“ಯುಎಸ್ಎ ಬಯಸಿದರೆ, ನೀವು ಏನನ್ನಾದರೂ ಅದಕ್ಕೆ ಮಾರಲೇಬೇಕು; ಅದುವೇ ನ್ಯಾಯ, ಅದು ಜಗತ್ತಿನ ರಕ್ಷಣೆಗೆ ಅಗತ್ಯ. ಇಲ್ಲವೆಂದರೆ ಪರಿಣಾಮ ಎದುರಿಸಬೇಕು!” ಎಂದು ಬೆದರಿಕೆ ಒಡುವ “ಮುಕ್ತ ಮಾರುಕಟ್ಟೆ” ನೀತಿ!” ನಿಖಿಲ್ ಕೋಲ್ಪೆಯವರ ಬರಹದಲ್ಲಿ
2026ರ ಆರಂಭದ ವಾರಗಳು- “ಅಮೇರಿಕಾದ ರಾಷ್ಟ್ರೀಯ ಭದ್ರತೆ” ಎಂಬ ಸೋಗಿನಲ್ಲಿ ಡೊನಾಲ್ಡ್ ಟ್ರಂಪ್ ಎಂಬ ಎಡೆಬಿಡಂಗಿ ಸರ್ವಾಧಿಕಾರಿಯು ನಡೆಸುತ್ತಿರುವ 19ನೇ ಶತಮಾನದ ವಿಸ್ತರಣಾವಾದಿ ಮತೃ ಸಾಮ್ರಾಜ್ಯಶಾಹಿ ಸಿದ್ಧಾಂತದ ತಣ್ಣನೆಯ ಪುನರುಜ್ಜೀವನಕ್ಕೆ ಸಾಕ್ಷಿಯಾಗಿವೆ. ಗ್ರೀನ್‌ಲ್ಯಾಂಡ್ “ವಿವಾದ”ದಲ್ಲಿ ಯುರೋಪಿಯನ್ ಮಿತ್ರರಾಷ್ಟ್ರಗಳ ವಿರುದ್ಧವೇ 25 ಶೇಕಡಾ ಸುಂಕದ ಬೆದರಿಕೆಗಳು ಮತ್ತು “ಒಂದಲ್ಲದಿದ್ದರೆ, ಇನ್ನೊಂದು ರೀತಿಯಲ್ಲಿ” ತನಗೆ ಬೇಕಾದ ಪ್ರದೇಶವನ್ನು ಯುಎಸ್ಎಯು ವಶಪಡಿಸಿಕೊಳ್ಳುತ್ತದೆ ಎಂಬ ಅಂತಿಮ ಎಚ್ಚರಿಕೆಯು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ನ ಈ ಹೊಸ ದುಸ್ಸಾಹಸವು- ಕೇವಲ ಒಂದು ರಾಜತಾಂತ್ರಿಕ ಜಗಳವಲ್ಲ; ಇದು, ನಿಯಮ ಆಧಾರಿತ ಅಂತರರಾಷ್ಟ್ರೀಯ ವ್ಯವಸ್ಥೆಯ ಮೇಲಿನ ಮೂಲಭೂತ ದಾಳಿಯಾಗಿದೆ ಮತ್ತು ದೇಶಗಳ ಸಾರ್ವಭೌಮತ್ವವು ಈಗ ಮಾರಾಟದ ಒಂದು ಸರಕಾಗಿದೆ ಎಂಬುದರ ಸಂಕೇತವಾಗಿದೆ. ಈ ಹೊಸ ಬಂಡವಾಳವಾದಿ ವ್ಯವಸ್ಥೆಯಲ್ಲಿ- “ಯುಎಸ್ಎ ಬಯಸಿದರೆ, ನೀವು ಏನನ್ನಾದರೂ ಅದಕ್ಕೆ ಮಾರಲೇಬೇಕು; ಅದುವೇ ನ್ಯಾಯ, ಅದು ಜಗತ್ತಿನ ರಕ್ಷಣೆಗೆ ಅಗತ್ಯ. ಇಲ್ಲವೆಂದರೆ ಪರಿಣಾಮ ಎದುರಿಸಬೇಕು!” ಎಂದು ಬೆದರಿಕೆ ಒಡುವ “ಮುಕ್ತ ಮಾರುಕಟ್ಟೆ” ನೀತಿ!
