Sunday, April 28, 2024

ಸತ್ಯ | ನ್ಯಾಯ |ಧರ್ಮ

ಗ್ಯಾರಂಟಿ ಯೋಜನೆಗಳು | ಮಹಿಳಾ ಸಬಲೀಕರಣದತ್ತ ಗಟ್ಟಿ ಹೆಜ್ಜೆಗಳು

ಬೆಲೆ ಏರಿಕೆಯ ಮೇಲೆ ನಿಯಂತ್ರಣ ಸಾಧಿಸುತ್ತಲೆ ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳಿಗೆ ಪುಷ್ಟಿ ನೀಡುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು ಪ್ರತಿ ಸರ್ಕಾರಗಳ ನೈತಿಕ ಜವಾಬ್ದಾರಿಯಾಗುತ್ತದೆ. ಮತ್ತು ಇಂತಹ ಕಾರ್ಯಕ್ರಮಗಳನ್ನು ಸ್ವಾಗತಿಸಲು ಸಹ ಆ ನಾಡಿನ ಹೊಟ್ಟೆ ತುಂಬಿದ ವರ್ಗಗಳಿಗೆ ಉದಾರ ಮನಸ್ಸಿರಬೇಕಾಗುತ್ತದೆ. ನಮ್ಮಲ್ಲಿ ಅದು ಕಾಣೆಯಾಗಿದ್ದು ದುರಂತವೇ ಸರಿ – ಸೌಮ್ಯ ಡಿ, ಸಹಾಯಕ ಪ್ರಾಧ್ಯಾಪಕರು 

ಪ್ರಪಂಚದ ಅನೇಕ ಆರ್ಥಿಕ ತಜ್ಞರ ಅಭಿವೃದ್ಧಿಯ ಮಾನದಂಡಗಳ ವ್ಯಾಖ್ಯಾನಗಳು ಬಂಡವಾಳ, ಉತ್ಪಾದನೆ, ಶ್ರಮ ಹೀಗೆ ವಿವಿಧ ಅಂಶಗಳನ್ನು ಆಧರಿಸಿವೆ. ಆದರೆ I measure the progress of a community by the degree of progress which women have achieved ಅಂದರೆ ನಾನು ಒಂದು ಸಮುದಾಯದ ಅಭಿವೃದ್ಧಿಯನ್ನು ಆ ಸಮುದಾಯದ ಮಹಿಳೆಯರು ಸಾಧಿಸಿದ ಅಭಿವೃದ್ಧಿಯ ಮೂಲಕ ಅಳೆಯುತ್ತೇನೆ ಎನ್ನುವ ವಿಶಿಷ್ಟ ಮಾನದಂಡದ ಮುಖೇನ ಅಭಿವೃದ್ಧಿಯ ವ್ಯಾಖ್ಯಾನ ಹಾಗೂ ಆ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು.

ಈ ಹಿನ್ನೆಲೆಯಲ್ಲಿ ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 49.13 ರಷ್ಟು ಮಹಿಳೆಯರಿದ್ದಾರೆ. ಇದರಲ್ಲಿ ಶೇ. 68.08ರಷ್ಟು ಮಹಿಳೆಯರು ಅಕ್ಷರಸ್ಥರು ಎಂದು 2011ರ ಜನಗಣತಿ ಹೇಳುತ್ತದೆ. ಇದರರ್ಥ ಅಕ್ಷರಸ್ಥರಾದವರೆಲ್ಲ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದಾರೆಂದಲ್ಲ. ಇದರಲ್ಲಿ ಬಹುತೇಕರು ಖಾಸಗಿ ವಲಯಗಳಲ್ಲಿ ದುಡಿಯುತ್ತಿದ್ದಾರೆ. ಖಾಸಗಿ ಸಂಸ್ಥೆಗಳಲ್ಲಾದರೂ ಅತಿಹೆಚ್ಚಿನ ಸಂಬಳ ಗಿಟ್ಟಿಸುವ ಮಹಿಳೆಯರ ಪ್ರಮಾಣವನ್ನು ಗಮನಿಸಿದರೆ ಬಹುಶಃ ಅದು ನಿರಾಶದಾಯಕವೇ ಆಗಿರುತ್ತದೆ. ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಕೆಲಸ ಮಾಡುವುದೇ ಫ್ಯಾಕ್ಟರಿ, ಗಾರ್ಮೆಂಟ್ಸ್ ಗಳಂತಹ ಸ್ಥಳಗಳಲ್ಲಿ. ಇವರನ್ನು ಸಂಘಟಿತ ಅಸಂಘಟಿತ ಎಂದು ಏನೇ ಹೆಸರಿಸಿದರೂ ಅವರ ದುಡಿಮೆಗೆ ದಕ್ಕುವ ಪ್ರತಿಫಲ ತಿಂಗಳಿಗೆ ಸರಾಸರಿ 15,000 ರೂಪಾಯಿಗಳು ಎಂದು ಊಹಿಸಬಹುದು. ಇನ್ನು ದಿನಗೂಲಿ ಮಹಿಳಾ ನೌಕರರ ಪಾಡಂತೂ ಹೇಳತೀರದು. ಹೆಣ್ಣಾಳು ಗಂಡಾಳುಗಳಿಗೆ ನೀಡುವ ದಿನಗೂಲಿಯಲ್ಲಿರುವ ಪಕ್ಷಪಾತವನ್ನು ಪ್ರಶ್ನಿಸುವುದಾದರೂ ಯಾರ ಬಳಿ?

ಪರಿಸ್ಥಿತಿ ಹೀಗಿರುವಾಗ ಕಳೆದ ಒಂದು ತಿಂಗಳಿನಿಂದ ಬಹಳ ಚರ್ಚೆಯಲ್ಲಿರುವ ‘ಬಿಟ್ಟಿ ಭಾಗ್ಯ’ಗಳೆಂದೇ ಅವಹೇಳನಕ್ಕೆ, ಟೀಕೆಗೆ ಒಳಗಾಗುತ್ತಿರುವ ಕಾಂಗ್ರೆಸ್ ಪಕ್ಷದ ‘ಗ್ಯಾರಂಟಿ ಯೋಜನೆ’ಗಳು ಮಹಿಳಾ ಸಬಲೀಕರಣಕ್ಕೆ ಹೇಗೆ ಪೂರಕವಾಗಲಿವೆ ಎನ್ನುವುದು ಈ ಲೇಖನದ ಮುಖ್ಯ ಉದ್ದೇಶವಾಗಿದೆ.

