Home ಬ್ರೇಕಿಂಗ್ ಸುದ್ದಿ ತೃಣಮೂಲ ಕಾಂಗ್ರೆಸ್ ಪಕ್ಷದ ವಕ್ತಾರ ಸಾಕೇತ್ ಗೋಖಲೆ ಬಂಧನ!

ತೃಣಮೂಲ ಕಾಂಗ್ರೆಸ್ ಪಕ್ಷದ ವಕ್ತಾರ ಸಾಕೇತ್ ಗೋಖಲೆ ಬಂಧನ!

0

ತೃಣಮೂಲ ಕಾಂಗ್ರೆಸ್ ವಕ್ತಾರ ಸಾಕೇತ್ ಗೋಖಲೆ ಅವರನ್ನು ಮೊರ್ಬಿ ಸೇತುವೆ ಕುಸಿತದ ಕುರಿತು ಪೋಸ್ಟ್ ಮಾಡಿದ ಟ್ವೀಟ್‌ ವಿಷಯದ ಕುರಿತಾಗಿ ಗುಜರಾತ್ ಪೊಲೀಸರು ಸೋಮವಾರ ರಾಜಸ್ಥಾನದಲ್ಲಿ ಅವರನ್ನು ಬಂಧಿಸಿದ್ದಾರೆ ಎಂದು ಪಕ್ಷದ ಸಂಸದ ಡೆರೆಕ್ ಒ’ಬ್ರಿಯಾನ್ ಟ್ವೀಟ್ ಮಾಡಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, ʼಗೋಖಲೆ ಜೈಪುರಕ್ಕೆ ಬಂದಿಳಿದ ನಂತರ ಪೊಲೀಸರು ಸೋಮವಾರ ರಾತ್ರಿ ಅವರನ್ನು ಕರೆದೊಯ್ದರುʼ ಎಂದು ಹೇಳಿದ್ದಾರೆ.

“ಗೋಖಲೆ ರಾಜಸ್ಥಾನದಲ್ಲಿ ಬಂದಿಳಿಯುತ್ತಿದ್ದಂತೆ ಪೊಲೀಸರು ವಿಮಾನ ನಿಲ್ದಾಣದಲ್ಲಿ ಅವರಿಗಾಗಿ ಕಾಯುತ್ತಿದ್ದರು. ಬೆಳಗಿನ ಜಾವ 2 ಗಂಟೆಗೆ ಅವರು ತಮ್ಮ ತಾಯಿಗೆ ಫೋನ್‌ ಮಾಡಿ ಪೊಲೀಸರು ತನ್ನನ್ನು ಬಂಧಿಸಿದ್ದು, ಇಂದು ಮಧ್ಯಾಹ್ನದ ವೇಳೆಗೆ ಅಹ್ಮದಾಬಾದ್‌ ತಲುಪುವುದಾಗಿ ಹೇಳಿದ್ದಾರೆ” ಎಂದು ಅವರು ಟ್ವೀಟಿನಲ್ಲಿ ತಿಳಿಸಿದ್ದಾರೆ.

ಎರಡು ನಿಮಿಷಗಳ ಕಾಲ ತನ್ನ ತಾಯಿಗೆ ಕರೆ ಮಾಡಲು ಅವಕಾಶ ನೀಡಿದ ನಂತರ ಪೊಲೀಸರು ಗೋಖಲೆ ಅವರ ಫೋನ್ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡರು ಎಂದು ಓ’ಬ್ರಿಯಾನ್ ಹೇಳಿದ್ದಾರೆ. ಸೇತುವೆ ಕುಸಿತದ ಬಗ್ಗೆ ವಕ್ತಾರರು ಟ್ವೀಟ್ ಮಾಡಿದ ನಂತರ ಅಹಮದಾಬಾದ್ ಪೊಲೀಸ್ ಸೈಬರ್ ಸೆಲ್ ಗೋಖಲೆ ವಿರುದ್ಧ “ಸುಳ್ಳು ಪ್ರಕರಣ” ದಾಖಲಿಸಿದೆ ಎಂದು ಅವರು ಹೇಳಿದ್ದಾರೆ.

ಓ’ಬ್ರಿಯಾನ್‌ ಟ್ವೀಟ್‌

ಆದರೆ ಯಾವ ನಿರ್ದಿಷ್ಟ ಟ್ವೀಟ್‌ ವಿಷಯಕ್ಕಾಗಿ ಗೋಖಲೆಯವರನ್ನು ಆರೆಸ್ಟ್‌ ಮಾಡಲಾಗಿದೆಯೆನ್ನುವುದನ್ನು ಸಂಸದರು ಸ್ಪಷ್ಟಪಡಿಸಿಲ್ಲ.

ಅಕ್ಟೋಬರ್ 30 ರಂದು, ಗುಜರಾತ್‌ನ ಮೊರ್ಬಿ ಜಿಲ್ಲೆಯ ಮಚ್ಚು ನದಿಯಲ್ಲಿ ಬ್ರಿಟಿಷರ ಕಾಲದ ಸೇತುವೆ ಕುಸಿದು 141 ಜನರು ಸಾವನ್ನಪ್ಪಿದ್ದರು. ಏಳು ತಿಂಗಳ ನವೀಕರಣದ ನಂತರ ಸೇತುವೆಯನ್ನು ಸಾರ್ವಜನಿಕ ಸೇವೆಗೆ ತೆರೆದ ನಾಲ್ಕು ದಿನಗಳ ನಂತರ ಈ ದುರಂತ ಸಂಭವಿಸಿತ್ತು.

ಗೋಖಲೆ ವಿರುದ್ಧದ ಕ್ರಮದ ಮೂಲಕ ತೃಣಮೂಲ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳನ್ನು ಮೌನಗೊಳಿಸಲು ಸಾಧ್ಯವಿಲ್ಲ ಎಂದು ಓ’‌ಬ್ರಿಯಾನ್ ತಮ್ಮ ಟ್ವೀಟ್‌ಗಳಲ್ಲಿ ಹೇಳಿದ್ದಾರೆ. ಭಾರತೀಯ ಜನತಾ ಪಕ್ಷವು ರಾಜಕೀಯ ಸೇಡಿನ ಕ್ರಮವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತಿದೆ ಎಂದು ಸಂಸದರು ಹೇಳಿದ್ದಾರೆ.

ಈ ಪ್ರಕರಣದ ಕುರಿತು ಗುಜರಾತ್ ಪೊಲೀಸರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಹಾಗೂ ಬಂಧನವನ್ನು ಖಚಿತಪಡಿಸಿಲ್ಲ.

You cannot copy content of this page

Exit mobile version