Home ಚುನಾವಣೆ 2023 ಬರಹ ಮಾಡುವವರು ಮತ್ತು ಸಾಮಾಜಿಕ‌ ಧೋರಣೆ

ಬರಹ ಮಾಡುವವರು ಮತ್ತು ಸಾಮಾಜಿಕ‌ ಧೋರಣೆ

0

ಬರಹ ಮಾಡುವ ಯಾರಿಗೇ ಆದರೂ ತಾನು ಬದುಕುತ್ತಿರುವ ಸಮಾಜದ ಎಲ್ಲಾ ಬಗೆಯ  ಒಳ ಪದರುಗಳ ಸಾಮಾನ್ಯ ಜ್ಞಾನ ಮತ್ತು ಸೂಕ್ಷ್ಮವಾದ ಸಾಮಾಜಿಕ ಅರಿವು ಇರಬೇಕಾಗುತ್ತದೆ. ಮೊದಲಿಗೆ ಸಹ ಮನುಷ್ಯರನ್ನು ಸಹನೆ ಪ್ರೀತಿ ಕಾಳಜಿಯಿಂದ ನೋಡುವ ಮನುಷ್ಯತ್ವದ ಗುಣ ಇರಬೇಕಾಗುತ್ತದೆ. ಭಾರತೀಯ ಸಮಾಜವನ್ನು ಪ್ರಜಾಪ್ರಭುತ್ವದ ನೆಲೆಯಲ್ಲಿ ಸೂಕ್ಷ್ಮವಾಗಿ ಗ್ರಹಿಸಬೇಕಾಗುತ್ತದೆ – ಅರುಣ್ ಜೋಳದಕೂಡ್ಲಿಗಿ, ಸಂಶೋಧಕರು

ಈಚೆಗೆ ನಂದಿನಿ ವಿಶ್ವನಾಥ (ನಂದಿನಿ ಹೆದ್ದುರ್ಗ) ಎನ್ನುವ ಕವಯಿತ್ರಿ ತಮ್ಮ ಫೇಸ್ ಬುಕ್ ಪೇಜಲ್ಲಿ (19.06.2023) ಉಚಿತ ಬಸ್ ಫಲಾನುಭವಿ ಬಳ್ಳಾರಿ ಭಾಗದ ಹಿರಿಯ ಮಹಿಳೆಯ ನಡೆ ಕುರಿತು ತಮ್ಮ ಅಭಿಪ್ರಾಯ ದಾಖಲಿಸಿದ್ದರು. ವಾರಗಟ್ಟಲೆ ಪ್ರಯಾಣ ಮಾಡಿ ಅಶುಚಿಯಾಗಿದ್ದರು ಎಂದು ಹೇಳುವ ಭರದಲ್ಲಿ  ಆ ಮಹಿಳೆಯ ಬಗೆಗೆ ತಿರಸ್ಕಾರ ಮತ್ತು ಅಸಹ್ಯ ಪಟ್ಟುಕೊಳ್ಳುವ ಧ್ವನಿ ಆ ಟಿಪ್ಪಣಿಯಲ್ಲಿತ್ತು. ಇದು ಆ ಮಹಿಳೆಯ ಬಗೆಗೆ ತೋರಿದ ಅಗೌರವ ಮಾತ್ರವಲ್ಲದೆ ಮಧ್ಯಮ ವರ್ಗದ ಅಹಂ ಮತ್ತು ಸಾಮಾಜಿಕ ತಿಳಿವಿನ ಅಜ್ಞಾನವನ್ನು ಸೂಚಿಸುತ್ತಿತ್ತು. ಈ ಮಹಿಳೆಯ ಧೋರಣೆಯನ್ನು ವಿರೋಧಿಸಿ ಸಾಮಾಜಿಕ‌ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯಿತು. ನಾನು ‘ನೀವೊಬ್ಬ ಸೂಕ್ಷ್ಮ ಕವಯಿತ್ರಿಯಾಗಿ ನಿಮ್ಮಿಂದ ಇಂತಹ ಪ್ರತಿಕ್ರಿಯೆಯನ್ನು ನಿರೀಕ್ಷಿಸಿರಲಿಲ್ಲ’ ಎಂದು ಪ್ರತಿಕ್ರಿಯಿಸಿದ್ದೆ. ಕಾರಣ ಹೀಗೆ ಬರೆದ ಮಹಿಳೆ ಕವಯಿತ್ರಿಯೂ ಆಗಿದ್ದುದು. 