‘ಆನೆಯ ಭಾರ ಆನೆಗೆ, ಇರುವೆಯ ಭಾರ ಇರುವೆಗೆ’ ಎನ್ನುವಂತೆ ಕಳೆದ ಕೆಲವು ವರ್ಷಗಳಲ್ಲಿ ಅಗತ್ಯ ವಸ್ತುಗಳ, ಆಹಾರ ಧಾನ್ಯಗಳ ಅನಿಶ್ಚಿತ ಬೆಲೆ ಏರಿಕೆಯಿಂದಾಗಿ ಮಧ್ಯಮ ವರ್ಗಗಳ ಹಾಗೂ ಕೆಳಮಧ್ಯಮ ವರ್ಗಗಳ ಬದುಕು ಏರುಪೇರಾಗುತ್ತಲೆ ಇದೆ. ಹೊಟ್ಟೆಗೆ ಹೊಂದಿಸಿದರೆ ಬಟ್ಟೆಗೆ, ಬಟ್ಟೆಗೆ ಹೊಂದಿಸಿದರೆ ಬಾಡಿಗೆಗೆ, ಶಿಕ್ಷಣಕ್ಕೆ, ಆರೋಗ್ಯಕ್ಕೆ…. ಹೀಗೆ ಒಂದಕ್ಕೊಂದು ತಾಳ ಮೇಳವೇ ಇಲ್ಲದೆ ಬದುಕಿನ ಲಯ ತಪ್ಪಿದೆ. ಇಂತಹ ಸಂದರ್ಭದಲ್ಲಿ ಯಾರಿಗೆ ಸಾಲತ್ತೆ ಸಂಬಳ? ಎನ್ನುವುದು ಆರ್ಥಿಕವಾಗಿ ದುರ್ಬಲರಾದವರ ದಿನನಿತ್ಯದ ಗೋಳು. ಪರಿಸ್ಥಿತಿ ಹೀಗಿರುವಾಗ ಸರ್ಕಾರಗಳು ಜಾರಿಗೆ ತರುವ ಆಹಾರ ಭದ್ರತೆ, ನಿರುದ್ಯೋಗ ಭತ್ಯೆಯಂತಹ ಅಲ್ಪ ಪ್ರಮಾಣದ ಪ್ರೋತ್ಸಾಹವೇ ಇತ್ತ ಮುಳುಗಲೂ ಆಗದ, ಅತ್ತ ತೇಲಲೂ ಆಗದ ಕುಟುಂಬಗಳ ಬದುಕಿಗೆ ಹುಲ್ಲು ಕಡ್ಡಿಯ ಆಸರೆಯನ್ನಾದರು ನೀಡುತ್ತದೆ. ಬೆಲೆ ಏರಿಕೆಯ ಮೇಲೆ ನಿಯಂತ್ರಣ ಸಾಧಿಸುತ್ತಲೆ ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳಿಗೆ ಪುಷ್ಟಿ ನೀಡುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು ಪ್ರತಿ ಸರ್ಕಾರಗಳ ನೈತಿಕ ಜವಾಬ್ದಾರಿಯಾಗುತ್ತದೆ. ಮತ್ತು ಇಂತಹ ಕಾರ್ಯಕ್ರಮಗಳನ್ನು ಸ್ವಾಗತಿಸಲು ಸಹ ಆ ನಾಡಿನ ಹೊಟ್ಟೆ ತುಂಬಿದ ವರ್ಗಗಳಿಗೆ ಉದಾರ ಮನಸ್ಸಿರಬೇಕಾಗುತ್ತದೆ. ನಮ್ಮಲ್ಲಿ ಅದು ಕಾಣೆಯಾಗಿದ್ದು ದುರಂತವೇ ಸರಿ.

