Home ಬ್ರೇಕಿಂಗ್ ಸುದ್ದಿ ತಮಿಳುನಾಡಿನ ಹೊಸ ಅಧ್ಯಾಯ: ನಾಳೆ ವಿಜಯ್ ಪ್ರಮಾಣ ವಚನಕ್ಕೆ ಗ್ರೀನ್ ಸಿಗ್ನಲ್

ತಮಿಳುನಾಡಿನ ಹೊಸ ಅಧ್ಯಾಯ: ನಾಳೆ ವಿಜಯ್ ಪ್ರಮಾಣ ವಚನಕ್ಕೆ ಗ್ರೀನ್ ಸಿಗ್ನಲ್

0

ಚೆನ್ನೈ : ದ್ರಾವಿಡ ರಾಜಕಾರಣದ ಭದ್ರಕೋಟೆ ತಮಿಳುನಾಡಿನಲ್ಲಿ ಇಂದು ಐತಿಹಾಸಿಕ ಘಳಿಗೆ ಮೂಡಿಬಂದಿದೆ. ಚಲನಚಿತ್ರ ನಟ ಮತ್ತು ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮುಖ್ಯಸ್ಥ ವಿಜಯ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಚೆನ್ನೈನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಸಮಾರಂಭಕ್ಕೆ ಲಕ್ಷಾಂತರ ಜನರು ಸಾಕ್ಷಿಯಾಗಲಿದ್ದಾರೆ.

ರಾಜ್ಯಪಾಲರಿಂದ ಅಧಿಕೃತ ಆಹ್ವಾನ
ಚುನಾವಣೆಯ ನಂತರ ಸಂಖ್ಯಾಬಲದ ಕುರಿತು ಹಲವು ದಿನಗಳ ಕಾಲ ನಡೆದ ಸಾಂವಿಧಾನಿಕ ಚರ್ಚೆ ಮತ್ತು ಕಾನೂನು ಸಮರಕ್ಕೆ ಕೊನೆಗೂ ತೆರೆ ಬಿದ್ದಿದೆ. ಟಿವಿಕೆ ಪಕ್ಷವು ಏಕಮಾತ್ರ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದಲ್ಲದೇ, ಕಾಂಗ್ರೆಸ್, ವಿಸಿಕೆ ಮತ್ತು ಎಡಪಕ್ಷಗಳ ಬೆಂಬಲದೊಂದಿಗೆ 118ಕ್ಕೂ ಹೆಚ್ಚು ಶಾಸಕರ ಬೆಂಬಲ ಪತ್ರ ಸಲ್ಲಿಸಿ ಬಹುಮತ ಸಾಬೀತುಪಡಿಸಿದೆ. ರಾಜ್ಯಪಾಲರು ಈ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿದ ಬಳಿಕ ವಿಜಯ್ ಅವರಿಗೆ ಸರ್ಕಾರ ರಚಿಸಲು ಅಧಿಕೃತ ಆಹ್ವಾನ ನೀಡಿದ್ದಾರೆ.

ಮೊದಲ ಚುನಾವಣೆಯಲ್ಲೇ ದಿಗ್ವಿಜಯ
ರಾಜಕೀಯ ರಂಗಕ್ಕೆ ಕಾಲಿಟ್ಟ ಮೊದಲ ಪ್ರಯತ್ನದಲ್ಲೇ 100ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದು ವಿಜಯ್ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಅಂಚೆ ಮತಗಳ ಎಣಿಕೆ ಮತ್ತು ಮರು ಎಣಿಕೆಯಂತಹ ಕಾನೂನು ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ಬಹುಮತ ಗಳಿಸುವಲ್ಲಿ ಯಶಸ್ವಿಯಾದ ಈ ಫಲಿತಾಂಶವು, ದಶಕಗಳ ಕಾಲ ರಾಜ್ಯ ರಾಜಕಾರಣವನ್ನು ಏಕಸ್ವಾಮ್ಯದಿಂದ ನಿಯಂತ್ರಿಸಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಾರಮ್ಯಕ್ಕೆ ಸ್ಪಷ್ಟ ಸವಾಲೊಡ್ಡಿದೆ.

ಭವ್ಯ ಸಮಾರಂಭಕ್ಕೆ ಸಕಲ ಸಿದ್ಧತೆ
ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನೆಹರೂ ಕ್ರೀಡಾಂಗಣ ಸಜ್ಜಾಗಿದ್ದು, ಭಾರೀ ಭದ್ರತೆ ನಿಯೋಜಿಸಲಾಗಿದೆ. ನೆರೆ ರಾಜ್ಯಗಳ ಮುಖ್ಯಮಂತ್ರಿಗಳು, ರಾಷ್ಟ್ರೀಯ ರಾಜಕೀಯ ನಾಯಕರು ಮತ್ತು ಚಿತ್ರರಂಗದ ಗಣ್ಯರು ಸಮಾರಂಭಕ್ಕೆ ಆಗಮಿಸಲಿದ್ದಾರೆ. ರಾಜ್ಯಪಾಲರ ಒಪ್ಪಿಗೆ ಸಿಕ್ಕ ತಕ್ಷಣ ಚೆನ್ನೈ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ಸಂಭ್ರಮದ ಅಲೆ ಎದ್ದಿದ್ದು, ಬೀದಿಬೀದಿಗಳಲ್ಲಿ ವಿಜಯೋತ್ಸವ ಮೆರವಣಿಗೆ ನಡೆಯುತ್ತಿದೆ.

ಜನರ ನಿರೀಕ್ಷೆ ಬೆಟ್ಟದಷ್ಟು
ಬೆಳ್ಳಿತೆರೆಯ ‘ದಳಪತಿ’ಯಿಂದ ಆಡಳಿತದ ‘ದಳಪತಿ’ಯಾಗಿ ರೂಪಾಂತರ ಹೊಂದಲಿರುವ ವಿಜಯ್ ಅವರ ಮೇಲೆ ತಮಿಳುನಾಡಿನ ಜನರ ನಿರೀಕ್ಷೆ ಅಪಾರವಾಗಿದೆ. ಚಿತ್ರಗಳಲ್ಲಿ ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಡಿದ ನಾಯಕ, ಈಗ ನಿಜಜೀವನದ ಸಮಸ್ಯೆಗಳಿಗೆ ಎಷ್ಟರ ಮಟ್ಟಿಗೆ ಸ್ಪಂದಿಸುತ್ತಾರೆ ಎಂಬ ಪ್ರಶ್ನೆ ಇಡೀ ದೇಶದ ಮನದಲ್ಲಿ ಮನೆ ಮಾಡಿದೆ. ಆಜ್ ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿದ್ದು, ಈ ಮೈಲಿಗಲ್ಲಿನ ಕ್ಷಣಕ್ಕಾಗಿ ಇಡೀ ದೇಶ ಕಾತರದಿಂದ ಕಾದಿದೆ.

You cannot copy content of this page

Exit mobile version