ಗುಟ್ಕಾ, ಪಾನ್ ಮಸಾಲಾ ಬ್ಯಾನ್: ಕೆಂಪು ಅಡಿಕೆ ಬೆಲೆ ಕುಸಿತದ ಭೀತಿ, ಸರ್ಕಾರದ ಸ್ಪಷ್ಟನೆಗೆ ಬಿಜೆಪಿ ನಾಯಕ ಜೀವರಾಜ್ ಆಗ್ರಹ

ಗುಟ್ಕಾ ಮತ್ತು ಪಾನ್ ಮಸಾಲಾ ಮೇಲಿನ ನಿಷೇಧದಿಂದ ರಾಜ್ಯದ ಅಡಿಕೆ ಬೆಳೆಗಾರರ ಮೇಲೆ ಉಂಟಾಗಬಹುದಾದ ನಕಾರಾತ್ಮಕ ಪರಿಣಾಮಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ನಾಯಕ ಡಿ.ಎನ್. ಜೀವರಾಜ್ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, 2011 ರಲ್ಲಿ ಗುಟ್ಕಾ ಪ್ಯಾಕಿಂಗ್ ಮೇಲೆ ನಿಷೇಧ ಹೇರಿದಾಗ ಗುಟ್ಕಾ ತಯಾರಕರು ಅಡಿಕೆ ಖರೀದಿಯನ್ನು ದಿಢೀರ್ ಕಡಿಮೆಗೊಳಿಸಿದ್ದರು. ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಕೆಂಪು ಅಡಿಕೆಯ ಬೆಲೆ ಪ್ರತಿ ಕೆಜಿಗೆ ಸುಮಾರು ₹30 ರಷ್ಟು ಭಾರಿ ಕುಸಿತ ಕಂಡಿದ್ದನ್ನು ಅಂದಿನ ವರದಿಗಳು ಸ್ಪಷ್ಟಪಡಿಸುತ್ತವೆ ಎಂದು ನೆನಪಿಸಿದ್ದಾರೆ.

ಪ್ರಸ್ತುತ ಕರ್ನಾಟಕ ಸರ್ಕಾರವು ಗುಟ್ಕಾ ಮತ್ತು ಪಾನ್ ಮಸಾಲಾ ಉತ್ಪಾದನೆ ಹಾಗೂ ಮಾರಾಟದ ಮೇಲೆ ಮತ್ತೆ ಒಂದು ವರ್ಷದ ಅವಧಿಗೆ ನಿಷೇಧ ಹೇರಿ ಆದೇಶ ಹೊರಡಿಸಿದೆ. ನೇರವಾಗಿ ಅಡಿಕೆ ನಿಷೇಧವಾಗಿಲ್ಲ ಎಂಬುದು ನಿಜವಾದರೂ, ಅಡಿಕೆಯನ್ನು ಪ್ರಮುಖ ಕಚ್ಚಾವಸ್ತುವಾಗಿ ಬಳಸುವ ಗುಟ್ಕಾ ಉದ್ಯಮಕ್ಕೆ ತಡೆ ಬಿದ್ದಿರುವುದರಿಂದ ಸಹಜವಾಗಿಯೇ ಅಡಿಕೆಯ ಬೇಡಿಕೆ ಮತ್ತು ಮಾರುಕಟ್ಟೆ ಬೆಲೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.

ವಿಶೇಷವಾಗಿ, ರಾಜ್ಯದಲ್ಲಿ ಬೆಳೆಯುವ ಕೆಂಪು ಅಡಿಕೆಗೆ ಶೇಕಡಾ 80 ರಷ್ಟು ಬೇಡಿಕೆ ಬರುವುದೇ ಈ ಗುಟ್ಕಾ ಮಾರುಕಟ್ಟೆಯಿಂದ. ಆದ್ದರಿಂದ, ರಾಜ್ಯದ ಬೆಳೆಗಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಈ ನಿಷೇಧದಿಂದ ಅಡಿಕೆ ಮಾರುಕಟ್ಟೆಯ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಮತ್ತು ರೈತರ ರಕ್ಷಣೆಗೆ ಕೈಗೊಳ್ಳುವ ಕ್ರಮಗಳ ಬಗ್ಗೆ ಸರ್ಕಾರ ತಕ್ಷಣವೇ ಸ್ಪಷ್ಟನೆ ನೀಡಬೇಕು ಹಾಗೂ ಅಡಿಕೆ ಬೆಳೆಗಾರರ ಹಿತ ಕಾಯುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು