Home ಜನ-ಗಣ-ಮನ ಹೆಣ್ಣೋಟ ಪುಂಡು ಗಂಗೆಯ ಘನಂದಾರಿ ಕೆಲಸ

ಪುಂಡು ಗಂಗೆಯ ಘನಂದಾರಿ ಕೆಲಸ

0

( ಈ ವರೆಗೆ…)

ತನ್ನದೇ ಪಟಾಲಮ್ಮನ್ನು ಕಟ್ಟಿಕೊಂಡು ಗಂಗೆ ಇನ್ನಿಲ್ಲದ ಪುಂಡಾಟಗಳನ್ನು ಮಾಡುತ್ತಾಳೆ. ದನದ ಜಾತ್ರೆಗೆ ಹೋಗಿ ನೋಡಿ ತಾನೂ ಮುಂದಿನ ಬಾರಿ ದನ ಒಯ್ದು ಬಹುಮಾನ ಗಿಟ್ಟಿಸುವುದಾಗಿ ಹೇಳಿ ಒಂದು ಕರುವನ್ನು ಸಾಕುತ್ತಾಳೆ. ಆ ಕರುವನ್ನು ಸೊಂಪಾಗಿ ಬೆಳೆಸುವ ಸಲುವಾಗಿ ತನಗಾಗದವರ ಹೊಲ ಬೆಳೆ ಎಲ್ಲ  ಮೇಯಿಸುತ್ತಾಳೆ. ಕೊನೆಗೆ ತನ್ನ ಚೆಂದದ ಕರುವನ್ನು ಜಾತ್ರೆಗೆ ಕೊಂಡೊಯ್ದು ಬಹುಮಾನ ಗಿಟ್ಟಿಸಿಕೊಳ್ಳುತ್ತಾಳೆ. ಅವಳ ಮುಂದಿನ ಪುಂಡಾಟದ ಕತೆ ಗೊತ್ತೇ? ಓದಿ..  ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ಮೂವತ್ತ ನಾಲ್ಕನೆಯ ಕಂತು.

ತಾನು ಬಹುಮಾನವಾಗಿ ಗೆದ್ದ ಕಂಚಿನ ಗಂಗಾಳವನ್ನು ಅತ್ತ ಇತ್ತ ಕದಲಿಸದಂತೆ ತನ್ನ ಬಳಿಯೇ ಹೊತ್ತು, ಬೀಗುತ್ತಾ ಓಡಾಡುತ್ತಿದ್ದ ಗಂಗೆಯನ್ನು, ಊರವರ ಹೊಗಳಿಕೆಯ ಮಾತುಗಳು ಇನ್ನಷ್ಟು ಅಟ್ಟಕ್ಕೇರಿಸಿ ಬಿಟ್ಟಿದ್ದವು. ಎರಡು ಮೂರು ದಿನ ಕಳೆದರು ಆ ಖುಷಿಯ ಅಮಲಿನಲ್ಲೇ ತೇಲುತ್ತಿದ್ದ  ಪುಂಡು ಗಂಗೆ, ಅಂದು ಸಂಜೆ ತನ್ನ ಪಟಾಲಮ್ಮಿನೊಂದಿಗೆ ಮರಗಾಲು ಕಟ್ಟಿಕೊಂಡು ಬೀದಿಯಲ್ಲಿ ಆಡುತ್ತಿದ್ದಳು. ಎಂದಿನಂತೆ ಮರದ ದಿಮ್ಮಿಗಳನ್ನು ಲಾರಿಗೆ ತುಂಬಿಸಿ  ತನ್ನ ಮಾವುತನೊಂದಿಗೆ ಘನಗಂಭೀರವಾಗಿ ಊರೊಳಗಾಸಿ ನಡೆದು ಹೋಗುತ್ತಿದ್ದ ಆನೆಯನ್ನು ಕಂಡು, ಚಾಣತ್ತಿದವಳಂತೆ ಗೆಳೆಯರೊಂದಿಗೆ ಪಂಥ ಕಟ್ಟಿ  ಅದರ ಅಂಡಿನೊಳಕ್ಕೆ  ಕೋಲಿನಿಂದ ಬಲವಾಗಿ ತಿವಿದು ಅವಾಂತರ ಎಬ್ಬಿಸಿ ಬಿಟ್ಟಿದ್ದಳು. 

 ಕ್ಷಣಾರ್ಧದಲ್ಲಿ ಆನೆಯ ಪಿತ್ತ ನೆತ್ತಿಗೇರಿ, ಕಿವಿ ಕಿತ್ತು ಬರುವಂತೆ ಕೂಗು ಹಾಕುತ್ತಾ ಗರಕ್ಕನೆ ಅವಳೆಡೆಗೆ ತಿರುಗಿ ಕೆರಳಿ ನಿಂತಿತು. ಅದರ ಆವೇಶಕ್ಕೆ ಅಲ್ಲಿ ಸೇರಿದ್ದ ಜನಜಂಗುಳಿ ದಿಕ್ಕಾಪಾಲಾಗಿ ಓಡಿ ಅವರಿವರ ಮನೆ ಎನ್ನದೆ ನುಸುಳಿ ಕೊಂಡು ಮಾಯವಾಗಿತ್ತು. ಆನೆಯ ಮೇಲೆ ಕುಳಿತಿದ್ದ ಮಾವುತ ದಡಬಡಾಯಿಸಿ ಚಂಗನೆ ಕೆಳಕ್ಕೆ ನೆಗೆದು ಮುಂದೆ ನಡೆಯಬಹುದಾದ ಅಚಾತುರ್ಯವನ್ನು ಊಹಿಸಿದ. ಮಾವುತ  ತನ್ನೆಲ್ಲಾ ಬಲವನ್ನು ಬಳಸಿ ತನ್ನ ಪ್ರೀತಿಯ ಆನೆಯನ್ನು ಅಂಕುಶದಿಂದ ಹಿಡಿತಕ್ಕೆ ತಂದು ಕೊಳ್ಳುವುದರಲ್ಲಿ ಹೈರಾಣಾಗಿ ಹೋಗಿದ್ದ. ಹಾಗೂ ಹೀಗೂ ಅದರ ಕಾಲಿಗೆ ಸರಪಳಿ ಕಟ್ಟಿ, ಕಡ್ಡಿ ತಿವಿದ ಗಂಗೆಯನ್ನು ಅಟ್ಟಿಸಿ ಕೊಂಡು ಓಡಿದ್ದ.

ಚಾಲಾಕಿ ಗಂಗಮ್ಮ ಕೈಗೆ ಸಿಗುವುದುಂಟೇ.. ಆ ಆನೆಯ ಕೂಗಿಗೆ ಮಿಂಚುಳ್ಳಿಯಂತೆ ಮಾಯವಾದವಳು, ದಿನ ಎರಡಾದರು ಪತ್ತೆಯೇ ಇಲ್ಲ. ಮನೆಯವರಂತೂ  ಹುಡುಕಬಾರದ ಜಾಗವನ್ನೆಲ್ಲಾ ಹುಡುಕಿ ಸೋತರು. ಕೊನೆಗೆ ಕೋಪದಿಂದ ಕುದಿಯುತ್ತಿದ್ದ ಅಪ್ಪ “ಬಂಚತ್…. ಆ ಮುಂಡೆ ಮಗ್ಳಿಂದ ನಮ್ಗೆ ನಿರ್ವಾಕಿಲ್ಲ. ಹಾಳಾಗೋಗಲಿ ಬುಡಿ ಹುಡ್ಕಕೋಗ್ ಬ್ಯಾಡಿ. ಹೊಟ್ಟೆ ಚನ್ನಾಗಸುದ್ರೆ ತಾನೇ ಬಾಲ ಮುದ್ರುಕೊಂಡು ಬತ್ತಳೆ”. ಎಂದು ಹೇಳಿ ಮನೆಯವರನ್ನು ಸುಮ್ಮನಾಗಿಸಿದ್ದ.

