Home ಅಂಕಣ ಎಪ್ಪತ್ತರ ದಶಕದ ಗ್ರಾಮೀಣ ಬದುಕನ್ನು ಜೀವಿಸುವ “ಗೋರೂರು”(ನಾಟಕ ವಿಮರ್ಶೆ)

ಎಪ್ಪತ್ತರ ದಶಕದ ಗ್ರಾಮೀಣ ಬದುಕನ್ನು ಜೀವಿಸುವ “ಗೋರೂರು”(ನಾಟಕ ವಿಮರ್ಶೆ)

0

(ಇತ್ತೀಚೆಗಷ್ಟೇ ಮೈಸೂರಿನಲ್ಲಿ ಪ್ರಯೋಗಗೊಂಡಿರುವ ನಾಟಕದ ವಿಮರ್ಶೆ ಇದು. ಇದೇ ನಾಟಕ ಬೆಂಗಳೂರಿನ ರಂಗಶಂಕರದಲ್ಲಿ ಆಗಸ್ಟ್ 13 ರಂದು ಸಂಜೆ 7.30 ಕ್ಕೆ ಪ್ರದರ್ಶನಗೊಳ್ಳಲಿದೆ.)

  • ದಿಯಾ

ಕನ್ನಡ ರಂಗಭೂಮಿಯ ಇತ್ತೀಚಿನ ಮೂರು ರಂಗ ಪ್ರಯೋಗಗಳಿಂದ ಮಾತು ಪ್ರಾರಂಭ ಮಾಡೋಣ. ಒಂದನೆಯದು ಕೆ.ಬಿ.ಸಿದ್ದಯ್ಯ ಅವರ ದಕ್ಲಕಥಾ ದೇವಿ, ನಂತರ ರಾಮಸ್ವಾಮಿ ಅಯ್ಯಂಗಾರ್ ಅವರ ಗೊರೂರು ಮತ್ತು ಲಂಕೇಶರ ಮುಟ್ಟಿಸಿಕೊಂಡವನು.

ಮೂರೂ ನಾಟಕಗಳ ದನಿ “ಜಾತಿ ವ್ಯವಸ್ಥೆಯ ಕರಾಳತೆ”‌. ಮನುಷ್ಯನ ನರ- ನಾಡಿ ಸೇರಿದಂತೆ ಕಚ್ಚಿ ಎಸೆದ ಉಗುರಿನಲ್ಲೂ ಹುದುಗಿರುವ ಜಾತಿ ಎನ್ನುವ ಹೊಲಸಿನ ಬಗ್ಗೆ ಮಾತನಾಡುತ್ತವೆ. ಈ ಜಾತಿ ಹಿನ್ನೆಲೆಯ ಕಥೆ ಅಥವಾ ಈಗ ರಂಗರೂಪಕ್ಕೆ ಇಳಿದಿರುವ ಪ್ರಯೋಗಗಳ ಬಗ್ಗೆ ಹೇಳುವಾಗ ಲೇಖಕರ ಜಾತಿಗಳನ್ನು ಹೇಳುವುದು ಅನಿವಾರ್ಯ.

ಕೆ.ಬಿ.ಸಿದ್ದಯ್ಯ ನೋವು ಉಣ್ಣುತ್ತಲೇ ಬೆಳೆದವರು. ಆ ನೋವುಗಳನ್ನೇ ಕಾವ್ಯವಾಗಿಸಿದವರು. ಇನ್ನು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮತ್ತು ಲಂಕೇಶರು ಮೇಲ್ಜಾತಿ ಎಂದು ಕರೆಸಿಕೊಳ್ಳುವವರು.

ಮೇಲೆ ಹೇಳಿದ ಈ ಮೂರು ರಂಗಪ್ರಯೋಗಗಳನ್ನು ನೋಡಿದಾಗ ಕನ್ನಡ ರಂಗಭೂಮಿಯ ಹೆಚ್ಚಿನ ನಾಟಕಗಳು “ಜಾತಿ ವ್ಯವಸ್ಥೆ” ಯ ಬಗ್ಗೆ “ಇಕ್ಕುಲ್ರ, ವದಿರ್ಲಾ” ಎಂದೇ ಹೇಳುತ್ತವೆ. ಮರಾಠಿ ರಂಗಭೂಮಿಯ ಪ್ರಭಾವ ಎಂಬುದನ್ನು ನಾನು ಒಪ್ಪಲಾರೆ. ಭಾರತ ಜನನಿಯ ತನುಜಾತೆ ನೆಲದ ಶೋಷಣೆ ಬೇರೆಯದೇ ಸ್ವರೂಪದ್ದು ಹಾಗೂ ಅದಕ್ಕೆ ಪ್ರತಿರೋಧ ಇಲ್ಲಿಯೇ ಹುಟ್ಟಿರುವುದು.

ನನ್ನ ಕಣ್ಣಳತೆಯ ಓದಿನ ವಿಸ್ತಾರದಲ್ಲಿ ಜಾತಿ, ಧರ್ಮ ವ್ಯವಸ್ಥೆ ಪ್ರಶ್ನಿಸುವ ಈ ನೆಲದ ಲೇಖಕರ ಒಂದಷ್ಟು ನಾಟಕಗಳನ್ನು ಹೆಸರಿಸುತ್ತೇನೆ. ಕುವೆಂಪು ಅವರ ಶೂದ್ರ ತಪಸ್ವಿ, ಜಲಗಾರ, ಸಂಕ್ರಾಂತಿ, ಶಿವರಾತ್ರಿ, ಮಹಾಚೈತ್ರ, ಕುಸುಮಬಾಲೆ, ಒಡಲಾಳ, ಊರು ಸುಟ್ಟರೂ ಹನುಮಪ್ಪ ಹೊರಗೆ (ನಿಮಗೆ ತಿಳಿದದ್ದು ಸೇರಿಸಬಹುದು).

ಇಷ್ಟೊಂದು ವಿಚಾರಗಳು ಏಕೆ ಬಂದವು ಎಂದರೆ ಪ್ರಸ್ತುತ ಕನ್ನಡ ರಂಗಭೂಮಿ ಹೋಟೆಲಿನ ರುಬ್ಬುವ ಕಲ್ಲಿನಂತಾಗಿದೆ. ಅದೇ ಇಡ್ಲಿ, ದೋಸೆ, ಚಟ್ನಿಗಳನ್ನೇ ರುಬ್ಬುತ್ತಾ, ಪುಳಿಯೋಗರೆ, ಪೊಂಗಲ್ ತಿನ್ನಿಸುತ್ತಿವೆ. ಇಂತಹ ಹೊತ್ತಿನಲ್ಲಿ ದಕ್ಲಕಥಾ ಹಾಗೂ ಗೊರೂರು ಎನ್ನುವ ಈ ಎರಡು ಪ್ರಮುಖ ಪ್ರಯೋಗಗಳು ಸಾಕಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿವೆ.

ದಕ್ಲಕಥಾ ನಾಟಕವನ್ನ ನಿರ್ದೇಶಕ ಬೇಕಂತಲೇ ಜನಪ್ರಿಯ ಶೈಲಿಯಲ್ಲಿ ಮಾಡಿದ್ದಾರೆ ಎನಿಸದಿರದು. ಇದು ಕಟು ವಾಕ್ಯಗಳು ಎನಿಸಬಹುದು. ತಳವರ್ಗದವರ ನೋವನ್ನು ಹೀಗಾದರೂ ಪ್ರೇಕ್ಷಕರಿಗೆ “ಇಂಜೆಕ್ಷನ್” ಕೊಡಲೇ ಬೇಕು ಎನ್ನುವ ಸಿಟ್ಟೇ? ಗೊತ್ತಿಲ್ಲ.

ಕಾವ್ಯವನ್ನು ಓದುವುದು ಅನುಭವಕ್ಕಾಗಿ, ಒಂದು ಜನಾಂಗೀಯ, ಕುಲದ ಕಥೆಯನ್ನು ರವಷ್ಟು ದಾಟಿಸುತ್ತದೆ. ಇಡೀ ನಾಟಕದಲ್ಲಿ ಹೆಚ್ಚು ತಟ್ಟುವುದು ತಮಟೆ ಹಾಗೂ ಅರೆಯ ಸದ್ದು, ಹಾಗೂ ಸಿದ್ದಯ್ಯ ಅವರ ಬಾಳಕಥೆ. ಮಾತುಗಳು ದೀರ್ಘವಾಗುವುದು ಬೇಡ. ಗೊರೂರಿನ ವಿಚಾರಕ್ಕೆ ಬರೋಣ.

“ಗೊರೂರು” ಲೇಖಕರ ಊರಿನ ಹೆಸರನ್ನೆ ನಾಟಕ ಇಟ್ಟುಕೊಂಡಿದೆ. ರಾಮಸ್ವಾಮಿ ಅವರ ಬರಹಗಳು ಇದೇ ಮೊದಲ ಬಾರಿಗೆ ರಂಗದ ಮೇಲೆ ಬಂದಿದೆ ಎಂದು ತಿಳಿದು ಆಶ್ಚರ್ಯವಾಯಿತು. ರಂಗಭೂಮಿಯವರ ಕಣ್ಣಿನಿಂದ ಇಷ್ಟು ವರ್ಷ ಅಯ್ಯಂಗಾರ್ ತಪ್ಪಿಸಿಕೊಂಡಿದ್ದಾದರೂ ಏಕೆ? ಹೇಗೆ ಎಂದು.

ರಂಗರೂಪಕ್ಕೆ ಇಳಿಸುವಾಗಲೇ ನಿರ್ದೇಶಕರಾದ ಮಂಜುನಾಥ್ ಬಡಿಗೇರ ಗೆದ್ದಿದ್ದಾರೆ. ಹೆಣಿಗೆಯನ್ನು ಚೆನ್ನಾಗಿ ಮಾಡಿಕೊಂಡಿದ್ದಾರೆ. ಗೊರೂರರ ಬದುಕಿನ ಒಳಗೆ ಕೊಂಚ ಇಳಿಯಬಹುದಿತ್ತು. ಅವರ ಸ್ವಾತಂತ್ರ್ಯ ಹೋರಾಟ, ಗಾಂಧಿ ಆಶ್ರಮದ ಅನುಭವ, ಗುಂಡೇಟಿಗೆ ಬಲಿಯಾದ ಮಗ ಹೀಗೆ..

ಅಯ್ಯಂಗಾರಿ ಹೆಣ್ಣು ಮಕ್ಕಳು ಹೀಗೆ ಬಂದು ಹಾಗೆ ಹೋಗುತ್ತಾರೆ. ಎಮ್ಮೆ (ಮಹಿಷನ) ಸುತ್ತಾ ನಡೆಯುತ್ತಿರುವ ರಾಜಕಾರಣಕ್ಕೆ ಎಮ್ಮೆ ಹೂಳುವ ದೃಶ್ಯ ಒಳ್ಳೆಯ ರೂಪಕವಾಗಿ ಒಳೇಟು ನೀಡುತ್ತದೆ.

