ಬೆಂಗಳೂರು: ದೈವ ನರ್ತಕರು ದೇವರಲ್ಲ, ಅವರು ನೊಂದ ಜನರ ಆರ್ತನಾದವನ್ನು ಪ್ರತಿನಿಧಿಸುವವರು. ಜಮೀನ್ದಾರರು, ಸರ್ಕಾರ, ಪೊಲೀಸರಿಂದ ಆದ ಶೋಷಣೆಯಿಂದ ನರಳಿದ ಜನರ ಕೂಗನ್ನು ನರ್ತಕರು ತೋರಿಸುತ್ತಾರೆ. ನರ್ತಕರು ಹಿಂದೆ ತಮ್ಮ ಜನಗಳ ಮೇಲೆ ಆದ ಹಿಂಸೆಯನ್ನು ಕೂಗಿ ಹೇಳುತ್ತಾರೆ. ಅದನ್ನೇ ಅವರು ದೈವ ಎಂದು ಭಾವಿಸುತ್ತಾರೆ ಎಂದು ಮಾಜಿ ಸಚಿವೆ, ಚಿಂತಕಿ ಬಿ.ಟಿ.ಲಲಿತಾ ನಾಯಕ್ ಹೇಳಿದ್ದಾರೆ.
ʻಪೀಪಲ್ ಮೀಡಿಯಾʼ ಜೊತೆ ಮಾತನಾಡಿದ ಲಲಿತಾ ನಾಯಕ್, ದೈವ ನರ್ತಕರಿಗೆ ಮಾಶಾಸನ ಕೊಡಬಾರದು ನಾನು ಹೇಳಿಲ್ಲ. ಆದರೆ ಬೂತಾರಾಧನೆಯಲ್ಲಿ ದೈವಾಹನೆ ಆಗುವುದೆಲ್ಲ ಮೂಢ ನಂಬಿಕೆ. ಅದರಲ್ಲಿ ಅನುಮಾನವಿಲ್ಲ. ಎಲ್ಲರಿಂದ ದೌರ್ಜನ್ಯಕ್ಕೆ ಒಳಗಾದ ಜನರು ತಮ್ಮ ಧ್ವನಿಗೆ ಬೆಂಬಲವೇ ಇಲ್ಲದಾಗ ಹೀಗೆ ದೈವದ ಮೊರೆಹೋಗುತ್ತಾರೆ. ಅದೇ ಆಚರಣೆಯಾಗಿ ಬಳಕೆಯಲ್ಲಿದೆ ಎಂದು ಹೇಳಿದರು.
ಸರ್ಕಾರ, ಸಮಾಜ ತಮ್ಮನ್ನು ಕೈಬಿಟ್ಟಾಗ ಅಸಹಾಯಕ ಜನರು ಬಂಡುಕೋರರಾಗಿಬಿಡುವ ಸಾಧ್ಯತೆ ಇರುತ್ತದೆ. ಆದರೆ ಈ ಜನರು ದೈವಗಳು ತಮ್ಮನ್ನು ರಕ್ಷಿಸುತ್ತವೆ ಎಂದು ನಂಬಿ ಅವುಗಳ ಮೊರೆ ಹೋಗುತ್ತಾರೆ. ಇದರಲ್ಲಿ ವೈಜ್ಞಾನಿಕ ಸತ್ಯಾಂಶಗಳು ಇಲ್ಲ ಎಂದು ಅವರು ಹೇಳಿದರು.
ಕಾಂತಾರ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಅತ್ಯಂತ ಜಾಣತನದಿಂದ ಸಿನಿಮಾ ನಿರ್ದೇಶಿಸಿದ್ದಾರೆ. ಸತ್ಯವನ್ನು ಹೇಳಿದರೆ ಜನರು ಒಪ್ಪುವುದಿಲ್ಲ. ಸತ್ಯ ಹೇಳಿದವರನ್ನು ಕೊಲ್ಲಲೂ ಹೇಸದ ಜನರಿರುವ ಸಮಾಜ ನಮ್ಮದು. ಹೀಗಾಗಿ ಬೂತಾರಾಧನೆಯ ವಿಷಯವನ್ನು ಇಟ್ಟುಕೊಂಡು ಕಾಡಿನ ಜನರು, ದಲಿತರ ಮೇಲೆ ಆಗಿರುವ, ಆಗುತ್ತಿರುವ ದೌರ್ಜನ್ಯಗಳನ್ನು ಅವರು ಬುದ್ಧಿವಂತಿಕೆಯಿಂದ ಚಿತ್ರಿಸಿದ್ದಾರೆ ಎಂದು ಲಲಿತಾ ನಾಯಕ್ ಹೇಳಿದರು.
ದೈವ ನರ್ತಕರನ್ನು ಮೌಢ್ಯದಿಂದ ಹೊರಗೆ ತಂದು ಅವರಿಗೆ ಹೊಸ ಬದುಕನ್ನು ನೀಡುವ ಕೆಲಸವಾಗಬೇಕು. ದೈವ ನರ್ತಕರು ಎಂಬ ಕಾರಣಕ್ಕೆ ಮಾಶಾಸನ ಕೊಡುವುದು ಬೇಡ, ಅವರ ಬದುಕು ಕಟ್ಟಿಕೊಡಲು 2000 ಮಾತ್ರವಲ್ಲ 10,000 ರೂ ಕೊಡಲಿ, ನಾನು ಬೇಡ ಎನ್ನುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮಾಜಿ ಸಚಿವೆ ಬಿ ಟಿ ಲಲಿತ ನಾಯಕ್ ಅವರು ಪೀಪಲ್ ಮೀಡಿಯಾಗಾಗಿ ಕಳುಹಿಸಿದ ಮಾತುಗಳ ಪೂರ್ಣಪಾಠದ ವಿಡಿಯೋ ಇಲ್ಲಿದೆ.