“ಇಂಡಿಯಾ ಸರ್ಕಾರ (ರಾಜ್ಯಪಾಲ) ಮತ್ತು ರಾಜ್ಯ ಸರ್ಕಾರ ಇಬ್ಬರ ಜಗಳ ಮೂರನೆಯವರಾದ ಪ್ರಜೆಗಳಿಗೆ ಲಾಭವಾಗದೆ ಎರಡು ಪ್ರಭುತ್ವದ ಭಾಗವಾಗಿರುವವರಿಗೆ ಮಾತ್ರ ಲಾಭವಾಗುತ್ತಿದೆ.. ಹೇಗೆ ಅಂತೀರಾ?..” ನಾವು Dravida ಕನ್ನಡಿಗರು ಚಳುವಳಿ ಮುಂದಾಳು ಅಭಿ ಒಕ್ಕಲಿಗ ಅವರ ಬರಹದಲ್ಲಿ
ಮನೆಯಲ್ಲೋ ಕಚೇರಿಯಲ್ಲೋ ನಮ್ಮ ಸುತ್ತಮುತ್ತಲೋ ಇಬ್ಬರು ಜಗಳ ಆಡುತ್ತಿದ್ದರೆ ನೋಡೋರು ಇನ್ನೂರು ಜನ ಇರುತ್ತೇವೆ.ಮಾನವನ ಈ ಮನಸ್ಥಿತಿಯನ್ನು ಬಲ್ಲವರು ಅನಾದಿಕಾಲದಿಂದಲೂ ದಿಕ್ಕು ತಪ್ಪಿಸಿ ಕೊಳ್ಳೆ ಹೊಡೆದುಕೊಳ್ಳುವಾಗೆಲ್ಲ ಜಗಳ ಹಚ್ಚುತ್ತಾರೆ.ಈಗಲೂ ಅದು ಮುಂದುವರಿದಿದೆ.ಬರೀ ಮನೆ ಊರು ಕಚೇರಿ ಮಟ್ಟದಲ್ಲಿ ಅಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ, ಆಲ್ ಇಂಡಿಯಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಮುಂದುವರಿಯುವುದರ ಜೊತೆಗೆ ಹೊಸ ಹೊಸ ಕುಸ್ತಿ ಪಟುಗಳನ್ನು ಅಖಾಡಕ್ಕೆ ಇಳಿಸುತ್ತಿದ್ದಾರೆ.
ಒಂದಲ್ಲ ಒಂದು ಕೊರತೆಯಲ್ಲೆ ಬೆಳೆದಿರುವ ಬೆಳೆಯುತ್ತಿರುವ ವ್ಯಕ್ತಿಗಳಿರುವ ಸಮಾಜವಿದು. ಊಟಕ್ಕಿದ್ದರೆ ಬಟ್ಟೆಗಿಲ್ಲ, ಬಟ್ಟೆಗಿದ್ದರೆ ಎಕ್ಕಡಕ್ಕಿಲ್ಲ, ಮನೆ ಇದ್ದರೆ ಜಮೀನಿಲ್ಲ, ಜಮೀನಿದ್ದರೆ ನೀರಿಲ್ಲ, ನೀರಿದ್ದರೆ ಬೆಂಬಲ ಬೆಲೆ ಇಲ್ಲ. ಹೀಗೆ ಇಲ್ಲಗಳ ಪಟ್ಟಿ ಮುಗಿಯೋದೆ ಇಲ್ಲ. ಬಹುತೇಕ ಜಂಜಾಟ ಜಗಳವನ್ನೆ ಸಂಸಾರ ಮಾಡಿಕೊಂಡಿರುವ ಪಿತೃ ಪ್ರಧಾನ ಕುಟುಂಬ ಅವ್ಯವಸ್ಥೆಯಲ್ಲಿ ಬೆಳೆದ ಬೆಳೆಯುತ್ತಿರುವ ಮಕ್ಕಳಿಗೆ ಸಿಗಬೇಕಾದ ಕುಟುಂಬ ಪ್ರೀತಿ ಕೂಡ ಕೊರತೆಯೆ.ಪ್ರೀತಿಯಿಂದ,ಜೋಪಾನವಾಗಿ,ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ ಅಂತ ಹೊರಗಿನಿಂದ ಅನಿಸಿದರು ಅಲ್ಲಿ ಒಳಗೆ ಜಾತಿ-ಧರ್ಮ,ಮೇಲು-ಕೀಳು,ಆಸ್ತಿ ವಿಚಾರ ನಡೆ-ನುಡಿಗಳನ್ನು ಇನ್ನೊಂದು ತಲೆಮಾರಿಗೆ ಬಿತ್ತುವ ಪ್ರಕ್ರಿಯೆ ಅಷ್ಟೆ ಅವೆಲ್ಲ. ಇಂತಹ ಅವ್ಯವಸ್ಥೆಯಲ್ಲಿ ಬೆಳೆದಿರುವ ವ್ಯಕ್ತಿಗಳಾಗಿ ಇಬ್ಬರ ಒಲವನ್ನು ಎಂದಿಗೂ ನೋಡಲಾರರು ಇಬ್ಬರ ಜಗಳವನ್ನು ನೋಡದೆ ಇರಲಾರರು ಈ ಜನರು.
ಪ್ರಜಾಪ್ರಭುತ್ವದಲ್ಲಿರುವ ಪ್ರಜೆಗಳಾದ ನಾವುಗಳು ಪ್ರಭುತ್ವ ಸರಿಯಾದ ದಿಕ್ಕಿನಲ್ಲಿ ಕೆಲಸ ಮಾಡಬೇಕೆಂದರೆ ಜಾಗೃತರಾಗಿ ಒಗ್ಗೂಡಿ ಪ್ರಶ್ನಿಸುತ್ತಿರಬೇಕು.ಮತ ಚಲಾಯಿಸುವ ಸಮಯದಲ್ಲಿ ಮತ ಚಲಾಯಿಸಿ ಸುಮ್ಮನಾಗುವ ನಾವುಗಳು ತಪ್ಪು ಮಾಡುತ್ತಿದ್ದೇವೆ. ಪ್ರಭುತ್ವದ ಭಾಗವಾಗಿರುವವರು ಅವರವರೆ ಜಗಳವಾಡುತ್ತಾ ನಮ್ಮನೆಲ್ಲ ನೋಡಿಕೊಂಡು ಮೈಮರೆಯುವಂತೆ ಮಾಡುತ್ತಿದ್ದಾರೆ. ಅವರುಗಳು ಮಾತ್ರ ಕೊಳ್ಳೆ ಹೊಡೆದುಕೊಂಡು ವಂಶಾವಳಿ ರಾಜಕೀಯ ಮಾಡಿಕೊಂಡು ಆಡಂಬರದ ಬದುಕು ಬದುಕುತ್ತಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕ ಅಧ್ಯಕ್ಷ ಸ್ವತಃ ಬಂಡವಾಳಶಾಹಿ ಆಗಿರುವುದರಿಂದ, ಜೊತೆಗೆ ಅವನ ಸಿಂಡಿಕೇಟ್ ಗಳು ಕೈ ಜೋಡಿಸಿ ತಿಂಗಳಿಗೆ ಒಮ್ಮೆಯಾದರೂ ಕಾಲು ಕೆರೆದು ಇತರೆ ದೇಶಗಳ ಜೊತೆ ಜಗಳ ತೆಗೆದು ಜನರು ಕತ್ತೆ ಹಂದಿಗಳಾಗಿ ದುಡಿದುಕೊಂಡು ಇವರ ಜಗಳ ನೋಡಿಕೊಂಡು ಮೈ ಮರೆತು ಎಲ್ಲರಿಗೂ ಸೇರಬೇಕಾದ ಸಂಪತ್ತನ್ನು ಕೆಲವರು ಮಾತ್ರ ಗುಡ್ಡೆ ಹಾಕಿಕೊಳ್ಳುತ್ತಿದ್ದಾರೆ. ಇಂಡಿಯಾ ಮಟ್ಟದಲ್ಲಿ ಎರಡು ಪಕ್ಷಗಳ ಜಗಳ ಸೀರಿಯಲ್ನಂತೆ ನಡೆಯುತ್ತಲೇ ಇದೆ. ಇದೀಗ ಅಖಾಡಕ್ಕೆ ರಾಜ್ಯಪಾಲರನ್ನು ಇಳಿಸಿ ಇಂಡಿಯಾ ಸರ್ಕಾರ ಜಗಳ ಶುರು ಮಾಡಿದೆ. ಅನಿವಾರ್ಯವಾಗಿ ರಾಜ್ಯ ಸರ್ಕಾರಗಳು ಅಖಾಡಕ್ಕೆ ಇಳಿದು ಕೈ ಮಿಲಾಯಿಸಿ ಕುಸ್ತಿಯನ್ನು ಪ್ರಜೆಗಳ ಪಾಲಿಗೆ ನೀಡಿದ್ದಾರೆ. ಇದರಿಂದ ಜನಸಾಮಾನ್ಯರ ಬದುಕು ದಿನೇ ದಿನೇ ಅನಾನುಕೂಲದ ಕಡೆಗೆ ಸಾಗುತ್ತಿದ್ದರೆ ಪ್ರಭುತ್ವದ ಭಾಗವಾಗಿರುವವರ ಬದುಕು ಇನ್ನೂ ಆಡಂಬರದ ಕಡೆಗೆ ಸಾಗುತ್ತಿದೆ.
ಪ್ರಸಕ್ತ ಮೂರು ರಾಜ್ಯದಲ್ಲಿ ರಾಜ್ಯಪಾಲರ ಮೂಲಕ ಜಗಳ ಹಚ್ಚಿದ ಇಂಡಿಯಾ ಒಕ್ಕೂಟ ಸರ್ಕಾರದ ಭಾಗವಾಗಿರುವವರ ಆಸ್ತಿ ಚುನಾವಣೆ ಸಂದರ್ಭದಲ್ಲಿ ಸಲ್ಲಿಸುವ ಅಫಿಡವಿಟ್ ಪ್ರಕಾರವೇ ಕಳೆದ ಬಾರಿಗಿಂತ ಎಂಟತ್ತು ಪಟ್ಟು ಜಾಸ್ತಿ ಆಗಿರುತ್ತದೆ ವಿನಃ ಬೀದಿಗಂತೂ ಬಂದಿರುವ ಉದಾಹರಣೆ ಇಲ್ಲ. ಖುದ್ದು ರಾಜ್ಯಪಾಲನ ಆಸ್ತಿಯನ್ನು ಐದು ವರ್ಷಕ್ಕೊಮ್ಮೆ ಅಳೆದುಬಿಟ್ಟರೆ ಮಾಪನವೇ ಮುರಿದು ಮೂಲೆಗುಂಪಾಗಬಹುದು ಅಷ್ಟು ತೀವ್ರವಾದ ಆಸ್ತಿ ಹೆಚ್ಚಳವಾಗಿರುತ್ತದೆ. ಇನ್ನು ಇವರೇನು ಕಮ್ಮಿಯೇ, ರಾಜ್ಯ ಪ್ರಭುತ್ವದ ಭಾಗವಾಗಿರುವರು? ಕಾರ್ಯಾಂಗ,ನ್ಯಾಯಾಂಗ,ಶಾಸಕಾಂಗದ ಭಾಗವಾಗಿರುವ ವ್ಯಕ್ತಿಗಳ ಆಸ್ತಿ ಆಡಂಬರದ ಬದುಕು ಜನಸಾಮಾನ್ಯರನ್ನು ಬಸ್ಸು ರೈಲಿನಲ್ಲಿ ಉಸಿರು ಕಟ್ಟುವ ರಶ್ಶಿನಲ್ಲಿ ಅಣಕಿಸುತ್ತಿದೆ, ರಸ್ತೆಯಲ್ಲಿ ಒಬ್ಬ ಎಸ್ಪಿ ಜನ ಸಾಮಾನ್ಯರನ್ನು ಕೇವಲ ಮುಖ್ಯಮಂತ್ರಿಯ ಜೀರೋ ಟ್ರಾಫಿಕ್ ಕಾರಣಕ್ಕೆ ಬೂಟು ಕಾಲಿನಲ್ಲಿ ಒದೆಯುವಂತಿದೆ.
