ಅಶಿಸ್ತಿನ ವರ್ತನೆ ಮತ್ತು ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ ಬಿಜೆಪಿ ಪಕ್ಷದ 18 ಶಾಸಕರ ಅಮಾನತು ಹಿಂಪಡೆಯುವ ಕುರಿತು ಚರ್ಚೆ ನಡೆದಿದ್ದು, ಚರ್ಚೆಯಲ್ಲಿ ಎಲ್ಲಾ 18 ಶಾಸಕರ ಅಮಾನತು ಹಿಂಪಡೆಯಲಾಗಿದೆ ಎಂದು ತಿಳಿದು ಬಂದಿದೆ. ಸೋಮವಾರ ಅನರ್ಹ ಶಾಸಕರ ಅಮಾನತು ಆದೇಶ ಹಿಂಪಡೆಯುವುದನ್ನು ಬಹಿರಂಗವಾಗಿ ತಿಳಿಸುವ ಸಾಧ್ಯತೆ ಇದೆ.
ಬಜೆಟ್ ಅಧಿವೇಶನದ ಕೊನೆಯ ದಿನವಾದ ಮಾ.21 ರಂದು ವಿಧಾನಸಭೆಯ ಕಲಾಪದ ವೇಳೆ ಪೀಠದ ಆದೇಶವನ್ನು ಲೆಕ್ಕಿಸದೆ ಸದನದ ಕಾರ್ಯ ಕಲಾಪಗಳಿಗೆ ಅಡ್ಡಿಯುಂಟು ಮಾಡಿ, ಅಶಿಸ್ತಿನಿಂದ ಹಾಗೂ ಅಗೌರವದಿಂದ 18 ಮಂದಿ ಬಿಜೆಪಿ ಶಾಸಕರು ನಡೆದುಕೊಂಡಿದ್ದರು.
ಆ ನಂತರ ವಿಧಾನಸಭಾ ಕಾರ್ಯವಿಧಾನ ಮತ್ತು ನಡವಳಿಕೆಗಳ ನಿಯಮ 348ರ ಮೇರೆಗೆ 18 ಶಾಸಕರನ್ನು 6 ತಿಂಗಳು ಸದನಕ್ಕೆ ಬಾರದಂತೆ ತಡೆಹಿಡಿದು ಅಮಾನತುಗೊಳಿಸಲಾಗಿತ್ತು. ಈ ನಿರ್ಣಯವನ್ನು ಹಿಂತೆಗೆದುಕೊಳ್ಳಲು ಕೋರಿ ಮನವಿ ಬಂದ ಹಿನ್ನೆಲೆಯಲ್ಲಿ ರವಿವಾರ ವಿಧಾನಸಭಾಧ್ಯಕ್ಷ ಖಾದರ್ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಸಿ, ಸದನ ಕೈಗೊಂಡಿದ್ದ ನಿರ್ಣಯವನ್ನು ಹಿಂಪಡೆಯುವ ಬಗ್ಗೆ ಸಮಾಲೋಚನೆ ನಡೆಸಲಾಯಿತು.
6 ತಿಂಗಳ ಅಮಾನತು ಆದೇಶದನ್ವಯ ಈಗಾಗಲೇ 2 ತಿಂಗಳು ಕಳೆದಿದ್ದು, ಅಮಾನತುಗೊಂಡಿರುವ ಸದಸ್ಯರು ತಮ್ಮ ನಡೆಯ ಬಗ್ಗೆ ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದೆ ಸಂವಿಧಾನಾತ್ಮಕವಾಗಿ ಸದನದ ಕಾರ್ಯಕಲಾಪಗಳಲ್ಲಿ ಸಂಯಮದಿಂದ ನಡೆದುಕೊಳ್ಳುವುದಾಗಿ ತಿಳಿಸಿರುವುದನ್ನು ಪರಿಗಣಿಸಿ ಸಭೆಯಲ್ಲಿ ಒಮ್ಮತ ಸೂಚಿಸಿದ ಹಿನ್ನೆಲೆಯಲ್ಲಿ ಸದಸ್ಯರು ಸಂವಿಧಾನಾತ್ಮಕವಾಗಿ ಮೂಲಭೂತ ಕರ್ತವ್ಯಗಳನ್ನು ನಿರ್ವಹಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ಅಮಾನತು ನಿರ್ಣಯ ಹಿಂಪಡೆಯಲಾಗಿದೆ.