Friday, April 26, 2024

ಸತ್ಯ | ನ್ಯಾಯ |ಧರ್ಮ

ಬಡವರ ಮನೆಗೆ ಭಾಗ್ಯಲಕ್ಷ್ಮಿಯಾಗಲಿರುವ ʼಗೃಹಲಕ್ಷ್ಮಿʼ

ಕರ್ನಾಟಕ ಸರಕಾರದ ಗೃಹಲಕ್ಷಿ ಯೋಜನೆಯು ಮಹಿಳೆಯರಿಗೆ ಹೇಗೆಲ್ಲ ಸಹಕಾರಿಯಾಗಬಹುದು ಎಂಬ ಪ್ರಶ್ನೆಯೊಂದಿಗೆ  ಜನಶಕ್ತಿಯ ಪೂರ್ಣಿಮಾ ಅವರು ಪೀಪಲ್‌ ಮೀಡಿಯಾಕ್ಕಾಗಿ ಮಂಡ್ಯದಲ್ಲಿ ಕೆಲವು ಮಹಿಳೆಯರನ್ನು ಮಾತನಾಡಿಸಿದರು. ಇಬ್ಬರು ಫಲಾನುಭವಿಗಳ ಮಾತುಗಳನ್ನು ಇಲ್ಲಿ ಹಂಚಿಕೊಂಡಿದ್ದು ಅವು ಯೋಜನೆಗಳ ಠೀಕಾಕಾರರ ಎದೆಗೆ ಇರಿಯುವಂತಿವೆ.

ಕರ್ನಾಟಕ ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಗೃಹ ಲಕ್ಷಿ ಯೋಜನೆ ಮತ್ತು ಶಕ್ತಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಬಗ್ಗೆ ಹಲವು ಬಗೆಯ ಚರ್ಚೆಗಳು ಪ್ರಶಂಸೆಗಳು, ಟೀಕೆಗಳು ಅಪಹಾಸ್ಯಗಳು ಕೇಳಿ ಬರುತ್ತಿವೆ. ಈ ಟೀಕೆಗಳು ಮತ್ತು ಅಪಹಾಸ್ಯಗಳನ್ನು ಸುಮ್ಮಗೆ ಕೇಳಿ ಆಚೆಗೆ ಸರಿಸಿ ಬಿಡಬಹುದು. ಆದರೆ ಈ ಯೋಜನೆಗಳು ಬಡವರ ಬದುಕನ್ನು ತಟ್ಟುವ ರೀತಿ ಇದೆಯಲ್ಲ ಅದನ್ನು ಮಾತ್ರ ಅಷ್ಟು ಸಲೀಸಾಗಿ ಆಚೆ ಸರಿಸಲಾಗದು.

ಮಂಡ್ಯ ಜಿಲ್ಲೆಯ ಕೆಲವು ಮಹಿಳೆಯರನ್ನು ಈ ಯೋಜನೆಯ ಬಗ್ಗೆ ಕೇಳಿದಾಗ ಅವರು ಹೇಳಿದ ಮಾತುಗಳು ನಾವು ಹೆಚ್ಚು ಯೋಚಿಸದ ಬಡತನದ ಕರಾಳ ಮುಖವನ್ನು ತೆರೆದಿಟ್ಟಿವೆ. ಇಬ್ಬರು ಫಲಾನುಭವಿಗಳ ಮಾತುಗಳು ಇಲ್ಲಿವೆ.

1. ಜಯಲಕ್ಷ್ಮಿ, ಶ್ರಮಿಕ  ಮಹಿಳೆ ಮಂಡ್ಯ

ನಾನು ಜಯಲಕ್ಷ್ಮಿ. ಇಂದಿರಾ ಬಡಾವಣೆ ಎಂಬ ಒಂದು ಶ್ರಮಿಕ (ಸ್ಲಂ) ನಗರದಲ್ಲಿ ವಾಸಿಸುತ್ತೇನೆ. ನನ್ನ ಗಂಡ ಅಂಗವಿಕಲ. ಹುಟ್ಟಿನಿಂದ ಅಲ್ಲ. ಮಧ್ಯದಲ್ಲಿ ಟಿಬಿ ಕಾಯಿಲೆ ಮತ್ತು ಎಚ್ ಐ ವಿ ಕಾಯಿಲೆಯಿಂದಾಗಿ ಸಾಯುವ ಸ್ಥಿತಿ ತಲುಪಿ ಒಂದು ಕಾಲು ಮತ್ತು ಒಂದು ಕೈ ಸ್ವಾಧೀನ ಕಳೆದುಕೊಂಡವು. ನನ್ನ ಮಗಳು ರಾಗಿಣಿಗೆ ಈಗ 14 ವರ್ಷ. ಅವಳು ಕೂಡ ಹುಟ್ಟುತ್ತಲೇ ಬುದ್ಧಿಮಾಂದ್ಯ ಮಗು. ನಾನು ಕೂಡ ಹೆಚ್ಐವಿ ಪಾಸಿಟಿವ್ ನಿಂದ ಬಳಲುತ್ತಿದ್ದೇನೆ. ಇತ್ತೀಚೆಗೆ ನನಗೂ ಕೂಡ ಶುಗರ್ ಕಾಣಿಸಿಕೊಂಡಿದೆ. ನಾನು ಅಂಗವಿಕಲನಾಗಿರುವ ನನ್ನ ಗಂಡನನ್ನು ಹಾಗೂ ಬುದ್ಧಿಮಾಂದ್ಯಳಾಗಿರುವ ನನ್ನ ಮಗಳನ್ನು ಸಾಕಬೇಕಿದೆ, ನನಗೆ ಅಪ್ಪ ಅಮ್ಮ ಅಥವಾ ಅಣ್ಣ ತಮ್ಮ ಬಂಧು ಬಳಗ ಅಂತ ಯಾರು ಇಲ್ಲ. ಸಾಮಾನ್ಯವಾಗಿ ಸೌತೆಕಾಯಿ ಅಥವಾ ಕಡಲೆಕಾಯಿ ವ್ಯಾಪಾರ ಮಾಡಿ ಜೀವನ ನಡೆಸಬೇಕಾಗಿದೆ. ಜೊತೆಗೆ ನನ್ನ ಗಂಡ ಮತ್ತು ಮಗಳಿಗೆ ಬರುವ ಪಿಂಚಣಿ ಹಣವನ್ನು ಅವಲಂಬಿಸಿ ಬದುಕುವ ಸ್ಥಿತಿ ನಮಗಿದೆ. ಮಧ್ಯದಲ್ಲಿ ಹಲವು ಬಾರಿ ಸಾಕಷ್ಟು ತಿಂಗಳುಗಳ ಪಿಂಚಣಿ ಹಣವು ನಿಂತು ಹೋಗಿ ನನ್ನ ಗಂಡನ ಮಾತ್ರೆಗಳು,  ನನ್ನ ಮಗಳಿಗೆ ಬೇಕಾದಂತಹ ಅಗತ್ಯವಸ್ತುಗಳು ಇತ್ಯಾದಿ ಅವಶ್ಯಕತೆಗಳಿಗೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಂದು ಪುಟ್ಟದಾದಂತಹ ತಗಡಿನ   ಮನೆಯಲ್ಲಿ ವಾಸ ಮಾಡುತ್ತಿದ್ದೇವೆ. ಬಾಡಿಗೆ ಕಟ್ಟದೆ ಹೋದರು ಕರೆಂಟ್ ಬಿಲ್ ಇತ್ಯಾದಿಯನ್ನು ಕಟ್ಟಲೇಬೇಕಿದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ನಾವು ಕೊಂಡು ತಿನ್ನುವಂತಹ ವಸ್ತುಗಳ ಬೆಲೆಯೂ ಹೆಚ್ಚಾಗಿರುವುದರಿಂದ  ಊಟಕ್ಕೆ ಪರದಾಡುವ ಪರಿಸ್ಥಿತಿ ಉಂಟಾಗಿದೆ.

ನನಗೂ ಶುಗರ್ ಕಾಣಿಸಿಕೊಂಡು ಹಲವು ತಿಂಗಳು ನಾನು ಕೂಡ ವ್ಯಾಪಾರ ಮಾಡಲು ಸಾಧ್ಯವಾಗದಷ್ಟು ರೀತಿಯಲ್ಲಿ ಬಳಲಿ ಮನೆಯಲ್ಲಿಯೇ ಉಳಿಯಬೇಕಾದಂತಹ ಪರಿಸ್ಥಿತಿ ಬಂದಿತ್ತು. ಆಗ  ನನ್ನ ಮಗಳು ಗಂಡ ಹಾಗೂ ಮನೆಯನ್ನು ನಿಭಾಯಿಸಿಕೊಂಡು ನನ್ನ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಸಾಕಷ್ಟು ಪರದಾಡಿದ್ದೇನೆ. ನನ್ನ ಅಂಗವಿಕಲ, ಬುದ್ಧಿಮಾಂದ್ಯ ಮಗಳನ್ನು ವ್ಯಾಪಾರಕ್ಕೆ ನನ್ನ ಜೊತೆಯಲ್ಲಿ ಕರೆದುಕೊಂಡು ಹೋಗಿ ವ್ಯಾಪಾರ ಮಾಡಿಕೊಂಡು ಬರುತ್ತಿದ್ದೇನೆ. ನನ್ನ ಗಂಡ ಮನೆಯಲ್ಲಿ ಉಳಿದಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನಮಗೆ ಪ್ರತಿ ತಿಂಗಳು ಸಿಗುವ ಎರಡು ಸಾವಿರದ ಹಣ ಬಹಳ ಬಹಳ ದೊಡ್ಡ ಮೊತ್ತವಾಗಿದೆ. ನನಗೆ ಬೇಕಾಗುವ ಶುಗರ್ ನ ಮಾತ್ರೆ ಮತ್ತು ಇನ್ಸುಲಿನ್‌ ಗೆ ಹಾಗೂ ನನ್ನ ಗಂಡನ ಔಷಧಿಗಳಿಗೆ ಮತ್ತು ಮನೆಯನ್ನು ನಿಭಾಯಿಸಲು ಸ್ವಲ್ಪ ಮಟ್ಟಿಗಾದರೂ ನಮಗೆ ಅದು ಸಹಕಾರಿಯಾಗುತ್ತದೆ. ಇಂತಹ ಯೋಜನೆ ತಂದು 2,000 ರುಪಾಯಿ ಕೊಡುವ ಅವರ ಹೊಟ್ಟೆ ತಣ್ಣಗಿರಲಿ ಅಂತ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ.

2.. ಶಿಲ್ಪ, ಗೃಹಿಣಿ, ಮಂಡ್ಯ

ಗೃಹಲಕ್ಷಿ ಯೋಜನೆಯ ಅಡಿಯಲ್ಲಿ ಬರುವ ರು. 2000 ಹಣ  ನಮ್ಮ ಬದುಕಿಗೆ ಬಹಳ ಸಹಕಾರಿಯಾಗಲಿದೆ. ನನ್ನ ಗಂಡ ಗಾರೆ ಕೆಲಸ ಮಾಡುತ್ತಿದ್ದು ಬರುವ ಸಂಪಾದನೆಯಲ್ಲಿ ನಮ್ಮ ಮನೆಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಬಾಡಿಗೆ ಮನೆಯಲ್ಲಿ ವಾಸ ಮಾಡುವ ನಾವು ತಿಂಗಳಿಗೆ ಬಾಡಿಗೆ, ಕರೆಂಟ್ ಬಿಲ್, ನೀರು ಇತ್ಯಾದಿಯಾಗಿ ತಿಂಗಳಿಗೆ ರು. 3,500 ಕಟ್ಟಬೇಕು. ಅಲ್ಲದೆ ಮನೆಗೆ ಬೇಕಾದ ದಿನಸಿ ಪದಾರ್ಥಗಳ ಬೆಲೆ ತುಂಬಾ ಹೆಚ್ಚಾಗಿದೆ. ಇದರಿಂದಾಗಿ ನನ್ನ ಗಂಡನ ಆದಾಯ ನಮ್ಮ ಮನೆಗೆ ಸಾಕಾಗುವುದಿಲ್ಲ. ಅವರಿಗೆ ಕಾಲುಗಳಲ್ಲಿ ಮೂಳೆ ಸವೆತ ಆಗಿರುವುದರಿಂದ ಒಂದು ವಾರಪೂರ್ತಿ ಕೆಲಸ ಮಾಡಿದರೆ ಮತ್ತೊಂದು ವಾರ ಪೂರ್ತಿ ರಜೆ ಹಾಕಿ ಮನೆಯಲ್ಲಿ ಇರುತ್ತಾರೆ. ನನಗೂ ಥೈರಾಯ್ಡ್ ಸಮಸ್ಯೆ ಇದೆ.  ನಾನು ಆಗಾಗ್ಗೆ  ಚೆಕಪ್ ಮಾಡಿಸಿಕೊಳ್ಳಬೇಕು. ಒಂದು ಬಾರಿ ಚೆಕಪ್ ಮಾಡಿಸಲು ಸುಮಾರು ರು.2,000 ದಿಂದ ರು.2500 ಆದರೂ ಬೇಕು ಮತ್ತು ನನ್ನ ಗಂಡನಿಗೂ ಚಿಕಿತ್ಸೆ ಕೊಡಿಸಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ತೋರಿಸಬಹುದಾದರೂ ವಿಟಮಿನ್ ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ಹೊರಗಡೆ ಮೆಡಿಕಲ್ ನಲ್ಲಿ ಕೊಂಡುಕೊಳ್ಳಲು ಬರೆದು ಕೊಡುತ್ತಾರೆ. ಆದರೆ ಹಣ ಕಾಸಿನ ತೊಂದರೆಯಿಂದ ನಮಗೆ ತೆಗೆದುಕೊಳ್ಳಲು ಆಗುವುದಿಲ್ಲ. ಜೊತೆಗೆ ನಮಗೆ ಆರು ವರ್ಷದ ಹೆಣ್ಣು ಮಗುವಿದ್ದು  ಶಾಲೆಗೆ ಕಳಿಸುತ್ತಿದ್ದೇವೆ. ವರ್ಷಕ್ಕೆ 6,000 ಫೀಜ್ ಕಟ್ಟಬೇಕು. ಮನೆಯ ಹಲವು ತೊಂದರೆ ಗಳಿಂದಾಗಿ ಸ್ತ್ರೀ ಶಕ್ತಿ ಸಂಘಗಳಿಂದ ಸಾಲವನ್ನು ಪಡೆದಿರುತ್ತೇನೆ. ಅದಕ್ಕೂ ವಾರವಾದರೆ ಕಟ್ಟಲೇಬೇಕು. ಕೆಲವು ಸಲ ಹಣವಿಲ್ಲದೆ ಸಾಲಕಟ್ಟಲು ಅವರಿವರ ಬಳಿ ಸಾಲ ಮಾಡಿ ಒದ್ದಾಡುವಂತಹ ಪರಿಸ್ಥಿತಿಯು ಕೂಡ ಬಂದಿದೆ. ನಾನು ಕೂಡಾ ಮನೆಯಲ್ಲಿ ಬಟ್ಟೆ ಹೊಲೆಯುತ್ತೇನೆ. ಆದರೂ   ಇಂತಹ ಸಂದರ್ಭದಲ್ಲಿ ಸರ್ಕಾರದಿಂದ ಸಿಗುವ ರು. 2000 ನಮಗೆ ಹಲವು ರೀತಿಯಲ್ಲಿ ಬಳಕೆಯಾಗುತ್ತದೆ. ಮೊದಲನೆಯದಾಗಿ ನನ್ನ ಗಂಡನಿಗೆ ಒಳ್ಳೆಯ ಕ್ಯಾಲ್ಸಿಯಂ ಮಾತ್ರೆಗಳನ್ನು ಕೊಡಿಸಬಹುದು ನನ್ನ ಥೈರಾಯ್ಡ್ ಚಿಕಿತ್ಸೆಯನ್ನು ಮಾಡಿಸಿಕೊಳ್ಳಬಹುದು ಜೊತೆಗೆ ನನ್ನ ಮಗಳ ಶಾಲೆ ಫೀಸ್ ಕಟ್ಟಿ ಅವಳಿಗೂ ಸ್ವಲ್ಪ ಒಳ್ಳೆಯ ಆಹಾರವನ್ನು ಕೊಡಬಹುದು. ಪ್ರತಿ ತಿಂಗಳು ಬರುವ ರು. 2,000ದಿಂದ ನಮ್ಮ ಹಲವು ಸಮಸ್ಯೆಗಳು ಬಗೆಹರಿಯುತ್ತವೆ. ಹಾಗಾಗಿ ಈ ಯೋಜನೆ ನಮ್ಮಂತ ಹಲವು ಹೆಣ್ಣು ಮಕ್ಕಳಿಗೆ ಸಹಕಾರಿಯಾಗುತ್ತದೆ.

ಪೂರ್ಣಿಮಾ ಜಿ

ಕರ್ನಾಟಕ ಜನಶಕ್ತಿ ಮತ್ತು ಮಹಿಳಾ ಮುನ್ನಡೆಯ ರಾಜ್ಯ ಕಾರ್ಯದರ್ಶಿ 

ಇದನ್ನೂ ಓದಿ-ಗ್ಯಾರಂಟಿ ಯೋಜನೆಗಳು | ಮಹಿಳಾ ಸಬಲೀಕರಣದತ್ತ ಗಟ್ಟಿ ಹೆಜ್ಜೆಗಳು

Related Articles

ಇತ್ತೀಚಿನ ಸುದ್ದಿಗಳು