Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಬಿಜೆಪಿ ಬೆಂಬಲಿತ ಅತ್ಯಾಚಾರಿಗಳ ಒಳ್ಳೆಯ ಗುಣ ಮತ್ತು ಅದರಾಚೆಗಿನ ಸತ್ಯಗಳು

ಬಿಜೆಪಿ ಬೆಂಬಲಿತ ಅತ್ಯಾಚಾರಿಗಳ ಒಳ್ಳೆಯ ಗುಣ ಮತ್ತು ಅದರಾಚೆಗಿನ ಸತ್ಯಗಳು

0

2002 ರ ಗುಜರಾತ್ ಗಲಭೆಯಲ್ಲಿ ಗರ್ಭಿಣಿ ಹೆಣ್ಣು ಮಗಳಾಗಿದ್ದ ಬಿಲ್ಕಿಸ್ ಬಾನೋ ಮೇಲೆ ಅತ್ಯಾಚಾರ ಮತ್ತು ಆಕೆಯ ಇಡೀ ಕುಟುಂಬವನ್ನು ಕೊಂದ 11 ಮಂದಿ ಅಪರಾಧಿಗಳನ್ನು “ಸನ್ನಡತೆ” ಆಧಾರದಲ್ಲಿ ಗುಜರಾತ್ ಸರ್ಕಾರ ಬಿಡುಗಡೆ ಮಾಡಿತ್ತು. ವ್ಯಾಪಕ ಟೀಕೆ ಮತ್ತು ಕಾನೂನು ಸಮರಕ್ಕೆ ಕೈ ಇಟ್ಟ ನಂತರ ಅಪರಾಧಿಗಳ ಬಿಡುಗಡೆಗೆ ಕೇಂದ್ರ ಸರ್ಕಾರದ ಅನುಮೋದನೆ ಸಿಕ್ಕ ಬಗೆಗಿನ ಆತಂಕಕಾರಿ ವಿಚಾರ ಕೂಡಾ ಹೊರಬಿದ್ದಿತ್ತು.

ಆದರೆ ಅಪರಾಧಿಗಳ “ಸನ್ನಡತೆ”ಯ ಬಿಡುಗಡೆಗೂ ಮುನ್ನ ಪ್ರಕರಣ ವಿಚಾರಣೆ ಹಂತದಲ್ಲಿದ್ದಾಗ ಪೆರೋಲ್‌ನಲ್ಲಿರುವಾಗಲೇ ಅಪರಾಧಿಗಳು ಈ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಮತ್ತು ಕಿರುಕುಳ ನೀಡಿದ ದೂರುಗಳ ಬಗೆಗಿನ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಇದು “ಸನ್ನಡತೆ”ಯ ಸಮರ್ಥನೆಗೆ ವಿರುದ್ಧವಾಗಿದೆ. ಈ ನಡುವೆ ಅಪರಾಧಿಗಳು ಶಿಕ್ಷೆ ಅನುಭವಿಸುತ್ತಿರುವಾಗ ಅವರು ಯಾವುದೇ ತಪ್ಪು ಎಸಗಿಲ್ಲ, ಜೊತೆಗೆ ಈ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಗುಜರಾತ್ ಸರ್ಕಾರ ಈಗಾಗಲೇ ಹೇಳಿಕೊಂಡಿತ್ತು.

ಆದರೆ 2017 ರಿಂದ 2021 ರ ನಡುವೆ, ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳ ವಿರುದ್ಧ ಪ್ರಕರಣದ ಸಾಕ್ಷಿಗಳು ದೂರುಗಳನ್ನು ನೀಡಿದ್ದು ಮತ್ತು ಈ ಬಗ್ಗೆ ಎಫ್‌ಐಆರ್‌ ಕೂಡಾ ದಾಖಲಿಸಿದ್ದು ಗುಜರಾತ್ ಪೊಲೀಸ್ ಇಲಾಖೆಯ ಕಡತಗಳಲ್ಲೇ ಇನ್ನೂ ಜೀವಂತವಾಗಿದೆ.

ಜುಲೈ 6, 2020 ರಂದು ಇಬ್ಬರು ಅಪರಾಧಿಗಳಾದ ರಾಧೇಶ್ಯಾಮ್ ಶಾ ಮತ್ತು ಮಿತೇಶ್‌ಭಾಯ್ ಭಟ್ ವಿರುದ್ಧ ಬಿಲ್ಕಿಸ್ ಬಾನೋ ಪ್ರಕರಣದ ಪ್ರಮುಖ ಸಾಕ್ಷಿಗಳಾದ ಪಿಂಟುಭಾಯ್ ದೂರು ನೀಡಿದ್ದರು. ಈ ಬಗ್ಗೆ ಐಪಿಸಿ ಸೆಕ್ಷನ್‌ 354 (ಹಲ್ಲೆ ಅಥವಾ ಕ್ರಿಮಿನಲ್‌ ಹಿನ್ನೆಲೆ), 504 (ಬೆದರಿಕೆ), 506 (2) (ಕೊಲೆ ಬೆದರಿಕೆ) ಮತ್ತು 114 (ಪ್ರಚೋದನೆ) ಅಡಿಯಲ್ಲಿ ದಾಹೋದ್‌ನ ರಾಧಿಕಪುರ ಪೊಲೀಸ್ ಠಾಣೆಯಲ್ಲಿ ಅಪರಾಧಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಇಬ್ಬರು ಅಪರಾಧಿಗಳಾದ ರಾಧೇಶ್ಯಾಮ್, ಮಿಥೇಶ್ ಭಾಯ್ ಭಟ್ ಮತ್ತು ಮತ್ತೊಬ್ಬ ಆರೋಪಿ ಆಶಿಶ್ ಸೇರಿದಂತೆ ಮೂವರು ವ್ಯಕ್ತಿಗಳು, ಸಬೆರಾಬೆನ್ ಮತ್ತು ಆಕೆಯ ಮಗಳು ಅರ್ಫಾ ಮತ್ತು ಸಾಕ್ಷಿ ಪಿಂಟೂಭಾಯ್‌ಗೆ ಬೆದರಿಕೆ ಹಾಕಿದ್ದಾರೆ ಎಂದು ಈಗ ಬೆಳಕಿಗೆ ಬಂದ ಎಫ್‌ಐಆರ್ ಹೇಳುತ್ತದೆ. ಮತ್ತೊಬ್ಬ ಸಾಕ್ಷಿಯಾದ ಮನ್ಸೂರಿ ಅಬ್ದುಲ್ ರಜಾಕ್, ಅಬ್ದುಲ್ ಮಜೀದ್ ಅವರು ಜನವರಿ 1, 2021 ರಂದು ಸೈಲೇಶ್ ಚಿಮ್ಮನ್‌ಲಾಲ್ ಭಟ್ ವಿರುದ್ಧ ದಾಹೋದ್ ಪೊಲೀಸರಿಗೆ ದೂರು ಸಲ್ಲಿಸಿದರು. ಅವರು ಪೆರೋಲ್‌ನಲ್ಲಿ ಹೊರಬಂದ ಅಪರಾಧಿಯಿಂದ ಬೆದರಿಕೆ ಬಂದಿದೆ ಎಂದು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಸೈಲೇಶ್ ಚಿಮ್ಮನಲಾಲ್ ಭಟ್ ಕೂಡಾ ಬಿಲ್ಕೀಸ್ ಬಾನೋ ಪ್ರಕರಣದ ಪ್ರಮುಖ ಅಪರಾಧಿ.

ಈ ನಡುವೆ ಪೆರೋಲ್ ನಲ್ಲಿ ಇದ್ದ ಸಮಯದಲ್ಲೇ ಲಿಮ್ಖೇಡಾ ಶಾಸಕ ಸೈಲೇಶ್ ಭಾಯ್ ಬಾಭೋರ್ ಮತ್ತು ಸಂಸದ ಜಸ್ವಂತ್ ಸಿಂಗ್ ಬಾಭೋರ್ ಅವರು ಅಪರಾಧಿ ಸೈಲೇಶ್ ಚಿಮ್ಮನ್‌ಲಾಲ್ ಭಟ್ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ಮತ್ತು ಅವರನ್ನು ಸನ್ಮಾನಿಸಿದ ಬಗ್ಗೆಯೂ ದೂರಿನಲ್ಲಿ ದಾಖಲಾಗಿದೆ‌‌. ಇಬ್ಬರು ಬಿಜೆಪಿ ನಾಯಕರು ವೇದಿಕೆ ಹಂಚಿಕೊಂಡಿರುವ ಫೋಟೋವನ್ನು ದೂರಿನಲ್ಲಿ ಲಗತ್ತಿಸಲಾಗಿದೆ. ಆದರೆ ದೂರಿನಲ್ಲಿ ಬಿಜೆಪಿ ಜನಪ್ರತಿನಿಧಿಗಳು ಇದ್ದ ಕಾರಣಕ್ಕೋ ಏನೋ, ಈ ಬಗ್ಗೆ ಎಫ್ಐಆರ್ ದಾಖಲಾಗಿಲ್ಲ.

ಪ್ರಕರಣದ ಇತರ ಇಬ್ಬರು ಸಾಕ್ಷಿಗಳಾದ ಘಾಂಚಿ ಆದಂಭೈ ಇಸ್ಮಾಯಿಲ್‌ಭಾಯ್ ಮತ್ತು ಘಾಂಚಿ ಇಮ್ತಿಯಾಜ್‌ಭಾಯ್ ಯೂಸುಫ್‌ಭಾಯ್ ಅವರು ಅಪರಾಧಿಗಳಲ್ಲಿ ಒಬ್ಬರಾದ ಗೋವಿಂದ್ ನಾಯ್ ವಿರುದ್ಧ ಜುಲೈ 28, 2017 ರಂದು ದೂರು ದಾಖಲಿಸಿದ್ದಾರೆ. “ರಾಜಿ ಮಾಡಿಕೊಳ್ಳಲು ಒಪ್ಪದಿದ್ದರೆ ಆರೋಪಿಗಳು ತಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ” ಎಂದು ಅರ್ಜಿದಾರರು ಗುಜರಾತ್ ಪೊಲೀಸರಿಗೆ ದೂರು ದಾಖಲಿಸಿದ್ದರು. ಈ ದೂರು ಕೂಡಾ ಎಫ್‌ಐಆರ್ ಆಗಿ ಬದಲಾಗಲೇ ಇಲ್ಲ.

ಆಗಸ್ಟ್ 15 ರ ಸ್ವಾತಂತ್ರ್ಯ ದಿನದಂದು “ಉತ್ತಮ ನಡವಳಿಕೆ” ಅಡಿಯಲ್ಲಿ ಮೇಲೆ ಉಲ್ಲೇಖಿಸಿದ ಅಪರಾಧಿಗಳೂ ಸೇರಿದಂತೆ ಒಟ್ಟು 11 ಮಂದಿ ಅಪರಾಧಿಗಳನ್ನು ಬಿಡುಗಡೆ ಮಾಡಲಾಯಿತು. ಬಿಜೆಪಿ ಪಕ್ಷದ ಮುಖಂಡರು ಗುಜರಾತ್‌ನ ಜೈಲಿನ ಹೊರಗೆ ನಿಂತು ಅವರನ್ನು ವೀರರಂತೆ ಹೂಮಾಲೆ ಮತ್ತು ಸಿಹಿತಿಂಡಿಗಳೊಂದಿಗೆ ಸ್ವಾಗತಿಸಿದ್ದರು. ಅಪರಾಧಿಗಳನ್ನು ಏಕೆ ಬಿಡುಗಡೆ ಮಾಡಲಾಯಿತು ಎಂಬುದಕ್ಕೆ ಗುಜರಾತ್‌ ಸರ್ಕಾರ ಉತ್ತರವಾಗಿ ಸರಣಿ ತೀರ್ಪುಗಳನ್ನು ಉಲ್ಲೇಖಿಸಿದೆ.

ಆದರೆ ಗುಜರಾತ್ ಸರ್ಕಾರ ಸುಪ್ರೀಂಕೋರ್ಟ್ ಗೆ ಕೊಟ್ಟ “ಉತ್ತಮ ನಡವಳಿಕೆ”ಯ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ನಿನ್ನೆ ಟೀಕಿಸಿದೆ. “ತೀರ್ಪುಗಳ ಸರಣಿಯನ್ನು ಉಲ್ಲೇಖಿಸಿರುವ ಕೌಂಟರ್ ಅಫಿಡವಿಟ್ ಅನ್ನು ನಾನು ನೋಡಿಲ್ಲ. ಗುಜರಾತ್ ಸರ್ಕಾರದ ಈ ಅಭಿಪ್ರಾಯದಲ್ಲಿ ಹಲವಷ್ಟು ಲೋಪಗಳಿವೆ” ಎಂದು ನ್ಯಾಯಮೂರ್ತಿ ಅಜಯ್ ರಸ್ತೋಗಿ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.