ಮನೆಯವರ ಕೈಗೆ ಸಿಕ್ಕರೆ ತನ್ನ ಉಳಿಗಾಲವಿಲ್ಲ ಎಂದು ಚೆನ್ನಾಗಿ ಊಹಿಸಿದ್ದ  ಗಂಗೆ, ಯಾರ ಕಣ್ಣಿಗೂ ಬೀಳದಂತೆ  ಮನೆಯ ಹಿಂದೆ ರಾಶಿ ಒಟ್ಟಿದ್ದ ಸೌದೆಯ ಗೂಡಿನಲ್ಲಿ ಅವಿತು ಕುಳಿತಿದ್ದಳು. ಮನೆಯವರ ಒಂದೇ ಒಂದು ಅನುಕಂಪದ ಮಾತು ಕಿವಿ ಮೇಲೆ ಬಿದ್ದರೆ ಸಾಕು ಎಂದು ಚಾತಕ ಪಕ್ಷಿಯಂತೆ   ಕಿವಿ ಅಗಲಿಸಿ ಕಾದು ಕುಳಿತವಳಿಗೆ ನಿರಾಸೆಯಾಗಿತ್ತು. ಕೊನೆಗೆ   ವಿಧಿಯಿಲ್ಲದೆ ಹಸಿವು ನಿದ್ದೆ ನೀರಡಿಕೆಗಳನ್ನು ಸಹಿಸಲಾರದೆ ಸೋತು, ಸೌದೆ ತೆಗೆದು ಕೊಳ್ಳಲು ಬಂದ ಅವ್ವನನ್ನು ಕಂಡು ಮೆಲ್ಲಗೆ ಮೇಲೆದ್ದಳು. ಆ ಕತ್ತಲ ಕೋಣೆಯಲ್ಲಿ ಅವಳನ್ನು ಕಂಡು ಗಾಬರಿ ಬಿದ್ದ ಅವ್ವ  ಅಯ್ಯೋ..”ಹುಚ್ಮುಂಡೆ ಮಗಳೆ  ಜೀವನೇ ದಸುಕ್ ಅನ್ತಲೆ” ಎಂದು ತಾನು ಹಿಡಿದಿದ್ದ ಸೌದೆ ಪಾಲಿನಿಂದ ಪೈಡ್ ಎಂದು ಬಿಗಿದು ಒಳಕ್ಕೆ ಎಳೆದು ಕೊಂಡು ಬಂದಿದ್ದಳು. 

ಬೇರೆ ಸಮಯವಾಗಿದ್ದಿದ್ದರೆ  ಊರು ಕೇರಿ ಒಂದಾಗುವಂತೆ ರಂಪರಾಮಾಯಣ ಮಾಡಿಬಿಡ ಬಹುದಾಗಿದ್ದ ಗಂಗೆ, ತಾನು ಎಸಗಿದ್ದ ಐನಾತಿ ಕೆಲಸಕ್ಕೆ  ಹೆದರಿ ಅವ್ವನ ಹೊಡೆತಕ್ಕೆ ಕಾಲಿನ ಮೀನಾ ಖಂಡ ಕಿತ್ತು ರಕ್ತ ಒಸರುತ್ತಿದ್ದರು ಕಮಕ್ ಕಿಮಕ್ ಎನ್ನಲಿಲ್ಲ.  ಅವ್ವ ಕೊಟ್ಟ ಅನ್ನ ಉಂಡು ಮೇಲೇಳುವವರೆಗೂ ಸುಮ್ಮನಿದ್ದ ಅಪ್ಪ  ಅವಳು ಊಟ ಮುಗಿಸಿ ಹೊರ ಬಂದದ್ದೆ ತಡ, ಅಂಡಿನ ಮೇಲೆ ನಾಲ್ಕು ಬಿಟ್ಟು” ಬಂಚತ್ ಇನ್ನೊಂದಪ್ಪ ಇಂತ ಕಿಡ್ಗೇಡಿ ಕೆಲ್ಸಾ ಮಾಡಿದ್ಯೋ ನಿನ್ನ ಹುಟ್ಲಿಲ್ಲ ಅನ್ನುಸ್ ಬುಡ್ತಿನಿ ಹುಷಾರ್” ಎಂದು ಗದರಿಸಿದ.

ಉದ್ದಕ್ಕೂ ಇಂತಹ ಪುಂಡಾಟ ಆಡುತ್ತ ಯಾರಿಗೂ ಕ್ಯಾರೆ ಅನ್ನದಂತೆ ಬೆಳೆದ ಗಂಗೆ, ಮನೆಯವರ ಒತ್ತಾಯಕ್ಕೆ ಮಣಿದು ಹಾಗೂ ಹೀಗೂ ಏಳನೇ ಇಯತ್ತೆಯವರೆಗೂ ಕಷ್ಟಾಪಟ್ಟು ದೇಕಿದಳು. ಯಾವಾಗ ಹಿಂದಲ ಮನೆಯ ರುದ್ರಿಯ ಸಹವಾಸಕ್ಕೆ ಬಿದ್ದಳೋ ಅಂದಿನಿಂದ ಸುಳ್ಳು ಹೇಳಿ ಶಾಲೆ ತಪ್ಪಿಸುವ ಪರಿಪಾಠ ಆರಂಭಿಸಿದಳು..

ನಾರಿಪುರದ ಬಸವೇಶ್ವರ ಗುಡಿಯ ಪೂಜಾರಿಯಾಗಿದ್ದ ನಾರಾಯಣ ಪೂಜಾರಿ, ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಿ   ಇಡೀ ಊರಿಗೆ ಮಾದರಿಗಳನ್ನಾಗಿ ಕಟ್ಟಿ ನಿಲ್ಲಿಸಬೇಕೆಂದು ಪಣತೊಟ್ಟಿದ್ದ. ಅಂತೆಯೇ ತನ್ನ ಐದು ಮಕ್ಕಳನ್ನು ಅತಿ ಕಟ್ಟು ನಿಟ್ಟಿನಿಂದ ಬೆಳೆಸತೊಡಗಿದ್ದ. ಮಡಿ ಮೈಲಿಗೆ, ಹೋಮ ಹವನ, ಪೂಜೆ ಪುನಸ್ಕಾರ, ಯೋಗ ಧ್ಯಾನ, ಹೀಗೆ ಅನೇಕ ಸಂಸ್ಕಾರಗಳೆಂಬ ಸರಪಳಿಯಲ್ಲಿ ಅವರ ಬಾಲ್ಯವನ್ನು ಬಂಧಿಸಿ ಉಸಿರು ಕಟ್ಟುವಂತೆ ಮಾಡಿದ್ದ. ಬುದ್ಧಿ ಬಲಿಯುತ್ತಾ ಅಪ್ಪ ಹಾಕಿದ ಬೇಲಿದಾಟ ತೊಡಗಿದ್ದ ಆ ಮಕ್ಕಳು  ಒಳಗೊಂದು ಹೊರಗೊಂದಾಗಿ ನಡೆಯುವುದನ್ನು ಲೀಲಾಜಾಲವಾಗಿ ರೂಢಿಸಿಕೊಂಡು ಬಿಟ್ಟಿದ್ದರು. 

ಇದನ್ನು ಓದಿದ್ದೀರಾ  ಪುಂಡು ಪಟಾಲಾಮಿನ ರಾಣಿ ಗಂಗೆ

ಸುಳ್ಳಿನಿಂದ ಹಿಡಿದು ಕಳ್ಳತನದವರೆಗೂ  ನೀರು ಕುಡಿದಂತೆ ಸರಾಗವಾಗಿ ನಿರ್ವಹಿಸುತ್ತಾ ಅಪ್ಪನಿಗೆ ಮಂಕು ಬೂದಿ ಎರಚಿ ತಮ್ಮ ಇಷ್ಟಾನಿಷ್ಟಗಳನ್ನು ಈಡೇರಿಸಿ ಕೊಳ್ಳತ್ತಿದ್ದ ಆ ಐದು ಜನ ಮಕ್ಕಳು ನಾರಿಪುರದ ತುಂಬಾ ಒಳಗೊಳಗೆ ಕುಖ್ಯಾತಿ ಹೊಂದಿದ್ದರು.