”ರಿಯಲ್ ಎಸ್ಟೇಟ್” ದಂಧೆ
ನಿಜ ಜೀವನದಲ್ಲಿ ಎರಡನೇ ತಲೆಮಾರಿನ ರಿಯಲ್ ಎಸ್ಟೇಟ್ ಕದೀಮನಾಗಿರುವ ಟ್ರಂಪ್‌ನ ತರ್ಕವು- ಭಾರತೀಯ ಬಲಪಂಥೀಯರಂತೆ ಇತಿಹಾಸದ ವಿಕೃತ ಓದಿನ ಮೇಲೆ ನಿಂತಿದೆ. ಅದು- 1867ರಲ್ಲಿ ತಾನು ರಷ್ಯಾದ ದಮನಕಾರಿ ರಾಜಸತ್ತೆಯಿಂದ ಅಲಾಸ್ಕಾ ಪ್ರದೇಶವನ್ನು ಖರೀದಿಸಿರುವುದರಲ್ಲಿ “ಗ್ರೀನ್‌ಲ್ಯಾಂಡ್ ಖರೀದಿ”ಗೆ ಸಮಾನಾಂತರಗಳನ್ನು ಹುಡುಕುತ್ತದೆ. ಆದರೆ, ಈ ಹೋಲಿಕೆ ಬೌದ್ಧಿಕವಾಗಿ ಮತ್ತು ನೈತಿಕವಾಗಿ ದಿವಾಳಿಯಾಗಿದೆ. ಅಂದು ಅಲಾಸ್ಕಾವನ್ನು ನಗದು ಕೊರತೆಯಿಂದಾಗಿ ರಷ್ಯಾದ ಸಾಮ್ರಾಜ್ಯವು ಮಾರಾಟ ಮಾಡಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ಇಂದು ಗ್ರೀನ್‌ಲ್ಯಾಂಡ್ ಒಂದು ಸ್ವಯಂ-ಆಡಳಿತ ಘಟಕವಾಗಿದ್ದು, ನಾರ್ವೆ ಎಂಬ ಸಾರ್ವಭೌಮ ದೇಶದ ಭಾಗವಾಗಿದೆ. ಅಂದು ಅಲಾಸ್ಕಾದ ಮೂಲ ನಿವಾಸಿ ಜನರ, ಸರ್ವ ಸ್ವತಂತ್ರ ಬುಡಕಟ್ಟುಗಳ ಹಕ್ಕುಗಳನ್ನು ರಾಜಪ್ರಭುತ್ವದ ರಷ್ಯವೂ, “ಪ್ರಜಾಪ್ರಭುತ್ವವಾದಿ” ಯುಎಸ್ಎಯೂ ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ! ಪರಿಣಾಮವಾಗಿ ಇಂದು ಕೂಡಾ ಯುಎಸ್ಎಯ ಬಂಡವಾಳಶಾಹಿ ಕಂಪೆನಿಗಳು ಅಲ್ಲಿನ ಸಂಪನ್ಮೂಲಗಳನ್ನು ಮುಖ್ಯವಾಗಿ ತೈಲವನ್ನು ಲೂಟಿ ಹೊಡೆಯುತ್ತಿವೆ. ಆದರೆ, ಗ್ರೀನ್‌ಲ್ಯಾಂಡಿನ 57,000 ನಿವಾಸಿಗಳು ಇಂದು ಅದೇ ರೀತಿಯ ಶೋಷಣೆಗೆ ಒಳಗಾಗಲು ಸಿದ್ಧರಿಲ್ಲ. ಸದ್ಯದ ಅಂತರರಾಷ್ಟ್ರೀಯ ಕಾನೂನಿನ ಪ್ರಕಾರವೇ ಅವರು ಸ್ವ-ನಿರ್ಣಯದ ಪ್ರಜಾಪ್ರಭುತ್ವದ ಹಕ್ಕನ್ನು ಹೊಂದಿರುವ ಜನರು.