ಬಹುತೇಕರು ಈ ಧೋರಣೆಯನ್ನು ವಿರೋಧಿಸಿದ್ದರು. ಆನಂತರ ಹೆಣ್ಣಿನ ಪ್ರತಿಕ್ರಿಯೆ ಎನ್ನುವ ಕಾರಣಕ್ಕೆ ಗಂಡಸರು ಮುಗಿಬಿದ್ದರು ಎನ್ನುವ ಅಸೂಕ್ಷ್ಮ ಸ್ತ್ರೀವಾದಿಗಳ ಬೆಂಬಲವೂ ವ್ಯಕ್ತವಾಯಿತು. ನಂತರ ನಂದಿನಿ ಅವರು ತಮ್ಮ ಪೋಸ್ಟ್‌ ನ್ನು ಡಿಲೀಟ್ ಮಾಡಿ ಇದನ್ನು  ಮತ್ತಷ್ಟು ವಿಸ್ತರಿಸಿ ಸಮರ್ಥನೆ ಮಾಡಿಕೊಂಡರು. 

ಇದು ನಂದಿನಿ ವಿಶ್ವನಾಥ ಅವರ ಸಮಸ್ಯೆ ಮಾತ್ರವಲ್ಲ ಪ್ರಧಾನವಾಗಿ ಸಾಮಾಜಿಕ ಜಾಲತಾಣಗಳಿಂದಲೆ ಮುನ್ನಲೆಗೆ ಬಂದ ಅಥವಾ ಸಾಮಾಜಿಕ ಜಾಲತಾಣವನ್ನು ಬರಹ ಮಾಧ್ಯಮದ ಪ್ರಧಾನ ಅಭಿವ್ಯಕ್ತಿಯಾಗಿ ಬಳಸುವ/ ಹೊಸ ತಲೆಮಾರಿನ ಬಹುತೇಕ ಬರಹಗಾರ್ತಿ/ಗಾರರ ಸಮಸ್ಯೆ ಇದು. ಅಂತೆಯೇ ಎಷ್ಟೇ ದೊಡ್ಡ ಲೇಖಕಿ/ಲೇಖಕರಾದರೂ ಆಳದಲ್ಲಿ ಮೇಲ್ಜಾತಿಯ/ಮೇಲ್ವರ್ಗದ ಮೇಲರಿಮೆಯನ್ನು ಮೀರಲು ಸಾಧ್ಯವಾಗದಿದ್ದರೆ/ಮಧ್ಯಮವರ್ಗದ ಸಿನಿಕತನ/ಅಹಂನ್ನು ಮೀರಲಾಗದಿದ್ದರೆ/ಗಂಡಿನ ಅಹಮಿಕೆಯಿಂದ ಹೊರಬರಲಾಗದಿದ್ದರೆ ಈ  ತರಹದ  ಟೀಕೆಗಳು/ತಮ್ಮ ಅಜ್ಞಾನದ ಬಗೆಗೆ ಕೆಟ್ಟದಾದ ಸಮರ್ಥನೆಗಳು ಶುರುವಾಗುತ್ತವೆ.

ಇದು ಕೇವಲ ಹೊಸದಾಗಿ ಬರಹ ಮಾಡುವ ಅಥವಾ ಹೊಸ ತಲೆಮಾರಿನ ಸಮಸ್ಯೆ ಮಾತ್ರವಲ್ಲ. ಕೆಲ ಹಿರಿಯರೂ ಸಾಮಾಜಿಕ ವಿದ್ಯಮಾನಗಳ ಬಗ್ಗೆ ಮಾತನಾಡುವಾಗ ಬಹಳ ಪೂರ್ವಾಗ್ರಹ ಪೀಡಿತರಾಗಿಯೂ ಮೇಲ್ಜಾತಿ/ಮೇಲ್ವರ್ಗದ ಪ್ರತಿನಿಧಿಗಳಾಗಿಯೂ ಪ್ರತಿನಿಧಿಸಿದ್ದಕ್ಕೆ ಸಾಕಷ್ಟು ಉದಾಹರಣೆಗಳಿವೆ.

ಬಹಳ ಹಿಂದೆ ಹಿರಿಯ ವಿಮರ್ಶಕರಾದ ಸಿ‌.ಎನ್.ರಾಮಚಂದ್ರನ್ ಅವರು ಪ್ರಜಾವಾಣಿ ಕಥಾ ಸ್ಪರ್ಧೆಯ ತೀರ್ಪುಗಾರರ ಮಾತು‌ ಬರೆಯುತ್ತ ಕತೆಗಳೆಲ್ಲಾ ಹಳ್ಳಿಗಳತ್ತಲೇ ಗಿರಿಕಿ ಹೊಡೆಯುತ್ತವೆ ಎಂದಿದ್ದರು. ಇದು ನಗರದ ಅನುಭವವೂ ಕತೆಗಳಾಗಬೇಕು ಎನ್ನುವ ನೋಟವಾಗಿರದೆ ಒಂದು ಬಗೆಯ ಹಳ್ಳಿಗಳ ಬಗೆಗಿನ  ತಿರಸ್ಕಾರದ ಧ್ವನಿ ಇಲ್ಲಿತ್ತು. ಇದಕ್ಕೆ ಕತೆಗಾರ ಅಮರೇಶ ನುಗಡೋಣಿ ತುಂಬಾ ಸೂಕ್ಷ್ಮವಾಗಿ ಪ್ರತಿಕ್ರಿಯಿಸಿದ್ದರು. ಲೇಖಕಿ ವೈದೇಹಿ ಅವರು ಕುಕ್ಕೆ ಸುಬ್ರಮಣ್ಯದ ಮಡೆಸ್ನಾನದ ಚರ್ಚೆ ನಡೆದಾಗ ಮಡೆ ಸ್ನಾನಕ್ಕೆ ಒಳಗಾಗುವ ಕೊರಗರು ಅವರಿಗೆ ಅವಮಾನವಾಗಿದ್ದರೆ ಅವರು ಮಾತಾಡಬೇಕು ವಿನಃ ನಾವು ನೀವಲ್ಲ ಎಂದಿದ್ದರು. ಎಷ್ಟೊಂದು ಶೋಷಿತ ಹೆಣ್ಣಿನ ಧ್ವನಿಯಾಗಿ ಕತೆಗಳನ್ನು ಬರೆದ ವೈದೇಹಿಯ ಈ ಪ್ರತಿಕ್ರಿಯೆ ಅಚ್ಚರಿ ಹುಟ್ಟಿಸಿತ್ತು. ವೈದೇಹಿಯವರೇ ಈಚೆಗೆ ಸರಕಾರದ ಉಚಿತ ಕೊಡುಗೆಗಳು ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದರು. ಹಿಂದೊಮ್ಮೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿನಿಯೊಬ್ಬರ ಸಾವಿನ ಸಂದರ್ಭದಲ್ಲಿ ನಡೆದ ಚರ್ಚೆಯಲ್ಲಿ ಬಹಿರಂಗವಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆಯನ್ನು ಬೆಂಬಲಿಸಿದ್ದರು.

