ಭಾಲ್ಕಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಮತ್ತು ಶಾಸಕ ಈಶ್ವರ ಖಂಡ್ರೆಯವರ ಟ್ವಿಟರ್ ಖಾತೆ ಹ್ಯಾಕ್ ಮಾಡಿದ ಕಿಡಿಗೇಡಿಗಳು, ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಜಯದ ಹಿನ್ನೆಲೆಯ ಬಿಜೆಪಿ ಸಂಭ್ರಮಾಚರಣೆಯ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ.
ಈ ಸಂಬಂಧ ಈಶ್ವರ ಖಂಡ್ರೆ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದು, ತನಿಖೆ ನಡೆದಿದೆ.
ʻʻಗುಜರಾತ್ ಚುನಾವಣೆಯಲ್ಲಿ ಐತಿಹಾಸಿಕ ಗೆಲುವಿನ ಹಿನ್ನೆಲೆಯಲ್ಲಿಇಂದು ಚಿಂಚೋಳಿಯಲ್ಲಿ ನಮ್ಮ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು. ಚುನಾವಣೆಯಲ್ಲಿ ಜಯಗಳಿಸಿದ ನಮ್ಮ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಅಭಿನಂದನೆಗಳುʼʼ ಎಂಬ ಟ್ವೀಟ್ ಅನ್ನು ಈಶ್ವರ ಖಂಡ್ರೆ ಟ್ವಿಟರ್ ಹ್ಯಾಂಡಲ್ ನಿಂದ ಟ್ವೀಟ್ ಮಾಡಲಾಗಿದ್ದು, ಸಂಭ್ರಮಾಚರಣೆಯ ಮೂರು ಚಿತ್ರಗಳನ್ನು ಲಗತ್ತಿಸಲಾಗಿದೆ.
ಖಂಡ್ರೆಯವರ ಅನುಯಾಯಿಗಳು ತಕ್ಷಣ ಈ ವಿಷಯವನ್ನು ಗಮನಕ್ಕೆ ತಂದ ಹಿನ್ನೆಲೆಯಲ್ಲಿ, ಖಂಡ್ರೆಯವರು ಟ್ವೀಟ್ ಮಾಡಿದ್ದು, ʻನನ್ನ ಟ್ವಿಟರ್ ಖಾತೆ ಕೆಲ ಕಿಡಿಗೇಡಿಗಳಿಂದ ಹ್ಯಾಕ್ ಆಗಿದ್ದು, ಕೆಲ ತಪ್ಪುಗಳು ನಡೆದಿವೆ. ಇದರ ವಿರುದ್ಧ ಸೈಬರ್ ಕ್ರೈಂ ನಲ್ಲಿ ದೂರು ನೀಡಲಾಗಿದೆʼ ಎಂದು ಟ್ವೀಟ್ ಮಾಡಿದ್ದಾರೆ.