ಶೃಂಗೇರಿ ಕ್ಷೇತ್ರದ ಶಾಸಕರಾದ ಮಾನ್ಯ ಟಿ.ಡಿ.ರಾಜೇಗೌಡ್ರಿಗೂ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಗಳಿಗೂ ನಮಸ್ಕಾರ.
ಮೊನ್ನೆ ವಯನಾಡಿನಲ್ಲಿ ಗುಡ್ಡ ಕುಸಿದಾಗ ಮಾನ್ಯ ಅರಣ್ಯ ಸಚಿವರಿಗೆ ಕರ್ನಾಟಕದಲ್ಲೂ ಸೂಕ್ಷ್ಮ ಪ್ರದೇಶಗಳಿವೆ ಎಂಬುವುದರ ಜ್ಞಾನೋದಯವಾಯ್ತು. ಆಗಿದ್ದೇ ತಡ, ಎತ್ತಿಗೆ ಜ್ವರ, ಎಮ್ಮೆಗೆ ಬರೆ ಎಂಬಂತೆ ಏಕಾಏಕಿ ಮಲೆನಾಡಿನ ಅರಣ್ಯ ಒತ್ತುವರಿ ತೆರವಿಗೆ ಆದೇಶ ಹೊರಡಿಸಿ, ಕೆಲವರ ಒತ್ತುವರಿ ಭೂಮಿಯನ್ನು ತೆರವುಗೊಳಿಸಲಾಯಿತು. ಇದಕ್ಕೊಂದು ತಾತ್ಕಾಲಿಕ ತಡೆಯಾಜ್ಞೆ ತರುವುದಕ್ಕೂ ಜನಪ್ರತಿನಿಧಿಗಳಾದ ನಿಮ್ಮ ಕೈಲಾಗಲಿಲ್ಲ. ಇದು ನಿಮ್ಮನ್ನು ಗೆಲ್ಲಿಸಿದ ಮಲೆನಾಡಿಗರಿಗೆ ಆದಂತ ದೊಡ್ಡ ಆಘಾತ, ಅವಮಾನ ಮತ್ತು ಸೋಲು.
ಮಲೆನಾಡಿನಲ್ಲಿ, ಪ್ರತಿ ಚುನಾವಣೆಗೂ ಮುನ್ನ ಅಭ್ಯರ್ಥಿಗಳು ಒತ್ತುವರಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿ, ಜನಪ್ರತಿನಿಧಿಗಳಾದ ಮೇಲೆ ಅದನ್ನು ಗಾಳಿಗೆ ತೂರುತಿದ್ದೀರಿ. ಕಳೆದ ಬಾರಿಯ ಯಾವೊಬ್ಬ ಸಂಸದರೂ ಈ ಬಗ್ಗೆ ಧ್ವನಿ ಎತ್ತಲಿಲ್ಲ. ಅದರಲ್ಲೂ ನಾವು ಆಯ್ಕೆ ಮಾಡೋದು ಬುದ್ಧಿವಂತ ಜಿಲ್ಲೆಯ ಸಂಸದರನ್ನ. ಕೊನೆಗೆ ಸಮಸ್ಯೆ ಬಗೆಹರಿಸುವುದಿರಲಿ, ‘ಗೋ ಬ್ಯಾಕ್’ ಎಂದು ಹೇಳಿ ಕಳಿಸುವಂತ ಪರಿಸ್ಥಿತಿ ಬಂದೊದಗಿತ್ತು.
ಮಲೆನಾಡಿನ ಶೇ.80 ರಷ್ಟು ಭೂಮಿ ಒತ್ತುವರಿ ಪ್ರದೇಶವೇ ಆಗಿದ್ದು, ಅದರಲ್ಲಿ ಮುಕ್ಕಾಲು ಭಾಗ ಉಳ್ಳವರ ಪಾಲಾಗಿವೆ. ಉಳಿದ ಭೂಮಿಯಲ್ಲಿ ಸಣ್ಣ, ಮಧ್ಯಮ ವರ್ಗದ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಈ ರೈತರು ಮರ ಕಡಿದಿಲ್ಲ, ಮಣ್ಣೆತ್ತಿಲ್ಲ, ಅಕೇಶಿಯಾ ನೆಟ್ಟಿಲ್ಲ, ಮರಳುಗಾರಿಕೆ, ಗಣಿಗಾರಿಕೆ, ವಿದ್ಯುತ್ ಯೋಜನೆ ಯಾವುದನ್ನು ಮಾಡಿಲ್ಲ. ಬದಲಿಗೆ ಬೆಳೆ ಬೆಳೆದು ಭೂಮಿಯನ್ನು ಸಾಂಪ್ರದಾಯಿಕವಾಗಿ ರಕ್ಷಿಸಿಕೊಂಡು ಬಂದಿದ್ದಾರೆ.
ಈ ವರ್ಷ ಒಳ್ಳೆ ಮಳೆಬಿದ್ದು ಇನ್ನೇನು ಕೃಷಿ ಚಟುವಟಿಕೆಗಳು ಚುರುಕುಗೊಳ್ಳಬೇಕು ಅನ್ನೋಷ್ಟ್ರಲ್ಲಿ, ಮತ್ತೊಮ್ಮೆ ಅದೇ ಒತ್ತುವರಿ ಸಮಸ್ಯೆ ಎದುರಾಗಿದೆ. ಜನಪ್ರತಿನಿಧಿಗಳು ಮತ್ತೆ ಮಾಮೂಲಿನಂತೆ ಕೇಂದ್ರಕ್ಕೆ ನಿಯೋಗ ಕಳಿಸಿ, ಪರಿಹರಿಸುತ್ತೇವೆ ಎಂಬ ಆಶ್ವಾಸನೆ ಕೊಟ್ಟಿದ್ದೀರಿ. ನಿನ್ನೆ ಗುರುವಾರ ಸಚಿವ ಸಂಪುಟದಲ್ಲಿ ಕಸ್ತೂರಿ ರಂಗನ್ ವರದಿ ಕುರಿತ ಮಹತ್ವದ ಚರ್ಚೆಯಾಗಬೇಕಿತ್ತು. ಇಂತ ಜ್ವಲಂತ ಸಮಸ್ಯೆಗಳ ಅಪ್ ಡೇಟ್ ಗಳು ನಿಮ್ಮ ಸೋಷಿಯಲ್ ಮೀಡಿಯಾ ಪೇಜ್ ಗಳಲ್ಲೂ ಕಾಣಸಿಗುತ್ತಿಲ್ಲ.
ನೀವು ನಮ್ಮ ಕ್ಷೇತ್ರದ ಪ್ರತಿನಿಧಿಗಳಾಗಿರುವುದರಿಂದ, ನಮ್ಮ ಋಣದಲ್ಲಿ ನೀವಿರುವುದರಿಂದ, ನಮ್ಮ ಬೆವರಿನ ಅರ್ಧ ಭಾಗ ನಿಮ್ಮ ಸಂಬಳಕ್ಕೆ ಹೋಗೋದ್ರಿಂದ, ನಿಮ್ಮ ಕೆಲಸಗಳನ್ನು ಗಮನಿಸುವುದು ಕೂಡ ಮತದಾರರ ಹಕ್ಕು ಎಂದು ಭಾವಿಸಿದ್ದೇವೆ. ಮದುವೆ ಭೇಟಿ, ಬರ್ತಡೇ ವಿಶ್, ವಿದೇಶ ಪ್ರವಾಸ, ಹಬ್ಬದ ಶುಭಾಶಯಗಳು ಇತ್ಯಾದಿಗಳಿಗಿಂತ ಕ್ಷೇತ್ರದ ಪ್ರಸಕ್ತ ಸಮಸ್ಯೆಯ ಅಪ್ ಡೇಟ್ ಹಂಚಿಕೊಳ್ಳುವುದು ಶಾಸಕರ ಮತ್ತು ಸಂಸದರ ಕರ್ತವ್ಯ ಎಂಬುದು ವೈಯಕ್ತಿಕ ಅಭಿಪ್ರಾಯ.
ಪಶ್ಚಿಮ ಘಟ್ಟದಲ್ಲಿ ಒಂದೆಡೆ ಒತ್ತುವರಿ ಸಮಸ್ಯೆಯಾದರೆ, ಮತ್ತೊಂದೆಡೆ ಶರಾವತಿ ಯೋಜನೆಯ ಶಾಪ.
ಇಂಥ ಪರಿಸ್ಥಿತಿಯಲ್ಲಿ ಹಳೆಯ ವರದಿಗಳನ್ನ ಪರಿಶೀಲಿಸಿ, ತಿದ್ದುಪಡಿ ತರಬೇಕು. ನೆಲ, ಜಲದ ಸಮಸ್ಯೆ ಎದುರಾದಾಗ ಪಕ್ಷ ಬೇಧ, ರಾಜಕಾರಣ ಬದಿಗಿಟ್ಟು ಎಲ್ಲರೂ ಒಕ್ಕೂರಲಿನಿಂದ ಧ್ವನಿ ಎತ್ತಬೇಕು. ಇದಕ್ಕೆ ಮಲೆನಾಡಿನ ಬೀಗರು ಆಗಿರುವ ಮತ್ತು ಇಲ್ಲಿ ಆಸ್ತಿಪಾಸ್ತಿ ಹೊಂದಿರುವಂಥ ಮಾನ್ಯ ಡಿಸಿಎಂ ಅವರನ್ನೂ ಕೈಜೋಡಿಸುವಂತೆ ಕೇಳಿಕೊಳ್ಳಬೇಕು.
ಈ ಸಲವಾದರೂ, ಎಲ್ಲರೂ ಸೇರಿ ನಿಮ್ಮ ಅಧಿಕಾರದ ಅವಧಿ ಕೊನೆಗೊಳ್ಳುವುದರೊಳಗೆ ಈ ಸಮಸ್ಯೆಗೊಂದು ‘ರೈತ ಸ್ನೇಹಿ’ ಪರಿಹಾರ ಹುಡುಕುತ್ತೀರಾ ಎಂಬ ವಿಶ್ವಾಸ ಮಲೆನಾಡಿಗರದ್ದು.
ನಮಸ್ಕಾರ