ಅಪರಾಧಿಗಳ ಬಿಡುಗಡೆಯನ್ನು ಸಮರ್ಥಿಸಿಕೊಂಡ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಅವರ ಉತ್ತಮ ನಡವಳಿಕೆಯನ್ನು ಉಲ್ಲೇಖಿಸಿದ್ದಾರೆ. “ಸರ್ಕಾರ ಮತ್ತು ಸಂಬಂಧಪಟ್ಟವರು ಈ ನಿರ್ಧಾರವನ್ನು ತೆಗೆದುಕೊಂಡಾಗ, ಇದು ಕಾನೂನಿನ ಪ್ರಕ್ರಿಯೆಯಾಗಿರುವುದರಿಂದ ನನಗೆ ಅದರಲ್ಲಿ ಯಾವುದೇ ತಪ್ಪು ಕಂಡುಬಂದಿಲ್ಲ” ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರಕರಣದ ಒಟ್ಟು 11 ಮಂದಿ ಅಪರಾಧಿಗಳಲ್ಲಿ 7 ಜನರ ವಿರುದ್ಧ ಆರೋಪ ಕೇಳಿ ಬಂದಿದೆ. ಅದರಲ್ಲಿ 5 ಮಂದಿಯ ಮೇಲೆ ಕೇಸು ದಾಖಲಾದರೆ, 3 ಜನರ ಮೇಲಷ್ಟೇ ಎಫ್ಐಆರ್ ದಾಖಲು ಮಾಡಲಾಗಿದೆ. ಈ ಇಷ್ಟೂ ಜನ ಬಿಜೆಪಿ ಹಿನ್ನೆಲೆಯವರಾಗಿದ್ದು, ಅಪರಾಧ ನಡೆದ ನಂತರ ಬಿಜೆಪಿ ಪಕ್ಷದ ಚುನಾಯಿತ ಶಾಸಕರು, ಸಂಸದರ ಕಡೆಯಿಂದಲೇ ಸನ್ಮಾನಿತರಾದವರು ಎಂಬುದು ಗಮನಾರ್ಹ ಅಂಶ.

ದೂರು ದಾಖಲು ಮಾಡಲು ಮತ್ತು ಮುಂದಿನ ಪ್ರಕ್ರಿಯೆಯಲ್ಲಿ ಎಫ್ಐಆರ್ ದಾಖಲಾಗಲು ಈ ಶಾಸಕ ಮತ್ತು ಸಂಸದರು ಮುಖ್ಯವಾಗಿ ಅಡ್ಡಗಾಲು ಆಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇಷ್ಟಾದರೂ ಬಿಜೆಪಿ ಪಕ್ಷ ಇವರಿಗೆ “ಒಳ್ಳೆಯ ನಡತೆ” ಪ್ರಮಾಣ ಪತ್ರ ನೀಡಿದ್ದು ದುರಂತ. ಈ ಘಟನೆಯಿಂದ ಒಂದಂತೂ ಸ್ಪಷ್ಟ, ಅಪರಾಧಿಯೊಬ್ಬ ಅತ್ಯಾಚಾರ, ಕೊಲೆ, ಗುಂಪುಗಲಭೆಯಂತಹ ಎಂತಹ ಕ್ರಿಮಿನಲ್ ಪ್ರಕರಣದಲ್ಲಿ ಇದ್ದರೂ ಬಿಜೆಪಿ ಪಕ್ಷದ ಹಿನ್ನೆಲೆ ಇದ್ದರೆ ಇಂದಲ್ಲ ನಾಳೆ ಖಂಡಿತ ಎಲ್ಲಾ ಪ್ರಕರಣಗಳಿಂದ ಮುಕ್ತ ಆಗಬಹುದು ಎಂಬ ಸಂದೇಶವನ್ನು ಸಮಾಜಕ್ಕೆ ಕೊಟ್ಟಂತಾಗುತ್ತದೆ.

ಸಧ್ಯ ಈ ಬಿಡುಗಡೆ ಪ್ರಕರಣಕ್ಕೆ ತಡೆ ಹಿಡಿಯಬೇಕು ಎಂದು ಸಲ್ಲಿಸಿರುವ ಅರ್ಜಿ ಈಗ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ಟಿಎಂಸಿ ಸಂಸದೆ ಮೊಹುವಾ ಮೋಯಿತ್ರಾ ಸೇರಿ ಈ ಬಗ್ಗೆ ಅರ್ಜಿ ಸಲ್ಲಿಸಿದ್ದಾರೆ. ಇದರ ನಡುವೆ ಅಪರಾಧಿಗಳ ವಿರುದ್ಧದ ದೂರು, ಎಫ್ಐಆರ್ ಕೂಡಾ ಈಗ ಬೆಳಕಿಗೆ ಬಂದಿರುವುದು, ಅಪರಾಧಿಗಳು ಮತ್ತೆ ಜೈಲು ಸೇರಬಹುದು ಎಂದೇ ಅಂದಾಜಿಸಲಾಗುತ್ತಿದೆ.

You cannot copy content of this page

Exit mobile version