ಅಭಿವೃದ್ಧಿ ಎನ್ನುವುದು ಶ್ರೀಮಂತರ ಸ್ವತ್ತಲ್ಲ. ಅಭಿವೃದ್ಧಿಯ ನಿಜ ಅರ್ಥವೇ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ದುರ್ಬಲರಾದವರನ್ನು ಈ ಎಲ್ಲಾ ವಲಯಗಳಲ್ಲಿ ಮೇಲೆತ್ತುವುದಾಗಿದೆ. ದೊಡ್ಡ ಪ್ರಮಾಣದ ತೆರಿಗೆ ಕಟ್ಟುವವರು ಅಲ್ಪ ಸಂಖ್ಯೆಯಲ್ಲಿಯೂ, ಅಲ್ಪ ಪ್ರಮಾಣದಲ್ಲಿ ತೆರಿಗೆ ಕಟ್ಟುವವರ ಅತಿ ದೊಡ್ಡ ಸಂಖ್ಯೆಯು ಏಕಕಾಲದಲ್ಲಿ ಅಸ್ತಿತ್ವದಲ್ಲಿರುವುದು ನಮ್ಮ ದೇಶವನ್ನೂ ಒಳಗೊಂಡಂತೆ ಬಹುತೇಕ ದೇಶಗಳ ಅರ್ಥ ವ್ಯವಸ್ಥೆಯ ಅತಿದೊಡ್ಡ ವೈರುಧ್ಯವಾಗಿದೆ. ಭಾರತದಲ್ಲಿ ಜಿ.ಎಸ್‌.ಟಿ ಜಾರಿಯಾದ ಮೇಲಂತೂ ತೆರಿಗೆಯಿಂದ ಹೊರತಾದ ಯಾವ ವಸ್ತುವೂ, ತೆರಿಗೆ ಕಟ್ಟದಿರುವ ಯಾವೊಬ್ಬ ವ್ಯಕ್ತಿಯೂ ಇಲ್ಲವಾದಂತಾಗಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ತೆರಿಗೆ ಪಾವತಿದಾರರೇ ಆಗಿದ್ದಾರೆ. ಹೀಗಿರುವಾಗ ಕಡಿಮೆ ಆದಾಯ ಹೊಂದಿರುವ ವರ್ಗಗಳನ್ನು ತೆರಿಗೆ ಕಟ್ಟದೇ ಉಳ್ಳವರಿಂದ ಕೊಟ್ಟು ತಿನ್ನುವ ವಂಚಕರು ಎಂದರೆ ಮೂರ್ಖತನವಾದೀತು. ಇಂತಹ ವರ್ಗಗಳಿಗೆ ಜೀವನಾವಶ್ಯಕ ಆಹಾರದ ಭದ್ರತೆಯನ್ನು ಒದಗಿಸಿದ ಮಾತ್ರಕ್ಕೆ ಅವರನ್ನು ಸೋಂಬೇರಿಗಳನ್ನಾಗಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ಚುನಾವಣಾ ಸಮಯದಲ್ಲಿ ತಾನು ನೀಡಿದ್ದ ಭರವಸೆಗಳಾದ ‘ಐದು ಗ್ಯಾರಂಟಿ’ಗಳನ್ನು ಅದರ ಸಾಧ್ಯಾಸಾಧ್ಯತೆಗಳನ್ನು ಕೂಲಂಕಶವಾಗಿ ಅವಲೋಕಿಸಿಯೇ ಜಾರಿಗೆ ತರುವ ಪ್ರಯತ್ನದಲ್ಲಿದೆ. ಈಗಾಗಲೇ ಕೆಲವನ್ನು ಜಾರಿಗೊಳಿಸಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಳೆದ ವರ್ಷದ ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ ಆರು ತಿಂಗಳಿನಿಂದ ಆರು ವರ್ಷಗಳವರೆಗೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಆರು ಲಕ್ಷಕ್ಕೂ ಅಧಿಕ. ಇನ್ನು ಅಪೌಷ್ಟಿಕತೆ ರಕ್ತ ಹೀನತೆಯಿಂದ ಬಳಲುತ್ತಿರುವ ಮಹಿಳೆಯರ ಸಂಖ್ಯೆ ಯಾದಗಿರಿಯಂತಹ ಜಿಲ್ಲೆಗಳಲ್ಲಿ ಶೇ.26ರಷ್ಟಿದೆ. ವರದಿಗಳ ವ್ಯಾಪ್ತಿಗೆ ಸಿಕ್ಕವು ಇಷ್ಟು. ಸಿಕ್ಕದೆ ಉಳಿದವು ಇನ್ನೆಷ್ಟೋ ! ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 49.13 ರಷ್ಟಿರುವ ಮಹಿಳೆಯರ ಓಟನ್ನು ಗಿಟ್ಟಿಸಿಕೊಳ್ಳಲು ಉಚಿತ ಭಾಗ್ಯಗಳನ್ನು ನೀಡಲಾಗಿದೆ ಎನ್ನುವವರಿಗಾಗಿ ಈ ಅಂಕಿಅಂಶ. ಬೆಚ್ಚನೆಯ ಮನೆ ಇರುವ, ವೆಚ್ಚಕ್ಕೆ ಹೊನ್ನಿರುವ, ಇಚ್ಛೆ ಅರಿವ ಪತಿ/ಸತಿಯಿರುವ ಕುಟುಂಬಗಳಲ್ಲಿ ಸಾಮಾನ್ಯವಾಗಿ ಅಪೌಷ್ಟಿಕತೆ, ರಕ್ತ ಹೀನತೆಗಳು ಕಾಣಿಸಿಕೊಳ್ಳುವುದಿಲ್ಲ ಎನ್ನುವ ಕನಿಷ್ಠ ತಿಳುವಳಿಕೆಯಾದರೂ ಹೀಗೆ ಟೀಕಿಸುವವರಿಗಿದೆ ಎಂಬ ಭರವಸೆಯೊಂದಿಗೆ ಮತ್ತೆ ಚರ್ಚೆಗೆ ಮುಂದಾಗುತ್ತೇನೆ. ಹೀಗಿರುವಾಗ ಪ್ರಸ್ತುತ ಸರ್ಕಾರವು ತಂದಿರುವ ಅನ್ನಭಾಗ್ಯ, ಗೃಹಲಕ್ಷ್ಮಿ, ಭಾಗ್ಯಜ್ಯೋತಿ, ಶಕ್ತಿ ಯೋಜನೆ, ಹಾಗೂ ಯುವನಿಧಿಯಂತಹ ಯೋಜನೆಗಳು ಮಧ್ಯಮ, ಕೆಳಮಧ್ಯಮ ಹಾಗೂ ಬಡ ಕುಟುಂಬಗಳ ಅಸಂಘಟಿತ ಮಹಿಳಾ ಕಾರ್ಮಿಕರ ಪಾಲಿಗೆ ಚೈತನ್ಯ ತುಂಬುತ್ತವೆ ಎನ್ನುವುದಾದಲ್ಲಿ ಅದನ್ನು ಹೃತ್ಪೂರ್ವಕವಾಗಿ ಸ್ವಾಗತಿಸುವುದು ಮಾನವೀಯತೆ ಎನ್ನಿಸಿಕೊಳ್ಳುತ್ತದೆ.