ಬರಹ ಮಾಡುವ ಯಾರಿಗೇ ಆದರೂ ತಾನು ಬದುಕುತ್ತಿರುವ ಸಮಾಜದ ಎಲ್ಲಾ ಬಗೆಯ  ಒಳ ಪದರುಗಳ ಸಾಮಾನ್ಯ ಜ್ಞಾನ ಮತ್ತು ಸೂಕ್ಷ್ಮವಾದ ಸಾಮಾಜಿಕ ಅರಿವು ಇರಬೇಕಾಗುತ್ತದೆ. ಮೊದಲಿಗೆ ಸಹ ಮನುಷ್ಯರನ್ನು ಸಹನೆ ಪ್ರೀತಿ ಕಾಳಜಿಯಿಂದ ನೋಡುವ ಮನುಷ್ಯತ್ವದ ಗುಣ ಇರಬೇಕಾಗುತ್ತದೆ. ಭಾರತೀಯ ಸಮಾಜವನ್ನು ಪ್ರಜಾಪ್ರಭುತ್ವದ ನೆಲೆಯಲ್ಲಿ ಸೂಕ್ಷ್ಮವಾಗಿ ಗ್ರಹಿಸಬೇಕಾಗುತ್ತದೆ. ಸಹಮನುಷ್ಯರ ನೋವು ಸಂಕಟಗಳು ಬರಹ ಮಾಡುವವರನ್ನು ಕಂಗೆಡಿಸದಿದ್ದರೆ, ಒಳಗೆ ಒಂದು ಬಗೆಯ ವೇದನೆಯನ್ನೋ ತಳಮಳವನ್ನೋ/ ಇದಕ್ಕೆ ಕಾರಣವಾದ ವ್ಯವಸ್ಥೆಯ ಬಗೆಗೆ ಸಿಟ್ಟನ್ನೋ ಹುಟ್ಟಿಸದಿದ್ದರೆ ಸಾಮಾಜಿಕ ವಿದ್ಯಮಾನಗಳ ಬಗೆಗೆ ಬರಹ‌ ಮಾಡುವವರು ಕುರುಡಾಗುತ್ತಾರೆ. ಇದು ಹೆಚ್ಚಾದರೆ ಸಿನಿಕರಾಗಿ ಬಡಬಡಿಸುತ್ತಾರೆ.

ಬರಹ ಮಾಡುವ ಸಮುದಾಯ ಕತೆ ಕವಿತೆ ಪ್ರಬಂಧ ಬರೆದಾಗಲೂ, ಸಂಶೋಧನೆ ವಿಮರ್ಶೆ ಬರೆದಾಗಲೂ  ಅವರ ಸಾಮಾಜಿಕ ಧೋರಣೆ ವ್ಯಕ್ತವಾಗುವುದಕ್ಕೂ, ಸಾಮಾಜಿಕ‌ ವಿದ್ಯಮಾನಗಳ ಬಗ್ಗೆ ಮಾತನಾಡುವಾಗ/ಪ್ರತಿಕ್ರಿಯಿಸುವಾಗ ಅವರುಗಳು ತಾಳುವ ನೆಲೆ ನಿಲುವುಗಳಿಗೆ ಬಹಳ ಸಲ ತಾಳೆಯಾಗುವುದಿಲ್ಲ. ಬರಹದಲ್ಲಿ ಮಾನವತಾವಾದಿಗಳಾಗಿದ್ದವರು ಸಾಮಾಜಿಕ ವಿದ್ಯಮಾನವೊಂದಕ್ಕೆ ಪ್ರತಿಕ್ರಿಯಿಸುವಾಗ ಜಾತಿವಾದಿಯಾಗಿಯೂ, ಮೆಲ್ವರ್ಗ-ಮೇಲ್ಜಾತಿ ಪ್ರತಿನಿಧಿಯಾಗಿಯೂ/ಗಂಡಿನ ಅಹಮಿಕೆಯಿಂದಲೂ/ಬಡವರ ಬಗೆಗೆ ಅಸಹನೆಯಿಂದಲೂ ಕುಬ್ಜರಾಗಿ ಕಾಣುತ್ತಾರೆ.  ಇದಕ್ಕೆ ಆಳವಾದ ಓದು ಅಧ್ಯಯನ ಇರಬೇಕಂತಿಲ್ಲ ಕನಿಷ್ಟ ಮನುಷ್ಯತ್ವದ ಗುಣಗಳಿದ್ದರೂ ಸಾಕು.‌ ಸಮಾಜವನ್ನು ನೋಡುವ ದೃಷ್ಟಿಕೋನವನ್ನು ತಿದ್ದುವಂತಹ ಒಂದಷ್ಟು ಆರೋಗ್ಯಕರವಾದ ಓದು, ಚರ್ಚೆ ಸಂವಾದಗಳು ಬೇಕಾಗುತ್ತವೆ. ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡರೂ ಒಂದಷ್ಟು ಸಮತೆಯ ಕಣ್ಣೋಟ ಸಾಧ್ಯವಾಗುತ್ತದೆ.

