ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರ ಎಂ.ಪಿ.ರಮೇಶ್ ಅವರ ಪುತ್ರ ಚಂದ್ರಶೇಖರ್ ನಿಗೂಢ ಸಾವಿನ ಸುತ್ತ ಹಲವು ಅನುಮಾನ ಹುಟ್ಟಿಸಿರುವುದಂತೂ ಸತ್ಯ. ಮೇಲ್ನೋಟಕ್ಕಷ್ಟೆ ಇದು ಅಪಘಾತ ಎಂದು ಕಂಡುಬಂದರೂ ಕುಟುಂಬದ ಮೂಲಗಳು ಮತ್ತು ಮೃತದೇಹ ಸಿಕ್ಕ ಸ್ಥಿತಿಯ ಪ್ರಕಾರ ಸಹಜವಾಗಿಯೇ ಈ ಅನುಮಾನಗಳು ಹುಟ್ಟಿಕೊಂಡಿವೆ.
ಪ್ರಮುಖವಾಗಿ ಇಲ್ಲಿಯವರೆಗೂ ಪೊಲೀಸ್ ಇಲಾಖೆಯಿಂದ ಯಾವುದೇ ತನಿಖಾ ವರದಿ ಹೊರಬರದೇ ಇದ್ದರೂ ಶಾಸಕ ರೇಣುಕಾಚಾರ್ಯ ಮಾತ್ರ ಇದೊಂದು ವ್ಯವಸ್ಥಿತ ಕೊಲೆ ಎಂದು ಪಟ್ಟು ಹಿಡಿದು ಕೂತಿದ್ದಾರೆ. ಹಾಗಾದರೆ ಪೊಲೀಸರಿಗೂ ಸಿಗದ ಮಾಹಿತಿ ರೇಣುಕಾಚಾರ್ಯ ಮತ್ತು ಕುಟುಂಬದವರಿಗೆ ಸಿಕ್ಕಿದೆಯೇ? ಇದೊಂದು ಕೊಲೆ ಎಂಬುದನ್ನು ಅಷ್ಟು ಒತ್ತಿ ಹೇಳುವುದಾದರೆ ಚಂದ್ರಶೇಖರ್ ಕೊಲೆ(?) ಹಿನ್ನೆಲೆಯಲ್ಲಿ ಕುಟುಂಬದ ಮೂಲಗಳು ಕೊಡುವ ಸಾಕ್ಷ್ಯಗಳು ಏನಾದರೂ ಇದೆಯೇ? ಚಂದ್ರಶೇಖರ್ ಗೆ ರಾಜಕೀಯ ಮತ್ತು ವ್ಯಾವಹಾರಿಕವಾಗಿ ಇದ್ದ ವೈಮನಸ್ಸುಗಳು ಏನು? ಇಂತಹ ಹಲವಷ್ಟು ಅನುಮಾನಗಳು ಹುಟ್ಟಬಹುದು.
ಇವೆಲ್ಲವುಗಳ ನಡುವೆ ಸಾವಿನ ಸಾಧ್ಯಾಸಾಧ್ಯತೆಗಳ ಕೂಲಂಕಷ ಚರ್ಚೆ ಅತ್ಯಗತ್ಯ. ಮೇಲ್ನೋಟಕ್ಕೆ ಚಂದ್ರಶೇಖರ್ ಗುಣ ನಡತೆಗಳ ಬಗ್ಗೆ ಕುಟುಂಬದ ಮೂಲಗಳು ಒಳ್ಳೆಯ ಅಭಿಪ್ರಾಯವನ್ನೇನೋ ಹೇಳಿವೆ. ಆದರೆ ಚಂದ್ರಶೇಖರ್ ಇದ್ದ ಕಾರು ರಾತ್ರಿ ಸಮಯದಲ್ಲಿ ಆದ ಅಪಘಾತದ ಹಿನ್ನೆಲೆಯಲ್ಲಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿ (ಕಾರಿನಲ್ಲಿ ಇಬ್ಬರು ಇದ್ದ ಬಗ್ಗೆ ವರದಿಯಾಗಿವೆ) ಪಾನಮತ್ತರಾಗಿ ವಾಹನ ಚಲಾವಣೆ ಮಾಡಿರಬಹುದಾ ಎಂಬುದು ಹುಟ್ಟಿರುವ ಮತ್ತೊಂದು ಅನುಮಾನ. ಈಗಾಗಲೇ ಕೆಲವು ಸಿಸಿ ಕ್ಯಾಮರಾ ದೃಶ್ಯಗಳಲ್ಲಿ ಕಾರು ವೇಗವಾಗಿ ಚಲಿಸುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಹಾಗಾಗಿ ಆಯ ತಪ್ಪಿ ಚಾಲಕನ ನಿಯಂತ್ರಣ ತಪ್ಪಿಯೂ ಕಾರು ನಾಲೆಗೆ ಬಿದ್ದ ಅನುಮಾನಗಳನ್ನೂ ತಳ್ಳಿ ಹಾಕುವಂತಿಲ್ಲ. ಇದಕ್ಕೆ ಚಂದ್ರಶೇಖರ್ ಅಥವಾ ಆ ಇನ್ನೊಂದು ವ್ಯಕ್ತಿಯ ದೇಹದ ಪರೀಕ್ಷೆ ನಡೆಯಬೇಕು.