 ಅನ್ನಭಾಗ್ಯದ ಹೆಸರಿನಲ್ಲಿ ತಲಾ ಹತ್ತು ಕೆಜಿ ಅಕ್ಕಿ ನೀಡುವ ಈ ಯೋಜನೆಯು ಪ್ರತಿಯೊಂದು ಸರ್ಕಾರವು ತನ್ನ ಪ್ರಜೆಗಳಿಗೆ ಒದಗಿಸಬೇಕಾದ ಆಹಾರ ಭದ್ರತೆಯ ಅಡಿಯಲ್ಲೇ ಬರುತ್ತದೆ. ಹಾಗಾಗಿ ಇಲ್ಲಿ ಯಾರೂ ಇದನ್ನು ಬಿಟ್ಟಿಯಾಗಿ ನೀಡುವ ಅಥವಾ ತೆಗೆದುಕೊಳ್ಳುವ ಪ್ರಮೇಯವೇ ಬರುವುದಿಲ್ಲ. ಅನ್ನಭಾಗ್ಯದಿಂದಾಗಿ ಕುಟುಂಬವೊಂದು ಅಕ್ಕಿಗಾಗಿ ಒಂದು ತಿಂಗಳಿಗೆ ವ್ಯಯಿಸಬೇಕಿದ್ದ ಸುಮಾರು ಒಂದರಿಂದ ಒಂದೂವರೆ ಸಾವಿರ ರೂಪಾಯಿಗಳು ಇದರಿಂದ ಉಳಿತಾಯವಾದಂತಾಗುತ್ತದೆ.

ಗೃಹಜ್ಯೋತಿ ಯಿಂದಾಗಿ ಉಳಿತಾಯವಾಗುವ ಹಣವೂ ಇಂತಹ ಕುಟುಂಬಗಳಿಗೆ ನಿಜಕ್ಕೂ ದೊಡ್ಡ ಮೊತ್ತವೇ. ಅಕ್ಕಿಯಿಂದಾಗಿ, ವಿದ್ಯುತ್ ಮಿತ ಬಳಕೆಯಿಂದಾಗಿ ಉಳಿತಾಯವಾಗುವ ಹಣ ಕುಟುಂಬಕ್ಕೆ ಅಗತ್ಯವಾದ ಇತರೆ ದಿನಸಿ ಪದಾರ್ಥಗಳಿಗೋ, ಹಾಲು, ಮೊಟ್ಟೆ, ಮೊಸರು, ತರಕಾರಿ, ಹಣ್ಣಿನಂತಹ ಪೌಷ್ಟಿಕ ಆಹಾರಗಳನ್ನು ಕೊಳ್ಳಲೋ ಸಹಾಯವಾಗುತ್ತದೆ. ಇದರಿಂದ ಇಂತಹ ಕುಟುಂಬಗಳ ಕೊಳ್ಳುವ ಸಾಮರ್ಥ್ಯವು ತಮ್ಮ ಮೊದಲಿದ್ದ ಸ್ಥಿತಿಗಿಂತ ಕೊಂಚವಾದರೂ ಹೆಚ್ಚುತ್ತದೆ. ಈ ಕೊಂಚ ಪ್ರಮಾಣದ ಕೊಳ್ಳುವಿಕೆಯೇ ಆರ್ಥಿಕ ಚಟುವಟಿಕೆಯನ್ನು ಸಹ ಚುರುಕುಗೊಳಿಸುತ್ತದೆ.

ಗೃಹಲಕ್ಷ್ಮಿ ಯೋಜನೆ ಅಡಿ ನೀಡಲಾಗುವ ಎರಡು ಸಾವಿರ ರೂಪಾಯಿ ಇತರ ಅಗತ್ಯಗಳಾದ ಶಿಕ್ಷಣ, ಉಳಿತಾಯ ಅಥವಾ ಸಾಲ ಮರುಪಾವತಿಯಂತಹ ಆರ್ಥಿಕ ಚಟುವಟಿಕೆಗಳಿಗೆ ಪ್ರೇರೇಪಿಸುತ್ತದೆ. ಇಡೀ ಜಗತ್ತಿನ ಆರ್ಥಿಕ ವಲಯವನ್ನು ಜೀವಂತವಾಗಿಟ್ಟಿರುವ ಪ್ರಮುಖ ಶಕ್ತಿಯೇ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗಗಗಳು ಎಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ಸರ್ಕಾರ ಕೊಡಮಾಡುವ ಇಂತಹ ಅಲ್ಪ ಪ್ರಮಾಣದ ಪ್ರೋತ್ಸಾಹ ಈ ವರ್ಗಗಳನ್ನು ವಿವಿಧ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸುತ್ತದೆ. ಅದರಲ್ಲಿಯೂ ವಿಶೇಷವಾಗಿ ಮಹಿಳೆಯರು ತಮ್ಮ ಪಾಲಿಗೆ ಬರುವ ಅಲ್ಪ ಪ್ರಮಾಣದ ಹಣವನ್ನು ಅಚ್ಚುಕಟ್ಟಾಗಿ ಕುಟುಂಬಕ್ಕಾಗಿಯೇ ವಿನಿಯೋಗಿಸುತ್ತಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗಿರುವಾಗ ಸರ್ಕಾರ ತೆಗೆದುಕೊಂಡ ಇಂತಹ ಕ್ರಮಗಳು ಮಹಿಳೆಯರ ಸಬಲೀಕರಣದ ದೃಷ್ಟಿಯಲ್ಲಿ ಹೆಚ್ಚು ಸಮರ್ಪಕವಾಗಿದೆ. 

ಶಕ್ತಿ ಯೋಜನೆ ಹೆಸರೇ ಸೂಚಿಸುವಂತೆ ಅಸಂಘಟಿತ ವಲಯದ ಮಹಿಳಾ ಕಾರ್ಮಿಕರಿಗೆ, ದಿನಗೂಲಿ ನೌಕರರಿಗೆ, ಆಶಾ ಕಾರ್ಯಕರ್ತೆಯರಿಗೆ, ಬಿಸಿಯೂಟದ ಕಾರ್ಯಕರ್ತೆಯರಿಗೆ, ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಸಂಘ ಸಂಸ್ಥೆಗಳ ಸಂಯೋಜಕರಿಗೆ, ಗ್ರಾಮಗಳಿಂದ ತಾಲೂಕು ಕೇಂದ್ರಗಳಿಗೆ ಸಣ್ಣಪುಟ್ಟ ಗೃಹ ಉದ್ಯಮಗಳಲ್ಲಿ ತೊಡಗಿಸಿಕೊಳ್ಳಲು ಓಡಾಡುವ ಮಹಿಳೆಯರಿಗೆ, ಏಜೆನ್ಸಿಗಳ ಮೂಲಕ ಹೌಸ್ ಕೀಪಿಂಗ್ ನಂತಹ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮಹಿಳೆಯರಿಗೆ, ಹೀಗೇ……. ಲೆಕ್ಕಕ್ಕೆ ಸಿಗದ ಇಂತಹ ಅದೆಷ್ಟು ಮಹಿಳಾ ಕೂಲಿಕಾರ್ಮಿಕರ ಪಾಲಿಗೆ ಶಕ್ತಿ ಯೋಜನೆ ನಿಜಕ್ಕೂ ಶಕ್ತಿ ತುಂಬುವ ಯೋಚನೆಯಾಗಿದೆ. ಸರಾಸರಿ ಆರರಿಂದ ಏಳು ಸಾವಿರ ರೂಪಾಯಿಗಳನ್ನು ಸಂಪಾದಿಸುವ ಇಂತಹ ಮಹಿಳೆಯರ ದೊಡ್ಡ ಸಂಖ್ಯೆಗೆ ಪ್ರಯಾಣಕ್ಕಾಗಿ ತೆಗೆದಿಡಬೇಕಾದ ಅಂದಾಜು ಎರಡು ಸಾವಿರ ರೂಪಾಯಿಯೇ ಉಳಿತಾಯವಾಗುವುದಾದರೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಚಾಕಚಕ್ಯತೆ ಖಂಡಿತಾ ನಮ್ಮ ಹೆಣ್ಣುಮಕ್ಕಳಲ್ಲಿದೆ. ಪ್ರಯಾಣ ಕೊಂಚ ಕಷ್ಟವೆನಿಸಿದರು ದೂರದೂರುಗಳಲ್ಲಿ ಅಂದರೆ ಜಿಲ್ಲಾ ಕೇಂದ್ರಗಳಲ್ಲಿ ದುಡಿಮೆಗೆ ತೊಡಗಿಸಿಕೊಳ್ಳುವ ಹುರುಪನ್ನು ಶಕ್ತಿ ಯೋಜನೆಯು ನೀಡುತ್ತದೆ. ಇದಕ್ಕೆ ತಕ್ಕಂತೆ ಸೂಕ್ತ ಸಮಯಕ್ಕೆ ಬಸ್ಸುಗಳನ್ನು ಏರ್ಪಾಟು ಮಾಡುವ ಸವಾಲೂ ಸಹ ಸರ್ಕಾರದ ಮುಂದಿದೆ. 

ಬಹಳ ಮುಖ್ಯವಾಗಿ ವಿದ್ಯಾಭ್ಯಾಸಕ್ಕಾಗಿ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ಹೋಗಬೇಕಾದ ವಿದ್ಯಾರ್ಥಿನಿಯರ ಪಾಲಿಗೆ ಈ ಯೋಜನೆ ವರದಾನವೇ ಆಗಲಿದೆ.

ಯುವನಿಧಿ ಯಿಂದ ದೊರೆಯುವ ಭತ್ಯೆ ಹೆಣ್ಣುಮಕ್ಕಳನ್ನು ಉದ್ಯೋಗ ದೊರಕಿಸಿಕೊಳ್ಳುವವರೆಗೂ ಸ್ವಾವಲಂಬಿಯಾಗಿಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಹೆಣ್ಣು ಮಕ್ಕಳು ಇನ್ನುಮುಂದೆ ‘ದೇಶವನ್ನೂ ಸುತ್ತಬಹುದು, ಕೋಶವನ್ನೂ ಓದಬಹುದು’. ಈ ಎರಡು ಸವಲತ್ತುಗಳು ಈ ಮೊದಲು ಗಂಡಿಗೆ ಮಾತ್ರ ಸೀಮಿತವಾದಂತಿತ್ತು. ಅದರಲ್ಲೂ ‘ಗಂಡಸು ಕೂತು ಕೆಟ್ಟ, ಹೆಂಗಸು ತಿರುಗಾಡಿ ಕೆಟ್ಟಳು’ ಎನ್ನುವ ಗಂಡಾಳಿಕೆಯ ಧೋರಣೆಯ ಗಾದೆಗಳನ್ನು ನಾವು ಮಹಿಳೆಯರು ಸುಳ್ಳು ಮಾಡಿ ತೋರಿಸಬೇಕಿದೆ. ತೊಟ್ಟಿಲು ತೂಗುವ ಕೈಗಳಿಗೆ ಕುಟುಂಬವನ್ನು ತೂಗಿಸಿಕೊಂಡು ಹೋಗಲೂ ಬರುತ್ತದೆ, ರಾಷ್ಟ್ರವನ್ನು ತೂಗಿಸಿಕೊಂಡು ಹೋಗಲೂ ಬರುತ್ತದೆ ಎನ್ನುವುದನ್ನು ನಾವೀಗ ಸಾಧಿಸಿ ತೋರಿಸಲು ಸರಿಯಾದ ಕಾಲ ಬಂದಿದೆ. ಇವುಗಳ ಅನುಷ್ಠಾನದಲ್ಲಿ ಕೆಲದಿನಗಳ ಮಟ್ಟಿಗೆ ಏರುಪೇರಾದರೂ ಸರ್ಕಾರದ ಇಂತಹ ಪ್ರಯೋಗಗಳು ದೂರದೃಷ್ಟಿಯುಳ್ಳದ್ದು ಎನ್ನುವುದಂತೂ ಅಕ್ಷರಶಃ ಸತ್ಯ.

ಮಹಿಳೆಯರ ಯಶಸ್ಸಿನ ಹಿಂದೆ ಮಹಿಳಾ ಸಬಲೀಕರಣವನ್ನು ಪೋಷಿಸುವ ಕಾರ್ಯಕ್ರಮಗಳನ್ನು ಜಾರಿಗೆ ತರುವ ಸರ್ಕಾರಗಳ ಯಶಸ್ಸು ಸಹ ಅಡಗಿರುತ್ತದೆ ಎನ್ನುವುದನ್ನು ನಾವು ಮರೆಯಬಾರದು. ಒಂದು ಸಮುದಾಯದ ಅಭಿವೃದ್ಧಿಯನ್ನು ಆ ಸಮುದಾಯದ ಮಹಿಳೆಯರು ಸಾಧಿಸಿದ ಅಭಿವೃದ್ಧಿಯ ಮೂಲಕ ಅಳೆಯುತ್ತೇನೆ ಎನ್ನುವ ಅಂಬೇಡ್ಕರ್‌ ಮಾತಿನಂತೆಇಂತಹ ಸಮಾಜದ ಸ್ಥಾಪನೆಗೆ ಕಾರಣವಾಗುವ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಗಳನ್ನು ಮಹಿಳೆಯರು ಮೊದಲು ಸ್ವಾಗತಿಸಬೇಕಾಗಿದೆ. 

ಸೌಮ್ಯ. ಡಿ

ಸಹಾಯಕ ಪ್ರಾಧ್ಯಾಪಕರು ಹಾಗೂ ಸಂಶೋಧನಾ ವಿದ್ಯಾರ್ಥಿ, ಬೆಂಗಳೂರು.

[email protected]

ಇದನ್ನೂ ಓದಿ-‘ಶಕ್ತಿ ಯೋಜನೆ’ ಯ ಸಾರಥಿ..ರೈಟ್…ರೈಟ್..!

Related Articles

ಇತ್ತೀಚಿನ ಸುದ್ದಿಗಳು