ಟ್ರಂಪ್‌ನ ಈ ವಿಕೃತ ದರೋಡೆಕೋರ ದೃಷ್ಟಿಕೋನವು ನೂರಾರು ವರ್ಷಗಳಿಂದ ಯುಎಸ್ಎಯ ಶಾಂತಿಯುತ ಗೆಳೆಯನಾಗಿದ್ದ ಕೆನಡಾಕ್ಕೂ ವಿಸ್ತರಿಸುತ್ತದೆ. ಟ್ರಂಪ್ ಆಡಳಿತವು ಕೆನಡಾವನ್ನು ಒಂದು ಸಾರ್ವಭೌಮ ದೇಶವನ್ನಾಗಿ ಪರಿಗಣಿಸದೇ, ತನ್ನ ಅಧೀನದಲ್ಲಿರುವ ಬಡಾವಣೆ; ಅದು ತಾನು ಹೇಳಿದಂತೆ ಯಾವುದೇ ಪ್ರಶ್ನೆ ಮಾಡದೇ ಕೇಳಬೇಕು; ಅದರ ನೀತಿಗಳು ವಾಷಿಂಗ್ಟನ್‌ನ “ಗೋಲ್ಡನ್ ಡೋಮ್” ಕ್ಷಿಪಣಿ ರಕ್ಷಣಾ ಗುರಿಗಳೊಂದಿಗೆ ಹೊಂದಿಕೆಯಾಗಬೇಕು ಎಂದು ಬಯಸುತ್ತಿದೆ. ಕೆನಡಾವು ಯುಎಸ್ಎಯ 51ನೇ ರಾಜ್ಯವಾಗಬೇಕು ಎಂಬ ಟ್ರಂಪ್‌ನ ಉದ್ಧಟತನ ಮತ್ತು ಉಡಾಫೆಯ ಹೇಳಿಕೆ, ಅವಮಾನಕಾರಿಯಾದ ಬಡಬಡಿಕೆಗಳು, ಸುಂಕ ಹೆಚ್ಚಳ ಇತ್ಯಾದಿಗಳು ಕೆನಡಾದ ಜನರನ್ನು ಸಿಟ್ಟಿಗೆಬ್ಬಿಸಿವೆ.
“ಹೊರಗಿನವರು” ಯಾರು?
ಟ್ರಂಪ್ ಮತ್ತಾತನ ಚೇಲಾಗಳ MAGA (Make America Great Again) ಸಂಘಟನೆಯ ಬಲಪಂಥೀಯ ಬೀದಿಗೂಂಡಾಗಳ “ಅಮೇರಿಕಾ ಫಸ್ಟ್” ನಯನಾಲಗೆಯ ಕಥಾನಕದ ಹೃದಯಭಾಗದಲ್ಲಿ ಉತ್ತರ ಅಮೇರಿಕಾ ಖಂಡದ ಮೂಲ ನಿವಾಸಿಗಳು, “ನಿಜವಾದ ಅಮೇರಿಕನ್” ಯಾರು ಎಂಬುದರ ಕುರಿತು ಆಳವಾದ ಬೂಟಾಟಿಕೆ ಇದೆ. ಟ್ರಂಪ್ ಆಡಳಿತದ ವಿಸ್ತರಣಾವಾದಿ ದುಸ್ಸಾಹಸವು ಸಾಮಾನ್ಯವಾಗಿ- “ಅಮೇರಿಕನ್” ಎಂಬುದರ ಸ್ಥಳೀಯತೆಯ ವ್ಯಾಖ್ಯಾನದ ಮೇಲೆ ಅವಲಂಬಿತವಾಗಿದೆ. ಇದು- ಯುರೋಪಿಯನ್ ಮತ್ತು ಬಿಳಿ ಚರ್ಮದ ಗುರುತಿಗೆ ಸೂಕ್ಷ್ಮವಾಗಿ ಆದ್ಯತೆ ನೀಡುತ್ತದೆ ಮತ್ತು ಕಪ್ಪು, ಹಿಸ್ಪಾನಿಕ್ (ಮುಖ್ಯವಾಗಿ ದಕ್ಷಿಣ ಅಮೇರಿಕಾ ಖಂಡದ ಜನರು) ಮತ್ತು ಏಷ್ಯನ್ ನಾಗರಿಕರನ್ನು ಹೊರಗಿನವರು ಅಥವಾ “ಇತ್ತೀಚಿನ ಆಗಮನ” ಎಂದು ಬಿಂಬಿಸುತ್ತದೆ.
ಆದರೆ, ಐತಿಹಾಸಿಕ ವಾಸ್ತವವು ಈ ಆಷಾಢಭೂತಿತನದ ಕಥಾನಕವು ಸಂಪೂರ್ಣ ಟೊಳ್ಳು ಎಂದು ಹೇಳುತ್ತದೆ. “ಅಮೇರಿಕನ್” ಎಂಬ ಗುರುತಿನ ಬಹುತೇಕ ಪ್ರತಿಯೊಬ್ಬ ಹಕ್ಕುದಾರರೂ ವಾಸ್ತವವಾಗಿ ಹೊರಗಿನವರು. ಲಕ್ಷಾಂತರ ಚದರ ಕಿಲೋಮೀಟರ್ ವಿಸ್ತಾರದ ಭೂಮಿಯಲ್ಲಿ ನಿಸರ್ಗದ ಆರಾಧಕರಾಗಿ ಲಾಲಸೆಯಿಲ್ಲದೇ ಬದುಕುತ್ತಿದ್ದ ನೂರಾರು ವೈವಿಧ್ಯಮಯ ಮೂಲನಿವಾಸಿ ಬುಡಕಟ್ಟುಗಳಿಗೆ ಸೇರಿದ ಲಕ್ಷಾಂತರ ಸ್ಥಳೀಯ ಜನರನ್ನು ವ್ಯವಸ್ಥಿತವಾಗಿ ಜೀವ ಮತ್ತು ಜೀವನದಿಂದಲೇ ಅಳಿಸಿಹಾಕುವ ಮೂಲಕ ಅವರ ಜಮೀನಿನ ಮೇಲೆ ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾವನ್ನು ಕೂಡಾ ನಿರ್ಮಿಸಲಾಗಿದೆ. ಇದು ಜಗತ್ತಿನ ಇತಿಹಾಸದಲ್ಲೇ ಅತ್ಯಂತ ದೊಡ್ಡ ರಕ್ತಸಿಕ್ತ ಮತ್ತು ವ್ಯವಸ್ಥಿತ ಹತ್ಯಾಕಾಂಡಗಳಲ್ಲಿ ಒಂದು. “ಮ್ಯಾನಿಫೆಸ್ಟ್ ಡೆಸ್ಟಿನಿ” ಎಂಬ ಪೊಳ್ಳು ಸಿದ್ಧಾಂತದ ಮೂಲಕ, ವಿಸ್ತರಣೆಯನ್ನು ಬಿಳಿಯರ “ದೈವಿಕ ಹಕ್ಕು” ಎಂದು ರೂಪಿಸಲಾಯಿತು. ಆ ಭೂಮಿಯ “ನಿಜವಾದ” ಮಾಲೀಕರನ್ನು ಅಂಚಿನಲ್ಲಿಡಲಾಗಿತ್ತು ಮತ್ತು ನಿರ್ದಯವಾಗಿ, ವ್ಯವಸ್ಥಿತವಾಗಿ ನಿರ್ಮೂಲನೆ ಮಾಡಲಾಗಿತ್ತು ಎಂಬುದನ್ನು ಅನುಕೂಲಕರವಾಗಿ ನಿರ್ಲಕ್ಷಿಸಲಾಯಿತು. ಅಲ್ಲಿನ ಮೂಲ ನಿವಾಸಿಗಳಿಗೆ ಇದೇ “ಮ್ಯಾನಿಫೆಸ್ಟ್ ಡೆಸ್ಟಿನಿ”, “ಸಹಜ ದೈವಿಕ ಹಕ್ಕು” ಕೊಡದ ಇವರ ದೇವರು ಕೂಡಾ ಮಹಾ ಬಂಡವಾಳಶಾಹಿ ವಂಚಕನಿರಬೇಕು.
ಇನ್ನು, ಸ್ವತಂತ್ರವಾಗಿ ಬದುಕುತ್ತಿದ್ದ ಕರಿಯ ಜನರನ್ನು ಆಫ್ರಿಕಾ ಖಂಡದಲ್ಲಿ ಪ್ರಾಣಿಗಳಂತೆ ಬೇಟೆಯಾಡಿ, ಹಡಗುಗಳಲ್ಲಿ ಪ್ರಾಣಿಗಳಂತೆ ಸಂಕೋಲೆಯಲ್ಲಿ ಬಂಧಿಸಿ, ರಾಶಿಹಾಕಿ ಸಾಗಿಸಿ ಗುಲಾಮ ವ್ಯಾಪಾರ ಮಾಡಲಾಯಿತು. ಅವರನ್ನು ಮನುಷ್ಯರೆಂದು ಪರಿಗಣಿಸದೇ ಮಾರಾಟ ಮಾಡಲಾಯಿತು. ಅಮಾನುಷವಾಗಿ, ಯಾವುದೇ ಹಕ್ಕುಗಳಿಲ್ಲದೇ ದುಡಿಸಲಾಯಿತು, ಅತ್ಯಾಚಾರ ಮಾಡಲಾಯಿತು ಮತ್ತು ಕೊಲ್ಲಲಾಯಿತು. ಅವರ ಬೆವರು ಮತ್ತು ರಕ್ತದಿಂದ ಯುಎಸ್‌ಎ ಮತ್ತು ಕೆನಡಾ ಎಂಬ “ನಾಗರಿಕ” ದೇಶಗಳನ್ನು ಕಟ್ಟಲಾಯಿತು. ನಂತರ ಆ ಕರಿಯರು ದಶಕಗಳ ಅವಮಾನ, ಪ್ರತ್ಯೇಕೀಕರಣ, ಸಂಘರ್ಷಗಳ ಬಳಿಕ ತಮ್ಮ ಹಕ್ಕುಗಳನ್ನು ಪಡೆದರು. ಈಗ ಅವರನ್ನು “ನೀವು ಹೊರಗಿನವರು, ಆಫ್ರಿಕಾಕ್ಕೆ ಹೋಗಿ!” ಎನ್ನಲಾಗುತ್ತಿದೆ. ಬಿಳಿಯರಲ್ಲದವರನ್ನು ನೀವು ಹೊರಗಿನವರು, ನಿಮ್ಮ ದೇಶಕ್ಕೆ ಹೋಗಿ!” ಎನ್ನಲಾಗುತ್ತದೆ. ಲ್ಯಾಟಿನ್ ಅಮೇರಿಕಾದ ಜನರನ್ನೂ ಇದೇ ರೀತಿ ಕಾಣಲಾಗುತ್ತಿದೆ. ದೂರದ ಯುರೋಪಿನಿಂದ ಬಂದ ಬಿಳಿಯರು “ಸಹಜ ಅಮೇಕನರು”, ಆದರೆ ಅದೇ ಖಂಡದ ಇತರ ದೇಶಗಳಿಂದ ಬಂದವರು ಹೊರಗಿನವರು! ಈ ವ್ಯಾಖ್ಯಾನ ಮಾಡುತ್ತಿರುವುದು ಸ್ವತಃ ಹೊರಗಿನಿಂದ ಬಂದವರು! ಈ ರೀತಿಯ ಜನಾಂಗೀಯ ತಾರತಮ್ಯದ ಕುತರ್ಕಗಳನ್ನು ಬಂಡವಾಳ ಪ್ರೇರಿತ ಬಲಪಂಥವು ಇತಿಹಾಸದ ಉದ್ದಕ್ಕೂ ನಿರಂತರವಾಗಿ ಮಾಡುತ್ತಾ ಬಂದಿದೆ. ಭಾರತದಲ್ಲೂ ಇದನ್ನು ಸ್ಪಷ್ಟವಾಗಿ ಕಾಣಬಹುದು.
ಟ್ರಂಪ್- ಗ್ರೀನ್‌ಲ್ಯಾಂಡನ್ನು “ರಕ್ಷಿಸುವ” ಅಥವಾ “ಅಮೆರಿಕಾ”ದ “ಸುರಕ್ಷೆ”ಯ ಬಗ್ಗೆ ಮಾತನಾಡುವಾಗ ಆತ- ತಾನು ನಿಂತಿರುವ ಮಣ್ಣನ್ನು ಆತನೀಗ ಜಾಗತಿಕವಾಗಿ ಬೆದರಿಕೆ ಹಾಕುತ್ತಿರುವ ಅದೇ ಅನ್ಯಾಯ ಮತ್ತು ಬಲಪ್ರಯೋಗದ ಸ್ಥಳಾಂತರದ ಮೂಲಕ ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂಬುದನ್ನು ಮರೆಯುತ್ತಾನೆ. ಆತ ಹೇಳುವ ರಷ್ಯಾ ಮತ್ತು ಚೀನಾದ ಬೆದರಿಕೆಯು ಒಂದು ಕುಂಟು ನೆಪ. ಗ್ರೀನ್‌ಲ್ಯಾಂಡಿಗೆ ನೆರೆಕರೆಯಾಗಿರುವ ಸ್ಕ್ಯಾಂಡಿನೇವಿಯನ್ ಮತ್ತು ಯುಕೆ ಸೇರಿದಂತೆ ಐರೋಪ್ಯ ದೇಶಗಳು, ಕೆನಡಾಕ್ಕೆ ಕೂಡಾ ಈ ಬೆದರಿಕೆ ಕಾಣದಾಗ, ಈ ಸಾಕಷ್ಟು ದೂರದಲ್ಲಿರುವ ಈ ಸರ್ವಾಧಿಕಾರಿಯ ಕಣ್ಣಿಗೆ ಮಾತ್ರ ಅದು ಕಾಣುತ್ತಿದೆ.
ಬಂಡವಾಳದ ನೈತಿಕತೆಯ ವಿರೋಧಾಭಾಸ
ಪಶ್ಚಿಮದ ಪ್ರಸ್ತುತ ಬಿಕ್ಕಟ್ಟಿನಲ್ಲಿ ಒಂದು ಆಳವಾದ ವ್ಯಂಗ್ಯವಿದೆ. ಶತಮಾನಗಳಿಂದ, ಡೆನ್ಮಾರ್ಕ್ ಸೇರಿದಂತೆ ಯುರೋಪಿಯನ್ನರು ಭೂಗೋಳವನ್ನು ವಸಾಹತುವನ್ನಾಗಿ ಮಾಡಿಕೊಂಡು, ಪಶ್ಚಿಮದ “ಬಂಡವಾಳ” ನಿರ್ಮಿಸಲು ಬೇರೆ ದೇಶಗಳ ಸಂಪತ್ತನ್ನು ದೋಚಿದ್ದಾರೆ. ಈ ಬಂಡವಾಳದ ಆಧಾರದಲ್ಲಿಯೇ ಇಂದು ಅವರು ಶ್ರೀಮಂತರೆನಿಸಿರುವುದು. ಆದರೆ, ಈಗ ಅದೇ “ದರೋಡೆಕೋರ” ಯುರೋಪ್- ಇನ್ನೊಬ್ಬ “ದರೋಡೆಕೋರ” ಯುಎಸ್ಎಯ ಅದೇ ಆಟದ, ಹೊಸ ರೂಪದ ಟ್ರಂಪ್ ಆವೃತ್ತಿಯ ಬಿಸಿ ಎದುರಿಸುತ್ತಿದೆ!
ಇವೆಲ್ಲಾ ಏನೇ ಇದ್ದರೂ, ಅದು ಯಾರ ಭೂಮಿ? ಟ್ರಂಪ್ ಮಟ್ಟಿಗೆ, ಆತನೇ ಹೇಳಿರುವಂತೆ ಗ್ರೀನ್‌ಲ್ಯಾಂಡ್ ಒಂದು “ಮಂಜುಗಡ್ಡೆಯ ತುಂಡು” ಮತ್ತು ಅಪರೂಪದ ಖನಿಜಗಳಿಗಾಗಿ ಅಗತ್ಯವಾದ ಕಾರ್ಯ ವ್ಯೂಹಾತ್ಮಕ ಆಸ್ತಿ. ಆದರೆ, ಅದರ ನಿವಾಸಿಗಳಿಗೆ – ಅವರಲ್ಲಿ ಹೆಚ್ಚಿನವರು ಇನ್ಯೂಟ್ ಜನರು – ಅದು ಅವರ ತಾಯ್ನಾಡು. ದಬ್ಬಾಳಿಕೆಯ ಈ ನಿಲುವುಗಳು ಪ್ರಜಾಪ್ರಭುತ್ವದ ಬಗ್ಗೆ ಸ್ಪಷ್ಟವಾದ ದ್ವಂದ್ವ ಮಾನದಂಡವನ್ನು ಬಹಿರಂಗಪಡಿಸುತ್ತದೆ. ಯುಎಸ್ಎಯು ತನ್ನ ಭೌಗೋಳಿಕ- ರಾಜಕೀಯ ಗುರಿಗಳಿಗೆ ಸರಿಹೊಂದಿದಾಗ ಗಡಿಗಳ ಪವಿತ್ರತೆಯನ್ನು, ದೇಶಗಳ ಸೌರ್ವಭೌಮತೆಯನ್ನು ಪ್ರತಿಪಾದಿಸುತ್ತದೆ. ಆದರೆ, ತನಗೆ ಅಗತ್ಯವೆಂದು ಅದು ನಿರ್ಧರಿಸಿದ ಕ್ಷಣದಲ್ಲೇ ಆ ಗಡಿಗಳು, ಇತರ ದೇಶಗಳ ಸಾರ್ವಭೌಮತೆಗಳು ಚೌಕಾಶಿ ಮತ್ತು ಬೆದರಿಕೆಗೆ ಒಳಪಡುವ ಸರಕುಗಳಾಗುತ್ತವೆ!
”ರಕ್ಷಣೆ”ಯ ಪ್ರಹಸನ
”ನಮ್ಮ ಗ್ರಹದ ಸುರಕ್ಷತೆ, ಭದ್ರತೆ ಮತ್ತು ಉಳಿವಿಗಾಗಿ “ತಾನು ಕಾರ್ಯನಿರ್ವಹಿಸುತ್ತಿದ್ದೇನೆ ಎಂಬ ಟ್ರಂಪ್‌ನ “ವಿಶ್ವರಕ್ಷಕ” ಹೇಳಿಕೆಯು- ಗ್ರೀನ್‌ಲ್ಯಾಂಡ್ ಡ್ಯಾನಿಶ್ ದ್ವೀಪವಾಗಿ ಆಗಿ ಉಳಿಯುವುದನ್ನು “ಯಾರೂ ಬಯಸುವುದಿಲ್ಲ” ಎಂಬ ಆತನ ಹಿಂದಿನ ಪ್ರತಿಪಾದನೆಗಳಂತೆಯೇ ಟೊಳ್ಳಾಗಿದೆ, “ವಿಶ್ವ ಭಕ್ಷಕ”ವಾಗಿದೆ. ವಾಸ್ತವವೆಂದರೆ, ಯುಎಸ್ಎ ಈಗಾಗಲೇ ಪಿಟುಫಿಕ್ ಬಾಹ್ಯಾಕಾಶ ನೆಲೆಯ ಮೂಲಕ ಗ್ರೀನ್‌ಲ್ಯಾಂಡ್‌ನೊಳಗೆ ಆಳವಾದ ಮಿಲಿಟರಿ ಪ್ರವೇಶವನ್ನು ಹೊಂದಿದೆ. ಈಗಿನದು ದರೋಡೆಗೊಂದು ನೆಪ ಮಾತ್ರ. ಆತನ “ಯಾರೂ ಬಯಸುವುದಿಲ್ಲ” ಎಂಬ ಹೇಳಿಕೆಗೆ ವ್ಯತಿರಿಕ್ತವಾಗಿ, ಐರೋಪ್ಯ ಒಕ್ಕೂಟ ಬಲವಾದ ವಿರೋಧ ವ್ಯಕ್ತಪಡಿಸಿದೆ. ಬೇರೆಬೇರೆ ದೇಶಗಳಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಐರೋಪ್ಯ ಒಕ್ಕೂಟದ ಒಂದು ಅಧಿಕೃತ ಸಭೆಯಲ್ಲಿ ಒಂದು ದೇಶದ ಪ್ರತಿನಿಧಿಯೊಬ್ಬರು ಎಷ್ಟು ಸಿಟ್ಟಿಗೆದ್ದಿದ್ದರು ಎಂದರೆ, ನೇರವಾಗಿ ಟ್ರಂಪ್‌ನನ್ನು ಹೆಸರಿಸಿ “ ಎಫ್…ಆಫ್!” ಎಂದಿದ್ದರು. ನಂತರ ಸಭಾಧ್ಯಕ್ಷರು ಇದನ್ನು “ಅಸಾಂಸದಿಕ” ಎಂದು ಕಡತದಿಂದ ಕಿತ್ತುಹಾಕಿದರು! ಗ್ರೀನ್‌ಲ್ಯಾಂಡ್ ”ಮಾಲೀಕತ್ವ”ದ ಬೇಡಿಕೆಯು ಕೇವಲ ಭದ್ರತೆಯ ವಿಷಯ ಅಲ್ಲ; ಅದು ಪ್ರಾಬಲ್ಯದ ಸ್ಥಾಪನೆಯ ವಿಷಯ. ಭೂಕಬಳಿಕೆಯನ್ನು ಭದ್ರತಾ ಅವಶ್ಯಕತೆಯಾಗಿ ನಿರೂಪಿಸುವ ಮೂಲಕ, ಟ್ರಂಪ್ ಆಡಳಿತವು ರಕ್ಷಣಾ ದಂಧೆಯನ್ನು ನೈತಿಕಗೊಳಿಸಲು ಪ್ರಯತ್ನಿಸುತ್ತಿದೆ. ಡೆನ್ಮಾರ್ಕ್ ಮತ್ತು ಐರೋಪ್ಯ ಒಕ್ಕೂಟ ತನ್ನ “ಜೊತೆಯಲ್ಲಿ ಹೋಗದಿದ್ದರೆ”, ಅವರಿಗೆ ಆರ್ಥಿಕ ಯುದ್ಧದ ಮೂಲಕ ಶಿಕ್ಷೆಯಾಗಲಿದೆ ಎಂಬ ಮಾಫಿಯಾ ಶೈಲಿಯ ಬೆದರಿಕೆ ಒಡ್ಡಲಾಗಿದೆ.
ಜಾಗತಿಕ ದಕ್ಷಿಣಕ್ಕೆ ಅಪಾಯಕಾರಿ ಸಂದೇಶ
ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳಿಗೆ, ಈ ವಿಸ್ತರಣಾವಾದಿ ಮನೋಭಾವವು ಒಂದು ಅಪಾಯಕಾರಿ ಎಚ್ಚರಿಕೆಯಾಗಿದೆ. ನ್ಯಾಟೋ ಮಿತ್ರನಾದ ಡೆನ್ಮಾರ್ಕ್‌ನಂತಹ ಸ್ಥಿರ ಪ್ರಜಾಪ್ರಭುತ್ವವನ್ನೇ ಬೆದರಿಸಿ, ಸ್ವಾಯತ್ತ ಪ್ರದೇಶವೊಂದರ “ಬೆಲೆ” ನಿಗದಿಪಡಿಸಿ, ತನಗೇ ಮಾರಬೇಕು ಎಂದು ಟ್ರಂಪ್ ಮಾಫಿಯಾವು ಬೆದರಿಕೆ ಒಡ್ಡಬಹುದಾದರೆ, ಉಳಿದ ಸಾಮಾನ್ಯ ದೇಶಗಳಿಗೆ ಅಂತರರಾಷ್ಟ್ರೀಯ ಕಾನೂನು ನೀಡುವ ರಕ್ಷಣೆಗಳು ಕೇವಲ ಮರೀಚಿಕೆಯಾಗಿದೆ. “ಬಂಡವಾಳದ ನೈತಿಕತೆ”ಯು ಜನರ ಹಕ್ಕುಗಳನ್ನು ಮೀರಿ ಬೆಳೆದಿರುವ ಯುಗವನ್ನು ನಾವು ಪ್ರವೇಶಿಸುತ್ತಿದ್ದೇವೆ. ಇದಕ್ಕೆ ಪೂರಕವೆಂಬಂತೆ ಒಂದು ದೇಶದ ಅಧ್ಯಕ್ಷನಾಗಿದ್ದುಕೊಂಡು ಟ್ರಂಪ್- ತನ್ನ ದೇಶದ ಸಂಸತ್ತಿನ ಗಮನಕ್ಕೇ ತರದೆ- ಕೆನಡಾ ಮತ್ತು ಮೆಕ್ಸಿಕೋ ದೇಶಗಳನ್ನು ಒಳಗೊಂಡ ಯುಎಸ್ಎಯ ಕಾಲ್ಪನಿಕ ನಕ್ಷೆಯನ್ನು ತನ್ನ ಸಾಮಾಜಿಕ ಖಾತೆಗಳಲ್ಲಿ ಪ್ರದರ್ಶಿಸುವ ಉದ್ಧಟತನ ತೋರಿಸಿದ್ದಾನೆ. ಈತನ ಹಿಟ್ಲರ್ ಮನಸ್ಥಿತಿ ಮತ್ತು ಮಹತ್ವಾಕಾಂಕ್ಷೆಗೆ ಇದು ಸಾಕ್ಷಿಯಾಗಿದೆ.
ಟ್ರಂಪ್‌ನ “ಅಮೆರಿಕನ್ನರಿಗೆ ಅಮೆರಿಕ” ಎಂಬ ನಿಲುವು- ಆಯ್ದ ಜನರ, ಜನಾಂಗೀಯ ಕಟ್ಟುಕತೆಯಾಗಿದೆ. ಇದು ಖಂಡದ ಸ್ಥಳೀಯ ಅಡಿಪಾಯಗಳನ್ನು ಮತ್ತು ಅವರು ಅಂಚಿನಲ್ಲಿಡಲು ಪ್ರಯತ್ನಿಸುವ “ಹೊರಗಿನವರ” ಕೊಡುಗೆಗಳನ್ನು ನಿರ್ಲಕ್ಷಿಸುತ್ತದೆ. ಆರ್ಥಿಕ ಬ್ಲ್ಯಾಕ್‌ಮೇಲ್ ಮೂಲಕ ಯಾವುದೇ ದೇಶದ ಭೂಮಿಯನ್ನು ಬಲವಂತವಾಗಿ ಮಾರಾಟ ಮಾಡಿಸಿ, ಖರೀದಿಸಬಹುದು ಎಂಬ ಸಿದ್ಧಾಂತವನ್ನು ಅಂತರರಾಷ್ಟ್ರೀಯ ಸಮುದಾಯ ಒಪ್ಪಿಕೊಂಡರೆ, ಸಾರ್ವಭೌಮ ರಾಷ್ಟ್ರ-ರಾಜ್ಯದ ಪರಿಕಲ್ಪನೆಯೇ ಸತ್ತಂತೆ. ಅದನ್ನು ಮುಂದೆ ಜಾಗತಿಕ ಗಡಿಯಿಂದ ಗಡಿಗೆ ಬದಲಾಯಿಸಲಾಗುತ್ತದೆ. ಅಲ್ಲಿ ಬಲಿಷ್ಟರು ಬೇಕಾದದ್ದನ್ನು ಮಾಡುತ್ತಾರೆ ಮತ್ತು ದುರ್ಬಲರು ತಾವು ಅನುಭವಿಸಬೇಕಾದದ್ದನ್ನು ಅನುಭವಿಸುತ್ತಾರೆ! ಇದು ಮಾನವ ಕುಲದ ವಿನಾಶಕ್ಕೆ ಮುಂಚಿನ ಒಂದು ಎಚ್ಚರಿಕೆಯ ಗಂಟೆಯಾಗಿದೆ.
