ಅಹ್ಮದಾಬಾದ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯ ವಿರಾಮದ ಸಮಯದಲ್ಲಿ ಗುಜರಾತ್ ಗೆ ಭೇಟಿ ನೀಡಲಿದ್ದು, ನವೆಂಬರ್ 22 ರಂದು ಗುಜರಾತ್‌ನಲ್ಲಿ ಚುನಾವಣೆಗೆ ಪ್ರಚಾರ ನಡೆಸಲಿದ್ದಾರೆ.
ಡಿಸೆಂಬರ್ 1 ಮತ್ತು 5 ರಂದು ಗುಜರಾತ್‌ನಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.
ಈಗಾಗಲೇ ಹಿಮಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆದಿದ್ದರು, ಕಾಂಗ್ರೆಸ್ ಪಕ್ಷವು ಚುನಾವಣೆ ಕುರಿತು ಪ್ರಚಾರ ಮಾಡದ ಕಾರಣ, ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರಾದ ರಾಹುಲ್ ಗಾಂಧಿಯವರು ಬಿಜೆಪಿ ಪಕ್ಷದವರಿಂದ ಟೀಕೆಗೆ ಒಳಗಾಗಿದ್ದರು.
ಹಿಮಾಚಲದಲ್ಲಿ ಈಗ ಚುನಾವಣೆಗಳು ಮುಗಿದಿರುವುದರಿಂದ ಕಾಂಗ್ರೆಸ್ ಗುಜರಾತ್ ಮೇಲೆ ಕೇಂದ್ರೀಕರಿಸಿದೆ. ಚುನಾವಣೆ ಪ್ರಯುಕ್ತ ಮುಂದಿನ ಕೆಲವು ವಾರಗಳಲ್ಲಿ ಪಕ್ಷದ ಪ್ರಮುಖ ನಾಯಕರ ಹಲವಾರು ಪ್ರಚಾರ ರ್ಯಾಲಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಏತನ್ಮಧ್ಯೆ, ಗುಜರಾತ್ ಚುನಾವಣೆಗೆ ಕಾಂಗ್ರೆಸ್ ತನ್ನ ಆರನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇತ್ತೀಚಿನ ಪಟ್ಟಿಯನ್ನು ಬಿಡುಗಡೆ ಮಾಡುವುದರೊಂದಿಗೆ, ಪಕ್ಷವು ಈಗ ರಾಜ್ಯದ 142 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.
ನವೆಂಬರ್ 4 ರಂದು ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಪ್ರಕಟಿಸಿತ್ತು, ಅದರಲ್ಲಿ 43 ಅಭ್ಯರ್ಥಿಗಳನ್ನು ಹೆಸರಿಸಲಾಗಿತ್ತು. ನವೆಂಬರ್ 10 ರಂದು 46 ಅಭ್ಯರ್ಥಿಗಳನ್ನು ಒಳಗೊಂಡ ಎರಡನೇ ಪಟ್ಟಿಯನ್ನು ಪ್ರಕಟಿಸಿತು. ಶುಕ್ರವಾರ ಏಳು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಒಬ್ಬ ಅಭ್ಯರ್ಥಿಯು ಬದಲಾಗಿರುವುದು ಕಂಡುಬಂದಿದೆ.
ಈ ಮೂಲಕ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಗುಜರಾತ್‌ನಲ್ಲಿ ಬಿಜೆಪಿಯ 27 ವರ್ಷಗಳ ಆಡಳಿತವನ್ನು ಕೊನೆಗೊಳಿಸುವ ಪ್ರಯತ್ನದಲ್ಲಿವೆ.