ದೆವ್ವಗಳೊಟ್ಟಿಗೆ ನಮ್ಮ ಜನ ಸಹಬಾಳ್ವೆ ಮಾಡುತ್ತಾರೆ, ಆದರೆ ಜಾತಿ- ಧರ್ಮಗಳ ಭೂತ ನಮ್ಮ ಊರಿಗೆ ಕಾಲಿಟ್ಟಿಲ್ಲ ಎಂದು ರಾಮಸ್ವಾಮಿ ಹೇಳುತ್ತಾರೆ. ಗೊರೂರಿನ ಮಟ್ಟಿಗೆ ಮಾತು ನಿಜ ಇರಬಹುದೇ? ಎಲ್ಲ ಊರುಗಳಿಗೂ ಇದು ಅನ್ವಯಿಸುತ್ತದೆಯೇ?

ದನ ಕಾಯುವ ಹೊಲೆಯ ತೂರ, ಶಾಲು ಸಾಬಿ, ನಿಂಗನ ಮಗ, ಬಯಲಾಟದ ಎಲ್ಲಾ ಪಾತ್ರಗಳು ನೆನಪಿನಲ್ಲಿ ಉಳಿಯುತ್ತವೆ. ಆದರೂ ಒಂದಷ್ಟು ಪ್ರಶ್ನೆಗಳನ್ನು ಉಳಿಸಿಬಿಡುತ್ತದೆ.

ಇಡೀ ನಾಟಕ ಒಂದು ಗೆರೆ ಆಚೆ ನಿಂತರೇ ಹಾಸ್ಯ ನಾಟಕ ಈ ಕಡೆ ನಿಂತರೇ ಗೊರೂರ ಆಶಯ ಹಾಗೂ ಅವರಿಗೆ ಹಾಸ್ಯಪ್ರಜ್ಞೆ ಎರಡೂ ದಕ್ಕುತ್ತದೆ. “ಈ ಬಾರಿ ನಾಟಕದಲ್ಲಿ ಕುಣಿತ ಬೇಡ ಎಂದು ಸೀನಪ್ಪ ಹೇಳುತ್ತಾನೆ”. ಅದಕ್ಕೆ ರಾಮಸ್ವಾಮಿ ” ಬೇಡ ಒಂದಷ್ಟು ಪರಿಷ್ಕರಣೆ ಮಾಡೋಣ” ನಾಟಕದಲ್ಲಿ ಇರುವ ಮಾತಿನಂತೆ ಈಗಲೂ ನಿರ್ದೇಶಕರಿಗೆ ಹಾಗೂ ನಿರಂತರ ತಂಡಕ್ಕೆ ನಾಟಕದಲ್ಲಿ ಒಂದಷ್ಟು ಪರಿಷ್ಕರಣೆ ಮಾಡುವ ಅವಕಾಶವಿದೆ.

ಬಯಲಾಟದ ಉಸ್ತುವಾರಿ ಶಾಲು ಸಾಬಿಯದು “ರಾಮನ ಪಾತ್ರಧಾರಿಗೆ ರಾಮರಸ ಕುಡಿಸುವ, ಪಾತ್ರಧಾರಿ ವಿಶ್ರಾಂತಿ ಪಡೆಯವಾಗ ತಾನೇ ಬಾಣ ಬಿಡುವವನಾಗುತ್ತಾನೆ.

ಬಯಲಾಟದಲ್ಲಿ ಸರ್ವ ಸಮುದಾಯಗಳು ಪಾತ್ರಗಳಾಗುತ್ತವೆ. ಪಾತ್ರ ಕಳಚಿದ ನಿಜ ಪಾತ್ರದಲ್ಲಿ ಅವುಗಳ ಸ್ಥಿತಿ ಏನು? ಗೊರೂರು ಈಗ ಹೇಗಿದೆ. ನಮ್ಮ ದೇಶದ ಎಲ್ಲ ಹಳ್ಳಿಗಳು ಗೊರೂರುಗಳಾಗಿ ಇವೆಯೇ? ಗಾಂಧಿ ಮಾರ್ಗ ಸಮ ಸಮಾಜಕ್ಕೆ ಕರೆದುಕೊಂಡು ಹೋಗುವ ಮಾರ್ಗವೇ? ಇಷ್ಟೆಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ನಾಟಕ ಇನ್ನಷ್ಟು ಸಮರ್ಥವಾಗಿ ಹೇಳಬೇಕಾಗಿತ್ತು.

ನಾಟಕ ತುಂಬಾ ಚೆನ್ನಾಗಿ ನೋಡಿಸಿಕೊಂಡು ಹೋಗುತ್ತದೆ. ಸ್ವಾತಂತ್ರ ಬರುವ ಮುಂಚಿತವಾಗಿನ ಒಂದು ಬದುಕನ್ನು ಎಲ್ಲ ನಟರು ಅದ್ಭುತವಾಗಿ ರಂಗದ ಮೇಲೆ ಜೀವಿಸಿದ್ದಾರೆ. ಹಲವಾರು ಅದ್ಭುತ ನಾಟಕಗಳ ಮೂಲಕ ರಂಗ ಪ್ರೇಕ್ಷಕರಿಗೆ ಪರಿಚಯವಿರುವ ಮಂಜುನಾಥ ಬಡಿಗೇರ ಅವರು ಮತ್ತೊಮ್ಮೆ ಗೆದ್ದಿದ್ದಾರೆ. ಬೆಂಗಳೂರಿನ ಪ್ರೇಕ್ಷಕರು ಇದೇ ಆಗಸ್ಟ್ 13 ರಂದು ಸಂಜೆ 7.30 ಕ್ಕೆ ರಂಗಶಂಕರದಲ್ಲಿ ತಪ್ಪದೇ ನಾಟಕ ನೋಡಿ.

ಪ್ರೇಕ್ಷಕರನ್ನೂ ವಿಮರ್ಶಿಸುವ ದಾಷ್ಟ್ಯಕ್ಕೆ ಕೈ ಹಾಕುತ್ತಿದ್ದೇನೆ..!
ಇತ್ತೀಚೆಗೆ ರಂಗಭೂಮಿಯ ಪ್ರೇಕ್ಷಕರು ತುಸು ಹೆಚ್ಚಾಗಿಯೇ ಪ್ರತಿ ದೃಶ್ಯದ ನಂತರ ಚಪ್ಪಾಳೆ ಹೊಡೆಯುವ ಹವ್ಯಾಸ ಬೆಳೆಸಿಕೊಂಡಿದ್ದಾರೆ, ಇದು ಯಾವ ಕಾಲಘಟ್ಟದಲ್ಲಿ ಪ್ರಾರಂಭ ಆಯಿತು ಎನ್ನುವುನ್ನ ಸಂಶೋಧನೆ ಮಾಡಬೇಕು. ನಟರಿಗೆ ಹುರುಪು ಬರುತ್ತದೆ ಎಂಥಲೋ ಅಥವಾ ಸಿನಿಮಾ ರೀತಿ ಸಿಳ್ಳೆ ಹೊಡೆಯಲು ಆಗುವುದಿಲ್ಲ ಎಂದು ಚಪ್ಪಾಳೆ ರೂಡಿಸಿಕೊಂಡಿರುವನೊ ಗೊತ್ತಿಲ್ಲ. ತಳವರ್ಗದ ಪಾತ್ರಧಾರಿಗಳು ರಂಗದ ಮೇಲೆ ಬಂದಾಗ ಜನ ಏಕೆ ಚಪ್ಪಾಳೆ ಹೊಡೆದರು ತಿಳಿಯಲಿಲ್ಲ. ಪಾತ್ರಧಾರಿ ಚೆನ್ನಾಗಿ ಅಭಿನಯಿಸಿದ ಎಂಥಲೋ ಅಥವಾ ಇಂತಹ ಅವಸ್ಥೆಗೆ ಮರುಕಪಟ್ಟೊ?
ಪ್ರೇಕ್ಷಕರೇ ಉತ್ತರಿಸಬೇಕು…

You cannot copy content of this page

Exit mobile version