ಇತ್ತೀಚೆಗೆ ಒಳ್ಳೇದಕ್ಕೆ ಕೆಟ್ಟದ್ದಕ್ಕೆ ಎಲ್ಲದಕ್ಕೂ ಸಂವಿಧಾನ ಅಂತ ಮಾತನಾಡುತ್ತಿರುವುದು ಒಳ್ಳೆಯ ನಡೆನುಡಿಯಾಗಿದೆ. ಸಂವಿಧಾನದ ಕಡೆಗೆ ಹೆಚ್ಚೆಚ್ಚು ಜನರು ಗಮನ ಕೊಡುವಂತಾಗಿದೆ. ರಾಜ್ಯಪಾಲನ ಈ ಕಿರಿಕ್ ಸಂವಿಧಾನ ವಿರೋಧಿ ಅಂತೆಲ್ಲ ಬಡ ಬಡಾಯಿಸುತ್ತಿರುವವರು ಪ್ರಜೆಗಳನ್ನು ದಿಕ್ಕು ತಪ್ಪಿಸುತ್ತಿದ್ದಾರೆ.ಸಂವಿಧಾನದ ಆರ್ಟಿಕಲ್ 176 ರ ಪ್ರಕಾರ ರಾಜ್ಯಪಾಲ ರಾಜ್ಯ ಸರ್ಕಾರ ಕೊಟ್ಟ ಭಾಷಣವನ್ನು ಓದಲೇಬೇಕು.ಅದೇ ಸಂವಿಧಾನದ ಆರ್ಟಿಕಲ್ 163 ರಾಜ್ಯ ಸರ್ಕಾರ ಕೊಟ್ಟ ಭಾಷಣವನ್ನ ತಿದ್ದುಪಡಿ ಮಾಡಿಕೊಂಡು ಓದೋದು ರಾಜ್ಯಪಾಲರ ನಿರ್ಧಾರವೇ ಅಂತಿಮ ಇದನ್ನು ಯಾವ ಕೋರ್ಟಿನಲ್ಲೂ ಪ್ರಶ್ನಿಸುವಂತಿಲ್ಲ ಅನ್ನುತ್ತದೆ. ಇವೆರಡರ ಪ್ರಕಾರ ರಾಜ್ಯಪಾಲರ ಕಿರಿಕ್ ಗಳು ಸಂವಿಧಾನ ಬದ್ಧ. ಏಕೆಂದರೆ ಮೂರು ರಾಜ್ಯದಲ್ಲೂ ರಾಜ್ಯಪಾಲರು ಭಾಷಣಕ್ಕೆ ಬಂದಿದ್ದರು ಏನೋ ಒದರಿ ಕಡೆದು ಹೋದರು ಅಲ್ಲಿಗೆ 176 ರಂತೆ ಭಾಷಣ ಮಾಡಿದಂತಾಯ್ತು 163 ರಂತೆ ತಿದ್ದುಪಡಿ ಮಾಡಿಕೊಂಡು ಭಾಷಣ ಮಾಡಿರುವೆ ಅಂದು ಸಂವಿಧಾನ ಬದ್ಧವಾಗಿಯೇ ತಪ್ಪಿಸಿಕೊಂಡಂತಾಯಿತು.
ಕರ್ನಾಟಕ ಸರ್ಕಾರ ಮತ್ತು ಕೇರಳ ಸರ್ಕಾರ ಮುಟ್ಟಿ ನೋಡಿಕೊಳ್ಳುವಂತೆ ತಿರುಗಿ ಕೊಡದೆ ಅಳುಮುಂಜಿಗಳಂತೆ ಅಳುತ್ತಿವೆ. ರಾಜ್ಯಪಾಲರು ಒಕ್ಕೂಟ ಗೀತೆ(ರಾಷ್ಟ್ರಗೀತೆ) ಹಾಡಲಿಲ್ಲ ಬರೆದು ಕೊಟ್ಟಿದ್ದನ್ನು ಪೂರ್ತಿ ಭಾಷಣ ಮಾಡಲಿಲ್ಲ ಅಂತೆಲ್ಲ. ನೆರೆ ಬಂದಾಗ ಬರ ಬಂದಾಗ ಇಲ್ಲ ಇವರುಗಳೆ ಚುನಾವಣೆಗಾಗಿ ಕರೆಸುವ ಉಗ್ರರು ಬಂದಾಗ ಮಾತ್ರ ಪ್ರಜೆಗಳನ್ನು ʼಏಳಿ ಎದ್ದೇಳಿ ಎಲ್ಲರೂ ಒಗ್ಗೂಡಿ ಇದನ್ನು ಮೆಟ್ಟೋಣʼ ಅನ್ನುವ ಪ್ರಭುತ್ವದ ಭಾಗವಾಗಿರುವ ವ್ಯಕ್ತಿಗಳು ಪ್ರಜೆಗಳಿಗೆ ಕರೆಯೆ ಕೊಡದೆ ಇದನ್ನು ತಾವೇ ಏನೋ ಬಗೆಹರಿಸೋ ರೀತಿ ಒಂದೆರಡು ದಿನ ಅಬ್ಬರಿಸಿ ಬೊಬ್ಬಿರಿದು ಈಗ ಮತ್ತೆ ತಮ್ಮ ತಮ್ಮ ಆಸ್ತಿ ಆಡಂಬರಗಳ ಹೆಚ್ಚಿಸಿಕೊಳ್ಳುವುದರ ಕಡೆಗೆ ಸಾಗಿದ್ದಾರೆ. ಪ್ರಜೆಗಳು ಈ ಹೊಸ ಜಗಳ ನೋಡಿಕೊಂಡು ಮೈ ಮರೆವು ಅನಾನುಕೂಲತೆ ಕಡೆಗೆ ಸಾಗಿದ್ದಾರೆ. ಇರೋದ್ರಲ್ಲಿ ರಾಜ್ಯಪಾಲನ ಕಿರಿಕ್ ಗೆ ತಮಿಳ್ನಾಡು ಸರ್ಕಾರ ಕೊಟ್ಟ ಪ್ರತಿಕ್ರಿಯೆ ಮಾತ್ರ ಸ್ವಲ್ಪ ಮಟ್ಟಿಗೆ ಇನ್ನೂ ಉತ್ತಮ ವ್ಯವಸ್ಥೆ ಕಡೆಗೆ ಸಾಗುವ ನಡೆನುಡಿಯಾಗಿದೆ.