ಯಾವುದೇ ಸರಕಾರವು ಅಧಿಕಾರ ರಹಿತ/ತಳವರ್ಗದ ಬಡ ಜನರಿಗಾಗಿ ನೆರವಾಗುವ  ಯೋಜನೆಗಳನ್ನು ಮಾಡಿದಾಗ ಮೊದಲಿಗೆ ಅದನ್ನು ಮಾನವೀಯತೆಯ ಕಣ್ಣೋಟದಲ್ಲಿ ನೋಡಬೇಕು. ಈ ಯೋಜನೆ ಪ್ರಜಾಪ್ರಭುತ್ವವನ್ನು ಬಲಗೊಳಿಸುತ್ತದೆಯೋ ಅಥವಾ ದುರ್ಬಲಗೊಳಿಸುತ್ತದೆಯೋ ಎನ್ನುವುದನ್ನು ಪರೀಕ್ಷಿಸಬೇಕು. ಬಹುಸಂಖ್ಯಾತರನ್ನು ಒಳಗೊಳ್ಳುವ ಯಾವುದೇ ಜನಪರ ಯೋಜನೆಯೂ ಆರಂಭಕ್ಕೆ ಒಂದಷ್ಟು ಅಸ್ತವ್ಯಸ್ತತೆಯನ್ನು ಹುಟ್ಟಿಸುತ್ತದೆ. ಇಂತಹ ಯೋಜನೆಗಳು ಆರಂಭವಾದಾಗಲೇ ಅದರ ನಿಜದ ಸಮಸ್ಯೆಗಳು/ಸಂಕೀರ್ಣತೆ ಅರ್ಥವಾಗುವುದು. ಕೆಲವು ಸಮಸ್ಯೆಗಳನ್ನು ಊಹೆ ಮಾಡಿ ಮುಂಜಾಗರೂಕತೆ ತೆಗೆದುಕೊಳ್ಳಲು ಆಗದು. ಯಾವುದೇ ಪಕ್ಷದ  ಯಾವುದೇ ಯೋಜನೆಯ ಆರಂಭದ ಒಂದಷ್ಟು ತಿಂಗಳಾದರೂ ಕಾಯಬೇಕು. ನಂತರವಷ್ಟೇ ಅದರ ಮಿತಿಗಳ ಬಗ್ಗೆ, ಯೋಜನೆಯ ತಪ್ಪುಗಳ ಬಗ್ಗೆ, ಸರಿಪಡಿಸಬೇಕಾದ ಮಾರ್ಗಗಳ ಬಗ್ಗೆ ಆರೋಗ್ಯಕರ ಚರ್ಚೆ ಟೀಕೆ ವಿಮರ್ಶೆ ನಡೆಯಬೇಕು. ಆ ಚರ್ಚೆ ಸಂವಾದ ಪ್ರಜಾಪ್ರಭುತ್ವದ ಆಶಯಗಳಿಗೆ ಪೂರಕವಾಗಿರಬೇಕು. ಹಾಗಾಗಿ ಕಾಂಗ್ರೇಸ್ ಸರಕಾರದ ಜನಪರವಾದ ಗ್ಯಾರಂಟಿ ಯೋಜನೆಗಳ ಬಗ್ಗೆ ಒಂದಷ್ಟು ತಾಳಿಕೆಯಿಂದ ಪ್ರತಿಕ್ರಿಯಿಸಬೇಕಾಗಿದೆ.

ಯಾವುದೇ ಟೀಕೆ-ವಿಮರ್ಶೆ-ಮನುಷ್ಯ ಘನತೆಯನ್ನು ಹೆಚ್ಚಿಸುವುದರ ಕಡೆ ಮಾನವೀಯವಾಗಿರಬೇಕೆ ವಿನಃ ಮನುಷ್ಯ ಘನತೆಗೆ ಕುಂದುಂಟಾಗಬಾರದು.

ಅರುಣ್ ಜೋಳದಕೂಡ್ಲಿಗಿ

ಸಂಶೋಧಕರು

ಇದನ್ನೂ ಓದಿ-ಜನಪರ ವಿಶ್ಲೇಷಣೆ ಮರೆತ ಮಾಧ್ಯಮಗಳು: ಕುಸಿದ ಮಾಧ್ಯಮ ನೈತಿಕತೆ

You cannot copy content of this page

Exit mobile version