ಬೆಂಗಳೂರು: ಗೃಹಲಕ್ಷ್ಮೀ ಯೋಜನೆಗೆ ಮತ್ತೆ ಅರ್ಜಿ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಈವರೆಗೆ ಮೃತಪಟ್ಟವರ ಖಾತೆಗೆ ೧೦೦ ಕೋಟಿ ರೂ ಹೋಗಿದೆ. ಹಾಗಾಗಿ ಗೃಹಲಕ್ಷ್ಮೀ ಯೋಜನೆಗೆ ಮತ್ತೆ ಅರ್ಜಿ ಸಲ್ಲಿಸಬೇಕು ಎಂದರು. ಯಾವ ಬ್ಯಾಂಕ್‌ನಲ್ಲಿ ಹಣ ಪಡೀತಿದ್ದಾರೆಂಬ ಮಾಹಿತಿ ಬೇಕು ಎಂದ ಅವರು ಹಾಗೆಯೇ ಗೃಹಜ್ಯೋತಿಗೂ ಕೂಡ ಮತ್ತೆ ಅರ್ಜಿಯನ್ನ ಸಲ್ಲಿಸಬೇಕು. ೧.೬೪ ಲಕ್ಷ ಜನರಿಗೆ ಗೃಹಜ್ಯೋತಿಯಡಿ ಉಚಿತ ವಿದ್ಯುತ್ ತೆಗೆದುಕೊಳ್ಳುತ್ತಿದ್ದಾರೆ. ಅವರೆಲ್ಲರಿಗೂ ಗುರುತಿನ ಚೀಟಿ ಕೊಡುತ್ತೇವೆ. ನಾವು ವಾಸಕ್ಕೆ ಮಾತ್ರ ಫ್ರೀ ಕರೆಂಟ್ ಕೊಡುತ್ತಿದ್ದೇವೆ. ಕಮರ್ಷಿಯಲ್ ಬಳಕೆಗೆ ಬಳಸಿಕೊಂಡರೆ ಆಗಲ್ಲ ಎಂದಿದ್ದಾರೆ.
ಯಾರೊಬ್ಬರೂ ಒಂದು ರೂಪಾಯಿ ಲಂಚ ಕೊಡುವಂತಿಲ್ಲ
ಕರ್ನಾಟಕದಲ್ಲಿ ಕಾನೂನು ಬಾಹಿರ ಕೃತ್ಯಗಳಿಗೆ ಆಸ್ಪದ ನೀಡುವುದಿಲ್ಲ. ಅಧಿಕಾರಿಗಳ ಮೇಲೆ ಸಚಿವರು, ಶಾಸಕರು ಒತ್ತಡ ಹೇರಬಾರದು. ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲಿ ನಾಮಫಲಕದಲ್ಲಿ ಓರ್ವ ಹಿರಿಯ ಅಧಿಕಾರಿ ನಂಬರ್ ನಮೂದಿಸಬೇಕು. ಸಿಬ್ಬಂದಿ ಯಾರೇ ಲಂಚ ಕೇಳಿದರೂ ಆ ಸಂಖ್ಯೆ ಸಂಪರ್ಕಿಸಬೇಕು. ಯಾರೊಬ್ಬರೂ ಒಂದು ರೂಪಾಯಿ ಲಂಚ ಕೊಡುವಂತಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಶೂನ್ಯಕ್ಕೆ ಇಳಿಸಲು ನಿರ್ಧರಿಸಿದ್ದೇವೆ. ಭ್ರಷ್ಟಾಚಾರ ಮುಕ್ತ ಕರ್ನಾಟಕ ಮತ್ತು ಸರ್ಕಾರ ನಮ್ಮದಾಗಬೇಕು ಎಂಬ ಆಶಯವಿದೆ ಎಂದರು.
