ನವದೆಹಲಿ: ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಖ್ಯಾತ ಲೇಖಕಿ ಅರುಂಧತಿ ರಾಯ್ ಅವರೊಂದಿಗೆ ಕಾಶ್ಮೀರದ ಮಾಜಿ ಪ್ರಾಧ್ಯಾಪಕರನ್ನು ವಿಚಾರಣೆಗೆ ಒಳಪಡಿಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅನುಮತಿ ನೀಡಿದ್ದಾರೆ.
2010ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಅರುಂಧತಿ ರಾಯ್ ಮತ್ತು ಮಾಜಿ ಪ್ರೊಫೆಸರ್ ಶೇಖ್ ಶೌಕತ್ ಹುಸೇನ್ ಅವರನ್ನು ಯುಪಿಎ ಅಡಿಯಲ್ಲಿ ತನಿಖೆಗೆ ಒಳಪಡಿಸಲು ರಾಜ್ಯಪಾಲರು ಅನುಮತಿ ನೀಡಿದ್ದಾರೆ ಎಂದು ರಾಜ್ ನಿವಾಸ್ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಏತನ್ಮಧ್ಯೆ, ನವದೆಹಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದ ಪ್ರಕಾರ, ಅರುಂಧತಿ ರಾಯ್ ಮತ್ತು ಕಾಶ್ಮೀರದ ಪ್ರೊಫೆಸರ್ ಶೇಖ್ ಶೌಕತ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇದಕ್ಕೆ ರಾಯ್ ಮತ್ತು ಶೌಕತ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಕ್ಟೋಬರ್ 21, 2010ರಂದು, ‘ಆಜಾದಿ ಇನ್ ದೆಹಲಿ – ದಿ ಓನ್ಲಿ ವೇ’ ಎಂಬ ಸಭೆಯಲ್ಲಿ ಭಾರತದಿಂದ ಕಾಶ್ಮೀರವನ್ನು ಬೇರ್ಪಡಿಸುವ ವಿಷಯದ ಕುರಿತು ಚರ್ಚೆಗಳು ನಡೆದವು. ಸಂಸತ್ ದಾಳಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸಾರ್ ಗಿಲಾನಿ, ಅರುಂಧತಿ ರಾಯ್ ಮತ್ತಿತರರ ಜತೆಗೂಡಿ ದೇಶದ ಅಖಂಡತೆಯನ್ನು ಕೆರಳಿಸುವ ಭಾಷಣ ಮಾಡಿದ್ದಾರೆ ಎಂಬುದು ಪ್ರಕರಣದ ಪ್ರಮುಖ ಆರೋಪ.