ಬೆಂಗಳೂರು : ರಾಜ್ಯದಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಸೈಬರ್ ಅಪರಾಧ ತಡೆ ಘಟಕವನ್ನು ಸ್ಥಾಪಿಸುವ ಕುರಿತು ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಇತ್ತೀಚೆಗೆ ಅತಿ ಹೆಚ್ಚು ಸೈಬರ್ ಕ್ರೈಮ್ ಗಳು ನಡೆಯುತ್ತಿದ್ದು, ಅದರಲ್ಲೂ ವಿದ್ಯಾವಂತರೇ ಈ ಈ ವಂಚನೆಯ ಗಾಳಕ್ಕೆ ಬಲಿಯಾಗುತ್ತಿದ್ದಾರೆ. ವರದಿಯ ಪ್ರಕಾರ, ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ 52 ಸಾವಿರ ಸೈಬರ್ ಕ್ರೈಮ್ ಪ್ರಕರಣ ದಾಖಲಾಗಿದೆ.ಇನ್ನು ದಕ್ಷಿಣ ಭಾರತದಲ್ಲಿ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲೇ ಅತಿ ಹೆಚ್ಚು ಸೈಬರ್ ಕ್ರೈಮ್ ಪ್ರಕರಣಗಳು ದಾಖಲಾಗುತ್ತಿದ್ದು, ಇದನ್ನು ಹೇಗಾದರೂ ಮಾಡಿ ತಡೆಯಬೇಕೆಂದು ಪ್ರತ್ಯೇಕ ಸೈಬರ್ ಅಪರಾಧ ತಡೆ ಘಟಕ ಸ್ಥಾಪಿಸಲು ಸರ್ಕಾರ ಸಮ್ಮತಿ ನೀಡಿದೆ.
ಈ ಘಟಕದ ವ್ಯಾಪ್ತಿಗೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 43 ಸಿಇಎನ್ (ಸೈಬರ್, ಎಕನಾಮಿಕ್ಸ್ & ನಾರ್ಕೋಟಿಕ್ಸ್) ಪೊಲೀಸ್ ಠಾಣೆಗಳನ್ನು ಸೈಬರ್ ಅಪರಾಧ ಪೊಲೀಸ್ ಠಾಣೆಗಳೆಂದು ಮರುನಾಮಕರಣ ಮಾಡಿ ಒಳಪಡಿಸಲಾಗಿದೆ. ಅಲ್ಲದೆ ಸಿಐಡಿ ಸೈಬರ್ ಹಾಗೂ ಬೆಂಗಳೂರಿನ ಸೈಬರ್ ಠಾಣೆಗಳು ಸೇರಿ ಒಟ್ಟು 45 ಠಾಣೆಗಳ ಅಧೀನಕ್ಕೆ ಬರುತ್ತವೆ. ಈ ಠಾಣೆಗಳು ಅಬಕಾರಿ ಕಾಯ್ದೆ, ಲಾಟರಿ ನಿಷೇಧ ಕಾಯ್ದೆ, ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ (ಯುಎಪಿಎ) ಸೇರಿದಂತ ಇತರೆ ಕಾಯ್ದೆಗಳಲ್ಲಿ ತನಿಖೆ ನಡೆಸಬಹುದು ಎಂದಿದೆ. ಅಲ್ಲದೆ ಸೈಬರ್ ಕಮಾಂಡ್ ಘಟಕಕ್ಕೆ ನಾಲ್ವರು ಎಸ್ಪಿಗಳು ಸೇರಿದಂತೆ 193 ಅಧಿಕಾರಿ- ಸಿಬ್ಬಂದಿ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ.