Home ರಾಜಕೀಯ ಹಿಂದಿನ ಸರ್ಕಾರದ ಹಗರಣಗಳ ತನಿಖೆ ಪಕ್ಕಾ

ಹಿಂದಿನ ಸರ್ಕಾರದ ಹಗರಣಗಳ ತನಿಖೆ ಪಕ್ಕಾ

0

ಪಕ್ಷದರ ಶಾಸಕರ ಒತ್ತಡ ಹೆಚ್ಚುತ್ತಿದ್ದಂತೆ ಹಿಂದಿನ ಬಿಜೆಪಿ ಸರ್ಕಾರದ ಹಗರಣಗಳನ್ನು ಕಾಂಗ್ರೆಸ್‌ ಸರ್ಕಾರ ತನಿಖೆಗೊಪ್ಪಿಸುವ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿವೆ. ಈ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ವಿರೋಧ ಪಕ್ಷಗಳು ಅದರ ಗ್ಯಾರಂಟಿ ಘೋಷಣೆಯೇ ಕಾರಣವೆನ್ನುತ್ತಿವೆಯಾದರೂ, ಅದಕ್ಕಿಂತ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಿದ್ದು ಹಿಂದಿನ ಸರ್ಕಾರದ ನಿಷ್ಕ್ರಿಯತೆ ಮತ್ತು ಮೇರೆ ಮೀರಿದ ಭ್ರಷ್ಟಾಚಾರವೆನ್ನುವುದು ಬಿಜೆಪಿಗೂ ಗೊತ್ತಿರುವ ವಿಷಯ.

ಕಾಂಗ್ರೆಸ್‌ ಕೂಡಾ ನಲವತ್ತು ಪರ್ಸೆಂಟ್‌ ಸರಕಾರ ಎನ್ನುವ ದೊಡ್ಡ ಕ್ಯಾಂಪೇನನ್ನೇ ನಡೆಸಿತ್ತು. ಆದರೆ ಕಾಂಗ್ರೆಸ್‌ ಸುಮ್ಮನೆ ಕುಳಿತಿರುವುದು ಅದರ ಶಾಸಕರ ಸಿಟ್ಟು ಕೆರಳಿಸಿದೆ. ಹೀಗಾಗಿ ಸರಕಾರ ಹಿಂದಿನ ಸರಕಾರದ ಹಗರಣಗಳ ಕುರಿತು ವಿವಿಧ ಸಂಸ್ಥೆಗಳ ಮೂಲಕ ತನಿಖೆ ಮಾಡಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಯಾವ್ಯಾವ ಹಗರಣಗಳನ್ನು ಯಾವ್ಯಾವ ಏಜೆನ್ಸಿಗಳ ಮೂಲಕ ತನಿಖೆ ಮಾಡಿಸುವುದು ಎನ್ನುವುದರ ಕುರಿತು ತೀರ್ಮಾನಿಸಲಾಗಿದ್ದು, ಬಜೆಟ್‌ ಅಧಿವೇಶನದ ನಂತರ ಈ ಕುರಿತು ಅಧಿಕೃತ ಆದೇಶ ನೀಡಲಾಗುವುದು ಎನ್ನಲಾಗುತ್ತಿದೆ.

ಬಿಟ್‌ ಕಾಯಿನ್‌, ನಲವತ್ತು ಪರ್ಸೆಂಟ್‌, ಕೊರೋನಾ ಸಮಯದಲ್ಲಿ ಆರೋಗ್ಯ ಇಲಾಖೆಯಲ್ಲಿ ನಡೆದಿರಬಹುದಾದ ಹಗರಣಗಳ ತನಿಖೆ, ಗಂಗಾ ಕಲ್ಯಾಣ, ಪಿಎಸ್‌ಐ ನೇಮಕಾತಿ, ಶಿಕ್ಷಕರ ನೇಮಕಾತಿ ಹೀಗೆ ಹತ್ತು ಹಲವು ಹಗರಣಗಳ ತನಿಖೆ ನಡೆಯಲಿದೆ ಎನ್ನಲಾಗಿದೆ.

ಬಹಳ ದೊಡ್ಡದಾಗಿ ಸದ್ದು ಮಾಡಿದ್ದ ಸ್ಯಾಂಟ್ರೋ ರವಿ ಮತ್ತು ಬಿಟ್ ಕಾಯಿನ್‌ ಪ್ರಕರಣಗಳು ಏನಾದವು ಎನ್ನುವ ಕುರಿತು ಇಂದಿಗೂ ಸಾರ್ವಜನಿಕರಿಗೆ ಮಾಹಿತಿಯಿಲ್ಲ. ಬಿಟ್‌ ಕಾಯಿನ್‌ ಹಗರಣದ ಮುಖ್ಯ ಆರೋಪಿ ಶ್ರೀಕಿ ಭಟ್‌ ಎಲ್ಲಿದ್ದಾನೆ ಎನ್ನುವುದು ಇಂದಿಗೂ ನಿಗೂಢವಾಗಿದೆ.

ಒಂದು ವೇಳೆ ಈ ಹಗರಣಗಳು ತನಿಖೆಯಾದಲ್ಲಿ ಲೋಕಸಭಾ ಚುನಾವಣೆ ಸಮಯದಲ್ಲಿ ಬಿಜೆಪಿಗೆ ತೊಡಕಾಗುವುದು ಖಂಡಿತ. ಈಗಾಗಲೇ ಒಳ ಜಗಳದಿಂದ ಒಡೆದ ಮನೆಯಾಗಿರುವ ಬಿಜೆಪಿಯಲ್ಲಿ ಈ ವಿಷಯವು ತಳಮಳವನ್ನು ಹುಟ್ಟಿಸಿದ್ದು ಈ ಕುರಿತು ಇನ್ನೂ ಆ ಪಕ್ಷ ಪ್ರತಿಕ್ರಿಯಿಸಿಲ್ಲ.

You cannot copy content of this page

Exit mobile version