ಪ್ರಾಥಮಿಕ ಮಾಹಿತಿಯಂತೆ ಸಾವಿನ ದಿನ ಸಂಜೆ ಚಂದ್ರಶೇಖರ್ ಮತ್ತು ಜೊತೆಗೆ ಬಂದ ಅನಾಮಿಕ ವ್ಯಕ್ತಿ ಕೊಪ್ಪದ ವಿನಯ್ ಗುರು ಆಶ್ರಮಕ್ಕೆ ಭೇಟಿ ನೀಡಿದ್ದರು. ಆದರೆ ಆಶ್ರಮದಲ್ಲಿ ವಿನಯ್ ಗುರು ಭೇಟಿ ಸಾಧ್ಯವಾಗಿರಲಿಲ್ಲ ಎಂಬುದು ಆಶ್ರಮದ ಕಡೆಯಿಂದ ಸಿಕ್ಕ ಮಾಹಿತಿ. ವಿನಯ್ ಗುರು ಭೇಟಿ ಆಗಿದ್ದಿದ್ದರೆ ಸಾವಿನ ಹಿಂದಿನ ಕೆಲವು ಕಾರಣಗಳು ಹೊರಬರುತ್ತಿದ್ದವೋ ಏನೋ! ಆದರೆ ಆ ದಿನ ರಾತ್ರಿಯೇ ಚಂದ್ರಶೇಖರ್ ಮತ್ತೋರ್ವ ವ್ಯಕ್ತಿ ಅಲ್ಲಿಂದ ನಿರ್ಗಮಿಸಿದ್ದಾರೆ. ಅಷ್ಟಕ್ಕೂ ಆ ವ್ಯಕ್ತಿ ಯಾರು? ಕೇವಲ ಇಬ್ಬರೇ ಅಥವಾ ಮೂವರೇ ಎಂಬುದು ಮತ್ತೊಂದು ಅನುಮಾನ. ಸಧ್ಯದ ಮಾಹಿತಿಯಂತೆ ಚಂದ್ರಶೇಖರ್ ಜೊತೆಗೆ ಶಿವಮೊಗ್ಗದ ಸ್ನೇಹಿತ ಕಿರಣ್ ಕೂಡ ಇದ್ದರು ಎನ್ನಲಾಗಿದೆ. ಆದರೆ ಕಿರಣ್ ಶಿವಮೊಗ್ಗದಲ್ಲಿಯೇ ಇಳಿದ ಬಗ್ಗೆ ಮಾಹಿತಿಯಿದೆ. ಹಾಗಾದರೆ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ವರದಿಯಾದಂತೆ, ಶಿವಮೊಗ್ಗ ದಾಟಿದ ನಂತರ ಸಿಗುವ ಸಿಸಿ ಕ್ಯಾಮರಾ ದೃಶ್ಯಗಳಲ್ಲಿ ಕಂಡ ಕಾರಿನಲ್ಲಿ ಇದ್ದ ಮತ್ತೋರ್ವ ವ್ಯಕ್ತಿ ಯಾರು? ಈ ಬಗ್ಗೆ ಶಿವಮೊಗ್ಗ ಮೂಲದ ಕಿರಣ್ ತನಿಖೆಯಾಗಬೇಕಿದೆ.
ರಾಜಕೀಯ ಹಿನ್ನೆಲೆಯಲ್ಲಿ ಆದ ಕೊಲೆ ಎಂಬ ಇನ್ನೊಂದು ಅನುಮಾನದ ಹಿಂದೆ ಶಾಸಕ ಎಂ.ಪಿ.ರೇಣುಕಾಚಾರ್ಯರೇ ಈ ತನಿಖೆಗೆ ಮುಖ್ಯವಾಗಿ ಸಾಕ್ಷ್ಯ ಒದಗಿಸಬೇಕಿದೆ. ಯಾಕೆಂದರೆ ಹೊನ್ನಾಳಿ ವ್ಯಾಪ್ತಿಯಲ್ಲಿ ಎಂತದ್ದೇ ರಾಜಕೀಯ ವೈಮನಸ್ಸು ಇದ್ದರೂ ಅದೂ ಶಾಸಕರ ಕುಟುಂಬದ ಸದಸ್ಯನಾಗಿರುವುದರಿಂದ ಏನಿದ್ದರೂ ರೇಣುಕಾಚಾರ್ಯರ ಕಿವಿಗೆ ಬೀಳಲೇಬೇಕು. ಅದಲ್ಲದೇ ಸ್ವತಃ ರೇಣುಕಾಚಾರ್ಯ ಇದೊಂದು ವ್ಯವಸ್ಥಿತ ಕೊಲೆ ಎಂಬುದನ್ನೇ ಒತ್ತಿ ಹೇಳುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ರೇಣುಕಾಚಾರ್ಯರನ್ನೂ ಸಹ ತನಿಖೆಗೆ ಒಳಪಡಿಸಿದರೂ ಆಶ್ಚರ್ಯವಿಲ್ಲ.
ಇದರ ನಡುವೆ ಶಾಸಕ ರೇಣುಕಾಚಾರ್ಯ ಮಾಧ್ಯಮಗಳಿಗೆ ಕೊಟ್ಟ ಪ್ರತಿಕ್ರಿಯೆಗಳೂ ಸಹ ಗಮನಾರ್ಹ ಅಂಶಗಳಾಗಿವೆ. ಇನ್ನೂ ಸಾವಿನ ಮನೆಯ ಸೂತಕ ಆರದೇ ಇದ್ದರೂ ರೇಣುಕಾಚಾರ್ಯ ಮಾತ್ರ ಇದರ ಹಿಂದೆ ರಾಜಕೀಯದ ‘ಪಿತೂರಿ’ಯನ್ನು ಒತ್ತಾಯಪೂರ್ವಕವಾಗಿ ತುಂಬುತ್ತಿದ್ದಂತೆ ಭಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ರೇಣುಕಾಚಾರ್ಯ ಅವರ ಅತಿಯಾದ ಭಾವುಕತೆ ಪ್ರದರ್ಶನ ಬಗ್ಗೆಯೂ ಚರ್ಚೆ ನಡೆದಿದೆ. ಚಂದ್ರಶೇಖರ್ ಕಾಣೆಯಾದ ಮೊದಲ ದಿನದಿಂದಲೇ ರೇಣುಕಾಚಾರ್ಯ ಅತಿಯಾಗಿ ದುಃಖಕ್ಕೆ ಜಾರಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಿದ್ದಾರೆ. ಹಾಗಾದರೆ ಚಂದ್ರಶೇಖರ್ ಸಾವಿನ ಅನುಮಾನ ಮೊದಲೇ ಇದ್ದಿರಬಹುದಾ ಎಂಬ ಬಗ್ಗೆಯೂ ತನಿಖೆ ಸಾಗಬೇಕಿದೆ.
ಇದರ ನಡುವೆ ಶಾಸಕ ರೇಣುಕಾಚಾರ್ಯ ‘ಹಿಂದೂ, ಹಿಂದೂ ಸಂಸ್ಕೃತಿ, ಹಿಂದೂ ಆಚರಣೆ’ ಅಂತೆಲ್ಲ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಮನೆಯಲ್ಲಿ ಸಾವಾಗಿದ್ದರೂ ರೇಣುಕಾಚಾರ್ಯ ಸಾವನ್ನು ರಾಜಕೀಯಗೊಳಿಸುತ್ತಿದ್ದಾರೆಯೆ? ಇದ್ಯಾವ ಸಂಸ್ಕೃತಿ? ಸಾವಿನ ಹಿನ್ನೆಲೆಯಲ್ಲಿ ರಾಜಕೀಯ ಲಾಭ ಸರಿಯೇ? ಎಂಬುದಾಗಿ ಸಾರ್ವಜನಿಕ ವಲಯದಲ್ಲಿ ಪ್ರಶ್ನೆ ಹುಟ್ಟಿದೆ. ಅತಿ ಭಾವುಕತೆ ಮತ್ತು ಕುಟುಂಬ ಸದಸ್ಯನ ಅನುಮಾನಾಸ್ಪದ ಸಾವು ರೇಣುಕಾಚಾರ್ಯರ ರಾಜಕೀಯ ಲಾಭಕ್ಕೆ ದಾರಿಯಾಗುತ್ತಿದೆಯೇ ಎಂಬುದು ಸಧ್ಯದ ಚರ್ಚೆಯ ಪ್ರಮುಖ ಅಂಶ.
ಇನ್ನು ಚಂದ್ರಶೇಖರ್ ಕೊಲೆಯೇ ಆಗಿದ್ದರೂ ಅದಕ್ಕೆ ಪ್ರಮುಖ ಕಾರಣ ಆತ ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು ಎಂಬುದು ಬಿಜೆಪಿ ಹಿನ್ನೆಲೆಯ ವ್ಯಕ್ತಿಗಳಿಂದ ಕೇಳಿ ಬರುತ್ತಿರುವ ಮಾತುಗಳು. ಹಾಗಾದರೆ ಸೌಮ್ಯ ಸ್ವಭಾವ ಎಂದು ಗುರುತಿಸಿಕೊಂಡಿದ್ದ ಚಂದ್ರಶೇಖರ್ ಯಾರ ಪ್ರಚೋದನೆಗೆ ಬಲಿಯಾಗಿರಬಹುದು? ಹೊನ್ನಾಳಿಯಲ್ಲಿ one and only ಬಿಜೆಪಿ ಫೈರ್ ಬ್ರಾಂಡ್ ಆಗಿದ್ದ ರೇಣುಕಾಚಾರ್ಯರ ಪ್ರಚೋದನಕಾರಿ ಹೇಳಿಕೆಗಳು ವಿರೋಧಿಗಳ ಕೆರಳಲು ಕಾರಣವಾಯ್ತೆ? ರೇಣುಕಾಚಾರ್ಯರ ಕೆಲವು ಆಕ್ರಮಣಕಾರಿ ಹೇಳಿಕೆಗೆ ಸ್ವತಃ ಕುಟುಂಬ ಸದಸ್ಯನೇ ಬಲಿಯಾದನೆ.? ಇಲ್ಲಿ ಮಾಧ್ಯಮಗಳು ಕೇವಲ ರೇಣುಕಾಚಾರ್ಯರನ್ನೇ ಹೆಚ್ಚು ಕೇಂದ್ರೀಕರಿಸುತ್ತಿದ್ದು ಚಂದ್ರಶೇಖರ್ ತಂದೆ, ತಾಯಿ ಮತ್ತು ಆಪ್ತರ ಅಭಿಪ್ರಾಯ ಯಾರೂ ಸಹ ಕೇಳದಂತಾಗಿದೆ.
ಎಂ.ಪಿ.ರಮೇಶ್ ಪುತ್ರ ಚಂದ್ರಶೇಖರನದು ಕೊಲೆ ಅಥವಾ ಅಪಘಾತ ಎಂಬುದು ತನಿಖೆ ನಂತರದ ವಿಚಾರ. ಆದರೆ ಸ್ವತಃ ರೇಣುಕಾಚಾರ್ಯರೇ ಕೊಲೆ ಕೊಲೆ ಎಂದೇ ಒತ್ತಿ ಹೇಳುತ್ತಿರುವಾಗ ಬಿಜೆಪಿ ನಾಯಕರು ಇನ್ನು ಮುಂದಾದರೂ ಪ್ರಚೋದನಾಕಾರಿ ಹೇಳಿಕೆಗಳಿಗೆ ಕಡಿವಾಣ ಹಾಕಬಹುದೇ? ಅಥವಾ ಈ ಸಾವೂ ಕೂಡಾ ಬಿಜೆಪಿ ಹಿನ್ನೆಲೆಯ ರಾಜಕಾರಣಿಗಳಿಗೆ ಮತ ಗಳಿಕೆಯ ಮಾರ್ಗವಾಗುವುದೇ? ಸಾಮಾನ್ಯ ಜನ ಅರ್ಥ ಮಾಡಿಕೊಳ್ಳಬೇಕು ಅಷ್ಟೆ.