ಇಂತಹ ರುದ್ರಿಗೆ ಗಳಸ್ಯ ಕಂಠಸ್ಯವಾಗಿದ್ದ ಗಂಗೆ, ರುದ್ರಿಯ ಜೇನುತುಪ್ಪದಂತಹ ಮಾತಿಗೆ ಮರುಳಾಗಿ ತನ್ನ ಮನೆಯ ದವಸ ಧಾನ್ಯಗಳನ್ನೆಲ್ಲ ಮನೆಯವರ ಗಮನಕ್ಕೆ ಬಾರದಂತೆ ಇಷ್ಟಿಷ್ಟೇ ರುದ್ರಿಯ ಮನೆಗೆ ಸಾಗಿಸಿ ಅವಳ ಪರಮ ಪ್ರೀತಿಗೆ ಪಾತ್ರಳಾಗಿ ಬಿಟ್ಟಿದ್ದಳು. ಕೆನೆಯೂರಿನ ಮಿಡ್ಲ್ ಸ್ಕೂಲಿನಲ್ಲಿ ಗಂಗೆಯೊಂದಿಗೆ ಒಟ್ಟಿಗೆ ಓದುತ್ತಿದ್ದ ರುದ್ರಿ ” ಲೇ ಗಂಗೂ ಇವತ್ತಲ್ಲ ನಾಳೆ ಮದ್ವೆ ಮಾಡ್ಕೊಂಡು ಗಂಡನ ಮನೆಗೋಗೋದೇನು ತಪ್ಪುತ್ತೇನೇ…. ಅಲ್ಲಿ ಸೊಟ್ಟುಗ ಹಿಡ್ಕೊಂಡು ಅಡುಗೆ ಮನೆಲಿ ಬೇಯೋಕ್ಯಾಕೆ  ಇಷ್ಟೊಂದು ಕಷ್ಟಪಟ್ಟು ಓದ್ಬೇಕು. ಅದುಕ್ಕೆ ನಾನಂತೂ ಇನ್ನ್ಮುಂದೆ  ಓದೋದೆ ಬೇಡ ಅಂದ್ಕೊಂಡಿದ್ದೀನಪ್ಪ….  ನೀನೂ ನನ್ನ್ ಕ್ಲೋಸ್  ಫ್ರೆಂಡ್ ಅಲ್ವೇನೆ ಅಮ್ಮ, ನೀನು ಓದ್ಬೇಡ ಆಯ್ತಾ” ಎಂದು ಹೇಳಿ ಗಂಗೆಯ ತಲೆ ಕೆಡಿಸಿದ್ದಳು. 

ರುದ್ರಿ ಹೇಳಿದ್ದನ್ನು ಶಿರಸಾವಹಿಸಿ ಪಾಲಿಸುತ್ತಿದ್ದ ಗಂಗೆ ಪ್ರತೀದಿನ  ಶಿಸ್ತಾಗಿ ಹೆಗಲಿಗೆ ಶಾಲೆಯ ಬ್ಯಾಗು ನೇತಾಕಿಕೊಂಡು  ಹೊರಟು ನೀರೊಳೆಯ ಹಾದಿಯಲ್ಲಿದ್ದ ಒಂದು ಪಾಳು ಕಲ್ಲು ಮಂಟಪ ಹೊಕ್ಕುತ್ತಿದ್ದಳು. ಮೊದಲೇ ಬಂದು ಗಂಗೆ ತರುವ ತಿಂಡಿ ತೀರ್ಥಗಳಿಗಾಗಿ ಜೊಲ್ಲು ಸುರಿಸುತ್ತಾ ಕಾಯುತ್ತಿದ್ದ ರುದ್ರಿ ಗಂಗೆಯ ಬ್ಯಾಗನ್ನು ಗಬಕ್ಕನೆ ಕಿತ್ತುಕೊಂಡು ಎಲ್ಲವನ್ನು ಜಾಲಾಡಿ, ತಂದಿದ್ದನ್ನು ಮುಕ್ಕಿ ಶಾಲೆ ಬಿಡುವ ಸಮಯಕ್ಕೆ ಸರಿಯಾಗಿ ಮಕ್ಕಳೊಂದಿಗೆ ಕೂಡಿ ಕೊಂಡು ಮನೆ ಸೇರುತ್ತಿದ್ದರು. 

ರೋಗಿ ಬಯಸಿದ್ದು ಹಾಲುಅನ್ನ ; ವೈದ್ಯ ಹೇಳಿದ್ದು ಹಾಲು ಅನ್ನ ಎಂಬಂತೆ ಇದೇ ಸಮಯಕ್ಕೆ ಸರಿಯಾಗಿ ಲಕ್ಷ್ಮಿ ದಯ್ಯ ಹಿಡಿದು ಸತ್ತು,  ಅವ್ವ ಹಾಸಿಗೆ ಹಿಡಿಯಲಾಗಿ ಅನಿವಾರ್ಯವಾಗಿ ಗಂಗೆ ಸ್ಕೂಲಿಗೆ ಎಳ್ಳು ನೀರು ಬಿಟ್ಟು  ಒಲೆಯ ಮುಂದೆ ಸೊಟ್ಟುಗ ಹಿಡಿಯಲಾರಂಭಿಸಿದಳು.  

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.‌

ಇದನ್ನು ಓದಿದ್ದೀರಾ?ಮನೆಗೆ ಬಂದ ಲಕ್ಷ್ಮಿಯಂಥ ಲಕ್ಷ್ಮಿ

You cannot copy content of this page

Exit mobile version