ಬೆಂಗಳೂರು : ಕರ್ನಾಟಕ ನಾಗರಿಕ ಸೇವಾ ನಿಯಮ(KCSR)ಗಳ ಅಡಿಯಲ್ಲಿ ಪೊಲೀಸರ ವರ್ಗಾವಣೆಗೆ ಸರ್ಕಾರವು ಮೀನಾಮೇಷ ಮಾಡುತ್ತಿದ್ದು, ಪೊಲೀಸ್ ಇಲಾಖೆಯಲ್ಲಿ ಪತಿ- ಪತ್ನಿ ಹಾಗು ಸಾಮಾನ್ಯ ಅಂತರ್ ಜಿಲ್ಲಾ ವರ್ಗಾವಣೆಗಳಿಗೆ ಸರ್ಕಾರ KCSR ನಿಯಮಗಳ ಅನ್ವಯ ಸರಿಯಾದ ನಿಯಮಗಳನ್ನು ರೂಪಿಸಬೇಕು ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದಾರೆ.
2 ವರ್ಷ, 6 ತಿಂಗಳು ಕನಿಷ್ಠ ಸೇವೆ ಇದ್ದ ನಿಯಮಕ್ಕೆ ಈಗ 7 ವರ್ಷ ಕನಿಷ್ಠ ಸೇವೆಯಂದು ತಿದ್ದುಪಡಿ ಮಾಡಿ, ಈವರೆಗೂ ಯಾವುದೇ ವರ್ಗಾವಣೆ ಮಾಡದೆ ಸರ್ಕಾರ ಪೋಲೀಸರ ಜೀವನದ ಜೊತೆ ಆಟವಾಡುತ್ತಿದೆ ಎಂದು ಯತ್ನಾಳ್ ದೂರಿದ್ದಾರೆ.
ದೂರದ ಊರಿನಲ್ಲಿ ವಯಸ್ಸಾದ ತಂದೆ ತಾಯಂದಿರನ್ನೂ ನೋಡಲು ಆಗದೆ, ದಿನಕ್ಕೆ 12-14 ಘಂಟೆ ಕೆಲಸ ಮಾಡುವ ಪೋಲೀಸರ ಗೋಳು ಈ ಸರ್ಕಾರಕ್ಕೆ ಕೇಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಜ್ಯೇಷ್ಠತೆಯನ್ನೂ ಬಿಟ್ಟು ಅಂತರ್ ಜಿಲ್ಲಾ ವರ್ಗಾವಣೆಗೆ ಮನವಿ ಸಲ್ಲಿಸಿರುವ ಪೊಲೀಸ್ ಸಿ ಹಾಗು ಡಿ ನೌಕರರನ್ನು ಅಲೆದಾಡಿಸಿ ಅವರಿಗೆ ಮಾನಸಿಕ ಚಿತ್ರಹಿಂಸೆ ನೀಡುತ್ತಿರುವುದು ಬಿಟ್ಟರೆ, ಸರ್ಕಾರ ಸಾಧಿಸಿದ್ದು ಏನೂ ಇಲ್ಲ. ಈ ವಿಷಯದ ಬಗ್ಗೆ ಸರ್ಕಾರ ಸೂಕ್ತವಾದ ನಿಯಮಗಳನ್ನು ರೂಪಿಸಬೇಕು, ಈಗಾಗಲೇ ಆರಂಭಿಸಿರುವ ಆನ್‌ಲೈನ್ ಪೋರ್ಟಲ್‌ನಲ್ಲಿ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಹಾಗು ಕಾನೂನು ರೀತ್ಯಾ ವರ್ಗಾವಣೆ ಮಾಡಬೇಕು ಎಂದಿದ್ದಾರೆ.
ಪೊಲೀಸರೂ ಮನುಷ್ಯರು, ಅವರಿಗೂ ಸಂಸಾರ ಸಂಬಂಧಗಳು ಇರುತ್ತವೆ ಎನ್ನುವುದನ್ನು ಮನಗೊಂಡು ಸರ್ಕಾರ ಹಾಗು ಪೊಲೀಸ್ ಅಧಿಕಾರಿಗಳು ಅವರ ಬೆಂಬಲಕ್ಕೆ ನಿಲ್ಲಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ವಿನಂತಿಸಿಕೊಂಡಿದ್ದಾರೆ.