ಬೆಂಗಳೂರು : ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಮತ್ತು ಪಾರದರ್ಶಕ ಆಡಳಿತ ನೀಡುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು (DC), ಜಿಲ್ಲಾ ಪಂಚಾಯಿತಿ ಸಿಇಒಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (SP) ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಹಲವು ಪ್ರಮುಖ ಸೂಚನೆಗಳನ್ನ ನೀಡಿದರು.
ಪ್ರತಿ ಕಚೇರಿಯಲ್ಲೂ ದೂರು ಸಂಖ್ಯೆ ಕಡ್ಡಾಯ
ಸಾರ್ವಜನಿಕ ಕೆಲಸಗಳಿಗೆ ಯಾರಾದರೂ ಲಂಚ ಕೇಳಿದರೆ ತಕ್ಷಣ ದೂರು ನೀಡಲು ಅನುಕೂಲವಾಗುವಂತೆ ಪ್ರತಿ ಸರ್ಕಾರಿ ಕಚೇರಿಯಲ್ಲೂ ದೂರು ಸ್ವೀಕರಿಸುವ ಫೋನ್ ನಂಬರ್‌ಗಳನ್ನು ಪ್ರಮುಖವಾಗಿ ಪ್ರದರ್ಶಿಸಬೇಕು ಎಂದು ಡಿಕೆಶಿ ಅಧಿಕಾರಿಗಳಿಗೆ ಆದೇಶಿಸಿದರು. ಇಲ್ಲಿ ನನ್ನ ವೈಯಕ್ತಿಕ ನಿರೀಕ್ಷೆಗಳು ಯಾವುದೂ ಇಲ್ಲ. ನಾವೆಲ್ಲರೂ ‘ಟೀಮ್ ಕರ್ನಾಟಕ’ ಆಗಿ ಒಟ್ಟಾಗಿ ಕೆಲಸ ಮಾಡಬೇಕು ಮತ್ತು ಜನರಿಗೆ ಸ್ವಚ್ಛ ಆಡಳಿತ ನೀಡಬೇಕು ಎಂದಿದ್ದಾರೆ.
ಮಳೆ ಮುನ್ನೆಚ್ಚರಿಕೆ ಇರಲಿ ಎಂದ ಸಿಎಂ
ರಾಜ್ಯದಲ್ಲಿ ಸದ್ಯದ ಮಳೆ ಹಾಗೂ ಪ್ರವಾಹ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದ ಅವರು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು. ಯಾವುದೇ ಜಿಲ್ಲೆಯಲ್ಲೂ ಕುಡಿಯುವ ನೀರಿಗೆ ತೊಂದರೆಯಾಗಬಾರದು. ಮೊದಲ ಮತ್ತು ಎರಡನೇ ಬೆಳೆಗೆ ನೀರಿನ ಕೊರತೆಯಾಗದಂತೆ ನಿಗಾ ವಹಿಸಬೇಕು ಎಂದು ಆದೇಶ ನೀಡಿದ್ದಾರೆ. ಹಾಗೆಯೇ, ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಲು ನಾನೇ ಶೀಘ್ರದಲ್ಲೇ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಕೈಗೊಳ್ಳಲಿದ್ದೇನೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ
