರಾಟಕ್ಕಿಳಿದರು. ಪರಿಣಾಮವಾಗಿ ಇದೀಗ ಜಿಲ್ಲಾಡಳಿತ ಮಧ್ಯ ಪ್ರವೇಶ ಮಾಡಿದೆ. ವ್ಯಾಪಾರ ಮಾಡುವ ರಸ್ತೆಯ ಅಕ್ಕ ಪಕ್ಕದ ಖಾಲಿ ಸ್ಥಳಗಳು ಮಂಗಳೂರು ಮಹಾನಗರಪಾಲಿಕೆಗೆ ಸೇರುವಂತದ್ದು. ಅದಕ್ಕೆ ಹಿಂದೂ ಸಂಘಟನೆ ಕ್ಯಾತೆ ತೆಗೆಯುವಂತಿಲ್ಲ ಮತ್ತು ದೇವಸ್ಥಾನ ಎಲಂ ಹಾಕುವಂತಿಲ್ಲ. ಅದನ್ನು ಸ್ಥಳಿಯಾಡಳಿತವೇ ನಡೆಸಬೇಕು. ಬಹಿರಂಗವಾಗಿ ಏಲಂ ನಡೆಸಬೇಕು ಎಂದು ಇದೀಗ ಜಿಲ್ಲಾಡಳಿತ ನೇತೃತ್ವದಲ್ಲಿ ಸಭೆ ನಡೆದು ನಿರ್ಧಾರವಾಗಿದೆ.
ಜಿಲ್ಲೆಯಾದ್ಯಂತ ಬಿಜೆಪಿ ಸಂಘಟನೆ ಇದೇ ರೀತಿ ತಕರಾರು ಮಾಡುತ್ತಿದೆ. ಪರಿಹಾರವೂ ಸರಳ. ದೇವಸ್ಥಾನದ್ದಲ್ಲದ ಜಾಗೆ ಸ್ಥಳೀಯ ಸಂಸ್ಥೆ ಮತ್ತು ಕಂದಾಯ ಇಲಾಖೆಯದು. ಅಲ್ಲಿ ವ್ಯಾಪಾರ ಮಾಡಲು ಯಾವುದೇ ದೊಣ್ಣೆ ನಾಯಕರ ಅಪ್ಪಣೆಗೆ ಕಾಯದೆ, ಸರ್ಕಾರವೇ ಅಂಗಡಿ ಮಾಡಲು ಏಲಂ ಹಾಕಬೇಕು.
ಸರ್ಕಾರೀ ಸ್ಥಳಗಳಲ್ಲೂ ಮುಸಲ್ಮಾನರು, ಕ್ರೈಸ್ತರು ವ್ಯಾಪಾರ ಮಾಡಬಾರದು ಅನ್ನುವುದು ಮತೀಯವಾದದ ಪರಾಕಾಷ್ಠೆ. ಇದನ್ನು ನಿಯಂತ್ರಣ ಮಾಡದಿದ್ದರೆ ಬದುಕಿಗಾಗಿ ಕರಾವಳಿ ರಣರಂಗವಾದೀತು. ಬಲಾತ್ಕಾರವಾಗಿ ಆರ್ಥಿಕ ದಂಗಲ್ ಮಾಡುವ ಬಿಜೆಪಿ ಪರಿವಾರವನ್ನು ಮತ್ತು ಇವರ ನಕಲಿ ಹಿಂದುತ್ವದ ಇಂತಹ ವ್ಯಾಪಾರೀ ಹೋರಾಟವನ್ನು ಧಿಕ್ಕರಿಸೋಣ. ಕರಾವಳಿಯಲ್ಲಿ ಸೌಹಾರ್ದದಿಂದ ಜನ ಬದುಕುವಂತಾಗಲಿ.
ಸಂತೋಷ ಪೂಜಾರಿ
ಹಿಂದೂ ಜಾತ್ರಾ ಭಕ್ತರ ಸಮಿತಿ, ದ. ಕ ಜಿಲ್ಲೆ.
ಇದನ್ನೂ ಓದಿ–ಅಂಬೇಡ್ಕರರ ಚಿಂತನೆಗಳ ಹಿನ್ನೆಲೆಯಲ್ಲಿ ಮಹಿಷಾಸುರ ಮತ್ತು ಮಹಿಷಮರ್ದಿನಿ