ʼಇಬ್ಬರ ಜಗಳ ಮೂರನೆಯವರಿಗೆ ಲಾಭʼ ಎಂಬ ಓಲ್ಡ್ ಡೈಲಾಗ್ ಗೆ ಅಂಟಿಕೊಳ್ಳದೆ ಸ್ವಲ್ಪ ಪರಿಶೀಲಿಸಿದರೆ ತಿಳಿಯುವುದೇನೆಂದರೆ ಇಂಡಿಯಾ ಸರ್ಕಾರ(ರಾಜ್ಯಪಾಲ) ಮತ್ತು ರಾಜ್ಯ ಸರ್ಕಾರ ಜಗಳ ಮೂರನೆಯವರಾದ ಪ್ರಜೆಗಳಿಗೆ ಲಾಭವಾಗದೆ ಎರಡು ಪ್ರಭುತ್ವದ ಭಾಗವಾಗಿರುವವರಿಗೆ ಮಾತ್ರ ಲಾಭವಾಗುತ್ತಿದೆ. ಆದುದ್ದರಿಂದ ʼರಾಜ್ಯಪಾಲ-ರಾಜ್ಯ ಸರ್ಕಾರ, ಇಬ್ಬರ ಜಗಳ ಇಬ್ಬರಿಗೆ ಮಾತ್ರ ಲಾಭʼ ಆಗಿದೆ ವಿನಃ ಮೂರನೆಯವರಿಗೆ ಲಾಭವಿಲ್ಲ. ಏಕೆಂದರೆ ಇವರುಗಳು ಸಂವಿಧಾನದ ಆರ್ಟಿಕಲ್ 176 ಮತ್ತು 163 ಜೊತೆಗೆ ಈ ರಾಜ್ಯಪಾಲ ಹುದ್ದೆಯೆ ಇರದ್ದಂತೆ ಮಾಡಲು ಯಾವ ಯಾವ ಆರ್ಟಿಕಲ್ ತಿದ್ದುಪಡಿ ಮಾಡಬೇಕೋ ಅಲ್ಲಿಯವರೆಗೂ ಮುಂದುವರಿಯದೆ ತಮ್ಮ ತಮ್ಮ ಅಧಿಕಾರ ಉಳಿಸಿಕೊಳ್ಳಲು ಎಷ್ಟು ಬೇಕೋ ಅಷ್ಟು ನಾಟಕವಾಡಿ ಆಸ್ತಿ ಆಡಂಬರ ಹೆಚ್ಚಿಸಿಕೊಳ್ಳುತ್ತಾರೆ.
ʼಪ್ರಜಾ+ಪ್ರಭುತ್ವ= ಪ್ರಜಾಪ್ರಭುತ್ವʼ ಪ್ರಜೆಗಳಾದ ನಾವುಗಳು ಜಾಗೃತರಾಗಿ ಇನ್ನೂ ಉತ್ತಮ ವ್ಯವಸ್ಥೆ ತರಲು ಸಂವಿಧಾನದ ತಿದ್ದುಪಡಿಗೆ ದುಡಿಯಬೇಕಿದೆ. ಈ ತಿದ್ದುಪಡಿಯಿಂದ ಬಿಳಿಯಾನೆಯಂತೆ ನಾವುಗಳೆ ಸಾಕುತ್ತಿರುವ ರಾಜ್ಯಪಾಲ ಎಂಬ ಕಿರಿಕ್ ಮಾಡುವ ಹುದ್ದೆಯನ್ನು ವಜಾ ಮಾಡಿಸಬೇಕಿದೆ.
