ಗಾಂಧಿನಗರ (ಗುಜರಾತ್): 1995ರ ನಂತರ ಒಂದೇ ಒಂದು ಚುನಾವಣೆಯಲ್ಲೂ ಸೋಲು ಕಾಣದ ಭಾರತೀಯ ಜನತಾ ಪಕ್ಷ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತನ್ನ ದಾಖಲೆಯನ್ನು ತಾನೇ ಮುರಿಯುತ್ತಿದೆ.
182 ಸದಸ್ಯ ಸ್ಥಾನದ ಗುಜರಾತ್ ವಿಧಾನಸಭೆಯಲ್ಲಿ 1995ರಿಂದ ಈಚೆಗೆ ನಡೆದ ಚುನಾವಣೆಗಳಲ್ಲಿ 149 ಸ್ಥಾನಗಳನ್ನು ಗಳಿಸಿದ್ದೇ ದೊಡ್ಡ ದಾಖಲೆಯಾಗಿತ್ತು. ಈ ದಾಖಲೆಯನ್ನು ಬಿಜೆಪಿ ಮುರಿಯಲಿದ್ದು, ಈಗಾಗಲೇ 158 ಸ್ಥಾನಗಳಲ್ಲಿ ಮುನ್ನಡೆ ಕಾಪಾಡಿಕೊಂಡಿದೆ. 27 ವರ್ಷಗಳಿಂದ ಗುಜರಾತನ್ನು ಆಳುತ್ತಿರುವ ಭಾರತೀಯ ಜನತಾ ಪಕ್ಷ ಇದೇ ಮೊದಲ ಬಾರಿ ಪ್ರಚಂಡ ಬಹುಮತವನ್ನು ಗಳಿಸಲಿದೆ.
ಈ ಬಾರಿಯ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ಏಳನೇ ಬಾರಿ ಗುಜರಾತ್‌ನಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಅಂದಾಜು ಮಾಡಲಾಗಿತ್ತು. ಆದರೆ ಚುನಾವಣೋತ್ತರ ಸಮೀಕ್ಷೆಗಳ ಅಂದಾಜನ್ನು ಮೀರಿ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತಿದೆ. ಅಷ್ಟು ಮಾತ್ರವಲ್ಲ ಸ್ವತಃ ಬಿಜೆಪಿ ನಾಯಕರೇ ಹೇಳಿಕೊಂಡಿದ್ದ ಅಂಕಿಗಳನ್ನೂ ಮೀರಿ ಜಯ ಗಳಿಸುತ್ತಿದೆ.
2002ರ ಚುನಾವಣೆಯಲ್ಲಿ ಬಿಜೆಪಿ 149 ಸ್ಥಾನಗಳನ್ನು ಗೆದ್ದು ಬೀಗಿತ್ತು. ಈಗ ಈ ದಾಖಲೆಯನ್ನು ಬಿಜೆಪಿಯೇ ಮುರಿಯುತ್ತಿದೆ. ಅಲ್ಲದೆ ಸತತ ಏಳು ಬಾರಿ ರಾಜ್ಯವೊಂದರ ಅಧಿಕಾರದ ಚುಕ್ಕಾಣಿ ಹಿಡಿದ ಎಡರಂಗದ ದಾಖಲೆಯನ್ನು ಸರಿಗಟ್ಟುತ್ತಿದೆ. ಸತತ ಏಳು ಅವಧಿಗೆ ಪಶ್ಚಿಮ ಬಂಗಾಳದಲ್ಲಿ ಎಡರಂಗ ಗೆಲುವು ಸಾಧಿಸಿ ಸರ್ಕಾರ ರಚಿಸಿತ್ತು.
ಡಿಸೆಂಬರ್ 1 ಮತ್ತು ಡಿಸೆಂಬರ್ 5ರಂದು ಎರಡು ಹಂತದ ಚುನಾವಣೆಗಳಲ್ಲಿ ಗುಜರಾತ್ ಚುನಾವಣೆಗಳು ನಡೆದಿದ್ದು, ಮತಗಳ ಎಣಿಕೆ ಕಾರ್ಯ ಭರದಿಂದ ಸಾಗಿದೆ. ಮೊದಲ ಹಂತದಲ್ಲಿ 89 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದ್ದರೆ, ಎರಡನೇ ಹಂತದಲ್ಲಿ ಉಳಿದ 93 ಸ್ಥಾನಗಳಿಗೆ ಮತದಾನ ನಡೆದಿತ್ತು. ಒಟ್ಟು 4.9 ಕೋಟಿ ಮತದಾರರ ಪೈಕಿ 3.16 ಕೋಟಿ ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದರು.