ಬೆಳಗಾವಿ: ಮಹಾರಾಷ್ಟ್ರ ಸರ್ಕಾರ ಬೆಳಗಾವಿ ವಿಷಯದಲ್ಲಿ ನಡೆಸುತ್ತಿರುವ ರಾಜಕೀಯ ಮತ್ತು ಎಂಇಎಸ್ ಕಿತಾಪತಿಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿರುವ ಬೃಹತ್ ಹೋರಾಟಕ್ಕೆ ತಡೆಯೊಡ್ಡಲು ಜಿಲ್ಲಾಡಳಿತ ಸಜ್ಜುಗೊಂಡಿದ್ದು, ಹಿರೇಬಾಗೇವಾಡಿ ಟೋಲ್ ನಲ್ಲಿ ಕರವೇ ಕಾರ್ಯಕರ್ತರನ್ನು ತಡೆಯಲು ಸಜ್ಜಾಗಿದೆ.
ಹಿರೇಬಾಗೇವಾಡಿ ಟೋಲ್ ನಲ್ಲಿ ಪೊಲೀಸ್ ಸೈನ್ಯವೇ ನೆರೆದಿದ್ದು, ರಾಜ್ಯದ ನಾನಾ ಭಾಗಗಳಿಂದ ಬೆಳಗಾವಿಗೆ ಆಗಮಿಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರನ್ನು ತಡೆಯಲು ಪೊಲೀಸ್ ಪಡೆಯನ್ನು ಸಜ್ಜುಗೊಳಿಸಲಾಗಿದೆ.
ಈ ಕುರಿತು ಧಾರವಾಡದಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಕನ್ನಡ ಹೋರಾಟಗಾರರನ್ನು ತಡೆಯಲು ಯತ್ನಿಸುತ್ತಿರುವ ಕರ್ನಾಟಕ ಪೊಲೀಸರು ನಿಜವಾಗಿಯೇ ಯಾವ ಪೊಲೀಸರು? ಅವರು ಕರ್ನಾಟಕದವರಾ, ಮಹಾರಾಷ್ಟ್ರದವರಾ ಎಂದು ಪ್ರಶ್ನಿಸಿದ್ದಾರೆ.
ಬೆಳಗಾವಿ ಪೊಲೀಸರಿಗೆ ತಾಕತ್ತಿದ್ದರೆ, ಮಹಾರಾಷ್ಟ್ರದಿಂದ ಗಡಿ ದಾಟಿ ಬರುತ್ತಿರುವ ಶಿವಸೇನೆ-ಬಿಜೆಪಿ ದೇಶದ್ರೋಹಿಗಳನ್ನು ತಡೆಯಲಿ, ಅದನ್ನು ಬಿಟ್ಟು ಈ ನೆಲದ ಪರವಾಗಿ ಹೋರಾಟ ಮಾಡುತ್ತಿರುವ ಕನ್ನಡ ಹೋರಾಟಗಾರರನ್ನು ತಡೆಯುವುದಲ್ಲ ಎಂದು ಕಿಡಿಕಾರಿದ್ದಾರೆ.
ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ನಮ್ಮ ಕಾರ್ಯಕ್ರಮ ಆಯೋಜನೆಯಾಗಿದೆ. ನಾವು ಈ ನೆಲದ ಕಾನೂನನ್ನು ಗೌರವಿಸುತ್ತೇವೆ, ಪ್ರಜಾಪ್ರಭುತ್ವ ಮಾರ್ಗದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತೇವೆ. ಅದಕ್ಕೆ ಪೊಲೀಸರು ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದರು.
ಗಡಿ ತಂಟೆಯನ್ನು ಕೆದಕಲು ಬೆಳಗಾವಿಗೆ ಮಹಾರಾಷ್ಟ್ರದ ಇಬ್ಬರು ಸಚಿವರು ಆಗಮಿಸಲು ಹೊರಟ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿಯಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕರ್ನಾಟಕದ ಎಲ್ಲ ಜಿಲ್ಲೆಗಳಿಂದಲೂ ಸಾವಿರಾರು ಕಾರ್ಯಕರ್ತರು ಬೆಳಗಾವಿಯತ್ತ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರಿನಿಂದ ಹೊರಟ ನೂರಾರು ಕಾರ್ಯಕರ್ತರ ತಂಡ ಧಾರವಾಡ ತಲುಪಿದ್ದು, ಅಲ್ಲಿಂದ ಹಿರೇಬಾಗೇವಾಡಿ ಟೋಲ್ ಮೂಲಕ ಬೆಳಗಾವಿ ಪ್ರವೇಶಿಸಲಿದೆ.